ರಾಮಭಕ್ತರ ಶಕ್ತಿ ಪ್ರದರ್ಶನ

>

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸಬೇಕೆಂಬ ಆಗ್ರಹ ಈಗ ಮತ್ತಷ್ಟು ಬಲ ಪಡೆದುಕೊಂಡು ದೇಶಾದ್ಯಂತ ಪ್ರತಿಧ್ವನಿಸಲಾರಂಭಿಸಿದೆ. 1992 ಬಳಿಕ ಇದೇ ಮೊದಲ ಬಾರಿಗೆ ರಾಮಜನ್ಮ ಭೂಮಿಯಲ್ಲಿ ರಾಮಸ್ಮರಣೆ ಮುಗಿಲು ಮುಟ್ಟಿದೆ. ಮಂದಿರ ಬೇಡಿಕೆಗಾಗಿ ಹಿಂದುಗಳ ಶಕ್ತಿ ಪ್ರದರ್ಶನಕ್ಕೆ ಮುಂದಾಗಿ ಸಾಧು-ಸಂತರ ಸಮ್ಮುಖದಲ್ಲಿ ವಿಶ್ವ ಹಿಂದು ಪರಿಷದ್ ಕರೆಕೊಟ್ಟಿರುವ ನ.25ರ ಧರ್ಮ ಸಂಸದ್​ಗೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ದೇಶದ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಅಯೋಧ್ಯೆಯತ್ತ ಹೆಜ್ಜೆ ಹಾಕಿರುವುದರಿಂದ ಮಂದಿರ ಆಂದೋಲನ ಮತ್ತಷ್ಟು ಹುರುಪು ಪಡೆದುಕೊಂಡಿದೆ. ಇತ್ತ ಬೆಂಗಳೂರು ಹಾಗೂ ನಾಗ್ಪುರದಲ್ಲೂ ಅದೇ ದಿನ ವಿಹಿಂಪ ರ‍್ಯಾಲಿ ಆಯೋಜನೆಗೊಂಡಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಅಯೋಧ್ಯೆಯತ್ತ ಮತ್ತೆ ದೇಶದ ಚಿತ್ತ ಹರಿದಿದೆ.

ಅಯೋಧ್ಯೆ: ಲಕ್ಷಾಂತರ ಭಕ್ತರ ರಾಮಮಂದಿರ ನಿರ್ಮಾಣ ಹೋರಾಟದ ಬಲಪ್ರದರ್ಶನಕ್ಕೆ ವೇದಿಕೆಯಾಗಿರುವ ನ.25ರ ಅಯೋಧ್ಯೆ ಧರ್ಮಸಂಸದ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಯತ್ತ ಜನಸಾಗರವೇ ಹರಿದು ಬರುತ್ತಿದೆ. 1 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇತ್ತಾದರೂ ಶುಕ್ರವಾರ ಒಂದೇ ದಿನ ಮಹಾರಾಷ್ಟ್ರ, ಉತ್ತರಪ್ರದೇಶದ ಗ್ರಾಮೀಣ ಪ್ರದೇಶದಿಂದ 50 ಸಾವಿರಕ್ಕೂ ಅಧಿಕ ಭಕ್ತರು ರಾಮಜನ್ಮ ಭೂಮಿ ಪ್ರವೇಶಿಸಿದ್ದಾರೆ. ಈ ಭಕ್ತ ಬೆಂಬಲ ಕಂಡು ಸರ್ಕಾರ ಅಯೋಧ್ಯೆ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿದೆ. ರಾಮಮಂದಿರ ನಿರ್ವಣಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಆಯೋಜನೆಗೊಂಡಿರುವ ಧರ್ಮಸಂಸದ್​ನಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಅವರು ಶನಿವಾರ ರಾಮಲಲ್ಲಾನ ದರ್ಶನ ಪಡೆದು, ಬಳಿಕ ಅಯೋಧ್ಯೆಯ (ಫೈಜಾಬಾದ್) ಜನತೆ ಮತ್ತು ಸಂತರೊಂದಿಗೆ ಸಂವಾದ ನಡೆಸಲಿದ್ದಾರೆ.

25 ಸಾವಿರಕ್ಕೂ ಅಧಿಕ ಶಿವಸೇನಾ ಕಾರ್ಯಕರ್ತರು ಈಗಾಗಲೇ ವಿಶೇಷ ರೈಲುಗಳಲ್ಲಿ ಅಯೋಧ್ಯೆ ತಲುಪಿದ್ದಾರೆ. ಮತ್ತೊಂದೆಡೆ, ಸಂತರ ಬೃಹತ್ ಸಮಾಗಮ ‘ಧರ್ಮ ಸಂಸದ್’ ಆಯೋಜಿಸಿರುವ ವಿಶ್ವ ಹಿಂದು ಪರಿಷದ್ (ವಿಎಚ್​ಪಿ) ಕೂಡ ಕಾರ್ಯಕ್ರಮಕ್ಕಾಗಿ ಭರದ ಸಿದ್ಧತೆ ನಡೆಸುತ್ತಿದೆ. ವಿಎಚ್​ಪಿ, ಶಿವಸೇನೆ ಕಾರ್ಯಕರ್ತರ ಆಗಮನದಿಂದಾಗಿ ಅಯೋಧ್ಯೆಯಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದ್ದು, ಎಲ್ಲೆಡೆ ‘ ಜೈ ಶ್ರೀರಾಮ್ ’ ಘೋಷಣೆ ಮೊಳಗುತ್ತಿದೆ.

ಗ್ರಾಮ ಸಭೆ: ಶ್ರೀರಾಮ ಮತ್ತು ಮಂದಿರ ಮಾದರಿಯ ಕಟೌಟ್ ಇರುವ ವಾಹನಗಳ ಮೂಲಕ ವಿಎಚ್​ಪಿ ಕಾರ್ಯಕರ್ತರು ಪ್ರತಿ ಗ್ರಾಮದಲ್ಲೂ ಸಭೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮೋಟಾರ್ ಸೈಕಲ್ ರ‍್ಯಾಲಿ ಹಾಗೂ ಮೆರವಣಿಗೆ ಕೂಡ ಆಯೋಜಿಸಲಾಗುತ್ತಿದೆ.

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿಎಚ್​ಪಿ ಸೇರಿ ಇತರ ಸಂಘ ಪರಿವಾರದ ಸಂಘಟನೆಗಳು ರಾಮಮಂದಿರ ನಿರ್ವಣಕ್ಕೆ ಪಟ್ಟು ಹಿಡಿದಿರುವುದು ಎಲೆಕ್ಷನ್ ಗಿಮಿಕ್. ಮಂದಿರ ನಿರ್ವಿುಸಬೇಕು ಎನ್ನುವವರು ನಾಲ್ಕೂವರೆ ವರ್ಷದಿಂದ ನಿದ್ರೆ ಮಾಡುತ್ತಿದ್ದರಾ?

| ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ನಾಯಕ

ರಾಜ್ಯದಲ್ಲೂ ಸಿದ್ಧತೆ

ಮಂಗಳೂರು: ನ.25ರ ಜನಾಗ್ರಹ ಸಭೆಗೆ ರಾಜ್ಯದಲ್ಲೂ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ 6 ಅಡಿ ಎತ್ತರದ ವೇದಿಕೆ ನಿರ್ವಿುಸಲಾಗಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಹಾಸನದಿಂದ ಜನರು ಆಗಮಿಸಲಿದ್ದಾರೆ. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿ ಹಲವು ಪ್ರಮುಖ ಮಠಾಧೀಶರು ಪಾಲ್ಗೊಳ್ಳುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿಶ್ವ ಹಿಂದು ಪರಿಷತ್ ಮಂಗಳೂರಿನ ನೆಹರು ಮೈದಾನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಭದ್ರತೆಗೆ ಹೊರ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿಕೊಳ್ಳಲಾಗುತ್ತಿದೆ. ಒಟ್ಟು 25 ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ರೌಡಿ ಶೀಟರ್​ಗಳನ್ನು ಪೊಲೀಸ್ ಠಾಣೆಗೆ ಕರೆಸಿ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ. ಅತ್ತ ಹುಬ್ಬಳ್ಳಿಯಲ್ಲಿ ನ. 25ರ ಸಂಜೆ 4ಕ್ಕೆ ಮೂರುಸಾವಿರ ಮಠ ಶಾಲಾ ಆವರಣದಲ್ಲಿ ಜನಾಗ್ರಹ ಸಭೆ ನಡೆಯಲಿದ್ದು, ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ.

ಜಬಲ್​ಪುರದ ಶ್ರೀ ಅಖಿಲೇಶ್ವರ ನಂದಗಿರಿ ಮಹಾರಾಜರು, ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಮನಗುಂಡಿ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ, ಹುಬ್ಬಳ್ಳಿ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ದೇವರಹುಬ್ಬಳ್ಳಿ ಸಿದ್ಧಾಶ್ರಮದ ಶ್ರೀ ಸಿದ್ಧಶಿವಯೋಗಿಗಳು ಪಾಲ್ಗೊಳ್ಳಲಿದ್ದಾರೆ.

ಅಗತ್ಯ ವಸ್ತುಗಳ ಸಂಗ್ರಹ

ರಾಮಭಕ್ತರ ಬಲಪ್ರದರ್ಶನದ ವೇಳೆ ಅಹಿತಕರ ಘಟನೆ ಸಂಭವಿಸಬಹುದೆಂಬ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರು ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ. 1992ರಂತೆ ಗಲಭೆಯಾದರೆ ದಿನಬಳಕೆ ವಸ್ತುಗಳಿಗೂ ಪರದಾಡುವ ಪರಿಸ್ಥಿತಿ ಎದುರಾಗಬಹುದೆಂಬ ಆತಂಕದಿಂದ ಕುಟುಂಬಗಳು ವಾರಕ್ಕೆ ಆಗುವಷ್ಟು ದಿನಸಿ, ಔಷಧ ಸಂಗ್ರಹಿಸಿಟ್ಟುಕೊಳ್ಳುತ್ತಿವೆ.

ಧರ್ಮ ಸಂಸದ್ ಇತಿಹಾಸ

1984ರ ಏ.7-8ರಂದು ದೆಹಲಿಯ ವಿಜ್ಞಾನ ಭವನದಲ್ಲಿ ಮೊದಲ ಸಲ ಧರ್ಮ ಸಂಸದ್ ನಡೆಯಿತು. ಸ್ವಾಮಿ ಶಾಂತಾನಂದ ಮಹಾರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿಂದು ಧರ್ಮದ 76 ಪಂಥಗಳ 558 ಧರ್ಮಗುರುಗಳು ಭಾಗವಹಿಸಿದ್ದು ವಿಶೇಷ. ಹಿಂದು ಸಮಾಜದ ಬಲವರ್ಧನೆ, ನಂಬಿಕೆ ಮತ್ತು ಪದ್ಧತಿಗಳ ರಕ್ಷಣೆ ಸೇರಿ ಒಟ್ಟು 12 ಅಂಶಗಳನ್ನು ದೇಶಾದ್ಯಂತ ಪಸರಿಸುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. 2017ರ ನ.24ರಿಂದ ಮೂರು ದಿನಗಳವರೆಗೆ ಉಡುಪಿಯಲ್ಲಿ ಧರ್ಮ ಸಂಸದ್ ನಡೆದಿತ್ತು.

17 ನಿಮಿಷದಲ್ಲಿ ವಿವಾದಿತ ಕಟ್ಟಡ ಕೆಡವಲಾಯಿತು. ಮಂದಿರ ನಿರ್ವಣಕ್ಕೆ ಎಷ್ಟು ಸಮಯ ಹಿಡಿಯುತ್ತದೆ? ರಾಷ್ಟ್ರಪತಿ ಭವನದಿಂದ ಉತ್ತರಪ್ರದೇಶದವರೆಗೆ ಬಿಜೆಪಿ ಆಡಳಿತದಲ್ಲಿದೆ. ರಾಮ ಮಂದಿರಕ್ಕೆ ಬೆಂಬಲ ನೀಡುವ ಬಹುತೇಕ ಸದಸ್ಯರು ರಾಜ್ಯಸಭೆಯಲ್ಲಿದ್ದಾರೆ.

| ಸಂಜಯ್ ರಾವತ್, ಶಿವಸೇನಾ ಸಂಸದ

ಸಮರಕ್ಕೆ ತೆರಳುತ್ತಿದ್ದೇವೆ

ಧರ್ಮಸಂಸದ್​ನಲ್ಲಿ ವಿಎಚ್​ಪಿ ಕಾರ್ಯಕರ್ತರು ಈ ಹೋರಾಟ ಸಮರವೆಂದೇ ಪ್ರಚಾರ ಮಾಡುತ್ತಿದ್ದಾರೆ. ‘ನಾವು ರಾಮಜನ್ಮಭೂಮಿಗಾಗಿ ಸಮರಕ್ಕೆ ತೆರಳುತ್ತಿದ್ದೇವೆ’ ಎಂದು ವಿಎಚ್​ಪಿ ಮುಖಂಡ ಭೋಲೆಂದ್ರ ಸಿಂಗ್ ಹೇಳಿದ್ದಾರೆ.

ರಾಜಕೀಯೇತರ ಬೆಂಬಲ

ರಾಮಮಂದಿರ ನಿರ್ಮಾಣ ಬಿಜೆಪಿಯ ಪ್ರಣಾಳಿಕೆ ಅಂಶವಾದರೂ ಇದೀಗ ಅಯೋಧ್ಯೆಯಲ್ಲಿ ಆರಂಭಗೊಂಡಿರುವ ಚಳವಳಿ ರಾಜಕೀಯೇತರ ಶಕ್ತಿ ಪ್ರದರ್ಶನಕ್ಕೂ ವೇದಿಕೆ ನಿರ್ವಿುಸಿದೆ. ಬಿಜೆಪಿ, ವಿಹಿಂಪದ ಜತೆಗೆ ಕಾಂಗ್ರೆಸ್​ನ ಕೆಲ ಜನಪ್ರತಿನಿಧಿಗಳು ಸಹ ಬಹಿರಂಗವಾಗಿಯೇ ರಾಮಮಂದಿರ ನಿರ್ವಣಕ್ಕೆ ಬೆಂಬಲ ಘೋಷಿಸಿದ್ದಾರೆ. ಹಾಗೆಯೇ ಮುಸ್ಲಿಂ ಮುಖಂಡರು ಕೂಡ ಮಂದಿರ ನಿರ್ವಣಕ್ಕೆ ನಮ್ಮ ವಿರೋಧವಿಲ್ಲ ಎಂದಿದ್ದಾರೆ.


ಮಂದಿರಕ್ಕೆ ಮೂರು ಮಾರ್ಗ

ಉಡುಪಿ: ‘ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 3 ಮಾರ್ಗಗಳಿವೆ. ಕೋರ್ಟ್, ಮಾತುಕತೆ ಅಥವಾ ಸುಗ್ರೀವಾಜ್ಞೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಪತನವಾದರೂ ಪಕ್ಷಕ್ಕೆ ಲಾಭವೇ ಹೊರತು ನಷ್ಟವಿಲ್ಲ’. ಇದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯ. ಉಡುಪಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಲೋಕಸಭೆ-ರಾಜ್ಯಸಭೆ ಸಂಯುಕ್ತ ಅಧಿವೇಶನ ಕರೆದು ಕಾಯ್ದೆ ರೂಪಿಸಬೇಕು ಈ ಬಗ್ಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲಿ. ಹೇಗಾದರೂ ಸರಿ ವರ್ಷದ ಒಳಗೆ ರಾಮಮಂದಿರ ಆಗಬೇಕು ಎಂದರು. ಸುಪ್ರೀಂಕೋರ್ಟ್​ನಲ್ಲಿ ಸಮಸ್ಯೆ ಬೇಗನೆ ಪರಿಹಾರವಾಗುವಂತೆ ಕಾಣುತ್ತಿಲ್ಲ. ಎಲ್ಲದಕ್ಕೂ ನ್ಯಾಯಾಲಯವನ್ನು ಕಾಯಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಇದರಿಂದ ಸರ್ಕಾರಕ್ಕೆ ಅನುಕೂಲವಾಗಲಿದೆ. ಮಂದಿರ ನಿರ್ವಣದ ಬಗ್ಗೆ ವಾಜಪೇಯಿ ಅವರಲ್ಲಿ ಪ್ರಸ್ತಾಪಿಸಿದಾಗ ಬಹುಮತವಿಲ್ಲ ಎಂದಿದ್ದರು. ಆದರೆ ಮೋದಿ ಸರ್ಕಾರಕ್ಕೆ ಪೂರ್ಣ ಬಹುಮತವಿದೆ. ಚುನಾವಣೆ ಸಂದರ್ಭದಲ್ಲಿ ಚರ್ಚೆ ಮಾಡುತ್ತಿಲ್ಲ. ನಾಲ್ಕೂವರೆ ವರ್ಷ ಕಾದರೂ ಮಂದಿರ ನಿರ್ವಣವಾಗಿಲ್ಲ. ಹೀಗಾಗಿ ಈಗ ಒತ್ತಾಯ ಮಾಡುತ್ತಿದ್ದೇವೆ. ಸಂತರಿಗೆ ಚುನಾವಣೆಯ ಅಗತ್ಯವಿಲ್ಲ ಎಂದರು.

ಕಾಂಗ್ರೆಸ್ ವಿರೋಧಿಸದು: ಚುನಾವಣೆ ಹತ್ತಿರ ಇರುವುದರಿಂದ ಮಂದಿರಕ್ಕೆ ಕಾಂಗ್ರೆಸ್ ವಿರೋಧ ಮಾಡದು. ಅಂಥ ಧೈರ್ಯ ಯಾರಿಗೂ ಇಲ್ಲ. ಕಾಂಗ್ರೆಸ್ ತಟಸ್ಥವಾಗಿ ನೋಡುತ್ತಿದೆ. ಬೆಂಬಲಿಸಲು ಅಥವಾ ವಿರೋಧಿಸಲೂ ಹೋಗುತ್ತಿಲ್ಲ. ವಿರೋಧಿಸಿದರೆ ಪಕ್ಷಕ್ಕೆ ಪ್ರತಿಕೂಲ ಪರಿಣಾಮ ಬೀರಬಹುದು. ಈಗ ಮುಸ್ಲಿಮರೂ ಬೆಂಬಲ ನೀಡುತ್ತಿದ್ದಾರೆ. ಒಟ್ಟಿನಲ್ಲಿ ರಾಮ ಮಂದಿರ ನಿರ್ವಣಕ್ಕೆ ಅನುಕೂಲಕರ ವಾತಾವರಣವಿದೆ ಎಂದು ಪೇಜಾವರ ಶ್ರೀಗಳು ಹೇಳಿದರು.