ಬ್ರಹ್ಮಾಂಡದೊಳಗೆ ಅರಸಿನೋಡಲು ತುಳುನಾಡೆ ವಾಸಿ

ತುಳುವರು ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡುವವರು, ಆಧುನಿಕತೆಗೆ ಒಗ್ಗಿಕೊಳ್ಳುವವರು. ಕೃಷಿಯಲ್ಲೂ ಪ್ರಯೋಗ ಮಾಡಿದವರು. ತುಳುವರಿಗೆ ಊರಿನ ಬೇರು, ಊರಿನ ಮಣ್ಣಿನ ವಾಸನೆ ಬೇಕು. ದೈವ ದೇವರು, ಯಕ್ಷಗಾನ ಬೇಕು. ಹೊರಗೆಲ್ಲೇ ಸಂಪಾದಿಸಿದರೂ ಊರಲ್ಲಿ ಇನ್​ವೆಸ್ಟ್​ಮೆಂಟ್ ಮಾಡುವವರು ನಾವು. 5 ರಾಷ್ಟ್ರೀಕೃತ ಬ್ಯಾಂಕುಗಳು ತುಳುನಾಡಿನ ಕೊಡುಗೆ.

ದುಬೈನಲ್ಲಿ ತುಳುಕೂಟದವರು ವಿಶ್ವ ತುಳು ಸಮ್ಮೇಳನ ಹಮ್ಮಿಕೊಂಡಿದ್ದರು. ಧರ್ಮಸ್ಥಳಕ್ಕೆ ಬಂದವರೊಬ್ಬರು ದುಬೈಯಲ್ಲಿ ತುಳು ಸಮ್ಮೇಳನ ಮಾಡುತ್ತಿರುವುದೇಕೆಂದು ಪ್ರಶ್ನಿಸಿದಾಗ, ಕ್ಷಣಕಾಲ ಆಲೋಚನಾಮಗ್ನನಾಗಿ ನನಗೆ ತೋರಿದಂತೆ ಉತ್ತರಿಸಿದೆ. ಅಮೆರಿಕದಲ್ಲಿ ‘ಅಕ್ಕ’- Association of Kannada Koota America ಸಂಘಟನೆಯವರು ಪ್ರಧಾನವಾಗಿ ಅಮೆರಿಕದಲ್ಲಿರುವ ಕನ್ನಡಿಗರನ್ನೆಲ್ಲ ಒಟ್ಟು ಸೇರಿಸುವುದಕ್ಕಾಗಿ ‘ಅಕ್ಕ ಸಮ್ಮೇಳನ’ ಮಾಡುತ್ತಾರೆ. ಅದೇ ರೀತಿ ಕೊಲ್ಲಿ ರಾಷ್ಟ್ರಗಳಲ್ಲಿರುವ ತುಳುನಾಡಿನವರನ್ನೆಲ್ಲ ಒಂದೆಡೆ ಸೇರಿಸಲು, ವಿಶ್ವದಲ್ಲಿರುವ ತುಳುವರ ಸ್ವಾಭಿಮಾನವನ್ನು ಉದ್ದೀಪನಗೊಳಿಸಲು ಈ ಸಮ್ಮೇಳನ ಎಂದೆ. ಇದೂ ಅಲ್ಲದೆ- ರಾಮಾಯಣದ ಪ್ರಸಂಗವೊಂದು ನೆನಪಾಯಿತು. ರಾವಣ ಸಂಹಾರದ ನಂತರ, ಲಂಕೆಯ ಸೊಬಗು ಕಂಡು ಲಕ್ಷ್ಮಣ ‘ರಾಮನೇ ಏಕೆ ಲಂಕೆಯನ್ನು ಆಳಬಾರದು?’ ಎಂದಾಗ ರಾಮನು-

‘ಅಪಿ ಸ್ವರ್ಣಮಯೀ ಲಂಕಾ ನ ಮೆ ಲಕ್ಷ್ಮಣ ರೋಚತೆ |

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ||’ ಎಂದನಂತೆ.

ನಮ್ಮ ರಾಷ್ಟ್ರಕ್ಕಿಂತ ಶ್ರೀಮಂತ, ಪ್ರಗತಿಪರ ಹಾಗೂ ಸುಂದರವಾದ ಮತ್ತೊಂದು ದೇಶವಿರಬಹುದು. ಆದರೆ, ನಾವೆಲ್ಲೇ ಇದ್ದರೂ ನಮ್ಮ ನಾಡು, ನುಡಿ ನಮಗೆ ಆಪ್ಯಾಯಮಾನವೇ. ದೂರದೇಶದಲ್ಲಿದ್ದರೂ, ನಮ್ಮ ನಾಡು ನುಡಿ ನಮ್ಮಲ್ಲಿ ಸದಾ ಜಾಗೃತವಾಗಿರುತ್ತದೆ. ಆದ್ದರಿಂದ ವೈಭವಗಳು ನಮ್ಮನ್ನು ಕೀಳರಿಮೆಗೆ ಒಳಪಡಿಸಬಾರದು. ಅವು ಸ್ವಾಭಿಮಾನವನ್ನು ಉಕ್ಕಿಸುವಂತಿರಬೇಕು. ಇನ್ನೊಂದು ಆಶಯದಿಂದಲೂ ಈ ಸಮ್ಮೇಳನವನ್ನು ಹಮ್ಮಿಕೊಂಡಿದ್ದಾರೆ. ಇವರೆಲ್ಲ ತುಳುನಾಡಿನವರು. ಅಂದರೆ ಕರ್ನಾಟಕದವರು, ಭಾರತದವರು. ದುಬೈಗೆ ಉದ್ಯೋಗಕ್ಕೆ ಬಂದವರಿಗೆ ದುಬೈರಾಜರು ಆಶ್ರಯ ನೀಡಿದ್ದಾರೆ. ಯಾವುದೇ ಸಮಸ್ಯೆಗಳಿಲ್ಲ. ಉತ್ತಮ ಆದಾಯವಿದೆ. ಇಲ್ಲಿ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತದೆ. ಇದಕ್ಕೆಲ್ಲ ಕಾರಣಕರ್ತನಾದ ಇಲ್ಲಿಯ ರಾಜನನ್ನು ನಾನು ಗೌರವಿಸುತ್ತೇನೆ. ಇಲ್ಲಿ ಇಷ್ಟೆಲ್ಲ ಗೌರವ, ಸ್ವರ್ಗಸದೃಶ ಸಂಪತ್ತು ಇದ್ದರೂ ನಮಗೆ ನಮ್ಮ ಭಾಷೆ, ನಾಡು, ಸಂಸ್ಕೃತಿಯೇ ಖುಷಿಕೊಡುವ ವಿಷಯ, ಹಾಗಾಗಿ ಈ ಸಮ್ಮೇಳನ ಮಾಡುತ್ತಿದ್ದಾರೆ ಎಂದೆ.

ತುಳುಭಾಷಿಕರು ಧರ್ಮ, ಜಾತಿ, ಪ್ರಾದೇಶಿಕ ಭಿನ್ನತೆಗಳನ್ನು ಮೀರಿದವರು. ಸವೋತ್ತಮ ಶೆಟ್ಟಿ ಮತ್ತು ಡಾ. ಬಿ.ಆರ್. ಶೆಟ್ಟಿಯವರ ನೇತೃತ್ವದಲ್ಲಿ ಈ ಸಮ್ಮೇಳನವನ್ನು ನಡೆಸಲಾಯಿತು. ಸಂಘಟನೆಯಲ್ಲಿ ಹಿಂದು, ಕ್ರೈಸ್ತ, ಮುಸಲ್ಮಾನ್, ಜೈನ ಧರ್ಮದವರಿದ್ದರು. ಅಂದಿನ ಸುಂದರ ಸಮಾರಂಭದಲ್ಲಿ ನಾನು, 3 ವಿವಿಧ ಪಂಗಡಗಳ ಬಿಷಪ್​ಗಳು, ಇಬ್ಬರು ಮುಸ್ಲಿಂ ಪ್ರತಿನಿಧಿಗಳು ಮತ್ತು ಜೈನ ಧರ್ಮದ ಪ್ರತಿನಿಧಿಗಳು ಭಾಗವಹಿಸಿದೆವು. ಎಲ್ಲರೂ ಬೇರೆಬೇರೆ ಮಾತೃಭಾಷೆಯವರು (ಕನ್ನಡ, ಕೊಂಕಣಿ, ಬ್ಯಾರಿ, ಮಲಯಾಳ, ಕೊಡವ). ತುಳು ಭಾಷೆ ಸಂವಹನ ಮತ್ತು ವ್ಯವಹಾರ ಭಾಷೆಯಾಗಿತ್ತು. ‘ಬ್ರಹ್ಮಾಂಡದೊಳಗೆ ಅರಸಿನೋಡಲು ನಮ್ಮೂರೇ ವಾಸಿ’ ಎಂದು ಪ್ರಸಿದ್ಧ ಭಾಗವತರು, ಸಿನಿಮಾ ನಟರೂ ಆಗಿದ್ದ ಹೊನ್ನಪ್ಪ ಭಾಗವತರು ಹಾಡುತ್ತಿದ್ದರು. ಇದನ್ನು ನಾನು ಬದಲಾಯಿಸಿ ‘ಬ್ರಹ್ಮಾಂಡದೊಳಗೆ ಅರಸಿನೋಡಲು ತುಳುನಾಡೆ ವಾಸಿ’ ಎಂದೆ. ತುಳುವರು ದುಡಿಮೆಗಾಗಿ ಯಾವ ಪ್ರದೇಶಕ್ಕೂ, ಯಾವ ಮೂಲಕ್ಕೂ ಹೋಗಲು ಸಿದ್ಧರಿರುವವರು. ಬ್ರಹ್ಮಾಂಡದೊಳಗೆ ಅರಸಿನೋಡಲು ತುಳುನಾಡೆ ವಾಸಿ ಎಂದು ಎಲ್ಲರೂ ಹೇಳಿದರು. ಹಾಗಾಗಿ ನಮಗೂ ತುಳುನಾಡೇ ಶ್ರೇಷ್ಠ. ಕರ್ನಾಟಕದಲ್ಲಿ ತುಳು ಭಾಷಿಕರ ಸಂಖ್ಯೆ ಸ್ವಲ್ಪವೇ ಆದರೂ, ವಿಶ್ವವನ್ನೇ ಗೆದ್ದಿದ್ದಾರೆ. ಪ್ರಪಂಚದ ಯಾವ ಭಾಗಕ್ಕೆ ಹೋದರೂ ತುಳುವರಿದ್ದಾರೆ. ತುಳುವರು ಸಜ್ಜನರು, ಸ್ವಾಭಿಮಾನಿಗಳು, ಸತ್ಯಧರ್ಮನಿಷ್ಠರು. ದೈವವನ್ನು ಆರಾಧಿಸುವವರು. ತುಳು ಎಂಬ ಪದಕ್ಕೆ- ಸಾಧು, ಕೋಮಲ, ನಯ, ವಿನಯ ಎಂಬರ್ಥವಿದೆಯೆಂದು ಇತಿಹಾಸ ಸಂಶೋಧಕ ಡಾ. ಗುರುರಾಜ ಭಟ್ಟರು ಹೇಳಿದ್ದಾರೆ. ಅದರರ್ಥ ಅವರು ದುರ್ಬಲರು ಎಂದಲ್ಲ. ತುಳುನಾಡಿನ ಭೂತಾಳಪಾಂಡ್ಯ, ಅಗೋಳಿಮಂಜಣ್ಣ, ಕೋಟಿಚೆನ್ನಯ, ಅಬ್ಬಕ್ಕದೇವಿ- ಇವರೆಲ್ಲ ವೀರ ವ್ಯಕ್ತಿತ್ವದವರು; ಇನ್ನೊಬ್ಬರಿಗೆ ತೊಂದರೆ ಕೊಟ್ಟವರಲ್ಲ. ತ್ಯಾಗ, ಬಲಿದಾನ ಮಾಡಿದವರು.

ಸುಭಟರ್ಕಳ್, ಕವಿಗಳ್, ಸುಪ್ರಭುಗಳ್, ಚೆಲ್ವರ್ಕಳಭಿಜನರ್ಕಳ್, ಗುಣಿಗಳ್ ||

ಅಭಿಮಾನಿಗಳತ್ಯುಗ್ರರ್ ಗಭೀರ ಚಿತ್ತರ್ ವಿವೇಕಿಗಳ್, ನಾಡವರ್ಗಳ್ ||

-ಎಂದು ಕವಿರಾಜಮಾರ್ಗಕಾರನು ಕನ್ನಡಿಗರ ಗುಣಗಳನ್ನು ಗುರುತಿಸಿದ್ದು ತುಳುವರಿಗೂ ಅದು ಅನ್ವಯವಾಗುತ್ತದೆ.

ತುಳುನಾಡಿನ ಭೂತಾರಾಧನೆ, ಕೃಷಿ ಪದ್ಧತಿ, ನೇಮ ನಡಾವಳಿ ಇವೆಲ್ಲ ವಿಶಿಷ್ಟ. ಇವನ್ನು ಮೆಚ್ಚಿ ಅನುಕರಿಸುವವರಿದ್ದಾರೆ. ತುಳುನಾಡಿನೊಳಗೇ ಸಂಸ್ಕೃತಿ, ಆಚಾರ-ವಿಚಾರ, ಆರಾಧನೆಯಕ್ರಮ, ಭಾಷೆಯ ಬಳಕೆಯಲ್ಲಿ ವ್ಯತ್ಯಾಸವುಂಟು. ಇದು ನಮ್ಮ ವೈವಿಧ್ಯ. ಅವಿಭಜಿತ ದಕ್ಷಿಣಕನ್ನಡದಲ್ಲಿ ಅನೇಕ ನದಿಗಳಿವೆ. ಮಳೆಗಾಲದ 4 ತಿಂಗಳು ನದಿಯ ಆಚೆ ಮತ್ತು ಈಚೆ ದಡದಲ್ಲಿದ್ದವರಿಗೇ ಸಂಪರ್ಕವಿರುತ್ತಿರಲಿಲ್ಲ, ಆದ್ದರಿಂದ ಅವರೀರ್ವರ ಸಂಸ್ಕೃತಿಯೇ ಬೇರೆ. ಒಂದೇ ಭೂತ ಕಾಸರಗೋಡಿನಿಂದ ಭಟ್ಕಳದವರೆಗೆ ಬೇರೆಬೇರೆ ಹೆಸರಿನಿಂದ, ಬೇರೆಬೇರೆ ರೀತಿಯಲ್ಲಿ ಆರಾಧನೆಗೊಳ್ಳುತ್ತದೆ. ಪ್ರಾಯಶಃ ಈ ನದಿಗಳ ಕಾರಣದಿಂದಲೇ ಪೂಜಾಕ್ರಮ, ಕೃಷಿ, ಸ್ವಭಾವ, ಭಾಷಾಬಳಕೆಯಲ್ಲಿ ವೈವಿಧ್ಯ ತೋರುತ್ತಿದೆ.

ಭೂತಾರಾಧನೆ ತುಳುವರ ಜೀವ. ಯಾಕೆಂದರೆ-

ನಂಬುಲೆ ಯಾನ್ ನಂಬಾದ್ ಕೊರ್ಪೆ

ನಿಕ್​ಲೆಗ್ ತಮ್ಮಲೆ ಆದ್ ಬುದ್ಧಿ ನೀತಿ ಪಂಡ್​ದ್

ಅಪ್ಪೆಯಾದ್ ಮಾಯೊದ ಪೇರ್ ಕೊರ್ದ್

ಪತ್ತಪ್ಪೆ ಬಾಲೆಲು ಪದಿನಾಜಿ ಕುಲೊತ್ತನಿಕ್​ಲೆನ್

ಒಂಜಪ್ಪೆಬಾಲೆಲೆ ಲೆಕ್ಕೊ ನಡಪ್ಪಾವೊಂದು

ಇಡೀ ನಿಕ್ಲೆನ ಊರುನು ಪೂತ್ತ ಪಿತ್ತ್​ಲ್ದ ಲೆಕ್ಕೊ ತೂಪುನವು

ಎಂಕ್ ಸೇರ್ನ-ನಂಬುಲೇ ನಂಬಾದ್ ಕೊರ್ಪೆ

(ನಂಬಿರಿ, ನಂಬಿಕೆಗೆ ಸರಿಯಾಗಿ ನಡೆಸಿಕೊಳ್ಳುತ್ತೇನೆ, ನಿಮಗೆ ಮಾವನಾಗಿ ಬುದ್ಧಿನೀತಿ ಹೇಳುತ್ತೇನೆ,

ತಾಯಿಯಾಗಿ ಮಾಯದ ಹಾಲು ಕೊಟ್ಟು ಹಲವು ತಾಯಿಯ ಮಕ್ಕಳು ಹದಿನಾರು ಕುಲದವರು

ಒಂದೇ ತಾಯಿಯ ಮಕ್ಕಳಂತೆ ಬದುಕುವಂತೆ ನಡೆಸಿಕೊಡುತ್ತೇನೆ, ನಿಮ್ಮ ಊರನ್ನು ಹೂವಿನ ತೋಟದಂತೆ ನೋಡಿಕೊಳ್ಳುವುದು ನನ್ನ ಹೊಣೆಗಾರಿಕೆ- ನಂಬಿರಿ, ನಂಬಿಕೆಗೆ ಸರಿಯಾಗಿ ನಡೆಸಿಕೊಳ್ಳುತ್ತೇನೆ) ಎಂಬ ಮಾತನ್ನು ಭೂತ ಆವೇಶದಲ್ಲಿ ಹೇಳುತ್ತದೆ. ಇದು ತುಳುವರ ನಂಬಿಕೆ, ನಡವಳಿಕೆ, ಧಾರ್ವಿುಕತೆ.

ಈ ತುಳುನಾಡಿಗೆ 600 ವರ್ಷಗಳ ಹಿಂದೆ ಬ್ರಾಹ್ಮಣರು ಬಂದರೆಂದು ಇತಿಹಾಸ ಹೇಳುತ್ತದೆ. ಹವ್ಯಕ ಬ್ರಾಹ್ಮಣರು ಹೀಗೆ ಹೇಳಿದರಂತೆ-

ತುಪ್ಪಶನ ಉಂಬಲೇ ತುಳುನಾಡಿಂಗೆ ಹೋಯೆಕ್ಕು

ಅಕ್ಕಿಯ ಮೇಲೆ ಬರೆಇಲ್ಲೆ, ತುಳುನಾಡ ಮಕ್ಕಳ ಮೇಲೆ ಕಲೆ ಇಲ್ಲೆ

ಇದು ತುಳುವರ ವ್ಯಕ್ತಿತ್ವ. ತುಳುನಾಡಿನ ಹವೆ, ಚಳಿ, ಮಳೆ, ಭೂಪ್ರದೇಶ ಎಲ್ಲವೂ ಹಿತಕರ. ಇಲ್ಲಿನ ಜನರೂ ನಂಬಿಕೆಗೆ ಅರ್ಹರು. ಎಲ್ಲರೊಂದಿಗೆ ಹೊಂದಿಕೊಂಡು ನಡೆಯುವವರು ಎಂದು ಉಲ್ಲೇಖಿಸಿದರು.

ಕಳೆದ 50 ವರ್ಷಗಳಲ್ಲಿ ದೇಶ-ವಿದೇಶ ಪ್ರವಾಸ ಮಾಡಿರುವ ನಾನು ಗಮನಿಸಿದಂತೆ ತುಳುವರು ಎಲ್ಲರೊಳಗೊಂದಾಗುವ ಪರಿ ಅನನ್ಯ. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ತುಳುವರ ಬಗ್ಗೆ ಹೀಗೆ ಬರೆದಿದ್ದರು- ‘ನಾನು ಬೆಂಗಳೂರಿನಿಂದ ಫ್ರಾಂಕ್​ಫರ್ಟ್​ಗೆ ಹೋಗುತ್ತಿದ್ದಾಗ ವಿಮಾನದಲ್ಲಿ ಪಕ್ಕದಲ್ಲಿ ಕುಳಿತವರು ‘ನೀವು ಮಂಗಳೂರಿನವರಾ?’ ಎಂದು ಕೇಳಿದರು. ಮುಂದೇನಾಯ್ತು ಕೇಳಿ, ಮುಂದಿನ 9 ತಾಸು ನಮ್ಮ ಮಧ್ಯೆ ಒಂದೆರಡು ಮಾತು ಬಿಟ್ಟರೆ ಪೂರಾಮೌನ. ಹಾಗಂತ ಅವರಿಗೆ ಕನ್ನಡ ಬರುತ್ತಿತ್ತು. ಆದರೂ ನನ್ನೊಂದಿಗೆ ಮಾತಾಡಬೇಕೆಂದು ಅವರಿಗೆ ಅನಿಸಲೇ ಇಲ್ಲ. ನಾನು ಅವರಿಗೆ ಪ್ರಯೋಜನಕ್ಕೆ ಬಾರದ ಶುಷ್ಕವ್ಯಕ್ತಿ ಎಂದನಿಸಿರಬಹುದು. ತಮ್ಮ ಪಾಡಿಗೆ ನಿದ್ದೆಹೋಗಿಬಿಟ್ಟರು.

ಒಮ್ಮೆ ಅಬುಧಾಬಿಗೆ ಹೋದಾಗ ಖ್ಯಾತ ಉದ್ಯಮಿ, ಹೆಮ್ಮೆಯ ಕನ್ನಡಿಗ ಡಾ. ಬಿ.ಆರ್. ಶೆಟ್ಟಿಯವರ ಆಫೀಸಿಗೆ ತೆರಳಿದ್ದೆ. ಆಲಿಂಗಿಸಿ ಬರಮಾಡಿಕೊಂಡ ಶೆಟ್ಟಿಯವರು ತುಳುನಲ್ಲಿಯೇ ಮಾತುಕತೆ ಆರಂಭಿಸಿದರು. ನನ್ನ ಮುಖಭಾವ ನೋಡಿ ಅವರಿಗೇ ಅನ್ನಿಸಿರಬೇಕು, ‘ಭಟ್ರೇ ನಿಮಗೆ ತುಳು ಬರುವುದಾ?’ ಎಂದು ಕೇಳಿದರು. ನಾನು ತಡವರಿಸುತ್ತ ಅಥವಾ ಒಲ್ಲದ ಮನಸ್ಸಿನಿಂದ ‘ಇಲ್ಲ’ ಎಂದೆ. ಅವರಿಗೆ ಯಾರೋ ಕೈ ಜಗ್ಗಿ ಎಳೆದಂತಾಗಿರಬಹುದು. ಒಂದೊಮ್ಮೆ ನನಗೆ ತುಳು ಬಂದಿದ್ದರೆ, ಕತೆಯೇ ಬೇರೆಯಿತ್ತು. ಅಲ್ಲಿಂದ ಎದ್ದು ಬರುವಾಗ ಡಾ.ಶೆಟ್ಟಿಯವರು ನನ್ನನ್ನು ಆಲಿಂಗಿಸದೇ ಕಳಿಸಿಕೊಡುತ್ತಿರಲಿಲ್ಲ. ಈ ತುಳುವಿನಲ್ಲಿ ಅದೆಂಥ ಮೋಹ, ಮೋಡಿ, ಚುಂಬಕಶಕ್ತಿಯಿದೆಯೋ ಕಾಣೆ. ತುಳು ಮಾತಾಡಿದರೆ ಸಾಕು ಪರಿಚಯ, ಗೆಳೆತನ, ಸಂಬಂಧಕ್ಕೆ ಪಾಸ್​ಪೋರ್ಟ್ ಮೇಲೆ ವೀಸಾ ಅಂಟಿಸಿದಂತೆ. ಎಲ್ಲರಿಗೂ ಭಾಷೆ ಕಿವಿಯಲ್ಲಿ ಕೇಳಿಸಿದರೆ ತುಳು ಮಾತಾಡುವವರಿಗೆ ಹೃದಯದಲ್ಲಿ ಕೇಳಿಸುತ್ತದೆ. ಎಷ್ಟೋ ಸಲ ಅನಿಸಿದೆ, ತುಳು ಸಂವಹನದ ಭಾಷೆ ಅಲ್ಲವೇ ಅಲ್ಲ, ಅದು ಹೃದಯದ ಭಾಷೆ. ವೈಫೈಗೆ ತುಳು ಭಾಷೆ ಬಂದರೆ, ಪಾಸ್​ವರ್ಡ್​ನ್ನು ಸಹ ಕೇಳದೇ ಡೈರೆಕ್ಟ್ ಕನೆಕ್ಟ್ ಮಾಡಿಬಿಡುತ್ತದೆ. ಅದು ತುಳು! ಅದು ಆ ಭಾಷೆಯ ಮಹಿಮೆ! ತುಳು ಭಾಷೆಯಲ್ಲ, ಅದೊಂದು ಧರ್ಮ ಎಂದುಅನಿಸಿದ್ದಿದೆ. ಆದರೆ ಎಲ್ಲ ಧರ್ಮಗಳಲ್ಲೂ ಧರ್ಮಕಂಟಕರು, ಅಧರ್ವಿುಯರಿದ್ದಾರೆ. ಇದನ್ನು ನೋಡಿದರೆ ತುಳು ಒಂದು ಧರ್ಮ ಇದ್ದಿರಲಿಕ್ಕಿಲ್ಲ ಎನಿಸುತ್ತದೆ. ಕಾರಣ ತುಳುವಿಗೆ ಕಂಟಕರಿಲ್ಲ, ಕಲಬೆರಕೆಗಳಿಲ್ಲ. ತುಳು ಎಂಬುದು ಧರ್ಮ, ದೇಶ, ಕಾಲ, ಅವಕಾಶಗಳನ್ನೆಲ್ಲ ಮೀರಿದ ಅಸ್ಮಿತೆ ಹಾಗೂ ಅಸ್ತಿತ್ವದ ದ್ಯೋತಕ. ಬಸವಣ್ಣನವರಿಗೇನಾದರೂ ತುಳು ಬರುತ್ತಿದ್ದರೆ, ‘ಇವನಾರವ, ಇವನಾರವ, ಇವನಾರವ, ಎಂದೆಣಿಸದಿರಯ್ಯ, ತುಳು ಭಾಷೆ ಬರ್ಪೆಡೆ ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೆಣಿಸಯ್ಯಾ’ ಎಂದು ಬರೆಯುತ್ತಿದ್ದರು! ಅದು ತುಳು! ಅದು ಆ ಭಾಷೆಯ ಮೋಡಿ!’.

ತುಳುವರು ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡುವವರು. 5 ರಾಷ್ಟ್ರೀಕೃತ ಬ್ಯಾಂಕುಗಳು ತುಳುನಾಡಿನ ಕೊಡುಗೆ. ನಾವು ಆಧುನಿಕತೆಗೆ ಒಗ್ಗಿಕೊಳ್ಳುವವರು. ವಿದೇಶಿಗರೂ ಇಲ್ಲಿ ಬಂದು ವಿದ್ಯಾಸಂಸ್ಥೆಗಳನ್ನು ಆರಂಭಿಸಿದರು. ಕಾರ್ಖಾನೆ ಮಾಡಿದರು. ಕೃಷಿಯಲ್ಲೂ ಪ್ರಯೋಗವಾಯಿತು. ಬುದ್ಧಿವಂತರಾದ ನಮ್ಮ ಜನರು ಎಲ್ಲವನ್ನೂ ಕಲಿತು ಸಾಹಸ ಪ್ರವೃತ್ತಿ ಬೆಳೆಸಿಕೊಂಡು ಬೆಳೆದರು. ತುಳುವರಿಗೆ ಊರಿನ ಬೇರು, ಮಣ್ಣಿನ ವಾಸನೆ ಬೇಕು, ದೈವ ದೇವರು, ಯಕ್ಷಗಾನ ಬೇಕು. ಹೊರಗೆಲ್ಲೇ ಸಂಪಾದಿಸಿದರೂ ಊರಲ್ಲಿ ಇನ್​ವೆಸ್ಟ್​ಮೆಂಟ್ ಮಾಡುವವರು ನಾವು.

ಇಂದು ಬೆಂಗಳೂರನ್ನು ಬಿಟ್ಟರೆ ಮಂಗಳೂರು ದೊಡ್ಡ ಪಟ್ಟಣ, ಯಾಕೆಂದರೆ ತುಳುವರು ಅನ್ಯತ್ರ ಸಂಪಾದಿಸಿದ್ದನ್ನು ಊರಿನ ಬೆಳವಣಿಗೆಗೆ ಬಳಸಿದ್ದಾರೆ. ಸಣ್ಣ ಊರಲ್ಲೂ ಬ್ಯಾಂಕ್​ಗಳಿವೆ. ಅದೇ ರೀತಿ ಕರಾವಳಿ ಪ್ರದೇಶದಲ್ಲಿ ಕೃಷಿ ಉತ್ತಮವಾಗಿದೆ. ಪ್ರಗತಿ ಸಾಧಿಸಿದ್ದಾರೆ. ಒಟ್ಟಾರೆಯಾಗಿ ತುಳುವರು ಸಾಹಸ, ಕಾಯಕನಿಷ್ಠೆ ಪ್ರವೃತ್ತಿಯವರು, ಧರ್ಮಮಾರ್ಗಿಗಳು, ಎಲ್ಲರೊಂದಿಗೆ ಬೆರೆಯುವ ಸ್ವಭಾವದವರು.

ತುಳು ಸಾಹಿತ್ಯದ ಕುರಿತು…: ಇಂದು ತುಳು ಸಾಹಿತ್ಯ ಹೆಚ್ಚೆಚ್ಚು ಪ್ರಕಟಣೆಯಾಗುತ್ತಿದೆ. ತುಳು ಅಕಾಡೆಮಿ ತುಳು ಭಾಷೆಯನ್ನು ಪ್ರೋತ್ಸಾಹಿಸುತ್ತಿದೆ. ಶಾಲಾ ಕಾಲೇಜುಗಳಲ್ಲಿ ತುಳುಭಾಷಾಧ್ಯಯನ ನಡೆಯುತ್ತಿದೆ. ತುಳುವಿಗೆ ಲಿಪಿ ಇಲ್ಲವೆಂಬುದು ಸುಳ್ಳಾಗಿದೆ. ನಮ್ಮ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದಲ್ಲಿ ತುಳು ಭಾಗವತ, ದೇವೀ ಮಹಾತ್ಮೆಯಂಥ ಗ್ರಂಥಗಳು ತುಳು ಲಿಪಿಯಲ್ಲೇ ಇವೆ.

ನಿಕೋರಸ್ ಎಂಬ ವಿದೇಶಿ ವಿದ್ವಾಂಸನ ಅಭಿಪ್ರಾಯ ಮತ್ತು 13-14ನೇ ಶತಮಾನದ ಕೆಲವು ತುಳು ಶಾಸನಗಳ ಆಧಾರದಲ್ಲಿ ತುಳುಭಾಷೆ ಕ್ರಿ.ಶ. 9ಕ್ಕಿಂತ ಹಿಂದಿನದು. ಸಾವಿರ ವರ್ಷಕ್ಕಿಂತ ಹಿಂದೆ ‘ಸ್ವನಂದಪುರಂ ಸಮುಚ್ಚಯಂ’ ಎಂಬ ಸಂಸ್ಕೃತ ಗ್ರಂಥವನ್ನು ತುಳು ಲಿಪಿಯಲ್ಲೇ ಬರೆಯಲಾಗಿದೆ. ಇನ್ನಷ್ಟು ಸಂಶೋಧಿಸಿದರೆ ತುಳುವಿಗೆ ಬೆಲೆ ಬರುತ್ತದೆ.

ತುಳುನಾಡ ಬಗ್ಗೆ ಪ್ರೀತಿಯಿರಲಿ. ನಮ್ಮ ನಾಡಿನ ಹಳ್ಳಿಯ ಶಾಲೆಗಳು, ಆಸ್ಪತ್ರೆಗಳು ಮತ್ತು ನಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಒಳ್ಳೆಯ ಪರಿವರ್ತನೆಯಾಗುತ್ತಿದೆ. ಇದಕ್ಕೆ ನಿಮ್ಮ ಸಹಕಾರ ಬೇಕು. ನಮ್ಮ ನಾಡು ನುಡಿಯ ಸೇವೆಯನ್ನು ಮಾಡೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)