ಧನ್ವಂತರಿ ಮಹಾಯಾಗ ಸಂಪನ್ನ

ವಿಜಯವಾಣಿ ಸುದ್ದಿಜಾಲ ಸುರತ್ಕಲ್
ಹೋಮಗಳಿಗೆ ಶರೀರ ದೃಢಗೊಳಿಸಿ, ಆಯಸ್ಸು, ಮಳೆ ವೃದ್ಧಿಸುವ ಶಕ್ತಿಯಿದೆ. ಈ ಸಂವತ್ಸರ ಮರಣದ ಸಂವತ್ಸರ. ಶರೀರದ ವಿವಿಧ ನೋವು ಕಡಿಮೆಗೊಳಿಸಿ ಆರೋಗ್ಯ ವೃದ್ಧಿಸುವುದು ಉದ್ದೇಶವಾಗಿರುವ ಶ್ರೀ ಧನ್ವಂತರಿ ಯಾಗ ಮಂಗಳೂರಿನಲ್ಲಿ ನಡೆಸಿರುವುದು ಶ್ಲಾಘನೀಯ ಎಂದು ಕೋಡಿಮಠ ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ದ.ಕ. ಮಹರ್ಷಿ ಡಾ.ಶ್ರೀ ಆನಂದ ಗುರೂಜಿ ಅಭಿಮಾನಿಗಳು, ದ.ಕ. ಶ್ರೀ ಧನ್ವಂತರಿ ಮಹಾಯಾಗ ಸಮಿತಿ ಆಶ್ರಯದಲ್ಲಿ ಮಂಗಳೂರಿನಲ್ಲಿ ಮೂರನೇ ಬಾರಿಯಾಗಿ ಬಂಗ್ರ ಕೂಳೂರು 4ನೇ ಮೈಲಿ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ 2008 ಗಿಡಮೂಲಿಕೆಗಳ ಶ್ರೀ ಧನ್ವಂತರಿ ಮಹಾಯಾಗ ಪೂರ್ಣಾಹುತಿ ಸಂದರ್ಭ ಭಾನುವಾರ ಇಲ್ಲಿನ ಸರಸ್ವತಿ ವೇದಿಕೆಯಲ್ಲಿ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಯಾಗದ ಅದ್ವರ್ಯತನ ವಹಿಸಿರುವ ಬೆಂಗಳೂರು ಹಾರೋಹಳ್ಳಿ ಆನಂದ ಸಿದ್ಧಿಪೀಠಂನ ಬ್ರಹ್ಮಶ್ರೀ ಡಾ.ಆನಂದ ಗುರೂಜಿ ಮಾತನಾಡಿ, ಕರಾವಳಿ ಜನರ ಧಾರ್ಮಿಕ ಜಾಗೃತಿ, ಚಿಂತನೆ, ರಾಜ್ಯಕ್ಕೆ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಯುವಕರಲ್ಲಿ ಪ್ರಜ್ಞೆ ಹೆಚ್ಚಿಸುವ ಕಾರ್ಯ ನಡೆಯಬೇಕು ಎಂದರು.

ಯಾಗ ಸಮಿತಿ ಗೌರವಾಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು. ಮರಕಡ ಶ್ರೀ ಪರಾಶಕ್ತಿ ಕ್ಷೇತ್ರದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ಚರ ಸ್ವಾಮೀಜಿ ಆಶೀರ್ವಚನ ನೀಡಿದರು. ಯಾಗ ಸಮಿತಿ ಅಧ್ಯಕ್ಷ ನಾಟಿವೈದ್ಯ ಡಾ.ಎಂ.ಮುರಳೀಕುಮಾರ್ ಮಾತನಾಡಿದರು. ಕೋಡಿಮಠ ಸ್ವಾಮೀಜಿ ಅವರಿಗೆ ಸನ್ಮಾನ, ಆನಂದ ಸಿದ್ಧಿ ಪೀಠಂ ತಯಾರಿಸಿದ ಮಧುಮೇಹ ನಿವಾರಕ ಔಷಧ ಬಿಡುಗಡೆ ನಡೆಯಿತು. ಯಾಗ ಸಮಿತಿ ಗೌರವಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಪ್ರಸಾದ್ ಕುಮಾರ್, ಕಾರ್ಪೊರೇಟರ್ ಹರೀಶ್ ಶೆಟ್ಟಿ, ಉದ್ಯಮಿ ಸುಭಾಸ್ ಶೆಟ್ಟಿ, ಗೌರವ ಸಲಹೆಗಾರ ಪದ್ಮನಾಭ ಅಮೀನ್, ನರೇಂದ್ರ ಸ್ವಾಮಿ ಬೆಂಗಳೂರು, ಸಮಿತಿ ಗೌರವಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ವಿಶ್ವನಾಥ ಗಟ್ಟಿ ವಗ್ಗ, ಪ್ರಧಾನ ಕಾರ್ಯದರ್ಶಿ ಲೋಕನಾಥ್ ಬಂಗೇರ, ಕಾರ್ಯಾಧ್ಯಕ್ಷ ಎಂ.ಶಶಿಧರ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಲೋಕನಾಥ್ ಬಂಗೇರ ಮೊದಲಾದವವರಿದ್ದರು. ಸಮಿತಿ ಕಾರ್ಯಾಧ್ಯಕ್ಷ ಶಶಿಧರ್ ಹೆಗ್ಡೆ ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ತೋನ್ಸೆ ಪುಷ್ಕಳ ಕುಮಾರ್, ಪ್ರಿಯಾಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯದರ್ಶಿ ಪಿ.ಸುಧಾಕರ್ ಕಾಮತ್ ಪರಿಚಯಿಸಿದರು. ಕಾರ್ಯದರ್ಶಿಗಳಾದ ಸುರೇಖಾ ಹೆಗ್ಡೆ, ಶರ್ಮಿಳಾ ಪ್ರಾರ್ಥಿಸಿದರು ಪೂರ್ಣಾಹುತಿಯಲ್ಲಿ ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ, ಗೌರವಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ದಂಪತಿ ಉಪಸ್ಥಿತರಿದ್ದರು. ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿದರು.

2008 ಗಿಡಮೂಲಿಕೆಗಳ ಶ್ರೀಧನ್ವಂತರಿ ಮಹಾಯಾಗದಿಂದ ಧರ್ಮರಕ್ಷಣೆಗೆ, ಪರಿಸರ ಜಾಗೃತಿಗೆ ಪ್ರೇರಣೆಯಾಗಲಿ. ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆದಿರುವ ಯಾಗದ ಶ್ರೇಯಸ್ಸು ಎಲ್ಲರಿಗೆ ಸಲ್ಲಬೇಕು. ಯಾಗದ ಪೂರ್ಣಾಹುತಿಗೆ ಬಂದಿದ್ದ ಎಲ್ಲ ಭಕ್ತರ ಕಣ್ಣಲ್ಲಿ ನೋವನ್ನು ನಾನು ಕಂಡಿದ್ದೇನೆ. ಇದಕ್ಕೆ ಪರಿಹಾರ ರೂಪಿಸಲು ತಾನು ಸಿದ್ಧ.
– ಡಾ.ಆನಂದ ಗುರೂಜಿ, ಬೆಂಗಳೂರು ಹಾರೋಹಳ್ಳಿ ಆನಂದ ಸಿದ್ಧಿಪೀಠಂ