ಸಬಲ ಮಹಿಳೆಯಿಂದ ಪ್ರಬುದ್ಧ ಸಮಾಜ ನಿರ್ಮಾಣ

ಹೆಣ್ಣು ಮಕ್ಕಳು ಹೆಚ್ಚಿನ ಮಾಹಿತಿ ಪಡೆದಿರಬೇಕಾದುದು ಇಂದಿನ ಅಗತ್ಯ. ಕೃಷಿ ನಿರ್ವಹಣೆ ಇತ್ಯಾದಿ ಮಾಹಿತಿ ಮನೆಯಲ್ಲಿರುವ ಹೆಂಗಸರಿಗಿರಬೇಕು. ಅವರು ಮನೆಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೆಚ್ಚು ಗಮನ ಹರಿಸಿದರೆ ಅಥವಾ ಮನೆಯ ವ್ಯವಹಾರದಲ್ಲಿ ಪಾಲ್ಗೊಂಡರೆ ಸಂಸಾರ ಸುಖವಾಗಿ ನಡೆಯುತ್ತದೆ.

ಧರ್ಮಸ್ಥಳದ ಬೀಡಿನ ಚಾವಡಿಯಲ್ಲಿ ಕುಳಿತು ಭಕ್ತರೊಂದಿಗೆ ಸಂವಹನ ಮಾಡಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ಸೂಚಿಸುವುದು ಶ್ರೀಕ್ಷೇತ್ರದ ಪರಂಪರೆ. ಈ ವ್ಯವಹಾರಗಳು ಸ್ವಾಮಿಯ ಕೃಪಾವಲಯದಲ್ಲಿ ನಡೆಯುವುದರಿಂದ, ಈ ಸಂವಹನಕ್ಕೆ ದೈವಿಕ ಶಕ್ತಿಯಿರುತ್ತದೆ. ಸ್ವಾಮಿಯ ಅನುಗ್ರಹ ಮತ್ತು ಪೀಠದ ಮಹಿಮೆಯಿಂದ ಬಂದ ಭಕ್ತರಿಗೆ ನೆಮ್ಮದಿಯೂ ದೊರಕುತ್ತದೆ.

ಕತ್ತಲೆಯಲ್ಲಿ ಬೆಳಕುತೋರುವ ರುಡ್​ಸೆಟ್: ಇತ್ತೀಚೆಗೆ ಅಂದಾಜು ನಲ್ವತ್ತು ವರ್ಷದ ಮಹಿಳೆ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದಳು. ಹಿರಿಯ ಮಗಳು ಆಯುರ್ವೆದ ಅಧ್ಯಯನ ಮಾಡುತ್ತಿದ್ದರೆ, ಇನ್ನೊಬ್ಬಾಕೆ ಈಗ ತಾನೆ ಎಸ್​ಎಸ್​ಎಲ್​ಸಿ ಪರೀಕ್ಷೆ ಮುಗಿಸಿದವಳು. ಬಂದು ನಮಸ್ಕರಿಸುತ್ತಿದ್ದಂತೆಯೇ ಆಕೆ ಧಾರಾಕಾರ ಕಣ್ಣೀರು ಹಾಕಿದಳು. ಈ ತೀವ್ರತರವಾದ ದುಃಖಕ್ಕೆ ಕಾರಣವೇನೆಂದು ನಾನು ವಿಚಾರಿಸಿದೆ. ಆಗ ಆಕೆ ತನಗೆ ಒದಗಿದ ಗಂಡಾಂತರವನ್ನು ವಿವರಿಸಿದಳು. ಅವಳ ಗಂಡ ಮೈಸೂರಿನಲ್ಲಿ ಪಾನಿಪುರಿ ಅಂಗಡಿ ನಡೆಸುತ್ತಿದ್ದನಂತೆ. ಅವನಿಗೆ ಇತ್ತೀಚೆಗೆ ಕಾಯಿಲೆ ಬಂದು, ಅನೇಕ ದಿನಗಳ ಕಾಲ ಆಸ್ಪತ್ರೆಯಲ್ಲಿ ನರಳಿ, ಕೊನೆಗೆ ಕೊನೆಯುಸಿರೆಳೆದನಂತೆ. ಅಪಾರವಾದ ಹಣವನ್ನು ಖರ್ಚುಮಾಡಿಯೂ ಆತನನ್ನು ಉಳಿಸಿಕೊಳ್ಳಲಾಗಲಿಲ್ಲವಂತೆ. ಒಂದು ಕಡೆ ಪತಿಯನ್ನು ಕಳೆದುಕೊಂಡ ದುಃಖ; ಇನ್ನೊಂದೆಡೆಗೆ ಮುಂದೇನು ಮಾಡಬೇಕೆಂಬ ಅನಿಶ್ಚಿತತೆ. ಆಕೆಯೇ ಹೇಳುವಂತೆ ಆಕೆಗೆ ಪ್ರಪಂಚದ ಯಾವ ವ್ಯವಹಾರವೂ ಗೊತ್ತಿಲ್ಲ. ಯಾಕೆಂದರೆ ಗಂಡ ತುಂಬ ಪ್ರೀತಿಯಿಂದ ನೋಡಿಕೊಂಡಿದ್ದನಂತೆ. ಒಂದು ದಿನವೂ ಆಕೆಗೆ ಮನೆಯಿಂದ ಹೊರಗೆ ಹೋಗುವ ಪ್ರಮೇಯವೇ ಬರಲಿಲ್ಲ. ವ್ಯಾಪಾರ, ವ್ಯವಹಾರ, ಸಾಲ, ಸೋಲ ಎಲ್ಲವನ್ನೂ ಆತನೇ ನಿಭಾಯಿಸುತ್ತಿದ್ದ.

ಹಿರಿಯ ಮಗಳ ಕೊನೆಯ ಎರಡು ವರ್ಷದ ಓದು ಬಾಕಿಯಿದೆ. ಆಕೆಯ ಕಾಲೇಜಿನ ಫೀಸನ್ನೂ ತುಂಬಬೇಕಾಗಿದೆ. ಅವಳ ಮುಂದಿನ ಜೀವನಕ್ಕೆ ವ್ಯವಸ್ಥೆ ಮಾಡಬೇಕಾಗಿದೆ. ಇನ್ನೊಬ್ಬಾಕೆಯನ್ನೂ ಜೋಪಾನವಾಗಿ ಓದಿಸಿ, ಬೆಳೆಸಬೇಕಾಗಿದೆ ಎಂಬುದು ಆಕೆಯ ಕಳಕಳಿಯಾಗಿತ್ತು. ಅವಳ ದುಃಖದ ಪ್ರಧಾನ ಕಾರಣವೆಂದರೆ ಆಕೆಗೆ ಈ ಪ್ರಪಂಚಜ್ಞಾನದ ಅರಿವು ಏನೇನೂ ಇಲ್ಲವೆಂಬುದಾಗಿತ್ತು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ- ಗಂಡ ಅವಳನ್ನು ತುಂಬಾ ಚೆನ್ನಾಗಿಯೇ ನೋಡಿಕೊಂಡಿದ್ದಾನೆ. ಆತ ತನ್ನ ವ್ಯವಹಾರದ ಯಾವುದೇ ಸಮಸ್ಯೆಯನ್ನು ಮನೆಯಲ್ಲಿ ಹೇಳಿಕೊಳ್ಳಲಿಲ್ಲ. ಆತ ತನ್ನ ಕಷ್ಟ-ಸುಖಗಳೆರಡನ್ನೂ ಆಕೆಯೊಂದಿಗೆ ಹಂಚಿಕೊಂಡಿದ್ದಿದ್ದರೆ, ಇಂದು ಬಂದ ಅನಾಥಪ್ರಜ್ಞೆ, ಸಂಕಷ್ಟ ಆಕೆಗೆ ಬರುತ್ತಿದ್ದಿರಲಿಲ್ಲವೇನೋ.

ಈ ಎಲ್ಲ ಘಟನೆಯನ್ನು ಮಥಿಸಿ, ಸಮಾಧಾನ ಹೇಳಿ, ನಮ್ಮ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಯೊಂದಿಗೆ ಮಾತನಾಡಲು ಹೇಳಿದೆ. ಕೆಲವು ಮೂಲಭೂತವಾದ ಪ್ರಶ್ನೆಗಳನ್ನು ಯೋಜನಾಧಿಕಾರಿಗಳು ಆಕೆಯಲ್ಲಿ ಕೇಳಿದರು. ‘ನಿಮ್ಮ ಊರಲ್ಲಿರುವ ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಸಂಘಕ್ಕೆ ಸೇರಿಕೊಂಡಿದ್ದಿದ್ದರೆ ಜೀವನವನ್ನು ನಿಭಾಯಿಸುವ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಸಿಗುತ್ತಿತ್ತೇನೋ’ ಎಂದರು. ಆಕೆ -‘ಸ್ವಾಮಿ! ನನಗೆ ಇಂತಹ ಸಂಘದ ಪರಿವೆಯೇ ಇರಲಿಲ್ಲ. ಜೀವನಕ್ಕೆ ಭದ್ರತೆ ಬೇಕು. ವ್ಯವಹಾರ ಜ್ಞಾನ ಬೇಕು. ಹಣ ಸಂಪಾದನೆ ಮಾಡಬೇಕು. ಉಳಿತಾಯ ಮಾಡಬೇಕೆಂಬ ಪರಿಸ್ಥಿತಿಯೇ ನನಗೆ ಒದಗಿ ಬರಲಿಲ್ಲ. ನಾನು ಮನೆ ಮಕ್ಕಳ ಕೆಲಸದಲ್ಲೇ ತಲ್ಲೀನಳಾಗಿದ್ದೆ. ಈಗ ಏನು ಮಾಡಬೇಕೆಂಬುದನ್ನು ತಿಳಿಸಿ’ ಎಂದಳು. ಆಕೆ ಹೈಸ್ಕೂಲು ಶಿಕ್ಷಣ ಪಡೆದವಳಾದ್ದರಿಂದ ಹಾಗೂ ಹಾಸನದವಳಾದ್ದರಿಂದ, ಹಾಸನದಲ್ಲಿರುವ, ಸ್ವೋದ್ಯೋಗ ತರಬೇತಿ ಕೇಂದ್ರವಾದ ರುಡ್​ಸೆಟ್ ಸಂಸ್ಥೆಗೆ ಹೋಗಿ ಯಾವುದಾದರೊಂದು ತರಬೇತಿ ಪಡೆಯುವಂತೆ ವ್ಯವಸ್ಥೆ ಮಾಡಿದೆ. ಆಕೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಸವಲತ್ತುಗಳನ್ನು ಒದಗಿಸಿಕೊಡಲಾಯಿತು.

ಅತಂತ್ರಸ್ಥಿತಿ-ಸ್ವತಂತ್ರಸ್ಥಿತಿ: ಮಗದೊಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಯಾಕೆಂದರೆ ಇಂತಹ ಅನುಭವಗಳೇ ನಮ್ಮ ಜೀವನವನ್ನು ಸುಧಾರಿಸಿಕೊಳ್ಳುವುದಕ್ಕೆ ದಾರಿದೀಪವಾಗುತ್ತವೆ. ಎಂದಿನಂತೆ ಕ್ಷೇತ್ರಕ್ಕೆ ಬಂದ ಭಕ್ತರ ದೊಡ್ಡ ಸರತಿಯ ಸಾಲೇ ಇತ್ತು. ಸುಮಾರು 30-35 ವರ್ಷದ ಒಬ್ಬಾಕೆ ನನ್ನೆದುರಿಗೆ ಬಂದು ನಿಂತಳು. ಸಣ್ಣ ಸವಕಲು ಶರೀರ. ಆಕೆಗೆ ಇಬ್ಬರು ಮಕ್ಕಳು. ಒಬ್ಬನಿಗೆ 10 ವರ್ಷ. ಇನ್ನೊಬ್ಬನಿಗೆ 8 ವರ್ಷ. ಅವಳ ಕಥೆಯೂ ದುಃಖಕರವಾದದ್ದು. ಆಕೆಯೇ ಹೇಳಿದಂತೆ, ಗಂಡ ಇದ್ದಕ್ಕಿದ್ದಂತೆ ಯಾವುದೋ ಕಾಯಿಲೆಯಿಂದ ತೀರಿಹೋದನಂತೆ. ತವರು ಮನೆಯವರೂ ಆರ್ಥಿಕ ಸುಸ್ಥಿತಿಯಲ್ಲಿಲ್ಲ. ಹಾಗಾಗಿ ಅಲ್ಲಿಯೂ ಹೋಗುವಹಾಗೆ ಇಲ್ಲ. ಗಂಡನ ಮನೆಯವರೂ ಪ್ರೀತಿಯಿಂದ ನೋಡಿಕೊಳ್ಳುತ್ತಿಲ್ಲ; ಅದೂ ಸಾಲದೆಂಬಂತೆ ಮನೆಗೆ ಪ್ರವೇಶವನ್ನೂ ನಿರಾಕರಿಸಿದ್ದಾರೆ. ‘ಇತೋ ಭ್ರಷ್ಟಃ ತತೋ ಭ್ರಷ್ಟಃ’ ಎಂಬ ಸ್ಥಿತಿ. ಆಕೆಯ ಗಂಡನೂ ಸಣ್ಣಪುಟ್ಟ ವ್ಯವಹಾರ ಮಾಡುತ್ತಿದ್ದನಂತೆ. ಹೆಂಡತಿ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆತನ ವ್ಯವಹಾರ, ಮಾಸಿಕ ಸಂಪಾದನೆ, ವಿಮೆ ಇದ್ಯಾವುದನ್ನೂ ಹೆಂಡತಿಯೊಂದಿಗೆ ಹಂಚಿಕೊಳ್ಳಲಿಲ್ಲವಂತೆ. ಜೀವನ ನೆಮ್ಮದಿಯಾಗಿದ್ದುದರಿಂದ ಇವಳೂ ಗಂಡನೊಂದಿಗೆ ಇಂತಹ ವಿಷಯಗಳನ್ನು ಪ್ರಸ್ತಾಪಿಸಿರಲಿಲ್ಲವಂತೆ. ಇದೀಗ ಬರಸಿಡಿಲಿನಂತೆ ಎರಗಿದ ಆಘಾತ ಬದುಕನ್ನು ಕತ್ತಲಾಗಿಸಿದೆ.

ಅತಿ ಸರ್ವತ್ರ ವರ್ಜಯೇತ್: ಈ ಮೇಲಿನ ಎರಡೂ ಉದಾಹರಣೆಗಳನ್ನು ನೋಡಿದಾಗ ನಾವು ಗಮನಿಸಬೇಕಾದ ಒಂದು ಅಂಶವಿದೆ – ಪ್ರತಿ ವ್ಯಕ್ತಿಯೂ ತನ್ನ ಸಂಸಾರದ ಬಗ್ಗೆ ತೀವ್ರ ಕಾಳಜಿ, ಪ್ರೀತಿ, ಹೊಣೆಗಾರಿಕೆ ಜೊತೆಗೆ ಮೋಹವನ್ನೂ ಇಟ್ಟುಕೊಂಡಿರುತ್ತಾನೆ. ತಾನು ದುಡಿಯುತ್ತೇನೆ, ಸಂಪಾದಿಸುತ್ತೇನೆ, ಎಲ್ಲ ಕಷ್ಟಕಾರ್ಪಣ್ಯಗಳನ್ನೂ ತಾನೇ ಅನುಭವಿಸುತ್ತೇನೆ; ಯಾಕೆಂದರೆ ತನ್ನ ಬದುಕಿನ ಉದ್ದೇಶವೇ ಮನೆಯವರನ್ನು ಸಂತೋಷವಾಗಿ ಇಡುವುದೇ ಆಗಿದೆ ಎಂದು ಬಗೆಯುತ್ತಾನೆ. ಹಾಗಾಗಿ, ಗಂಡಸರು ತಮ್ಮ ದುಡಿಮೆಗೆ ಸಂಬಂಧಪಟ್ಟ ಯಾವುದೇ ವಿಷಯವನ್ನು ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಹಂಚಿಕೊಳ್ಳುವುದಿಲ್ಲ. ಸಂಪಾದನೆ-ಸಾಲದ ಮಾಹಿತಿ ಕೊಡದೇ, ವ್ಯವಹಾರ ಜ್ಞಾನವನ್ನೂ ನೀಡದೇ ಮುಗ್ಧರಾಗಿ ಇಟ್ಟಿರುವುದರಿಂದ ಮೇಲೆ ಉಲೇಖಿಸಿದ ಮಹಿಳೆಯರಿಗೆ ಇಂದು ಇಂತಹ ದಿಕ್ಕು ಕಾಣದ ಸ್ಥಿತಿ ಬಂದಿದೆ, ಜೀವನ ಒಮ್ಮಿಂದೊಮ್ಮೆಲೇ ಕತ್ತಲಾಗಿದೆ..

ಹಿಂದಿನ ಕಾಲದಲ್ಲಿ ಹೆಚ್ಚಿನ ಕೂಡು ಕುಟುಂಬವಿತ್ತು. ಸಂಸಾರದಲ್ಲಿ ಇಂತಹ ಆಘಾತ ಎದುರಾದರೆ ಕುಟುಂಬದ ಹಿರಿಯರು ಸಹಾಯಕ್ಕೆ ಬರುತ್ತಿದ್ದರು. ಅವರ ಕಷ್ಟಕ್ಕೆ ತಾವೂ ಕೂಡ ಸ್ಪಂದಿಸುತ್ತಿದ್ದರು. ಆದರೆ ಈಗ ಕೂಡು ಕುಟುಂಬದ ಕಲ್ಪನೆ ದೂರವಾಗಿದೆ; ಚಿಕ್ಕ ಸಂಸಾರಗಳು ಜಾಸ್ತಿಯಾಗಿವೆ. ಇದು ಇಂದಿನ ಜನರ ಬಯಕೆಯೂ ಆಗಿದೆ. ನಾನು ಕಂಡ ಹಾಗೆ ಎಷ್ಟೋ ಹೆಣ್ಣುಮಕ್ಕಳು ಕೂಡುಕುಟುಂಬಕ್ಕೆ ಮದುವೆಯಾಗಿ ಹೋಗಲಿಚ್ಛಿಸದೆ, ಪ್ರತ್ಯೇಕವಾದ ಮನೆ ಮತ್ತು ವ್ಯವಸ್ಥೆ ಇರಬೇಕೆಂದು ಬಯಸುತ್ತಾರೆ. ಬಹುಪಾಲು ಹೆಣ್ಣುಮಕ್ಕಳು ನಗರ ಪ್ರದೇಶದ ವ್ಯವಸ್ಥೆಯನ್ನೇ ಇಷ್ಟಪಡುತ್ತಾರೆ. ಹಳ್ಳಿಯ ಸಣ್ಣಪುಟ್ಟ ಚಿಲ್ಲರೆ ಚರ್ಚೆಗಳು, ಸಮಸ್ಯೆಗಳು, ಹೋರಾಟ ಇವ್ಯಾವುದೂ ಬೇಡ. ಸಣ್ಣ ಮನೆಯಾದರೂ ಚಿಂತೆಯಿಲ್ಲ. ಗಂಜಿಯ ಊಟ ಮಾಡಿದರೂ ಚಿಂತೆಯಿಲ್ಲ. ಪ್ರತ್ಯೇಕವಾಗಿ ಗಂಡ, ಹೆಂಡತಿ, ಮಕ್ಕಳ ಚಿಕ್ಕ ಸಂಸಾರವೇ ಒಳ್ಳೆಯದೆಂದು ಭಾವಿಸುತ್ತಾರೆ.

ಈ ಆಸೆಯೇನೋ ಒಳ್ಳೆಯದೇ. ಆದರೆ ಇದರಿಂದ ಸಾಮಾಜಿಕವಾಗಿ ಕೆಲವು ಹೊಸ ಸಮಸ್ಯೆಗಳು ಉಂಟಾಗಿರುವುದನ್ನು ನಾವು ಗಮನಿಸಬೇಕು. ಇರುವ ಇಬ್ಬರಲ್ಲೂ ಹೊಂದಾಣಿಕೆಯ ಕೊರತೆ. ಮನೆಯಲ್ಲಿ ಇರಬೇಕಾದ ಸದಾಚಾರ, ಸತ್ಕಾರ, ಸಂಸ್ಕಾರಗಳು ದೂರವಾಗಿವೆ. ಆದ್ದರಿಂದ ಗಂಡ, ಹೆಂಡತಿ ಮನೆಯಲ್ಲಿ ರ್ಚಚಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಅನೇಕ ವಿಷಯಗಳು ಮನೆಯಲ್ಲಿರುವವರಿಗೆ ತಿಳಿಯುತ್ತದೆ. ನಾನು ಅನೇಕ ಬಾರಿ ಹೇಳುತ್ತಿರುತ್ತೇನೆ. ಮನೆಯಲ್ಲಿ ದುಡಿಯುವುದಕ್ಕೆ ಹೆಣ್ಣುಮಕ್ಕಳಿರುತ್ತಾರೆ. ಆದರೆ ಗಂಡುಮಕ್ಕಳು ಅಥವಾ ಯಜಮಾನ ತಾನು ದುಡಿಯುತ್ತೇನೆ, ಶ್ರಮಪಡುತ್ತೇನೆ ಎಂದು ಹೇಳಿ ಮನೆಯಲ್ಲಿ ಸಹಕಾರಿಯಾದಂತಹ ತಾಯಿ, ತಂಗಿ, ಹೆಂಡತಿ ಇವರೆಲ್ಲರನ್ನೂ ದುಡಿಸಿಕೊಳ್ಳುತ್ತಾನೆ. ಮನೆಯಲ್ಲಿ ಹೆಂಗಸರ ಜವಾಬ್ದಾರಿಯೇನು ಎಂದರೆ ಅಡುಗೆ ಮಾಡುವುದು, ಮನೆಯನ್ನು ಸ್ವಚ್ಛಗೊಳಿಸುವುದು, ಬಟ್ಟೆಬರೆಗಳನ್ನು ತೊಳೆದು ಜೋಡಿಸಿಡುವುದು, ಮಕ್ಕಳನ್ನು ಶಾಲೆಗೆ ಕಳುಹಿಸುವುದು ಆಗಿರುತ್ತದೆ. ಕೃಷಿ ಕಾರ್ವಿುಕರಾಗಿದ್ದರೆ ಮನೆಕೆಲಸದೊಂದಿಗೆ ಕಾರ್ವಿುಕರಾಗಿ ದುಡಿಯುವಂತಹದ್ದು, ಮನೆಯ ಕೃಷಿ ಕೆಲಸವನ್ನು ನೆರವೇರಿಸುವುದು ಆಗಿರುತ್ತದೆ. ಇನ್ನೂ ಸ್ವಲ್ಪ ಹೆಚ್ಚೆಂದರೆ ಈ ಎಲ್ಲ ಕೆಲಸಗಳ ಜೊತೆಗೆ ಜಾನುವಾರು ಸಾಕಣೆಯಂತಹ ಜವಾಬ್ದಾರಿಯನ್ನು ನಿಭಾಯಿಸುವುದು. ಕೃಷಿ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗುವುದು, ಅದಕ್ಕೆ ಬೇಕಾದ ಸಾಲಸೋಲಗಳನ್ನು ಮಾಡಿ ಅದನ್ನು ನಿರ್ವಹಿಸುವುದು, ದನಕರುಗಳನ್ನು ನಿಭಾಯಿಸುವುದು ಇತ್ಯಾದಿ ಮನೆಯ ಯಜಮಾನ ಅಥವಾ ಗಂಡಸಿನ ಜವಾಬ್ದಾರಿಯಾಗಿರುತ್ತದೆ. ವ್ಯಾಪಾರ, ವ್ಯವಹಾರ ಮಾಡುವವರಾಗಿದ್ದರೆ ಸಂಪಾದನೆಯನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಸಂಸಾರವನ್ನು ನಿಭಾಯಿಸಬೇಕಾಗುತ್ತದೆ.

ಕೃಷಿ ಕುಟುಂಬದಲ್ಲಿ, ಆರೇಳು ತಿಂಗಳಿಗೆ ಬೆಳೆ ಕೊಡುವ ಜೋಳ ಮೊದಲಾದವುಗಳನ್ನು, ಮೂರ್ನಾಲ್ಕು ತಿಂಗಳಿಗೆ ಫಸಲು ಕೊಡುವ ಭತ್ತ, ಮಧ್ಯೆ ಮಧ್ಯೆ ಉಪಬೆಳೆಗಳಾಗಿರುವಂತಹ ತರಕಾರಿ, ಹೂವು, ಹಣ್ಣು, ಕಾಳು ಮೊದಲಾದವುಗಳನ್ನೆಲ್ಲ ಗಂಡಸರು ಪೇಟೆಗೆ ಒಯ್ದು ಅದನ್ನು ಮಾರಾಟ ಮಾಡುತ್ತಾರೆ ಅಥವಾ ದಲ್ಲಾಳಿಗಳೊಂದಿಗೆ ವ್ಯವಹರಿಸುತ್ತಾರೆ. ಆಗ ಲಾಭ, ನಷ್ಟ ಎರಡೂ ಆಗಬಹುದು. ಬೆಳೆ ಉತ್ತಮವಾಗಿ ಬಂದಾಗ ಬೆಲೆ ಕುಸಿಯಬಹುದು. ಬೆಳೆ ಕಡಿಮೆಯಾದಾಗ ಬೆಲೆ ಏರಬಹುದು. ಇದರ ಜೊತೆಗೆ ಪಡೆದಿದ್ದ ಸಾಲಕ್ಕೆ ಬಡ್ಡಿ ಕಟ್ಟಬೇಕು. ಇಂತಹ ವ್ಯವಹಾರದಲ್ಲಿ ಬರುವ ಸುಖ-ದುಃಖ, ಲಾಭ-ನಷ್ಟಗಳನ್ನು ತಾನೇ ಎದುರಿಸುತ್ತೇನೆ ಎಂದು ಬಗೆದು, ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ವ್ಯವಹಾರದ ಬಗ್ಗೆ ಹೇಳುವುದಿಲ್ಲ.

ಮಹಿಳಾ ಸಬಲೀಕರಣದಿಂದ ಸರ್ವರ ಪ್ರಗತಿ: ಹೀಗಾಗಿ ಹೆಣ್ಣು ಮಕ್ಕಳು ಹೆಚ್ಚಿನ ಮಾಹಿತಿ ಪಡೆದಿರಬೇಕಾದುದು ಇಂದಿನ ಅಗತ್ಯ. ಕೃಷಿಯನ್ನು ಹೇಗೆ ನಿಭಾಯಿಸುತ್ತಾರೆ, ದನಕರುಗಳ ಸಾಕಣೆ ಮುಂತಾದ ಮಾಹಿತಿ ಮನೆಯಲ್ಲಿರುವ ಹೆಂಗಸರಿಗಿರಬೇಕು. ಎರಡೂ ಎತ್ತುಗಳು ಸರಿಯಾಗಿ ಕಾರ್ಯಮಾಡಿದಾಗ ಮಾತ್ರ ಹೇಗೆ ಎತ್ತಿನಗಾಡಿ ಸುಸೂತ್ರವಾಗಿ ಮುಂದೆ ಚಲಿಸುತ್ತದೆಯೋ ಹಾಗೆ ಸಂಸಾರದ ರಥ ಸಾಗಲು ಗಂಡ ಹೆಂಡತಿ ಸಮಾನವಾಗಿ ಶ್ರಮಿಸಬೇಕಾಗುತ್ತದೆ. ಹೆಣ್ಣು ಮಕ್ಕಳು ಮನೆಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೆಚ್ಚು ಗಮನ ಹರಿಸಿದರೆ ಅಥವಾ ಮನೆಯ ವ್ಯವಹಾರದಲ್ಲಿ ಪಾಲ್ಗೊಂಡರೆ ಗಂಡನ ಕಷ್ಟನಷ್ಟಗಳಲ್ಲಿ ಭಾಗಿಗಳಾದರೆ ಸಂಸಾರ ಸುಖವಾಗಿ ನಡೆಯುವುದರಲ್ಲಿ ಸಂದೇಹವಿಲ್ಲ. ಆದ್ದರಿಂದಲೇ ನಾವು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಮಹಿಳಾ ಸ್ವ ಸಹಾಯ ಸಂಘಗಳನ್ನು ಕ್ರಿಯಾಶೀಲವಾಗಿ ಮಾಡಿದ್ದೇವೆ. ಇದರಿಂದ ಆಗಿರುವ ಪರಿವರ್ತನೆ ಎಂದರೆ ಮಹಿಳೆಯರ ಸಬಲೀಕರಣ. ಮಹಿಳೆಯರು ಅನಕ್ಷರಸ್ಥರಿರಬಹುದು, ಆದರೆ ವ್ಯವಹಾರ ತಿಳಿಯದವರಲ್ಲ. ಇಂಥ ಸ್ವಸಹಾಯ ಸಂಘಗಳಲ್ಲಿ ಪ್ರತೀ ವಾರದ ಸಭೆಗಳಲ್ಲಿ ಈ ಎಲ್ಲ ವ್ಯವಹಾರಗಳ ಬಗ್ಗೆ ಮಾತನಾಡುತ್ತಾರೆ; ಉತ್ಪಾದಿಸುವ ವಸ್ತುಗಳಿಗೆ ಎಲ್ಲಿ ಅಧಿಕ ಬೆಲೆ ಸಿಗುತ್ತದೆ ಎಂಬ ಮಾಹಿತಿ ಅವರಿಗೆ ದೊರಕುತ್ತದೆ. ಅದೇ ರೀತಿ, ವಿಮೆ, ಉಳಿತಾಯ ಇರಬಹುದು ಅಥವಾ ತಾವು ಪಡೆದುಕೊಂಡ ಸಾಲದ ಸದುಪಯೋಗ ಮತ್ತು ಕಾಲಕ್ಕೆ ಸರಿಯಾಗಿ ಅದನ್ನು ಹಿಂದಿರುಗಿಸಿದರೆ ಏನು ಲಾಭವಾಗುತ್ತದೆ ಎಂಬ ಸ್ಪಷ್ಟ ಮಾಹಿತಿ ಇಂತಹ ಸಂಘಗಳಲ್ಲಿ ಸಿಗುತ್ತದೆ. ಹಾಗಾಗಿ ಮಹಿಳಾ ಸಬಲೀಕರಣ ವಿಷಯದಲ್ಲಿ ನಾವು ಮಾಡುತ್ತಿರುವ ಸುಧಾರಣೆಗಳು ಗಮನಾರ್ಹ. ಇವತ್ತು ಮಹಿಳಾ ಸಬಲೀಕರಣ ಆಗುತ್ತಲಿದೆ. ಇನ್ನೂ ಹೆಚ್ಚೆಚ್ಚು ಆಗಬೇಕು. ಮಹಿಳೆಯರು ತಿಳುವಳಿಕೆಯುಳ್ಳವರಾಗಿ ಸಂಸಾರದಲ್ಲಿ ಪ್ರಮುಖ ಸ್ಥಾನ ನಿರ್ವಹಿಸಿದರೆ ಇಡೀ ಕುಟುಂಬ ಪ್ರಗತಿ ಸಾಧಿಸಬಲ್ಲದು. ಪ್ರಬುದ್ಧ ಮಹಿಳೆಯರಿರುವ ಕುಟುಂಬ, ಸಮಾಜ ಮತ್ತು ದೇಶ ಪ್ರಗತಿ ಸಾಧಿಸುವುದರಲ್ಲಿ ಸಂದೇಹವಿಲ್ಲ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

Leave a Reply

Your email address will not be published. Required fields are marked *