ಚಿಕಿತ್ಸೆಯೆಂದರೆ ಯುದ್ಧದಂತೆ!?

ಸಾಮಾನ್ಯವಾಗಿ ಜನರಲ್ಲೊಂದು ಗ್ರಹಿಕೆಯಿದೆ. ನಿರಂತರ ಔಷಧ ಸೇವಿಸಿದರೆ ಅದು ಅಭ್ಯಾಸವಾಗಿಬಿಡುತ್ತದೆ. ಮುಂದೆ ಔಷಧ ನಿಲ್ಲಿಸುವುದೇ ಅಸಾಧ್ಯ. ಹಾಗಾಗಿ ಹೆಚ್ಚು ಸಮಯ ಔಷಧವನ್ನು ಸೇವಿಸಬಾರದು. ಅಧಿಕ ರಕ್ತದೊತ್ತಡ, ಮಧುಮೇಹ, ಥೈರಾಯ್್ಡ ಗ್ರಂಥಿಯ ಸಮಸ್ಯೆಗಳು ಬಂತೆಂದರೆ ಅನೇಕ ಜನರು ಚಿಕಿತ್ಸೆಯನ್ನು ಆರಂಭಿಸಲೇ ಹೆದರುವುದಿದೆ. ಯಾಕೆ ಹೀಗಾಗುತ್ತಿದೆ? ವೈದ್ಯರು ವ್ಯಾಧಿಜಾಗೃತಿಯ ಹೆಸರಿನಲ್ಲಿ ಜನರಲ್ಲಿ ಸಾರ್ವತ್ರಿಕವಾಗಿ ಭೀತಿ ಹುಟ್ಟಿಸಿದ್ದಾರೋ ಎಂಬುದು ಚಿಂತನೆ ಮಾಡಬೇಕಾದ ವಿಚಾರ. ಚಿಕಿತ್ಸೆಯೆಂಬುದು ನಿಜಕ್ಕೂ ದೇಹಕ್ಕೆ ಮಾಡುವ ಉಪಚಾರ. ಈ ಉಪಚಾರದ ಬಗ್ಗೆಯೇ ಅಪಚಾರವೆಂಬಂತಹ ಭಾವನೆ ಜನರಲ್ಲಿ ಮೂಡುವಂತಾದುದು ಹೇಗೆ? ಅಗತ್ಯವಾಗಿ ನೀಡಬೇಕಾದ ಪರಿಹಾರ ದಾರಿಯ ಜಾಗೃತಿಯ ಬದಲು ರೋಗ ಲಕ್ಷಣ, ರೋಗದ ಉಪಟಳಗಳ, ವ್ಯಾಧಿಯ ಭೀಕರತೆಗಳ ಬಗ್ಗೆಯೇ ಹೆಚ್ಚಿನ ಮಾಹಿತಿ ನೀಡುತ್ತಾ ಹೋಗುತ್ತಿರುವುದರಿಂದ ಆರೋಗ್ಯದ ವಿಚಾರದಲ್ಲಿ ಆದ ಲಾಭವಾದರೂ ಏನು ಎಂಬುದನ್ನು ಪೂರ್ವಗ್ರಹಪೀಡಿತರಾಗದೆ ಸ್ವಚ್ಛ ಮನಸ್ಸಿನಿಂದ ವ್ಯಾಖ್ಯಾನಿಸಬೇಕಾದ ಕಾಲಘಟ್ಟ ಸನ್ನಿಹಿತವಾಗಿದೆ ಎಂಬುದಂತೂ ಸ್ಪಷ್ಟ.

ಚಿಕಿತ್ಸೆಯೆಂದರೆ ಸಮಸ್ಯೆಗಳ ಸೃಷ್ಟಿಯಲ್ಲ, ಭೀಕರತೆಯ ಚಕ್ರವ್ಯೂಹವೂ ಅಲ್ಲ. ಅದೇ ರೀತಿ ಔಷಧವೆಂದರೆ ವಿಷವಲ್ಲ. ಸವಾಲಿನ ಕಾಯಿಲೆಗಳಲ್ಲಿ ದೀರ್ಘಕಾಲ ಔಷಧ ಸೇವನೆ ಮಾಡುತ್ತಾ ಹೋದರೆ ವಿಷಕನ್ಯೆ ಆಗಿಬಿಡುವುದಿಲ್ಲ. ಕಾಯಿಲೆ ಗುಣವಾಗುವ ತನಕ ಚಿಕಿತ್ಸೆಯೆಂಬುದು ನಿರಂತರವಾಗಿ ಆಗಬೇಕಾದ ಪ್ರಕ್ರಿಯೆ. ಮಧ್ಯದಲ್ಲಿ ಆಗಾಗ ಚಿಕಿತ್ಸೆಯನ್ನು ನಿಲ್ಲಿಸಿ ಈಗ ಹೇಗಿದೆ ಎಂದು ರೋಗಿಯೇ ಸ್ವತಃ ಪರೀಕ್ಷಿಸಿ ನೋಡಿಕೊಳ್ಳುವುದು ವಿಹಿತವಲ್ಲ. ಮೂತ್ರದ ಕಲ್ಲಿನ ಸಮಸ್ಯೆಯಿದೆ ಎಂದಿಟ್ಟುಕೊಳ್ಳಿ. 90 ದಿನ ಔಷಧಿ ನಿರಂತರವಾಗಿ ತೆಗೆದುಕೊಂಡಾಗ ಮೂತ್ರದ ಕಲ್ಲುಗಳು ದೇಹದಿಂದ ಹೊರತಳ್ಳಲ್ಪಟ್ಟರೆ ಕೊನೆಯ 90ನೆಯ ದಿನ ಸೇವಿಸಿದ ಔಷಧ ಮಾತ್ರ ಕೆಲಸ ಮಾಡಿದ್ದೆಂದು ಅರ್ಥವಲ್ಲ. ಮೂರುತಿಂಗಳು ಸತತವಾಗಿ ಸೇವಿಸಿದ ಒಟ್ಟು ಪರಿಣಾಮದಿಂದಾಗಿ ಕಲ್ಲು ಹೊರಹಾಕಲ್ಪಡುತ್ತದೆ. ಮಧ್ಯದಲ್ಲಿ ಆಗಾಗ ಔಷಧ ನಿಲ್ಲಿಸಿದ್ದರೆ 4-5 ತಿಂಗಳುಗಳಾದರೂ ಈ ಫಲಿತಾಂಶ ಸಿಗುವುದಿಲ್ಲ!

ದಶಕದ ಹಿಂದೆ ಅಮೆರಿಕವು ಇರಾಕ್​ನ ಮೇಲೆ ಯುದ್ಧ ಹೇರಿದ್ದು ನೆನಪಿನಲ್ಲಿರಬಹುದು. ಇರಾಕ್ ಸೋಲಿನ ಸುಳಿಗೆ ಜಾರುತ್ತಿದ್ದಂತೆ ಅಮೆರಿಕ ಸುಮ್ಮನಾಗಲಿಲ್ಲ. ನಿರಂತರ ಕ್ಷಿಪಣಿ ದಾಳಿಯ ಮೂಲಕ ಬಾಂಬಿನ ಸುರಿಮಳೆಗೈದಿತು. ಇರಾಕ್ ಸಂಪೂರ್ಣವಾಗಿ ಸೋತು ಸುಣ್ಣವಾಗಿದೆ ಎಂಬುದು ದೃಢವಾದ ಬಳಿಕವೇ ಅಮೆರಿಕ ಸದ್ದು ನಿಲ್ಲಿಸಿದ್ದು. ಚಿಕಿತ್ಸೆಯೂ ಹೀಗಿರಬೇಕು. ಶರೀರವು ಔಷಧದೊಂದಿಗೆ ಸೇರಿಕೊಂಡು ವ್ಯಾಧಿಯೊಡನೆ ಸತತವಾಗಿ ಹೋರಾಡಬೇಕು. ಮಧ್ಯದಲ್ಲಿ ಚಿಕಿತ್ಸೆಯನ್ನು ಅಲ್ಪಕಾಲ ನಿಲ್ಲಿಸಿದರೂ ವ್ಯಾಧಿ ಮತ್ತೆ ಮೇಲೇಳುತ್ತದೆ! ದೇಹ ಹಿಮ್ಮೆಟ್ಟುತ್ತದೆ. ಕಾಯಿಲೆಯನ್ನು ಮೂಲದಿಂದಲೇ ಕಿತ್ತೊಗೆದದ್ದು ಖಾತ್ರಿಯಾಗುವ ತನಕ ಚಿಕಿತ್ಸೆ ಪ್ರಬಲವಾಗಿ, ಉಗ್ರವಾಗಿ ಮುಂದುವರಿಯಲೇಬೇಕು. ವಾಹನ ಹಾಳಾದರೆ ಅಲ್ಲೇ ನಿಂತಿರುತ್ತದೆ, ಹಿಂದಕ್ಕೆ ಬರುವುದಿಲ್ಲ. ಆದರೆ ಚಿಕಿತ್ಸೆ ಯುದ್ಧದಂತೆ! ಒಮ್ಮೆ ನಿಂತಿತೆಂದರೆ ಎದುರಾಳಿಯಾದ ವ್ಯಾಧಿ ಎರಗಲು ಮುನ್ನುಗ್ಗಿ ಬರುತ್ತದೆ. ಜ್ವರ ಚಿಕಿತ್ಸೆಯ ಎರಡನೆಯ ದಿನ ಔಷಧ ನಿಲ್ಲಿಸಿ ನೋಡಿದರೆ ಇದರ ಅನುಭವವಾಗುತ್ತದೆ. ಚಿಕಿತ್ಸೆ ಸದಾ ಆಕ್ರಮಣಕಾರಿಯಾಗಿರಲಿ. ಚಿಕಿತ್ಸೆಯಲ್ಲಿ ಜಯವೆಂದರೆ ಅದು ಯುದ್ಧದಲ್ಲಿನ ವಿಜಯ.