ಸ್ವಚ್ಛತೆ ಕಾಪಾಡಿಕೊಳ್ಳುವುದು ನಮ್ಮ ಆದ್ಯತೆಯಾಗಲಿ

ಇಂದಿನ ವಿದ್ಯಾವಂತರು, ಯುವಪೀಳಿಗೆಯವರು ಶುಚಿ-ರುಚಿಯಾದ ಆಹಾರಗಳನ್ನು ಸೇವಿಸುವ ಕಡೆಗೆ ಗಮನ ಹರಿಸಬೇಕು. ಆಗ ಮಾತ್ರ ಅಘಟಿತ ಘಟನೆಗಳು ದೂರವಾಗುತ್ತವೆ. ಉತ್ತಮ ಆರೋಗ್ಯವೂ ಲಭಿಸುತ್ತದೆ. ಈ ತಿಳಿವಳಿಕೆ ಮನೆಯಿಂದ ಆರಂಭಗೊಂಡು ಎಲ್ಲೆಡೆ ಪ್ರಚಾರವಾದಾಗ ಮಾತ್ರವೇ ಸ್ವಸ್ಥಸಮಾಜದ ನಿರ್ವಣದ ಕನಸು ಸಾಕಾರಗೊಳ್ಳುತ್ತದೆ.

ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ವಿಷಮಿಶ್ರಿತ ಪ್ರಸಾದ ಸ್ವೀಕರಿಸಿ 17 ಭಕ್ತರು ಮೃತರಾದದ್ದು ಎಲ್ಲರಿಗೂ ಗಾಢವಾದ ದುಃಖವನ್ನು ಉಂಟುಮಾಡಿದೆ. ಇಂತಹ ಸಾನ್ನಿಧ್ಯದಲ್ಲಿ, ಈ ರೀತಿಯಲ್ಲಿ ಮರಣವಾಗಿರುವುದು ನಮ್ಮ ಧಾರ್ವಿುಕ ನಂಬಿಕೆ, ನಡವಳಿಕೆ ಮತ್ತು ಆಚಾರ-ವಿಚಾರಗಳಲ್ಲಿ ಶ್ರದ್ಧೆ ಇರುವ ಆಸ್ತಿಕರಿಗೆ ದೊಡ್ಡ ಆಘಾತವಾಗಿದೆ. ಪ್ರಸಾದ ಸಿದ್ಧತೆ ಮತ್ತು ವಿತರಣೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳದೆ ಮತ್ತು ಜಾಗ್ರತೆ ವಹಿಸದೆ ಮುಗ್ಧಭಕ್ತರ ಮೇಲೆ ಆದ ಇಂತಹ ಹೇಯಕೃತ್ಯ ಸರ್ವಥಾ ಖಂಡನೀಯ. ‘ಏಕಃ ಪಾಪಾನಿ ಕುರುತೆ, ಫಲಂ ಭುಂಕ್ತೆ ಮಹಾಜನಾಃ’- ಒಂದಿಬ್ಬರು ಪಾಪಕೃತ್ಯವನ್ನು ಮಾಡುತ್ತಾರೆ, ಅದರ ಫಲವನ್ನು ಎಲ್ಲರೂ ಅನುಭವಿಸಬೇಕಾಗುತ್ತದೆ. ಅಧಿಕಾರ ಮತ್ತು ಹಣದ ಮೇಲಿನ ದುರಾಸೆ, ಇಂಥ ನೀಚಕೃತ್ಯವನ್ನು ಮಾಡುವಂತೆ ಮಾಡಿದ್ದು ನಮಗೊಂದು ಪಾಠವಾಗಿದೆ.

ಸ್ವಚ್ಛತೆಗೆ ಆದ್ಯತೆ: ಈ ಘಟನೆಯನ್ನು ಓದಿದಾಗ ನನಗೊಂದು ಸಂದರ್ಭ ನೆನಪಾಯಿತು. ಸುಮಾರು 45 ವರ್ಷದ ಹಿಂದೆ ಒಮ್ಮೆ ಮದ್ರಾಸಿಗೆ (ಈಗಿನ ಚೆನ್ನೈಗೆ) ಹೋಗಿದ್ದೆ. ಅಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಹಳ್ಳಿಯವರಾದ ಕೃಷ್ಣಭಟ್ಟರು ವುಡ್​ಲ್ಯಾಂಡ್ಸ್ ಹೋಟೆಲನ್ನು ನಡೆಸುತ್ತಿದ್ದರು. ಅದು ಈಗಲೂ ಪ್ರಸಿದ್ಧಿ ಪಡೆದು ದೇಶದ ನಾನಾ ಭಾಗದಲ್ಲಿ ಕಾರ್ಯಾಚರಿಸುತ್ತಿದೆ. ನಾನು ಹೋಟೆಲ್ ಆಹಾರ ಸ್ವೀಕರಿಸುವುದಿಲ್ಲ; ಆದರೆ ಚೆನ್ನೈಗೆ ಹೋದಾಗಲೆಲ್ಲ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ, ಊಟ ಮಾಡುತ್ತಿದ್ದೆ. ಅದೇ ಆತ್ಮೀಯತೆಯಿಂದ ಅವರು ನನ್ನನ್ನು ವುಡ್​ಲ್ಯಾಂಡ್ಸ್ ಹೋಟೆಲ್​ನ ಅಡುಗೆಮನೆಗೆ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿ ‘ನನ್ನ ಅಡುಗೆಮನೆ ಎಷ್ಟು ಸ್ವಚ್ಛವಾಗಿದೆ ನೋಡಿ’ ಎಂದು ವಿನಯ, ಸ್ವಾಭಿಮಾನದಿಂದ ತೋರಿಸಿದರು. ಎಲ್ಲಿಯೂ ಕಸ-ಮುಸುರೆಗಳಿರಲಿಲ್ಲ, ಅಸಹ್ಯ ವಾತಾವರಣವಿರಲಿಲ್ಲ. ಪಾತ್ರೆಗಳನ್ನೆಲ್ಲ ತೊಳೆದು ಸ್ವಚ್ಛವಾಗಿ ಇಟ್ಟಿದ್ದರು. ಉಳಿದಂತೆ ಎಲ್ಲ ಸಾಮಾನುಗಳನ್ನೂ ಒಪ್ಪ-ಓರಣವಾಗಿ ಜೋಡಿಸಿಟ್ಟಿದ್ದರು. ಈ ಸ್ವಚ್ಛತೆಯ ಬಗ್ಗೆ ಕೃಷ್ಣಭಟ್ಟರು ಅಭಿಮಾನಪಟ್ಟಾಗಲೆಲ್ಲ, ನಾವು ಅವರನ್ನು ನೋಡಿ ನಕ್ಕದ್ದೂ ಇದೆ. ಸಾಮಾನ್ಯವಾಗಿ ಹೋಟೆಲ್​ನ ಅಡುಗೆಕೋಣೆ ನೋಡಿದವರು ಇನ್ನೆಂದಿಗೂ ಹೋಟೆಲ್​ನಲ್ಲಿ ಊಟಮಾಡುವುದಿಲ್ಲವೆಂಬ ಅಭಿಪ್ರಾಯವಿತ್ತು; ಅಂದರೆ ಅಷ್ಟು ಮಲಿನತೆ ಅಲ್ಲಿರುತ್ತಿತ್ತು. ಅಂತಹ ಕಾಲಘಟ್ಟದಲ್ಲೇ ಕೃಷ್ಣಭಟ್ಟರು ವ್ಯವಹಾರದಲ್ಲಿ ಸ್ವಚ್ಛತೆಯನ್ನು ತಂದಿದ್ದರು. ಹೋಟೆಲ್​ನ ಅಡುಗೆಕೋಣೆಯಲ್ಲಿ ಇಷ್ಟೆಲ್ಲ ನೈರ್ಮಲ್ಯಕ್ಕೆ ಪ್ರಾಶಸ್ತ್ಯ ಕೊಡಬೇಕೇ? ಎಂದು ಪ್ರಶ್ನಿಸಿದ್ದೂ ಇದೆ. ಆದರೀಗ ಆ ಘಟನೆಯನ್ನು ನೆನಪಿಸಿಕೊಂಡಾಗ ಕೃಷ್ಣಭಟ್ಟರ ದೂರದೃಷ್ಟಿ, ತಮ್ಮ ಉದ್ಯಮದಲ್ಲಿ ಅವರಿಗಿದ್ದ ಶ್ರದ್ಧೆಯ ಅರಿವಾಗುತ್ತದೆ. ಅಂತಹ ಸ್ವಾಭಿಮಾನ, ಪ್ರಜ್ಞಾವಂತಿಕೆ ಇದ್ದರೆ ಮಾತ್ರವೇ ಸ್ವಚ್ಛತೆಯ ಮಹತ್ವದ ಅರಿವಾಗಲು ಸಾಧ್ಯ.

ಆಧುನೀಕರಣಗೊಂಡ ಭೋಜನಾಲಯಗಳು: ನಮ್ಮ ದೇಶದಲ್ಲೀಗ ಎಷ್ಟೋ ಬದಲಾವಣೆಗಳಾಗಿವೆ. ಹೊಸಹೊಸ ಯಂತ್ರೋಪಕರಣಗಳ ಆವಿಷ್ಕಾರಗಳಿಂದ ಅನೇಕ ಸುಧಾರಣೆಗಳಾಗಿವೆ. ಅದರಲ್ಲೂ ಅಡುಗೆಕೋಣೆಯ ವ್ಯವಸ್ಥೆಯೇ ಆಧುನೀಕರಣಗೊಂಡಿದೆ. ಹಿಂದೆಲ್ಲ ಮನೆಯಲ್ಲಿ, ಸಾರ್ವಜನಿಕ ಕ್ಷೇತ್ರದಲ್ಲಿ ಅಥವಾ ಹೋಟೆಲ್​ಗಳಲ್ಲಿ ಕಟ್ಟಿಗೆ ಉಪಯೋಗಿಸಿ ಅಡುಗೆ ಸಿದ್ಧಪಡಿಸುತ್ತಿದ್ದರು. ಈಗ ಅದರ ಬದಲು ಗ್ಯಾಸ್ ಅಥವಾ ವಿದ್ಯುತ್ ಉಪಕರಣಗಳನ್ನು ಬಳಸಲಾಗುತ್ತಿದೆ. ಅಡುಗೆ ತಯಾರಿಗೆ ಕಟ್ಟಿಗೆಗಳನ್ನು ಬಳಸುತ್ತಿದ್ದುದರಿಂದ ವಿಪರೀತ ಹೊಗೆ, ಮಸಿಯಿಂದ ಮಾಲಿನ್ಯ ಉಂಟಾಗುತ್ತಿತ್ತು, ಬೆಂಕಿಯ ಶಾಖಕ್ಕೂ ಒಡ್ಡಿಕೊಳ್ಳಬೇಕಾಗಿ ಬರುತ್ತಿತ್ತು. ಕಾಲ ಕಳೆದಂತೆ ಕಟ್ಟಿಗೆಯ ಉಪಯೋಗ ಕಡಿಮೆಯಾಗಿ, ಮಸಿಕಟ್ಟುವಿಕೆಯೂ ದೂರವಾಯಿತು. ಇದ್ದಿಲು ಮತ್ತು ಬೆರಣಿಯ ಬಳಕೆಯೂ ಮಾಯವಾಯಿತು. ಈಗಂತೂ ಬಹುತೇಕ ಕಡೆ ಆಧುನಿಕ ಒಲೆಯ ಉಪಯೋಗ ಹೆಚ್ಚಾಗಿದೆ. ದೊಡ್ಡ ದೊಡ್ಡ ಅನ್ನಛತ್ರಗಳಲ್ಲಿ ವೇಗವಾಗಿ ಮತ್ತು ಸುಲಭವಾಗಿ ಅಡುಗೆಮಾಡುವ ಹೊಗೆರಹಿತ ವಿಧಾನಗಳು ಬಂದಿವೆ.

ಈಗ ಮನೆಗಳಲ್ಲಿ ಕೂಡ ಸ್ವಚ್ಛತೆಯ ಅರಿವು ಬಂದಿದೆ. ಸಾರ್ವಜನಿಕ ಅನ್ನಸಂತರ್ಪಣೆಯ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದಿದ್ದಾರೆ. ಹೋಟೆಲ್​ಗಳಲ್ಲಿ ಪರಿವರ್ತನೆಯಾಗಿದೆ. ಪ್ರಸಿದ್ಧ ಲಘು ಉಪಾಹಾರ ಮಂದಿರಗಳು/ದರ್ಶಿನಿಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಈ ಪರಿವರ್ತನೆಗಳನ್ನು ಅಭಿವೃದ್ಧಿ ಎಂದು ಪರಿಗಣಿಸಬಹುದು. ಯಾಕೆಂದರೆ ಇಲ್ಲೆಲ್ಲ ಸ್ವಚ್ಛಾಗ್ರಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜನಸಾಮಾನ್ಯರಲ್ಲಿಯೂ ಸ್ವಚ್ಛತೆಯ ಅರಿವು ಮೂಡುತ್ತಿದೆ.

ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕು: ನಾನು ಚೆನ್ನೈಗೆ ಹೋಗಿಬಂದ ತಕ್ಷಣ ಮೊದಲು ಪ್ರವೇಶಮಾಡಿದ್ದು ನಮ್ಮ ಧರ್ಮಸ್ಥಳ ಕ್ಷೇತ್ರದ ‘ಅನ್ನಪೂರ್ಣ’ ಛತ್ರವನ್ನು. ಇಲ್ಲಿ ಸಾವಿರಾರು ಭಕ್ತರು ಸ್ವಾಮಿಯ ಪ್ರಸಾದವನ್ನು ಪ್ರತಿನಿತ್ಯ ಸ್ವೀಕರಿಸುತ್ತಾರೆ. ಇಲ್ಲಿನ ಅಡುಗೆಕೋಣೆ ಮತ್ತು ಪರಿಸರವನ್ನು ನಿರ್ಮಲವಾಗಿ ಇಟ್ಟುಕೊಳ್ಳಬೇಕೆಂಬ ಸ್ಪೂರ್ತಿ ಬಂದಿದ್ದೇ ಕೃಷ್ಣಭಟ್ಟರ ಭೇಟಿಯಿಂದ. ಭಕ್ತರಿಗೆ ನೀಡುವ ಅನ್ನಪ್ರಸಾದ ಸಿದ್ಧಪಡಿಸಲು ಕ್ಷೇತ್ರದಲ್ಲಿ ಮೊದಲು ಕಟ್ಟಿಗೆಯನ್ನು ಉಪಯೋಗಿಸುತ್ತಿದ್ದೆವು. ಅದರ ನಿರಂತರ ಉಪಯೋಗದಿಂದ ಅಡುಗೆಮನೆಯಲ್ಲಿ ಮಸಿ ಜಮೆಯಾಗುತ್ತಿತ್ತ್ತು. ಹೊಗೆ ಮತ್ತು ಮಸಿಯ ಪ್ರಭಾವ ಇಡೀ ಅಡುಗೆಕೋಣೆಯಲ್ಲಿ ಕಾಣುತ್ತಿತ್ತು. ಅಡುಗೆ ತಯಾರಿಸುವ ಮತ್ತು ಬಡಿಸುವ ಪಾತ್ರೆಗಳಿಗೂ ಮಸಿ ಅಂಟಿಕೊಳ್ಳುತ್ತಿತ್ತು. ಆವತ್ತಿನಿಂದ ಅನ್ನಪೂರ್ಣದ ಅಡುಗೆಮನೆಯನ್ನು ಸ್ವಚ್ಛವಾಗಿರಿಸುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡೆವು. ಅಡುಗೆ ತಯಾರಿಯ ವಿಧಾನದಲ್ಲಿ ಬದಲಾವಣೆಗಳನ್ನು ತಂದೆವು. ಪಾತ್ರೆಗಳನ್ನು ಸ್ವಚ್ಛವಾಗಿ ಶುದ್ಧೀಕರಿಸುವುದು, ತೊಳೆದ ಪಾತ್ರೆಗಳನ್ನು ಸರಿಯಾಗಿ ಜೋಡಿಸಿಡುವುದನ್ನು ಆರಂಭಿಸಿದೆವು. ಬೇಕಾದ ಸೌಟು-ಪಾತ್ರೆಗಳನ್ನು ತರಿಸಿಕೊಂಡೆವು. ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದೆವು. ಕಳೆದ ಸುಮಾರು 30 ವರ್ಷಗಳಿಂದ ನಾವು ಹಬೆ (ಖಠಿಛಿಚಞ) ಮೂಲಕ ಅಡುಗೆ ತಯಾರಿಸುತ್ತಿದ್ದೇವೆ. ಅಗತ್ಯಕ್ಕನುಗುಣವಾಗಿ ತತ್​ಕ್ಷಣಕ್ಕೆ ಅಡುಗೆ ಸಿದ್ಧಪಡಿಸಲು ಇದು ಸಹಕಾರಿ. ಈ ಎಲ್ಲ ಆಧುನಿಕ ವ್ಯವಸ್ಥೆಯಿಂದ ಅನ್ನಪೂರ್ಣದ ಅಡುಗೆಮನೆಯಿಂದು ಸ್ವಚ್ಛವಾಗಿ ಇದೆ. ಅನ್ನ ಮತ್ತು ಪದಾರ್ಥಗಳನ್ನು ಕೈಯಲ್ಲಿ ಮುಟ್ಟದೇ ಸಿದ್ಧಪಡಿಸಿ ಬಡಿಸುತ್ತಿದ್ದೇವೆ. ನಾವು ತಯಾರಿಸಿದ ಆಹಾರಗಳನ್ನು ತಟ್ಟೆಯಲ್ಲಿ ಬಡಿಸಿದಾಗ ಊಟಮಾಡುವ ಭಕ್ತನೇ ಮೊದಲು ಕೈಯಿಂದ ಮುಟ್ಟುತ್ತಾನೆ. ಇದೇ ವ್ಯವಸ್ಥೆಗಳನ್ನು ನಮ್ಮ ಕಾಲೇಜಿನ ಹಾಸ್ಟೆಲ್​ಗಳಲ್ಲಿ ಕೂಡ ಅಳವಡಿಸಿದ್ದೇವೆ.

ತಿಳಿವಳಿಕೆ ಆಚರಣೆಗೆ ಬರಬೇಕು: ಹೋಟೆಲ್​ಗಳಲ್ಲಿ, ಬೀದಿಬದಿಯ ಅಂಗಡಿಗಳಲ್ಲಿ, ಸಣ್ಣಪುಟ್ಟ ಢಾಬಾಗಳಲ್ಲಿ ಜನರು ಆಹಾರವನ್ನು ಸ್ವೀಕರಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಯುವಜನರು ಮನೆಹೊರಗಿನ ಇಂತಹ ಆಹಾರವನ್ನು ಇಷ್ಟಪಡುತ್ತಾರೆ. ಇಂದು ಅತಿವಿದ್ಯಾವಂತರು ಹಾಗೂ ಆಧುನಿಕರು ‘ಎಲ್ಲಿ ಬೇಕಾದರೂ ಆಹಾರವನ್ನು ಸೇವಿಸುತ್ತೇವೆ, ಹೇಗಿದ್ದರೂ ಸ್ವೀಕರಿಸುತ್ತೇವೆ’ ಎಂಬ ಅತಿರೇಕಕ್ಕೆ ಹೋಗಿಬಿಟ್ಟಿದ್ದಾರೆ. ಹೀಗೆ ಮಾರ್ಗದ ಬದಿಯಲ್ಲಿ ನಿಂತು ತಿಂಡಿ-ತಿನಿಸು ತಿನ್ನುವಾಗ ಪಕ್ಕದಲ್ಲೇ ನೂರಾರು ವಾಹನಗಳು ಚಲಿಸುವುದರಿಂದ ಬರುವ ಧೂಳು, ಹೊಗೆ, ಮಾಲಿನ್ಯದ ಅರಿವಿದ್ದರೂ ಯಾವ ಗೊಡವೆಯೂ ಇಲ್ಲದವರಂತೆ ಆಹಾರವನ್ನು ತಿನ್ನುತ್ತಾರೆ. ಇಂತಹ ಗೂಡಂಗಡಿಗಳಲ್ಲಿ ಸ್ವಚ್ಛತೆಗೆ ಮಹತ್ವ ಇರುವುದಿಲ್ಲ. ಎಲ್ಲರೂ ಉಂಡ ತಟ್ಟೆಗಳನ್ನು ಒಂದೇ ಬಕೆಟ್​ನ ನೀರಿನಲ್ಲೇ ತೊಳೆಯುತ್ತಾರೆ, ಅದೇ ಬಕೆಟ್​ನಲ್ಲಿನ ನೀರಿನಿಂದ ಚಮಚ, ಗಾಜಿನ ಪಾತ್ರೆಗಳನ್ನು ತೊಳೆಯುತ್ತಾರೆ. ಅವರ ಇಂಥ ಎಲ್ಲ ಅಗತ್ಯಗಳಿಗೂ ಆ ನೀರೇ ಆಶ್ರಯ. ಆದರೂ ಈ ಅತಿವಿದ್ಯಾವಂತರಿಗೆ ಅದೇ ಒಂದು ಫ್ಯಾಷನ್. ಇಂತಹ ಗೂಡಂಗಡಿಗಳಲ್ಲಿ ಆಹಾರ ಸ್ವೀಕರಿಸುವುದು ಸಮಾನತೆಯನ್ನು ಸಾರುವುದಾದರೂ, ಆರೋಗ್ಯದ ದೃಷ್ಟಿಯಿಂದ ಅದು ಸಾಧುವಲ್ಲ. ನಾವು ಸ್ವಚ್ಛತೆಗೆ ಪ್ರಾಶಸ್ತ್ಯ ನೀಡುತ್ತಿಲ್ಲ ಎಂಬುದನ್ನು ಇದು ಸಾರುತ್ತದೆ.

ನಾನು ಬೆಂಗಳೂರಿನಲ್ಲಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಪಾನಿಪುರಿ ತಿನ್ನುವುದು ನನಗೆ ತುಂಬ ಇಷ್ಟದ ಅಭ್ಯಾಸವಾಗಿತ್ತು. ಅದಕ್ಕೆಂದು ಕಬ್ಬನ್ ಪಾರ್ಕ್​ನ ಗೂಡಂಗಡಿಗೆ ಹೋಗುತ್ತಿದ್ದೆ. ಒಮ್ಮೆ ಹೀಗೆಯೇ ಹೋದಾಗ ನನ್ನ ಮಾವ ‘ಅದನ್ನು ತಿನ್ನಬಾರದು, ಅಶುಚಿಯಾಗಿರುತ್ತದೆ’ ಎಂದರು. ಅವರ ಮಾತು ಸತ್ಯವೇ ಆಗಿತ್ತು. ಯಾಕೆಂದರೆ ಅಂಗಡಿಯವನು ಕೈ ಹಾಕಿ ಪಾತ್ರೆಯಿಂದ ಪುರಿಯನ್ನು ತೆಗೆದು, ಅದನ್ನು ತೂತು ಮಾಡಿ, ಮಣ್ಣಿನ ಮಡಕೆಯಲ್ಲಿರುವ ಪಾನಿ ಹಾಕಿ ತಟ್ಟೆಯಲ್ಲಿಟ್ಟು ಕೊಡುತ್ತಿದ್ದ. ಪ್ರಾಯಶಃ ನನಗಿಂತ ಮೊದಲು ತಿಂದವರಿಗೆ ಅವನ ಕೈಕೊಳೆ ಹೋಗಿರಬಹುದೆಂದು ನಾನು ಭಾವಿಸುತ್ತಿದ್ದೆ. ಆದರೆ ಅದೇ ಸಮಯದಲ್ಲಿ ಪ್ರಸಿದ್ಧ ಪುಸ್ತಕವೊಂದು ಪ್ರಕಟವಾಗಿತ್ತು. ಅದರಲ್ಲಿ, ‘ಜಂಕ್’ ಆಹಾರದ ದುಷ್ಪರಿಣಾಮದ ವಿವರಣೆ ಇತ್ತು; ಅಂತಹ ಅಂಗಡಿಗಳಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ, ಅಲ್ಲಿ ಆಹಾರ ಸ್ವೀಕರಿಸುವಾಗ ವಹಿಸಬೇಕಾದ ಜಾಗ್ರತೆಯ ಕುರಿತು ಎಚ್ಚರಿಕೆಯನ್ನೂ ನೀಡಲಾಗಿತ್ತು. ಕೈಯ ಉಗುರಿನಿಂದ, ಕೊಳೆಯಾದ ಕೈಯಿಂದ, ಮಲಿನವಾದ ಪಾತ್ರೆಯಿಂದ, ಬಳಸುವ ಮಡಕೆ, ತಟ್ಟೆ ಹಾಗೂ ಗಾಜಿನ ಉಪಕರಣದಿಂದ ಉಂಟಾಗುವ ದುಷ್ಪರಿಣಾಮಗಳನ್ನು ಅದರಲ್ಲಿ ವಿವರಿಸಲಾಗಿತ್ತು. ಈ ಪುಸ್ತಕ ನನ್ನ ತಪ್ಪುಗ್ರಹಿಕೆಯನ್ನು ಹೋಗಲಾಡಿಸಿತು. ಅಂದಿನಿಂದ ‘ಇನ್ನು ಜನ್ಮವಿರುವವರೆಗೆ ಇಂತಹ ಆಹಾರಗಳತ್ತ ಸುಳಿಯುವುದಿಲ್ಲ’ ಎಂದು ತೀರ್ವನಿಸಿದೆ. ಆದ್ದರಿಂದ ಇಂದಿನ ವಿದ್ಯಾವಂತರು ಮತ್ತು ಯುವಪೀಳಿಗೆಯವರು ಶುಚಿ-ರುಚಿಯಾದ ಆಹಾರಗಳನ್ನು ಸೇವಿಸುವ ಕಡೆಗೆ ಗಮನ ಹರಿಸಬೇಕು. ಆಗ ಮಾತ್ರ ಅಘಟಿತ ಘಟನೆಗಳು ದೂರವಾಗುತ್ತವೆ. ಉತ್ತಮ ಆರೋಗ್ಯವೂ ಲಭಿಸುತ್ತದೆ. ಈ ತಿಳಿವಳಿಕೆ ಮನೆಯಿಂದ ಆರಂಭಗೊಂಡು ಎಲ್ಲೆಡೆ ಪ್ರಚಾರವಾದಾಗ ಮಾತ್ರವೇ ಸ್ವಸ್ಥಸಮಾಜದ ನಿರ್ವಣದ ಕನಸು ಸಾಕಾರಗೊಳ್ಳುತ್ತದೆ.

ಆಹಾರ ಮತ್ತು ಪ್ರಸನ್ನಮನಸ್ಸು: ಧರ್ಮಕ್ಷೇತ್ರಗಳಲ್ಲಿ, ಹೋಟೆಲ್​ಗಳಲ್ಲಿ, ಸಾರ್ವಜನಿಕ ಅಥವಾ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಆಹಾರವನ್ನು ತಯಾರಿಸುವವರು ಆತ್ಮಸಾಕ್ಷಿ ಮತ್ತು ಆತ್ಮತೃಪ್ತಿಗಾಗಿ ಕರ್ತವ್ಯಪ್ರಜ್ಞೆಯಿಂದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಅಡುಗೆಗೆ ಉಪಯೋಗಿಸುವ ಪಾತ್ರೆ-ಪರಡಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಅಡುಗೆಮನೆಯನ್ನು ಪ್ರತಿನಿತ್ಯ ಗುಡಿಸಿ, ಸಾರಿಸಿ ಶುಭ್ರವಾಗಿ ಇಟ್ಟುಕೊಳ್ಳಬೇಕು. ಅಡುಗೆ ಮಾಡುವವರೂ ಸ್ನಾನಮಾಡಿ, ಶುದ್ಧವಸ್ತ್ರ ಧರಿಸಿ ಪಾಕತಯಾರಿಯಲ್ಲಿ ತೊಡಗಿಸಿಕೊಳ್ಳಬೇಕು. ಅಡುಗೆಗೆ ಬೇಕಾದ ತರಕಾರಿಗಳನ್ನು ನೀರಿನಿಂದ ತೊಳೆದು ಪವಿತ್ರಗೊಳಿಸಿ ಉಪಯೋಗಿಸಬೇಕು. ನಿರ್ಮಲ ಪರಿಸರದಲ್ಲಿ ಸಿದ್ಧವಾದ ಆಹಾರ, ಶುದ್ಧ ವಾತಾವರಣದಲ್ಲಿ ಸ್ವೀಕರಿಸಿದ ಆಹಾರವು ನಮ್ಮ ಮನಸ್ಸಿನ ಕಲ್ಮಶಗಳನ್ನು ದೂರಮಾಡಿ ಪ್ರಸನ್ನತೆಯನ್ನು ತಂದುಕೊಡುತ್ತದೆ.

ನಮ್ಮ ಕ್ಷೇತ್ರದಲ್ಲಿ ಹಿಂದೆ ಅಡುಗೆಮನೆಯಲ್ಲಿ ಸಾಕಷ್ಟು ಜಿರಲೆಗಳಿರುತ್ತಿದ್ದವು. ತೀರಾ ಸ್ವಾಭಾವಿಕ ಎಂಬಂತೆ ಜೇಡನ ಬಲೆಗಳಿರುತ್ತಿದ್ದವು, ಹಲ್ಲಿಗಳೂ ಹರಿದಾಡುತ್ತಿದ್ದವು. ಆದರೆ ಕಳೆದ 30-35 ವರ್ಷಗಳಿಂದೀಚೆಗೆ ಒಂದೇ ಒಂದು ಹಲ್ಲಿಯಾಗಲೀ, ಜೇಡನ ಬಲೆಯಾಗಲೀ, ಜಿರಲೆಯಾಗಲೀ ಪ್ರವೇಶ ಮಾಡಿಲ್ಲ. ಯಾಕೆಂದರೆ ಇವುಗಳಿಗೆ ಆಧುನಿಕವಾಗಿ ಒಂದು ಔಷಧವನ್ನು ಕಂಡುಹಿಡಿದಿದ್ದಾರೆ; ಇದು ವಿಷಕಾರಿಯಲ್ಲ ಅಥವಾ ಹಿಂಸೆಯನ್ನು ಮಾಡುವುದಿಲ್ಲ, ಪ್ರಾಣಿಗಳನ್ನು ಕೊಲ್ಲುವುದಿಲ್ಲ, ಬದಲಾಗಿ ಓಡಿಸುತ್ತದೆ. ಹಾಗಾಗಿ ದೇವಸ್ಥಾನದ ಗರ್ಭಗುಡಿಯಲ್ಲಿ, ನಮ್ಮ ಜಮಾ ಉಗ್ರಾಣಗಳಲ್ಲಿ, ಅನ್ನಪೂರ್ಣದ ಅಡುಗೆಮನೆಯಲ್ಲಿ ಮತ್ತು ನಮ್ಮ ಎಲ್ಲ ಆಸ್ಪತ್ರೆಗಳಲ್ಲಿ ಈ ಔಷಧವನ್ನು ಉಪಯೋಗಿಸುತ್ತೇವೆ. ಇದರಿಂದಾಗಿ ಸ್ವಚ್ಛ ವಾತಾವರಣ ನಿರ್ವಣವಾಗುತ್ತಿದೆ. ಅಂದರೆ ಸ್ವಚ್ಛತೆ ಇದ್ದ ಸ್ಥಳದಲ್ಲಿ ಈ ರೀತಿಯ ಕ್ರಿಮಿಕೀಟಗಳೂ ಬರುವುದಿಲ್ಲ. ಎಲ್ಲಿ ಅಶುಚಿ ಇರುತ್ತದೆಯೋ ಅಲ್ಲಿ ಸ್ವಾಭಾವಿಕವಾಗಿ ಇಂಥವುಗಳ ಉಪದ್ರವ ಆರಂಭವಾಗುತ್ತದೆ. ನಮಗೆ ಸ್ವಯಂಪ್ರೇರಣೆಯಿಂದ ಸ್ವಚ್ಛತೆಯ ಬಗ್ಗೆ ಎಚ್ಚರಿಕೆಯಿರಬೇಕು. ಆಹಾರ ಸ್ವೀಕರಿಸುವವರು ಗಿರಾಕಿಯೇ ಇರಬಹುದು ಅಥವಾ ಪ್ರಸಾದಕ್ಕಾಗಿ ಬರುವ ಭಕ್ತರಿರಬಹುದು ಅಥವಾ ಇನ್ಯಾರೋ ಇರಬಹುದು. ಅವರಿಗೆ ಶುಚಿ-ರುಚಿಯಾದ ಆಹಾರವನ್ನು ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನೀಡುವುದು ನಮ್ಮ ಜವಾಬ್ದಾರಿಯೇ ಹೌದು.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)