ಹುಣಸೂರು: ಸಮಾಜದಲ್ಲಿನ ದುರ್ಬಲರಿಗೆ, ಅಸಹಾಯಕರಿಗೆ ನೆರವು, ಆಶ್ರಯ ನೀಡುವುದೇ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಂಪರೆಯಾಗಿದೆ ಎಂದು ಬೆಂಗಳೂರಿನ ಕ್ಷೇಮವನ ಪ್ರಕೃತಿ ಚಿಕಿತ್ಸಾ ಕೇಂದ್ರದ ಕಾರ್ಯ ನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್ ಅಭಿಪ್ರಾಯಪಟ್ಟರು.
ತಾಲೂಕಿನ ಉಯಿಗೊಂಡನಹಳ್ಳಿಯ ಮಂಗಳವಾರ ನಿವಾಸಿ ಚಲುವಮ್ಮ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ವಿಭಾಗದ ವಾತ್ಸಲ್ಯ ಯೋಜನೆಯಡಿ ನಿರ್ಮಿಸಿರುವ ಹಸ್ತಾಂತರ ಕಾರ್ಯಕ್ರಮದಲ್ಲಿ ಫಲಾನುಭವಿಗೆ ಮನೆ ಹಸ್ತಾಂತರಿಸಿ ಮಾತನಾಡಿದರು.
ಯಾರ ಆಸರೆ ಇಲ್ಲದೆ ದುಡಿಮೆ ಮಾಡುವುದಕ್ಕೆ ಆಗದ ಜೀವಗಳಿಗೆ ಆಸರೆಯ ಅವಶ್ಯಕತೆ ಇರುತ್ತದೆ. ಇಂತಹ ಸದಸ್ಯರಿಗೆ ಅಕ್ಕಪಕ್ಕದವರಾಗಿ ನೀವೂ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದರಿಂದ ನಿಮ್ಮ ಸಹಕಾರದಿಂದ ವಾತ್ಸಲ್ಯ ಸದಸ್ಯರಿಗೆ ಒಂದು ಪುಟ್ಟ ಮನೆ ಮಾಡಿಕೊಡಲು ಸಾಧ್ಯವಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಸ್ವಂತ ಸೂರಿನಡಿ ಬಾಳಿ ಬದುಕಬೇಕೆನ್ನುವ ಜೀವನದ ಮಹದಾಸೆ ಇರುತ್ತದೆ. ಬಡಕುಟುಂಬಗಳಿಗೆ ಇಂತಹ ಆಸೆ ಪೂರೈಸುವ ನಿಟ್ಟಿನಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಬೆಂಬಲದಿಂದಾಗಿ ನೂರಾರು ವಯೋವೃದ್ಧರು ಮನೆ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಮಾತನಾಡಿ, ತಾಲೂಕಿನಲ್ಲಿ ಯಾರೂ ನೋಡಿಕೊಳ್ಳಲು ಇಲ್ಲದ, ವಿಧವೆಯರಾದ, ನಿರ್ಗತಿಕ ವಯೋವೃದ್ಧರಾಗಿರುವ 127 ಜನರನ್ನು ಗುರುತಿಸಿ ಅಂತಹವರಿಗೆ 1ರಿಂದ 2 ಸಾವಿರ ರೂ.ಗಳವರೆಗಿನ ಮಾಸಾಶನ ನೀಡಲಾಗುತ್ತಿದೆ. ಅಂತಹ ಪ್ರಕರಣಗಳಲ್ಲಿ ಮನೆ ದುಸ್ಥಿತಿಯಲಿರುವ ಫಲಾನುಭವಿಗಳಿಗೆ ವಾತ್ಸಲ್ಯ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ತಾಲೂಕಿನಲ್ಲಿ ಈವರೆಗೆ ನಾಲ್ಕು ಮನೆಗಳ ನೀಡಲಾಗುತ್ತಿದ್ದು, ಎರಡು ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ವಾತ್ಸಲ್ಯ ಕಿಟ್ ಯೋಜನೆಯಡಿ ಇಂತಹ ಕುಟುಂಬಗಳಿಗೆ ಅಗತ್ಯ ಪರಿಕರಗಳು ಮತ್ತು ಆಹಾರದ ಕಿಟ್ ಒದಗಿಸಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ನಿಂಗಯ್ಯ, ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ, ನಿರ್ದೇಶಕರಾದ ಮುರಳೀಧರ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ, ಯೋಜನಾಧಿಕಾರಿಗಳಾದ ಮೂಕಾಂಬಿಕಾ, ಬಿ.ಧನಂಜಯ, ಜ್ಞಾನವಿಕಾಸ ಸಮನ್ವಯಾಧಿಕಾರಿ ಚಿಕ್ಕದೇವಮ್ಮ, ಮೇಲ್ವಿಚಾರಕ ಸಂತೋಷ್, ಸೇವಾಪ್ರತಿನಿಧಿ ಪೂರ್ಣಿಮಾ, ಊರಿನ ಮುಖಂಡರಾದ ಸುಮತಿ, ರಾಮೇಗೌಡ, ನರಸಿಂಹ, ಯೋಜನೆಯ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.