ತ್ಯಾಗದ ಆನಂದ ಭೋಗದಲ್ಲಿ ಇಲ್ಲ…

ಸಂತೋಷ, ತೃಪ್ತಿ, ಆನಂದ ಮತ್ತು ಭಾವುಕತೆಯನ್ನು ಯಾರಿಗೂ ಅಳತೆ ಮಾಡಲು ಸಾಧ್ಯವಿಲ್ಲ. ಧಾರ್ವಿುಕ ಕಾರ್ಯಕ್ರಮಗಳು, ಆಚರಣೆಗಳು, ಸಂಸ್ಕಾರಗಳು ಮತ್ತು ಧಾರ್ವಿುಕತೆಯಿಂದ ಆಗುವ ಒಳ್ಳೆಯ ಪರಿಣಾಮಗಳನ್ನೂ ಆನಂದಗಳನ್ನೂ ಅಥವಾ ಅದರಿಂದ ವ್ಯಕ್ತಿತ್ವದಲ್ಲುಂಟಾಗುವ ಧನಾತ್ಮಕ ಪರಿಣಾಮಗಳನ್ನು ಲೆಕ್ಕ ಹಾಕಲಾಗದು.

ಇತ್ತೀಚೆಗೆ ಧರ್ಮಸ್ಥಳ ಕ್ಷೇತ್ರದಲ್ಲಿ ನಡೆದ ಭಗವಾನ್ ಶ್ರೀ ಬಾಹುಬಲಿಸ್ವಾಮಿಯ ಮಸ್ತಕಾಭಿಷೇಕದಲ್ಲಿ ಬಾಹುಬಲಿಯ ಜೀವನದ ಘಟನೆಗಳನ್ನು ದೃಶ್ಯಾವಳಿಯ ಮೂಲಕ ತೋರಿಸುವ ವಿನೂತನ ಪ್ರಯೋಗಗಳು ನಡೆದವು. ವಿಶೇಷವಾಗಿ ಪಂಪ ಮಹಾಕವಿಯ ‘ಆದಿಪುರಾಣ’ ಮತ್ತು ರತ್ನಾಕರವರ್ಣಿ ಬರೆದ ‘ಭರತೇಶ ವೈಭವ’ ಎಂಬ ಕಾವ್ಯಗಳಿಂದ ಸ್ಪೂರ್ತಿ ಪಡೆದುಕೊಂಡು ಈ ದೃಶ್ಯಾವಳಿ ನಡೆಸಲಾಯಿತು.

ಭೋಗಭೂಮಿಯಿಂದ ಕರ್ಮಭೂಮಿಯೆಡೆಗೆ: ಅಯೋಧ್ಯೆಯ ರಾಜನಾದ ವೃಷಭನಾಥನು ಸಂತೋಷದಿಂದ ಪ್ರಜಾಪಾಲನೆಯನ್ನು ಮಾಡುತ್ತಿದ್ದ ಕಾಲವದು, ಆಗ ಭೂಮಿಯಲ್ಲಿ ಭೋಗದ ಜೀವನ ನಡೆಯುತ್ತಿತ್ತು. ಅಂದರೆ ಪ್ರತಿಯೊಬ್ಬರಿಗೂ ಕಲ್ಪವೃಕ್ಷದ ಪ್ರಭಾವದಿಂದ ಬಯಸಿದ್ದೆಲ್ಲವೂ ಶ್ರಮವಿಲ್ಲದೆ ದೊರಕುತ್ತಿತ್ತು. ವೃಷಭನಾಥನ ಕಾಲದಲ್ಲಿ ಒಮ್ಮಿಂದೊಮ್ಮೆಲೇ ಕಾಲದ ಪರಿವರ್ತನೆಯಾಯಿತು. ಭೋಗ ಭೂಮಿಯಿದ್ದದ್ದು ಕರ್ಮಭೂಮಿಯಾಯಿತು. ಇಲ್ಲಿಯವರೆಗೆ ಶ್ರಮಪಡುವ ಅಭ್ಯಾಸವೂ, ಅಗತ್ಯವೂ ಇರಲಿಲ್ಲ. ದುಡಿಮೆಯ ಮಹತ್ವ ಗೊತ್ತಿರಲಿಲ್ಲ. ಕಾಲಚಕ್ರ ಕರ್ಮಭೂಮಿಗೆ ಪರಿವರ್ತನೆಯಾದಾಗ ಜನರು ಬದುಕಿನ ರೀತಿಯನ್ನು ಬದಲಾಯಿಸಿಕೊಳ್ಳುವ ಅನಿವಾರ್ಯತೆ ಬಂತು. ಆಗ ಪ್ರಜೆಗಳು ಒಟ್ಟುಗೂಡಿ ರಾಜನಾದ ವೃಷಭನಾಥನಲ್ಲಿಗೆ ತೆರಳಿ, ಸಮಸ್ಯೆ ನಿವೇದಿಸಿಕೊಂಡರು. ರಾಜನಿಗೂ ಆಶ್ಚರ್ಯವಾಯಿತು. ಸರ್ವವಿಧದಿಂದಲೂ ಸುಖಿಗಳಾಗಿದ್ದ ನಮ್ಮ ಪ್ರಜೆಗಳು ಹೀಗೇಕೆ ಕಷ್ಟಪಡುವಂತಾಯಿತೆಂದು ಚಿಂತಿಸಿದ. ವೃಷಭನಾಥನಿಗೆ ಕಾಲಪರಿವರ್ತನೆಯಾದದ್ದು ಸೂಕ್ಷ್ಮ ಚಿಂತನೆಯಿಂದ ಅರಿವಿಗೆ ಬಂತು. ಇನ್ನು ಮುಂದೆ ಜನರು ಕಷ್ಟ ಪಟ್ಟು ಕೆಲಸ ಮಾಡುವ ಕಾಯಕವನ್ನು ಅನುಸರಿಸಬೇಕಾದ್ದನ್ನು ಮನಗಂಡ ವೃಷಭನಾಥನು ತನ್ನ ಪ್ರಜೆಗಳಿಗೆ ಅಸಿ-ಮಸಿ, ಕೃಷಿ ಎಂಬ ಮೂರು ತತ್ತ್ವಗಳನ್ನು ಬೋಧಿಸಿದ.

ಅಸಿ ಎಂದರೆ ವಿವಿಧ ರೀತಿಯ ಉಪಕರಣಗಳನ್ನು ಬಳಸಿ, ಅದರಿಂದ ಉದ್ಯೋಗವನ್ನು ನಿರ್ಮಾಣ ಮಾಡಿಕೊಳ್ಳುವುದು. ಹಾಗೆಯೇ ಸ್ವಯಂರಕ್ಷಣೆ, ದೇಶರಕ್ಷಣೆಗಾಗಿ ಯುದ್ಧಕ್ಕೆ ಸಂಬಂಧಪಟ್ಟ ಆಯುಧಗಳನ್ನು ಬಳಸುವುದು ಮತ್ತು ರಕ್ಷಣೆ ಮಾಡುವುದು ಇದರಲ್ಲಿ ಅಡಕವಾಗಿದೆ. ಮಸಿ ಎಂದರೆ ಸಾಹಿತ್ಯ-ಕಲೆ- ಸಂಸ್ಕೃತಿಗೆ ಸಂಬಂಧಿಸಿದ, ಸಂಸ್ಕಾರ ನೀಡುವ ಕಾರ್ಯಕ್ರಮಗಳು. ಕೆಲವರು ಸಾಹಿತ್ಯದಲ್ಲಿ ಪರಿಣತಿ ಸಾಧಿಸಬಹುದು. ಕಾವ್ಯ ಶಾಸ್ತ್ರ-ವಿನೋದದಿಂದ, ಬುದ್ಧಿಯ ಪ್ರತಿಭಾಶಾಲಿತ್ವದಿಂದ ಬದುಕುವ ವಿಧಾನವನ್ನು ಒಳಗೊಂಡಿರುತ್ತದೆ. ಮೂರನೆಯದ್ದು ‘ಕೃಷಿ’. ಕೃಷಿಯೆಂದರೆ ಭೂಮಿ ಹದಮಾಡಿ, ಫಸಲು ಬೆಳೆದು ಬದುಕುವ ವಿಧಾನ. ಹೀಗೆ ಶ್ರಮಪ್ರಧಾನವಾದ ಕಾಯಕವನ್ನು ಮೊದಲು ಬೋಧಿಸಿದವನು ವೃಷಭನಾಥ ಎಂದು ಜೈನ ಪುರಾಣಗಳು ಸಾರುತ್ತವೆ.

ಸಂಸಾರದ ನಿಸ್ಸಾರತೆ: ಹೀಗೆಯೇ ಕೆಲವು ವರ್ಷಗಳು ಸಂದವು. ವೃಷಭನಾಥ ಪ್ರಜಾಪಾಲನೆ ಮಾಡಿಕೊಂಡು, ಲೌಕಿಕ ಸುಖಭೋಗಗಳಲ್ಲಿಯೇ ತಲ್ಲೀನನಾಗಿದ್ದ. ದೇವಲೋಕದ ದೇವೇಂದ್ರನು ಒಮ್ಮೆ ‘ಈ ವೃಷಭನಾಥನ ಆತ್ಮ ತೀರ್ಥಂಕರನಾಗಬೇಕಾದ ಆತ್ಮ. ಆತ್ಮವಿಸ್ಮೃತಿಯಿಂದ ವಿಷಯೋಪಭೋಗಗಳಲ್ಲಿ ಮುಳುಗಿರುವ ಇವನನ್ನ ಎಚ್ಚರಿಸಬೇಕು’ ಎಂದು ಚಿಂತಿಸಿದ. ವೃಷಭನಾಥನಿಗೆ ಸ್ವಸ್ವರೂಪಜ್ಞಾನ ಮಾಡಿಸುವುದಕ್ಕಾಗಿ, ರಾಜನ ಆಸ್ಥಾನದಲ್ಲಿ ಅಪ್ಸರೆಯ ನರ್ತನ ಏರ್ಪಡಿಸಿದ. ನೀಲಾಂಬಿಕೆ ಎಂಬ ದೇವಲೋಕದ ನರ್ತಕಿಯನ್ನೇ ನರ್ತನ ಮಾಡಲು ಕಳಿಸಿದ. ವೇದಿಕೆಯಲ್ಲಿ ಅದ್ಭುತ ನರ್ತನ ನಡೆಯುತ್ತಿತ್ತು. ನರ್ತನದ ಮಧ್ಯದಲ್ಲೇ ಇದ್ದಕ್ಕಿದ ್ದ ಹಾಗೆ ನೀಲಾಂಬಿಕೆಯ ಆಯುಷ್ಯ ಮುಗಿದು, ಆಕೆ ವೇದಿಕೆಯಲ್ಲೇ ಕುಸಿದು ಬೀಳುತ್ತಾಳೆ. ಚಕ್ರವರ್ತಿಯಾದ ವೃಷಭನಾಥನಿಗೆ ರಸಭಂಗವಾಗಬಾರದೆಂದು ದೇವೇಂದ್ರನು ನೀಲಾಂಬಿಕೆಗೆ ಮತ್ತೆ ಆಯುಷ್ಯ ಅನುಗ್ರಹಿಸಿ, ನರ್ತನ ಮುಂದುವರಿಯುವಂತೆ ಮಾಡುತ್ತಾನೆ.

ಸೂಕ್ಷ್ಮಗ್ರಾಹಿಯಾದ ವೃಷಭನಾಥ ಚಕ್ರವರ್ತಿ ಕ್ಷಣಕಾಲ ಚಿಂತಾಕ್ರಾಂತನಾಗುತ್ತಾನೆ. ‘ನೀರಿನ ಮೇಲಿನ ಗುಳ್ಳೆಯಂತೆ ಬದುಕು ಕ್ಷಣಿಕವಾದದ್ದು. ಯಾವ ಭೋಗಭಾಗ್ಯಗಳೆಲ್ಲ ನನ್ನದೆಂದು ಸಂತೋಷಿಸುತ್ತಿದ್ದೇನೋ ಅದೆಲ್ಲ ಶಾಶ್ವತವಲ್ಲ. ಈ ಆತ್ಮ ಕ್ಷಣಿಕವಾದ ಶರೀರವನ್ನು ಬಿಟ್ಟು ಹೋಗಿಬಿಡುತ್ತದೆ’ ಎಂದರಿತ ಆತನಲ್ಲಿ ವೈರಾಗ್ಯವುಂಟಾಯಿತು. ಅಚಲವಾದ ನಿರ್ಧಾರ ಮಾಡಿ, ಈ ಚಕ್ರವರ್ತಿತ್ವ ಮತ್ತು ಲೌಕಿಕ ಸುಖ ತೊರೆದು ತಪಸ್ಸು ಮಾಡಲು ಕಾಡಿಗೆ ತೆರಳಿದ. ಹೆಂಡತಿ, ಮಕ್ಕಳು ಮತ್ತು ರಾಜ್ಯದ ಆಕರ್ಷಣೆ ಕಳಚಿಕೊಂಡು, ಶಾಶ್ವತ ಜ್ಞಾನ ಸಂಪಾದನೆಗೆ ತೊಡಗಿದ.

ರತ್ನೋದಯದ ಕಾಲ: ನಂತರ ವೃಷಭನಾಥನ ಹಿರಿಯ ಮಗನಾದ ಭರತ ಅಯೋಧ್ಯೆಯನ್ನು, ಇನ್ನೋರ್ವ ಮಗನಾದ ಬಾಹುಬಲಿ ಪೌದನಪುರದಲ್ಲಿ ರಾಜ್ಯಭಾರ ಮಾಡುತ್ತಿರುತ್ತಾರೆ. ಒಮ್ಮೆ ಭರತ ಚಕ್ರವರ್ತಿ ಆಸ್ಥಾನದಲ್ಲಿರುವಾಗ ಮೂರು ಶುಭವಾರ್ತೆಗಳು ಬರುತ್ತವೆ. ಒಬ್ಬ ದೂತ ಬಂದು ಭರತನಲ್ಲಿ ಹೀಗೆ ಅರಿಕೆ ಮಾಡಿಕೊಳ್ಳುತ್ತಾನೆ. ‘ಸ್ವಾಮಿನ್! ತಮ್ಮ ತಂದೆಯವರಾದ ವೃಷಭನಾಥರಿಗೆ ದೀರ್ಘಕಾಲದ ತಪಸ್ಸಿನ ಬಳಿಕ ಇಂದು ಕೇವಲ ಜ್ಞಾನ ಪ್ರಾಪ್ತವಾಗಿದೆ. ಅವರಿಂದು ಸಮವಸರಣದಲ್ಲಿ ಸ್ಥಾನ ಪಡೆಯುವ ಹಂತಕ್ಕೆ ತಲುಪಿದ್ದಾರೆ’. ಇದೇ ಸಮಯದಲ್ಲಿ ಅರಮನೆಯಲ್ಲಿ ರಾಣಿಗೆ ಗಂಡು ಮಗು ಜನಿಸಿದೆ ಎಂಬ ಇನ್ನೊಂದು ಶುಭವಾರ್ತೆ ಭರತನಿಗೆ ಬರುತ್ತದೆ. ಪುತ್ರೋತ್ಸವಕ್ಕಾಗಿ ಸಂಭ್ರಮಿಸುವ ಸಮಯವಿದೆಂದು ಸೇವಕಿಯೊಬ್ಬಳು ಬಂದು ತಿಳಿಸುತ್ತಾಳೆ. ಮೂರನೆಯ ಶುಭವಾರ್ತೆಯೂ ಇದೇ ಸಮಯದಲ್ಲಿ ಬರುತ್ತದೆ. ಅರಸನ ಪುಣ್ಯೋದಯದಿಂದ ಚಕ್ರರತ್ನವೊಂದು ಭರತನ ಆಯುಧಾಗಾರದಲ್ಲಿ ಉದಿಸಿರುತ್ತದೆ. ಮುಂದೆ ಭರತನು ಚಕ್ರವರ್ತಿಯಾಗಲಿದ್ದಾನೆಂಬ ಸೂಚನೆಯಿದು. ಹೀಗೆ ಮೂರು ಶುಭ ಸಮಾಚಾರವನ್ನು ಏಕಕಾಲದಲ್ಲಿ ಕೇಳಿದ ಭರತನು, ಮೊದಲು ತಂದೆಗೆ ಮೋಕ್ಷ ದೊರಕಿದ ಶುಭವಾರ್ತೆಗಾಗಿ ಏಳು ಹೆಜ್ಜೆ ಮುಂದಕ್ಕೆ ನಡೆದು ತಂದೆಗೆ ನಮಸ್ಕರಿಸುತ್ತಾನೆ. ಸಮವಸರಣಕ್ಕೆ ಗೌರವ ಸಲ್ಲಿಸುತ್ತಾನೆ. ಸಾಂಸಾರಿಕವಾದ ಸಂತೋಷಕ್ಕೆ ಕಾರಣವಾದ ಪುತ್ರೋತ್ಸವವನ್ನು ಅರಮನೆಗೆ ತೆರಳಿ ಸಂಭ್ರಮಿಸುತ್ತಾನೆ. ನಂತರ ಆಯುಧಾಗಾರಕ್ಕೆ ತೆರಳಿ ತನಗೆ ದೊರಕಬೇಕಾದ ಅವಕಾಶಗಳನ್ನು ಪಡೆಯುವುದಕ್ಕಾಗಿ ಚಕ್ರರತ್ನಕ್ಕೆ ವಂದಿಸುತ್ತಾನೆ.

ಧರ್ಮಸ್ಥಳದಲ್ಲಿ ಐದು ದಿನಗಳ ಕಾಲ ನಡೆದ ಪಂಚಮಹಾವೈಭವದಲ್ಲಿನ ಈ ದೃಶ್ಯಾವಳಿಗಳನ್ನು ಸಾವಿರಾರು ಜನರು ಬಹಳ ಆಸಕ್ತಿಯಿಂದ ವೀಕ್ಷಿಸಿದರು. ವಿಶೇಷವಾಗಿ ವೃಷಭನಾಥನು ವೈರಾಗ್ಯ ತಳೆದು ಅಯೋಧ್ಯೆ ತೊರೆದು, ವೇದಿಕೆಯಿಂದ ಕೆಳಗಿಳಿದು ತೆರಳುವಾಗ ಒಂದೊಂದೇ ಆಭರಣ ಮತ್ತು ವಸ್ತ್ರವನ್ನು ತ್ಯಜಿಸುವ ದೃಶ್ಯ. ಅತ್ತ ಆತನ ಹೆಂಡತಿ, ಮಕ್ಕಳು, ಮಂತ್ರಿ ಪರಿವಾರದವರು ‘ನಮ್ಮನ್ನು ಅನಾಥರನ್ನಾಗಿ ಮಾಡಿ ಹೋಗಬೇಡಿ’ ಎಂದು ಅಂಗಲಾಚುವ ದೃಶ್ಯ ಕಂಡು ನೆರೆದಿದ್ದ ಸಹಸ್ರಾರು ಜನರ ಕಣ್ಣಲ್ಲಿ ನೀರು ಬಂತು. ಇಡೀ ಸಭೆ ಕರುಣರಸದಿಂದ ಆರ್ದ್ರವಾಯಿತು.

ಮುಂದೆ ಭರತ ಮತ್ತು ಬಾಹುಬಲಿಯರ ಯುದ್ಧದೃಶ್ಯ ತೋರಿಸಲಾಯಿತು. ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧಗಳಲ್ಲಿ ಬಾಹುಬಲಿ ಅಣ್ಣನಾದ ಭರತನನ್ನು ಸೋಲಿಸುತ್ತಾನೆ. ಮಲ್ಲಯುದ್ಧದಲ್ಲಿ ಅಣ್ಣನನ್ನು ಸೋಲಿಸಿ, ಎರಡೂ ಕೈಯಿಂದ ಆತನನ್ನು ಮೇಲಕ್ಕೆತ್ತಿ ನೆಲಕ್ಕೆ ಅಪ್ಪಳಿಸಬೇಕೆಂದು ಬಯಸಿದಾಗ, ಒಮ್ಮಲೇ ಬಾಹುಬಲಿಗೆ ಜ್ಞಾನೋದಯವಾಗುತ್ತದೆ. ‘ಚಕ್ರವರ್ತಿಯಾದ ಅಣ್ಣನನ್ನೇ ಅವಮಾನಿಸಲು ಬಯಸಿದೆನಲ್ಲ! ಷಟ್ಖಂಡಗಳನ್ನು ಜಯಿಸಿ, ಚಕ್ರವರ್ತಿಯೆನಿಸಿದ ಅಣ್ಣನ ಮೇಲೆ ಕೈಮಾಡಿದೆನಲ್ಲ! ಹೀಗೊಮ್ಮೆ ಅಣ್ಣನನ್ನು ಎತ್ತಿ ಬಿಸಾಡಿದರೆ ಆತನ ಗೌರವವೆಲ್ಲ ಮಣ್ಣು ಪಾಲಾಗುತ್ತದೆ. ನಾನೆಂತಹ ಅಪರಾಧವನ್ನು ಮಾಡಲು ಅಣಿಯಾಗಿದ್ದೇನೆ’ಎಂದು ಚಿಂತಿಸಿ, ಅಣ್ಣನಾದ ಭರತನನ್ನು ಕೆಳಕ್ಕೆ ಇಳಿಸುತ್ತಾನೆ. ಸೋಲು, ಅವಮಾನದಿಂದ ಕಂಗೆಟ್ಟ ಭರತ ಹೇಗಾದರೂ ಮಾಡಿ ಈ ಬಾಹುಬಲಿಯನ್ನು ಸೋಲಿಸಲೇಬೇಕು. ಈತನ ಕಾರಣದಿಂದ ಚಕ್ರವರ್ತಿತ್ವ ನನ್ನ ಕೈತಪ್ಪಬಾರದೆಂದು ಬಗೆದು ತನ್ನ ಚಕ್ರರತ್ನಕ್ಕೆ ಬಾಹುಬಲಿಯ ಮೇಲೆ ಆಕ್ರಮಣ ಮಾಡುವಂತೆ ಆದೇಶಿಸಿದ. ಆದರೆ, ಆ ಚಕ್ರರತ್ನ ವಿಜಯಿಯಾಗಿದ್ದ ಬಾಹುಬಲಿಯನ್ನು ಮೂರು ಸಲ ಪ್ರದಕ್ಷಿಣೆ ಮಾಡಿ, ಅವನ ಬಳಿಯಲ್ಲಿ ನಿಂತು ಬಿಡುತ್ತದೆ. ಭರತನ ಈ ನಡೆಯಿಂದ ಬಾಹುಬಲಿ ಚಿಂತಿತನಾದ. ಐಶ್ವರ್ಯ ಮತ್ತು ಆಡಳಿತಕ್ಕಾಗಿ ಒಡಹುಟ್ಟಿದವರ ಮೇಲೂ ನಿಷ್ಕರುಣೆಯ ವ್ಯವಹಾರ ಕಂಡು ಬಾಹುಬಲಿಗೆ ವೈರಾಗ್ಯವುಂಟಾಗುತ್ತದೆ. ತಾನು ಗೆದ್ದ ರಾಜ್ಯ ಮತ್ತು ಸಂಸಾರ ತೊರೆದು ತಪಸ್ಸಿಗೆ ತೆರಳಿದ. ಈ ದೃಶ್ಯವೂ ಎಲ್ಲ ಪ್ರೇಕ್ಷಕರ ಮೇಲೆ ಗಾಢಪ್ರಭಾವ ಬೀರಿತು.

ಸಂತೋಷವನ್ನು ಆಡಿಟ್ ಮಾಡಲಾಗದು: ರತ್ನಗಿರಿ ಬೆಟ್ಟದಲ್ಲಿರುವ ಬಾಹುಬಲಿಗೆ ಕೊನೆಯ ಮೂರು ದಿವಸ ಮಸ್ತಕಾಭಿಷೇಕ ನಡೆಯಿತು. ಪಂಚಮಹಾವೈಭವದ ದೃಶ್ಯಾವಳಿ ಭಕ್ತರಲ್ಲಿ ಭಕ್ತಿ ಉದ್ದೀಪನಗೊಳಿಸಿದ್ದು ಅಭಿಷೇಕದ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಂತು. ವೃಷಭನಾಥನ ಆಸ್ಥಾನದ ವೈಭವ ಮತ್ತು ಬೋಧನೆ ಕಂಡು ಪ್ರೇಕ್ಷಕರು ಸಂತೋಷಗೊಂಡಿದ್ದರು. ಆತನ ವೈರಾಗ್ಯ ಕಂಡು ತಾವೂ ಕಣ್ಣೀರಿಟ್ಟರು. ಭರತನಿಗೆ ರತ್ನೋದಯವಾದಾಗ ತಾವೂ ಸಂಭ್ರಮಿಸಿದರು.

ಬಾಹುಬಲಿಯ ಮಸ್ತಕಾಭಿಷೇಕವನ್ನು ಜಲ, ಎಳನೀರು, ಕಬ್ಬಿನ ಹಾಲು (ಇಕ್ಷುರಸ), ದನದಹಾಲು, ಪ್ರಕೃತಿದತ್ತವಾಗಿ ದೊರಕುವ ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯಗಳು, ನಂತರ ಅಕ್ಕಿಹುಡಿ, ಅರಿಶಿನದ ಅಭಿಷೇಕ, ಗಂಧ, ಚಂದನ ಕೇಸರಿ ಮತ್ತು ಅಷ್ಟಗಂಧದಿಂದ ಮಾಡಲಾಯಿತು. ಮುನಿಗಳು, ಅಯರ್ಿಕೆಯರು ಭಟ್ಟಾರಕರುಗಳು ಅಭಿಷೇಕದಲ್ಲಿ ಭಾಗವಹಿಸಿದ್ದರು. ಆವತ್ತು ಬಾಹುಬಲಿಯ ಶಿರೋಭಾಗದ ಹತ್ತಿರ ಅಟ್ಟಳಿಗೆಯಲ್ಲಿ ನಾನಿದ್ದೆ. ಅಭಿಷೇಕಕ್ಕೆ ಅಲ್ಲಿಗೆ ಬಂದಿದ್ದ ಮಹಿಳೆಯೊಬ್ಬರು ನನ್ನನ್ನು ನೋಡಿ-‘ಸ್ವಾಮಿ! ನನಗೆ ತುಂಬ ಸಂತೋಷವಾಗಿದೆ. ಭಗವಂತನ ಕಥೆಗಳನ್ನು ಮಹಾವೈಭವದ ರೂಪಕದಲ್ಲಿ ತೋರಿಸಿದ್ದೀರಿ. ಬಾಹುಬಲಿಯನ್ನು ಅರ್ಥೈಸಿಕೊಂಡು ಇಂದು ನಾನು ಈ ಬಾಹುಬಲಿಯ ಶಿರದ ಮೇಲೆ ಅಭಿಷೇಕ ಮಾಡುವಾಗ ಆಗುತ್ತಿರುವ ಸಂತೋಷ ಅನಿರ್ವಚನೀಯ’ ಎಂದು ಹೇಳುತ್ತಿರುವಾಗ ಕಣ್ಣಲ್ಲಿ ಆನಂದದ ನೀರು ಬಂತು. ಇದನ್ನು ನೋಡಿದ, ಅವರ ಪಕ್ಕದಲ್ಲೇ ಇದ್ದ ಆ ಮಹಿಳೆಯ ಮಗನಿಗೆ ಯಾಕೋ ಮುಜುಗರವೆನಿಸಿತು. ಅವನೊಬ್ಬ ವ್ಯಾಪಾರಿಯಾಗಿದ್ದ. ‘ಹೆಗ್ಗಡೆಯವರೆದುರಿಗೆ ಹಾಗೆ ಕಣ್ಣೀರು ಹಾಕಬೇಡ’ ಎಂದು ಸುಮ್ಮನಿರುವಂತೆ ಸೂಚಿಸಿದನು. ಆ ಸಮಯದಲ್ಲಿ ಆತನಿಗೆ ನಾನೊಂದು ಮಾತು ಹೇಳಿದೆ. ‘ನಿನ್ನ ತಾಯಿಯ ಸಂತೋಷದ ಕಣ್ಣೀರು ಸ್ವಾಭಾವಿಕವಾಗಿ ಬಂದದ್ದು. ನೀನು ಒಂದು ಕಂಪನಿ ನಡೆಸುತ್ತಿರುವವನು, ನಿನ್ನ ಕಂಪನಿಯಲ್ಲಿ ಒಂದು ವರ್ಷದ ಒಟ್ಟು ಆದಾಯವನ್ನು, ಲಾಭ-ನಷ್ಟಗಳನ್ನು, ಲೆಕ್ಕಪರಿಶೋಧಕರು ಲೆಕ್ಕ ಮಾಡಿ ಹೇಳುತ್ತಾರೆ. ಅದರ ಆಧಾರದಲ್ಲಿ ಕಂಪನಿ ಆರ್ಥಿಕ ವ್ಯವಹಾರವನ್ನು ನೀನು ಖಚಿತವಾಗಿ ಹೇಳಬಲ್ಲೆ. ಆದರೆ ಇಂದು ನಿನ್ನ ತಾಯಿಯ ಆನಂದದ ಕಣ್ಣೀರನ್ನೂ, ಅವಳಿಗಾದ ಆನಂದವನ್ನು ಹೇಗೆ ಲೆಕ್ಕ ಹಾಕುವುದು? ಇದನ್ನು ಯಾರು ಆಡಿಟ್ ಮಾಡ್ತಾರೆ? ಈ ಸಂತೋಷವನ್ನು ಅಳೆಯುವ ಸಾಧನವಿಲ್ಲ. ಹಾಗಾಗಿ ಸಂತೋಷ ಹೊರಗೆ ಬರಲಿ. ಸಂಕೋಚ ಬೇಡ’ ಎಂದೆ.

ಹೀಗೆ ಧಾರ್ವಿುಕ ಆಚರಣೆಗಳಿಂದ ದೊರಕುವ ಆನಂದವನ್ನು ಅಳತೆ ಮಾಡಲಾಗುವುದಿಲ್ಲ! ಅದನ್ನೇ ಅವರ್ಣನೀಯ ಎನ್ನಬಹುದೇನೋ. ನನಗೆ ಇನ್ನೊಂದು ಸಂದರ್ಭ ನೆನಪಾಗುತ್ತಿದೆ. ಶ್ರೇಯಾಂಸ್ ಪ್ರಸಾದ ಜೈನರು ಮುಂಬೈಯ ಪ್ರಸಿದ್ಧ ಉದ್ಯಮಿಗಳು. ಜ್ಞಾನಪೀಠ ಪ್ರಶಸ್ತಿ ಸಮಿತಿ ಅಧ್ಯಕ್ಷರಾಗಿದ್ದವರು. ಅವರು ಧಾರ್ವಿುಕ ಪುಸ್ತಕಗಳ ಪ್ರಕಟಣೆಗೆ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದ್ದರು. ಒಮ್ಮೆ ಕರ್ನಾಟಕದ ಹೆಮ್ಮೆಯ ಸಾಹಿತಿಗಳಾದ ಆ.ನೆ.ಉಪಾಧ್ಯಾಯರು ಪುಸ್ತಕವೊಂದರ ಪ್ರಕಟಣೆಗೆ ಸಂಬಂಧಿಸಿ, ಶ್ರೇಯಾಂಸರನ್ನು ಭೇಟಿಯಾದರು. ಅದೇ ಸಮಯದಲ್ಲಿ ಶ್ರೇಯಾಂಸ್​ರ ಲೆಕ್ಕಪರಿಶೋಧಕರು, ಲೆಕ್ಕಪತ್ರಗಳ ಖರ್ಚು-ವೆಚ್ಚ ವಿವರಿಸುತ್ತ, ‘ನೀವು ಪ್ರಕಟಿಸಿದ ಪುಸ್ತಕಗಳಲ್ಲಿ ಕೆಲವು ಉಚಿತವಾಗಿ ಹೋಗಿವೆ. ಕೆಲವೇ ಕೆಲವು ಪುಸ್ತಕಗಳು ಮಾರಾಟವಾಗಿವೆ. ಆದರೆ ಉಳಿದ ಪುಸ್ತಕಗಳು ನಮ್ಮ ಗೋಡೌನ್​ನಲ್ಲಿ ರಾಶಿಬಿದ್ದಿವೆ. ಆದ್ದರಿಂದ ಪುಸ್ತಕಕ್ಕಾಗಿ ಹಣ ಖರ್ಚು ಮಾಡುವಾಗ ಯೋಚಿಸುವುದು ಒಳ್ಳೆಯದು’ ಎಂದರು. ಈ ಘಟನೆಗೆ ಸಾಕ್ಷಿಯಾದ ಉಪಾಧ್ಯಾಯರು, ತಾನು ಈಗ ಪ್ರತಿಕ್ರಿಯೆ ನೀಡದಿದ್ದರೆ, ಈ ಲೆಕ್ಕಪರಿಶೋಧಕರ ಮಾತಿಗೇ ಬೆಲೆ ಬಂದು ಬಿಡಬಹುದು. ಹಾಗೇನಾದರೂ ಆದರೆ ಶ್ರೇಯಾಂಸ್ ಜೈನರು ಗ್ರಂಥಗಳ ಮೌಲ್ಯಕ್ಕಿಂತಲೂ ಸಂಪತ್ತಿನ ಬಗ್ಗೆ ಚಿಂತಿಸಿದರೆ ಪ್ರಕಾಶನವೇ ನಿಂತು ಹೋಗಬಹುದು. ಇದು ಒಳ್ಳೆಯ ಲಕ್ಷಣವಲ್ಲವೆಂದು ಅರಿತು ಯೋಚಿಸಿದರು. ಉಪಾಧ್ಯಾಯಜೀ-‘ಶ್ರೇಷ್ಠವಾದ ಗ್ರಂಥಗಳು ಕಾದಂಬರಿಗಳಂತೆ ಸಾಮಾನ್ಯ ಜನರಿಗೆ ಬಿಕರಿಯಾಗುವುದಿಲ್ಲ. ಇದನ್ನು ಜ್ಞಾನಿಗಳು ಅಧ್ಯಯನ ಮಾಡುತ್ತಾರೆ. ಕೆಲವೇ ಕೆಲವು ಅಧ್ಯಯನಶೀಲರು ಇದನ್ನು ಓದಿದರೂ, ಇದರ ಪ್ರಭಾವ ಇಡೀ ಜನಮಾನಸದ ಮೇಲೆ ಆಗುತ್ತದೆ. ಲೆಕ್ಕಪರಿಶೋಧಕರು ಪುಸ್ತಕ ಪ್ರಕಾಶನದ ಖರ್ಚುವೆಚ್ಚದ ಲೆಕ್ಕ ಹೇಳಿದ್ದಾರೆ. ಆದರೆ, ಈ ಅಮೂಲ್ಯ ಗ್ರಂಥಗಳನ್ನು ಓದಿದ ವಿದ್ವಾಂಸರು, ಕುತೂಹಲಿಗಳು, ಸಂಶೋಧಕರಲ್ಲಿ ಆಗಿರುವ ಪರಿವರ್ತನೆಗಳನ್ನು, ಸ್ಪೂರ್ತಿಯನ್ನು ನಿಮಗೆ ಆಡಿಟ್ ಮಾಡಲು ಸಾಧ್ಯವಿದೆಯೇ?’ ಎಂದು ಕೇಳಿದರಂತೆ. ಉಪಾಧ್ಯಾಯರ ಈ ಅಭಿಪ್ರಾಯ ಗ್ರಹಿಸಿದ ಶ್ರೇಯಾಂಸ್​ರು, ‘ಉಪಾಧ್ಯಾಯರೇ, ತಮ್ಮ ಮುದ್ರಣಕೈಂಕರ್ಯ ಮೊದಲಿನಂತೆ ಮುಂದುವರಿಸಿ’ ಎಂದು ಗೌರವಿಸಿದರು.

ಸಂತೋಷ ಅನುಭವಿಸಬೇಕು: ಸಂತೋಷ, ತೃಪ್ತಿ, ಆನಂದ ಮತ್ತು ಭಾವುಕತೆಯನ್ನು ಯಾರಿಗೂ ಅಳತೆ ಮಾಡಲು ಸಾಧ್ಯವಿಲ್ಲ. ಧಾರ್ವಿುಕ ಕಾರ್ಯಕ್ರಮಗಳು, ಆಚರಣೆಗಳು, ಧಾರ್ವಿುಕ ಸಂಸ್ಕಾರಗಳು ಮತ್ತು ಧಾರ್ವಿುಕತೆಯಿಂದ ಆಗುವ ಒಳ್ಳೆಯ ಪರಿಣಾಮಗಳನ್ನೂ ಆನಂದಗಳನ್ನೂ ಅಥವಾ ಅದರಿಂದ ವ್ಯಕ್ತಿತ್ವದಲ್ಲುಂಟಾಗುವ ಧನಾತ್ಮಕ ಪರಿಣಾಮಗಳನ್ನು ಲೆಕ್ಕ ಹಾಕಲಾಗದು. ಐದು ವರ್ಷದ ಹುಡುಗಿ ಪುಟ್ಟ ಬಾಲಕನನ್ನು ಸೊಂಟದಲ್ಲಿಟ್ಟುಕೊಂಡು ಬರುತ್ತಿದ್ದಳಂತೆ. ಆಗ ಒಬ್ಬ ‘ನೀನೇ ಐದು ವರ್ಷದ ಮಗು, ನೀನು ಇನ್ನೊಂದು ಮಗುವನ್ನು ಹೊತ್ತುಕೊಂಡಿದ್ದಿ. ನಿನಗೆ ಭಾರ ಆಗೋದಿಲ್ವೆ?’ ಎಂದು ಕೇಳಿದ. ‘ಇವನು ನನ್ನ ತಮ್ಮ’ ಎಂದು ಆ ಮಗು ಹೇಳಿತು. ‘ಅದು ಸರಿ. ಆದರೆ ಈ ಮಗು ಎತ್ತಿಕೊಳ್ಳಲು ನಿನಗೆ ಕಷ್ಟವಾಗುವುದಿಲ್ಲವೆ?’ ಎಂದು ಕೇಳಿದ. ಅವಳದ್ದೊಂದೇ ಉತ್ತರ. ‘ಇವನು ನನ್ನ ತಮ್ಮ’. ಹೀಗೆ ಕೈಯಲ್ಲಿ ಹಿಡಿದ ಮಗು ತಮ್ಮನಾದಾಗ, ವಾತ್ಸಲ್ಯ, ಪ್ರೀತಿ, ಪ್ರೇಮ, ಬಾಂಧವ್ಯದ ಮುಂದೆ ಮಗುವಿನ ತೂಕ ಮತ್ತು ಶ್ರಮ ನಗಣ್ಯ. ಆದ್ದರಿಂದ ಬದುಕಿನಲ್ಲಿ ಬರುವ ಸಂತೋಷವನ್ನು ಅನುಭವಿಸಬೇಕು. ಆನಂದಿಸಬೇಕು.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)