ಹೈಕೋರ್ಟ್​ಗೆ ಹಾಜರಾದ ಬಾಗಲಕೋಟೆ ಎಸ್​ಪಿ

ಧಾರವಾಡ: ವಿಚಾರಣೆಗೆ ಹಾಜರಾಗದ ಆರೋಪಿಯೊಬ್ಬರಿಗೆ ವಾರೆಂಟ್ ಹೊರಡಿಸಿದ್ದರೂ ಅದನ್ನು ಕಾನೂನು ಅಡಿ ಜಾರಿಗೊಳಿಸದೆ, ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡುವಲ್ಲಿ ವಿಳಂಬ ಮಾಡಿದ ಪೊಲೀಸರ ತಪ್ಪಿಗೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲ್ಲಿನ ಹೈಕೋರ್ಟ್ ಪೀಠದ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದ ಘಟನೆ ಶುಕ್ರವಾರ ಜರುಗಿತು.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಬಾಗಲಕೋಟೆ ಜಿಲ್ಲೆಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೊಬ್ಬರಿಗೆ ನ್ಯಾಯಪೀಠ, ಇತ್ತೀಚೆಗೆ ಹಲವು ಬಾರಿ ವಾರೆಂಟ್ ಹೊರಡಿಸಿತ್ತು. ಈ ಕುರಿತು ನ್ಯಾ. ಬಿ. ವೀರಪ್ಪ ಮತ್ತು ನ್ಯಾ. ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ಮಾಡಿತು. ಆರೋಪಿಯನ್ನು ನ್ಯಾಯಾಲಯಕ್ಕೆ ಕರೆತರುವಂತೆ ಹಲವು ಬಾರಿ ವಾರೆಂಟ್ ಜಾರಿ ಮಾಡಿದ್ದರೂ ಅದನ್ನು ಜಾರಿಗೊಳಿಸಲು ನಿಮ್ಮ ಕೆಳಗಿನ ಪೊಲೀಸ್ ಅಧಿಕಾರಿಗಳು ವಿಫಲರಾಗಿದ್ದಾರೆ. ಅಲ್ಲದೆ ಬೇಜವಾಬ್ದಾರಿತನ ತೊರಿದ್ದಾರೆ. ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಹಾಜರಿದ್ದ ಬಾಗಲಕೋಟೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಪೀಠ ಖಡಕ್ ಸೂಚನೆ ನೀಡಿತು. ಅರ್ಜಿದಾರರ ಪರ ವಕೀಲ ಮಲ್ಲಿಕಾರ್ಜುನ ಹುಕ್ಕೇರಿ ವಾದ ಮಂಡಿಸಿದರು.

ಪ್ರಕರಣವೇನು?: ಬಾಗಲಕೋಟೆ ಜಿಲ್ಲೆ ಬೆನ್ನೂರಿನ ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಯಲ್ಲಿ ಬಸಪ್ಪ ಬಾಗೆವಾಡಿ ಎಂಬುವರು ಕೆಲಸ ಮಾಡುತ್ತಿದ್ದಾರೆ. ಸಂಸ್ಥೆಯವರು ಕಾರಣಾಂತರಗಳಿಂದ ನೌಕರ ಬಸಪ್ಪ ಅವರನ್ನು ಕೆಲ ವರ್ಷ ಅಮಾನತಿನಲ್ಲಿಟ್ಟಿದ್ದರು. ಬಸಪ್ಪ ಕೆಲಸಕ್ಕೆ ಹಾಜರಾದ ಬಳಿಕ ಅಮಾನತು ಅವಧಿಯ ಜೀವನಾಧಾರ ಭತ್ಯೆ ಕೊಡಿಸುವಂತೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮಾಡಿದ್ದ ಏಕಸದಸ್ಯ ಪೀಠ, ಶಿಕ್ಷಣ ಸಂಸ್ಥೆಯವರು ಅರ್ಜಿದಾರರಿಗೆ 3 ತಿಂಗಳಲ್ಲಿ ಜೀವನಾಧಾರ ಭತ್ಯೆ ನೀಡಬೇಕು ಎಂದು 2018ರ ಮಾ. 9ರಂದು ಆದೇಶ ಮಾಡಿತ್ತು. ಆದೇಶವಿದ್ದರೂ ಭತ್ಯೆ ನೀಡುತ್ತಿಲ್ಲ ಎಂದು ಸಂಸ್ಥೆ ಅಧ್ಯಕ್ಷ ಮುತ್ತಣ್ಣ ಬೆನ್ನೂರ ಎಂಬುವರ ವಿರುದ್ಧ ನೌಕರ ಬಸಪ್ಪ ಹೈಕೋರ್ಟ್​ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿದ್ದರು. ಅದರ ವಿಚಾರಣೆಗೆ ಹಾಜರಾಗುವಂತೆ ಅಧ್ಯಕ್ಷ ಮುತ್ತಣ್ಣ ಬೆನ್ನೂರ ಅವರಿಗೆ ಸೂಚಿಸಿದ್ದ ನ್ಯಾಪೀಠ, ಇತ್ತೀಚೆಗೆ ವಾರಂಟ್ ಜಾರಿ ಮಾಡಿತ್ತು. ಅದನ್ನು ಬಾಗಲಕೋಟೆ ಪೊಲೀಸರು ಸಮರ್ಪಕವಾಗಿ ಜಾರಿಗೊಳಿಸದೆ ವಿಳಂಬ ಮಾಡುತ್ತಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ಹಾಜರಾಗಿ ಮಾಹಿತಿ ನೀಡುವಂತೆ ವಿಭಾಗೀಯ ಪೀಠ ಆದೇಶ ಮಾಡಿತ್ತು. ನ್ಯಾಯಾಂಗ ನಿಂದನೆ ಎದರಿಸುತ್ತಿದ್ದ ಸಂಸ್ಥೆ ಅಧ್ಯಕ್ಷರು, ನೌಕರನ ಜೀವನಾಧಾರಿತ ಭತ್ಯೆಯನ್ನು ವಿಚಾರಣೆ ವೇಳೆ ನೀಡಿದ್ದರಿಂದ ನ್ಯಾಯಪೀಠ, ಅರ್ಜಿಯನ್ನು ಇತ್ಯರ್ಥಗೊಳಿಸಿತು.