ಅಪಘಾತಗಳ ಸಂಖ್ಯೆ ತಗ್ಗಲಿ, ಪ್ರಾಣಗಳು ಉಳಿಯಲಿ

ವಾಹನ ಮಾಲೀಕರು/ಚಾಲಕರಿಗೆ ವಾಹನದ ಪೂರ್ಣ ಪರಿಚಯವಿರಬೇಕು. ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನವಿರಬೇಕು. ಪ್ರತಿಯೊಂದು ವಿಚಾರದಲ್ಲೂ ಚಾಲಕರಿಗೆ ಅನುಭವ, ಜವಾಬ್ದಾರಿ, ಹೊಣೆಗಾರಿಕೆ ಇರಬೇಕು. ಜತೆಗೆ ಕಾನೂನನ್ನು ಗೌರವಿಸಿ, ಇನ್ನೂ ಹೆಚ್ಚು ಶಿಸ್ತುಬದ್ಧವಾಗಿ ವಾಹನ ಚಾಲನೆ ಮಾಡುವಂಥ ಚಿತ್ತಸ್ಥಿತಿ ರೂಢಿಸಿಕೊಳ್ಳಬೇಕು.

ಇತ್ತೀಚಿನ ಪತ್ರಿಕಾ ವರದಿಯೊಂದು ನನ್ನ ಮನಸ್ಸನ್ನು ಕಲಕಿತು. ಕರ್ನಾಟಕ ಒಂದರಲ್ಲಿಯೇ ಪ್ರತಿವರ್ಷ ಕನಿಷ್ಠ 10 ಸಾವಿರ ಮಂದಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದರೆ, ಸುಮಾರು 50 ಸಾವಿರ ಮಂದಿ ಗಾಯಾಳುಗಳಾಗುತ್ತಿದ್ದಾರೆ. ಅತ್ಯಧಿಕ ರಸ್ತೆ ಅಪಘಾತ ಸಂಭವಿಸುತ್ತಿರುವ ಭಾರತದ ರಾಜ್ಯಗಳ ಪೈಕಿ ಕರ್ನಾಟಕ 4ನೇ ಸ್ಥಾನದಲ್ಲಿದೆ! 15ರಿಂದ 45 ವರ್ಷ ವಯಸ್ಸಿನವರೇ ಅಪಘಾತಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣಗಳೇನು? ಅಪಘಾತ ಸಂಭವಿಸದ ಹಾಗೆ ಏನೆಲ್ಲ ಕ್ರಮ ಕೈಗೊಳ್ಳಬಹುದು?

ಸಂಚಾರ ನಿಯಮ ಪಾಲಿಸದಿರುವುದು ಅಪಘಾತಕ್ಕೆ ಮೂಲಕಾರಣ ಎಂಬುದು ಗೊತ್ತಿರುವಂಥದ್ದೇ. ಆದರೂ ತಮಗೇನೂ ಆಗದೆಂಬ ಹುಂಬಧೈರ್ಯ ಪ್ರಾಣಕ್ಕೆ ಕುತ್ತಾಗುತ್ತಿದೆ. ನಿಯಮ ಮೀರಿದ ಸಂದರ್ಭಗಳಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಾತಕ್ಕೀಡಾಗುವವರ ಸಂಖ್ಯೆಯೂ ಅಧಿಕವಾಗಿದೆ.

ಇನ್ನೊಂದು ವರದಿಯಲ್ಲಿ, 2 ವಾಹನಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದವು. ಒಂದು ವಾಹನ ರಸ್ತೆ ವಿಭಾಜಕವನ್ನು ಹಾರಿ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಕ್ಕೆ 6 ಜನರ ಅಪಮೃತ್ಯುವಾಯಿತು ಎಂದಿತ್ತು. ಇಂತಹ ಘಟನೆ ಓದಿದಾಕ್ಷಣ ಬೇಸರವಾಗುತ್ತದೆ. ಅಲ್ಲದೆ, ‘ಪಾಪ, ಅವರಿಗೇನೋ ಗ್ರಹಚಾರ ಸರಿ ಇರಲಿಲ್ಲ. ಕೆಟ್ಟಗಳಿಗೆ, ಹಾಗಾಗಿ ಅಪಮೃತ್ಯು ಬಂತು’ ಎಂದು ಹೇಳುತ್ತೇವೆ. ಈ ವಾಹನ ವಿಭಾಜಕವನ್ನು ಹಾರಿದಾಗ ಎದುರಿನಲ್ಲಿ ಮೃತ್ಯುವೇ ಇದ್ದುದರಿಂದ ಕಾಕತಾಳೀಯವಾದರೂ ಇದು ಪ್ರಾರಬ್ಧ ಎನ್ನುತ್ತೇವೆ. ನಮ್ಮ ದೌರ್ಬಲ್ಯವೆಂದರೆ, ನಿತ್ಯವೂ ಬರುವ ಇಂತಹ ವರದಿಗಳನ್ನು ಓದಿ, ಅದನ್ನು ಬದಿಗೆ ಇಟ್ಟುಬಿಡುತ್ತೇವೆ. ವರದಿಯಲ್ಲಿ ಓದಿದ ಸಾವಿನ ರೀತಿ ಮತ್ತು ಸಂಖ್ಯೆಯನ್ನು ನೆನೆದು ಒಮ್ಮೆ ಬೇಸರಗೊಂಡರೂ, ಮರುಕ್ಷಣ ಮರೆತುಬಿಡುತ್ತೇವೆ. ಒಮ್ಮೆ ನಮ್ಮ ಬೀಡಿನ ಚಾವಡಿಗೆ ಬಂದ ಭಕ್ತನೊಬ್ಬ ‘ನನ್ನ ಮಗನಿಗೆ ಯಾರೋ ಮಾಟ ಮಾಡಿಸಿದ್ದಾರೆ’ ಎಂದ. ‘ಅದು ನಿನಗೆ ಹೇಗೆ ತಿಳಿಯಿತು?’ ಎಂದು ಪ್ರಶ್ನಿಸಿದೆ. ಅದಕ್ಕಾತ ‘ಇತ್ತೀಚೆಗೆ ಆತ ದ್ವಿಚಕ್ರ ವಾಹನದ ಅಪಘಾತದಲ್ಲಿ ತೀರಿಹೋದ’ ಎಂದ. ‘ಅಪಘಾತದಲ್ಲಿ ಆತ ಸಾಯುವುದಕ್ಕೂ, ಮಾಟಕ್ಕೂ ಏನು ಸಂಬಂಧ?’ ಎಂದು ಕೇಳಿದ್ದಕ್ಕೆ ಆತ ‘ಮಗನ ಮರಣದ ನಂತರ ಜೋಯಿಸರಲ್ಲಿ ಹೋಗಿದ್ದೆ, ಮಾಟ ಮಾಡಿಸಿದ್ದರಿಂದಲೇ ಆತನ ಜೀವಕ್ಕೆ ಕಂಟಕ ಬಂತು ಅಂದಿದ್ದಾರೆ’ ಎಂದ. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಕ್ಷಣ ತಿಳಿಯಲಿಲ್ಲ. ಒಂದೆಡೆ 21 ವರ್ಷದ ಮಗನನ್ನು ಕಳೆದುಕೊಂಡ ದುಃಖ, ಇನ್ನೊಂದೆಡೆ ಇಂತಹ ಅಪಮೃತ್ಯು ಯಾಕಾಗಿರಬಹುದೆಂಬ ಆತಂಕ, ಇದನ್ನು ತಿಳಿಯಬೇಕೆಂಬ ಕುತೂಹಲ! ಇದೆಲ್ಲದಕ್ಕೆ ಪರಿಹಾರ ಕಂಡುಕೊಳ್ಳಲು ಆತ ಜ್ಯೋತಿಷಿಯನ್ನು ಸಂರ್ಪಸಿದ್ದಾನೆ. ಕೆಲವೊಮ್ಮೆ ಇಂತಹ ಜ್ಯೋತಿಷಿಗಳ ಮಾತು ಕೇಳಿದಾಗ, ಅವರ ಬಗ್ಗೆಯೇ ಅಯ್ಯೋ ಪಾಪ! ಎಂದು ಕನಿಕರವಾಗುತ್ತದೆ. ಯಾಕೆಂದರೆ ಯಾರೋ ಬಂದು ಸಮಸ್ಯೆ ಹೇಳಿ, ಪರಿಹಾರ ಕೇಳಿದರೆ- ಆ ಪೃಚ್ಛಕನ ಸಮಾಧಾನಕ್ಕಾಗಿ ಒಂದು ಕಾರಣ ಹೇಳಿ, ಏನೋ ಶಾಸ್ತ್ರೀಯ ಪರಿಹಾರವನ್ನು ಹೇಳಬೇಕಾಗುತ್ತದೆ. ಆಗಲೇ ಬಂದವನಿಗೂ ಸಮಾಧಾನ.

ಅವನ ಮಾತು ಕೇಳಿದಾಗ ನನಗನಿಸಿದ್ದನ್ನು ಆತನಿಗೆ ಹೇಳಿದೆ- ‘ಮಾಟ-ಮಂತ್ರ ಮಾಡಿ ಒಬ್ಬನನ್ನು ಅಪಘಾತದಲ್ಲಿ ಕೊಲ್ಲಲಾಗದು. ಜಾತಕದಲ್ಲಿ ಕಂಟಕ ಬಂದಾಗ ಅಪಘಾತವಾಗಿರಬಹುದು. ಅಪಘಾತವಾದಾಗಲೂ ಬಹಳ ಸಲ ಜನ ಬದುಕುಳಿಯುತ್ತಾರೆ. ‘ಕೂದಲೆಳೆಯಲ್ಲಿ ಆಪತ್ತು ತಪ್ಪಿ ಬದುಕಿದ’ ಎನ್ನುವವರಿದ್ದಾರೆ. ಎಂದರೆ ಪ್ರಾಣಕ್ಕೇ ಬರುವ ಆಪತ್ತು ಅಲ್ಪದರಲ್ಲಿ (ಕೈ-ಕಾಲು ಮುರಿದು) ಹೋಗುತ್ತದೆ. ಸ್ಪಲ್ಪ ದಿನದ ಚಿಕಿತ್ಸೆಯಿಂದ ಗುಣಮುಖರಾಗುತ್ತಾರೆ. ಕಂಟಕ ಇನ್ನೂ ತೀವ್ರವಾಗಿದ್ದರೆ, ಕೆಲವು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಬಹುದು. ಕಂಟಕ ಅಷ್ಟೇ ಪ್ರಬಲವಾಗಿದ್ದಾಗ ಮತ್ತು ಅಪಘಾತದ ತೀವ್ರತೆಗೆ ತಕ್ಕಂತೆ ಪ್ರಾಣಹಾನಿಯಾಗಬಹುದೇ ಹೊರತು ಮಾಟ-ಮಂತ್ರದಿಂದ ಜೀವಹಾನಿಯಾಗುವುದಿಲ್ಲ’.

ಅಪಘಾತದಿಂದ ಅಕಾಲಿಕ ಮರಣಗಳಾದಾಗ, ಹೀಗಾಗಿದ್ದೇಕೆಂದು ಕಾರಣ ಹುಡುಕುವ ಪದ್ಧತಿ ಕಾನೂನಿನಲ್ಲಿದೆ. ಸುಮಾರು 40-50 ವರ್ಷಗಳ ಹಿಂದೆ ಒಂದೊಮ್ಮೆ ಅಪಘಾತವಾದರೆ, ಸಂಬಂಧಿತ ವಾಹನಗಳನ್ನು ಅದೇ ಸ್ಥಳದಲ್ಲೇ ನಿಲ್ಲಿಸಬೇಕಾಗಿತ್ತು. ನಂತರ ಸಾರಿಗೆ ಇಲಾಖೆಯಿಂದ ಬ್ರೇಕ್ ಇನ್ಸ್​ಪೆಕ್ಟರ್ ಬಂದು ಅಪಘಾತದ ವಿವರವನ್ನು ಪರಿಶೀಲಿಸುತ್ತಿದ್ದರು. ಪೊಲೀಸ್ ಅಧಿಕಾರಿಗಳು ಅಪಘಾತದ ಸ್ಥಳದಲ್ಲಿ ಗುರುತುಗಳನ್ನು ಹಾಕುತ್ತಿದ್ದರು. ಬ್ರೇಕ್ ಇನ್ಸ್​ಪೆಕ್ಟರ್ ವಾಹನದ ತಾಂತ್ರಿಕ ಅಂಶಗಳನ್ನು, ಅಂದರೆ ವಾಹನದ ಸುಸ್ಥಿತಿ, ಬ್ರೇಕ್, ಗೇರ್ ಇತ್ಯಾದಿಗಳನ್ನೂ, ಪೊಲೀಸರು ಅಪಘಾತದ ಕಾರಣಗಳನ್ನೂ ಪರಿಶೀಲಿಸುತ್ತಿದ್ದರು. ಯಾರು ರಸ್ತೆ ನಿಯಮವನ್ನು ಮೀರಿ ವಾಹನ ಚಲಾಯಿಸುತ್ತಿದ್ದರು? ಚಾಲಕನ ತಪ್ಪಿನಿಂದ ಅಪಘಾತವಾಗಿದೆಯೇ? ಅಥವಾ ಯಾವುದಾದರೂ ಅನಿರೀಕ್ಷಿತ ಸಂದರ್ಭ ಎದುರಾಗಿ ಅಪಘಾತವಾಯಿತೆ? ಚಾಲಕ ಅಮಲು ಪದಾರ್ಥವನ್ನು ಸೇವಿಸಿದ್ದನೇ? ನಿದ್ದೆಗಣ್ಣಲ್ಲಿದ್ದನೆ? ಇತ್ಯಾದಿ ಅಂಶಗಳನ್ನು ಪರಿಶೀಲಿಸುತ್ತಿದ್ದರು. ಅಂತಹ ವರದಿ ಆಧಾರದಲ್ಲಿ ವಾಹನ ವಿಮೆ (Vehicle Insurance) ಪರಿಹಾರ ಸಿಗುತ್ತಿತ್ತು. ಆದರೆ, ಇಂದು ಈ ಪದ್ಧತಿ ನಿಂತುಹೋಗಿದೆಯೇ? ದಿನನಿತ್ಯ ನಡೆಯುವ ಅಪಘಾತಗಳು, ಪೊಲೀಸ್ ಇಲಾಖೆಯಲ್ಲಿನ ಕಾರ್ಯದ ಒತ್ತಡ ಅಥವಾ ಅಸಹಾಯಕತೆಯಿಂದಾಗಿ ವಿಮರ್ಶೆಗಳು ಈ ಕಾಲದಲ್ಲಿ ಗಂಭೀರವಾಗಿ ನಡೆಯುವುದಿಲ್ಲ. ವಿಮೆಯಂತೂ ಹೇಗೋ ಸಿಗುತ್ತದೆ.

ನನ್ನ ಪ್ರಕಾರ, ಪ್ರತಿಯೊಂದು ಅಪಘಾತದಲ್ಲೂ ಅದರ ಹಿನ್ನೆಲೆಯನ್ನು ವಿಮಶಿಸಬೇಕು. ಒಬ್ಬ ಚಾಲಕ ಮಾಡಿದ ತಪ್ಪನ್ನು ಉಳಿದ ಚಾಲಕರಾರೂ ಮಾಡಬಾರದು. ಆ ರೀತಿಯಲ್ಲಿ ಅಪಘಾತವನ್ನು ವಿಮಶಿಸಬೇಕು, ತಪ್ಪಿತಸ್ಥನಿಗೆ ಶಿಕ್ಷೆಯಾಗಬೇಕು, ಶಿಕ್ಷೆಯ ಭಯವಿರಬೇಕು.

ನಾನು ಕಳೆದ 50 ವರ್ಷಗಳಿಂದ ವಾಹನಗಳನ್ನು ಬಳಸಿದ್ದೇನೆ, ಸ್ವತಃ ಚಲಾಯಿಸಿದ್ದೇನೆ. ವಾಹನ ಸಂಗ್ರಾಹಕನೂ ಆಗಿದ್ದೇನೆ, ಅವನ್ನು ಕುತೂಹಲದಿಂದ ನೋಡಿದ್ದೇನೆ. ಇಂದಿನ ವಾಹನಗಳು ವೇಗವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿವೆ. ಕಳೆದ 50 ವರ್ಷಗಳಲ್ಲಿ ತಾಂತ್ರಿಕತೆ ತುಂಬ ಬದಲಾಗಿದೆ. ವೇಗ, ವೇಗಕ್ಕೆ ತಕ್ಕುದಾದ ಬ್ರೇಕ್ ವ್ಯವಸ್ಥೆ ಮತ್ತು ಅದಕ್ಕನುಗುಣವಾದ ಆಧುನಿಕತೆ ಕಾರಿನಲ್ಲಿ ಬಂದಿದೆ. ನಾನು ತಿಳಿದಂತೆ ಕಳೆದ 35 ವರ್ಷಗಳಿಗಿಂತ ಹಿಂದೆ ಮರ್ಸಿಡಿಸ್ ಕಂಪನಿಯವರು ವಾಹನದ ಬ್ರೇಕ್ ಬಗ್ಗೆಯೇ ಸಂಶೋಧನೆ ಮಾಡಿದ್ದರು. ಆ ಕಾಲದಲ್ಲಿ ಬ್ರೇಕ್ ಒತ್ತಿದರೆ ಸಾಮಾನ್ಯವಾಗಿ ರಸ್ತೆಯಲ್ಲಿ ವಾಹನದ ನಾಲ್ಕು ಚಕ್ರಗಳನ್ನು ಎಳೆದುಕೊಂಡು ಸ್ವಲ್ಪ ದೂರ ಚಲಿಸುತ್ತಿತ್ತು. ಆ ವಾಹನದ ಚಕ್ರದಲ್ಲಿ ಒಂದು ತರಹದ ಕೀಚುಸ್ವರ ಬರುತ್ತಿತ್ತು. ಜರ್ಮನಿಯ ಮರ್ಸಿಡಿಸ್ ಕಂಪನಿಯವರು ವಿಶೇಷ ಸಂಶೋಧನೆ ಮತ್ತು ಪ್ರಯತ್ನದೊಂದಿಗೆ ಹೊಸ ಆವಿಷ್ಕಾರಗಳನ್ನು ತಂದರು. ಬ್ರೇಕ್ ಹಾಕಿದಾಗ ಚಕ್ರಗಳು ಹಿಡಿದುಕೊಳ್ಳದೇ ರಸ್ತೆಯಲ್ಲಿ ಸ್ವಲ್ಪ ಜಾರಿ ನಿಲ್ಲುವಂತೆ ಮಾಡಿದರು. ಅದು ಸುಮಾರು ಒಂದೂವರೆ, ಎರಡು ಅಡಿಯಷ್ಟು ಜಾರಿ ನಿಲ್ಲುತ್ತಿತ್ತು. ABS (Antilock Braking System) ಎಂಬ ವ್ಯವಸ್ಥೆ ಕಂಡುಹಿಡಿದರು. ವಾಹನಕ್ಕೆ ಬ್ರೇಕ್ ಹಾಕಿದಾಗ, ಮೊದಲು ಕನಿಷ್ಠ 3ರಿಂದ 6 ಅಡಿ ಎಳೆದುಕೊಂಡು ಹೋಗುತ್ತಿದ್ದುದು ಈಗ 2 ಅಡಿಯಲ್ಲೇ ನಿಲ್ಲುತ್ತದೆ. ಮೊದಲಿನ ಬ್ರೇಕ್ ವ್ಯವಸ್ಥೆಗಿಂತ ಈ ಹೊಸ ಸಂಶೋಧನೆ ಸುರಕ್ಷಿತವಾಗಿದೆ. ಈಗಂತೂ ಎಲ್ಲ ವಾಹನಗಳೂ ಅಆಖ ಪದ್ಧತಿ ಅಳವಡಿಸಿಕೊಂಡಿವೆ. ಇಂತಹ ಸಂಶೋಧನೆಗಳಿಂದಾಗಿ ವಾಹನಕ್ಕೆ ಹೊಸ ಸ್ವರೂಪ ಬಂದಾಗ ಅಪಘಾತಗಳನ್ನು ತಡೆಗಟ್ಟಬಹುದು. ವಾಹನಗಳಲ್ಲಿ ತಯಾರಿಕಾ ಕಂಪನಿಯ ಅನೇಕ ಸೂಚನಾ ಫಲಕಗಳಿರುತ್ತವೆ. ಹಿಂದಿನ ಕಾಲದ ವಾಹನಗಳಲ್ಲಿ ಚಾಲಕ ಕುಳಿತುಕೊಳ್ಳುವ ಹಿಡಿತದಿಂದ ಹಿಡಿದು ವಾಹನದ ಹತೋಟಿಗೆ ಬೇಕಾದ ತಂತ್ರಜ್ಞಾನಗಳಿರಲಿಲ್ಲ. ಈಗ ಎಲ್ಲ ವಾಹನಗಳಲ್ಲಿ ಅಂತಹ ತಂತ್ರಗಾರಿಕೆ ಬಂದಿದೆ. ಅಟೊಮ್ಯಾಟಿಕ್ ಗೇರ್​ಗಳು ಬಂದಿವೆ. ಲೈಟ್​ಗಳ ಮೇಲೆ ನಿಯಂತ್ರಣ ಬಂದಿದೆ. ಸ್ಪಷ್ಟವಾಗಿ ಕಾಣುವ ಕನ್ನಡಿಗಳಿವೆ. ಬಸ್, ಲಾರಿಗಳಂತಹ ದೊಡ್ಡ ವಾಹನಗಳಿರಬಹುದು, ಕಾರ್, ಬೈಕ್​ಗಳಂತಹ ಸಣ್ಣ ವಾಹನಗಳಿರಬಹುದು; ಇವೆಲ್ಲವೂ ಅನೇಕ ವರ್ಷಗಳ ಸಂಶೋಧನೆಗಳ ಮೂಲಕ ಪರಿಷ್ಕರಿಸಲ್ಪಟ್ಟಿವೆ. ಕೃತಕವಾಗಿ ಅಪಘಾತಗಳನ್ನು ಮಾಡಿ, ಸಂಶೋಧಿಸಿ ವಾಹನವನ್ನು ಸಿದ್ಧಪಡಿಸುತ್ತಾರೆ. ಕಾರಿನೊಳಗೆ ಗೊಂಬೆಯೊಂದನ್ನು ಇಟ್ಟು, ಆ ಗೊಂಬೆಗೆ ಮಾನವನಂತೆ ಬೇಕಾದ ಅಂಗಾಂಗಳನ್ನು ಜೋಡಿಸಿ, ಕಾರನ್ನು ಅತಿವೇಗವಾಗಿ ಓಡಿಸಿ, ಒಂದು ಗೋಡೆಗೆ ಅಪ್ಪಳಿಸುವಂತೆ ಮಾಡುತ್ತಾರೆ. ಹಾಗೆ ಅಪ್ಪಳಿಸಿದಾಗ ಒಳಗಿದ್ದ ಮಾನವಾಕೃತಿಗೆ ಏನೇನು ಪರಿಣಾಮಗಳಾಗಿವೆ ಎಂಬುದನ್ನು ಗಮನಿಸಿ, ಏರ್​ಬ್ಯಾಗನ್ನು ಕಂಡುಹಿಡಿದರು. ಈಗ ಎಲ್ಲ ಬಗೆಯ ವಾಹನಗಳಲ್ಲಿ ಏರ್​ಬ್ಯಾಗ್​ಗಳಿವೆ. 8 ಏರ್​ಬ್ಯಾಗ್, 11 ಏರ್​ಬ್ಯಾಗ್ ಹೀಗೆಲ್ಲ ಇದೆ. ಅಪಘಾತಗಳಾದಾಗ ಬಲೂನ್ ತರಹದ ಈ ಏರ್​ಬ್ಯಾಗ್​ಗಳು ಊದಿಕೊಂಡು ವಾಹನದಲ್ಲಿರುವವರಿಗೆ ರಕ್ಷಣೆ ನೀಡುತ್ತವೆ. ಇಂತಹ ಏರ್​ಬ್ಯಾಗ್ ಅಳವಡಿಕೆಯಿಂದ ಸಾವಿರಾರು ಜನರು ಅಪಘಾತವಾದಾಗಲೂ ಬದುಕುಳಿದಿದ್ದಾರೆ. ಏರ್​ಬ್ಯಾಗ್ ಇರುವ ಮತ್ತು ಇಲ್ಲದಿರುವ ವಾಹನಗಳಿಗೆ 30ರಿಂದ 40 ಸಾವಿರ ರೂ. ವ್ಯತ್ಯಾಸ ಇರಬಹುದು. ಏರ್​ಬ್ಯಾಗ್ ಇಲ್ಲದ ಕಡಿಮೆ ಬೆಲೆಯ ವಾಹನವನ್ನೇ ಖರೀದಿಸುವವರೂ ಇದ್ದಾರೆ. ಅನೇಕ ಸಂಶೋಧನೆಗಳ ಮೂಲಕ ಈಗಿನ ವಾಹನಗಳು ವೇಗವನ್ನು ಹೆಚ್ಚಿಸಿಕೊಂಡಿವೆ. ಬಾಹ್ಯ ಅಲಂಕಾರಗಳನ್ನು ಆಕರ್ಷಕವಾಗಿ ಮಾಡಿಕೊಳ್ಳುವುದರ ಜತೆಗೆ ತಾಂತ್ರಿಕ ಪ್ರಗತಿಯನ್ನು ಸಾಧಿಸಿವೆ. ಈ ಬೆಳವಣಿಗೆಗಳನ್ನು ಪ್ರತಿಯೊಬ್ಬ ಚಾಲಕನೂ ತಿಳಿದುಕೊಳ್ಳಬೇಕು. ತನ್ನ ವಾಹನ ಎಷ್ಟು ಸಾಮರ್ಥ್ಯ (ಸಿಸಿ) ಹೊಂದಿದೆ ಎಂದು ತಿಳಿದಿರಬೇಕು. ಅದು 800 ಸಿಸಿಯಿಂದ ಸಾವಿರಾರು ಸಿಸಿವರೆಗೆ ಇರಬಹುದು. ವಾಹನ ಖರೀದಿಸುವಾಗ ಯಂತ್ರದ ಶಕ್ತಿಯನ್ನು ಗುರುತಿಸಬೇಕು. ವಾಹನ ಚಾಲನೆ ಮಾಡುವಾಗ ಬ್ರೇಕನ್ನು ಪರಿಶೀಲಿಸಿ, ವಾಹನ ತನ್ನ ಹತೋಟಿಗೆ ಹೇಗೆ ಬರುತ್ತದೆ ಎಂದು ಅರಿತಿರಬೇಕು. ಇದರೊಂದಿಗೆ ತನ್ನ ಜೀವ ಎಷ್ಟು ಮುಖ್ಯವೋ ಹಾಗೆಯೇ ತನ್ನ ಜತೆಯಿರುವ ಪ್ರಯಾಣಿಕರ ಜೀವವೂ ಅಷ್ಟೇ ಅಮೂಲ್ಯವಾದುದೆಂದು ಮನವರಿಕೆ ಮಾಡಿಕೊಂಡಿರಬೇಕು.

ವಾಹನ ಅಪಘಾತದ ಮತ್ತು ಅಪಮೃತ್ಯುವಾದ ವರದಿ ಓದಿದಾಗ ನನಗೆ ಅನಿಸಿದ್ದಿಷ್ಟು! ವಾಹನ ಮಾಲೀಕ/ಚಾಲಕರಿಗೆ ವಾಹನದ ಪೂರ್ಣ ಪರಿಚಯವಿರಬೇಕು. ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನವಿರಬೇಕು. ಪ್ರತಿಯೊಂದು ವಿಚಾರದಲ್ಲೂ ಚಾಲಕರಿಗೆ ಅನುಭವವಿರಬೇಕು. ಜವಾಬ್ದಾರಿ, ಹೊಣೆಗಾರಿಕೆ ಇರಬೇಕು.

ಸುಮಾರು 40 ವರ್ಷಗಳ ಹಿಂದಿನ ಘಟನೆಯಿದು. ಆಗ ವರ್ಷದಲ್ಲೆರಡು ಸಲ ಭಾರಿ ವಾಹನಗಳ ತಪಾಸಣೆ ನಡೆಯುತ್ತಿತ್ತು. ನಮ್ಮ ಕ್ಷೇತ್ರದ ಭಾರಿ ವಾಹನದ ಚಾಲಕರು ‘ಸ್ವಾಮಿ, ನಾಡಿದ್ದು ವಾಹನ ಸುರಕ್ಷತೆ ತಪಾಸಣೆಗೆ ಆರ್.ಟಿ.ಒ. ಕಚೇರಿಗೆ ಹೋಗಬೇಕಾಗಿದೆ. ವಾಹನವನ್ನು ಅಧಿಕಾರಿ ಪರೀಕ್ಷಿಸುತ್ತಾರೆ, ಕೊರತೆ ಇದ್ದರೆ ದಂಡಹಾಕುತ್ತಾರೆ. ಸಣ್ಣಪುಟ್ಟ ದುರಸ್ತಿಗಳಿದ್ದರೆ ಮಾಡಿಸಿಕೊಡಿ’ ಎನ್ನುತ್ತಿದ್ದರು. ನಾನು ಕೂಡಲೇ ಅನುಮತಿಸಿ ತಪಾಸಣೆ ಮಾಡಿಸುತ್ತಿದ್ದೆ. ನನ್ನ ಚಾಲಕ ಹೋಗಿ ಬ್ರೇಕ್, ಗೇರ್, ಸಸ್ಪೆನ್ಷನ್ ಮುಂತಾದುವುಗಳನ್ನು ಪರಿಶೀಲನೆಗೊಳಪಡಿಸಿ ಬರುತ್ತಿದ್ದ. ದುರಸ್ತಿ ಕೆಲಸಗಳಿದ್ದರೆ ಮಾಡಿಸುತ್ತಿದ್ದ. ಕೊನೆಗೆ ಇನ್​ಸ್ಪೆಕ್ಷನ್ ಅಧಿಕಾರಿ ಪರಿಶೀಲಿಸಿ ಪ್ರಮಾಣಪತ್ರ ನೀಡುತ್ತಿದ್ದರು. ಅಂತಹ ವಾಹನ ಚಾಲನಯೋಗ್ಯವಾಗಿರುತ್ತಿತ್ತು. ಇಂದು ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಆದುದರಿಂದ, ಇಂತಹ ತಪಾಸಣೆ ಸಾಧ್ಯವೋ ಎಂದು ಗೊತ್ತಿಲ್ಲ. ಆದರೆ ಸಾರಿಗೆ ಇಲಾಖೆಯವರು ಭಾರಿ ವಾಹನಗಳನ್ನು ಪರೀಕ್ಷಿಸಬೇಕು.

ಈಗಿನ ಕೆಲವು ವಾಹನ ಚಾಲಕರ ಮನಸ್ಥಿತಿ ಗಮನಿಸಿದ್ದೇನೆ. ತಮ್ಮ ತಪ್ಪಿದ್ದರೂ ವಾಹನದಿಂದ ಕೆಳಗೂ ಇಳಿಯದೆ, ಕ್ಷಮೆ ಕೇಳುವ/ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ ಎಂಬಂತೆ ವರ್ತಿಸುತ್ತಾರೆ. ಕಾನೂನನ್ನು ಮುರಿಯದೆ ಕಾನೂನನ್ನು ಗೌರವಿಸಿ, ಇನ್ನೂ ಹೆಚ್ಚು ಶಿಸ್ತುಬದ್ಧವಾಗಿ ವಾಹನ ಚಾಲನೆ ಮಾಡುವಂತಾಗಬೇಕು. ಹೀಗೆ ಕಟ್ಟುನಿಟ್ಟಿನ ವಾಹನಕಾಯ್ದೆ ನಿಯಮದಿಂದ ಅಪಘಾತ ಮತ್ತು ಪ್ರಾಣಹಾನಿಯನ್ನು ನಿಯಂತ್ರಿಸಬಹುದು.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

One Reply to “ಅಪಘಾತಗಳ ಸಂಖ್ಯೆ ತಗ್ಗಲಿ, ಪ್ರಾಣಗಳು ಉಳಿಯಲಿ”

Comments are closed.