ತಾಪಹರೀ, ಪೂರಿಗಳ ತಿಳಿಯಿರಿ…

| ಡಾ. ಗಿರಿಧರ ಕಜೆ ಎಂ.ಡಿ.(ಆಯು)

ಜಗದಾದ್ಯಂತ ವಿವಿಧ ಬಗೆಯ ಆಹಾರವ್ಯಂಜನಗಳ ತಯಾರಿಗೆ ಹಿಟ್ಟುಗಳ ಬಳಕೆ ಮಾಡಲಾಗುತ್ತದೆ. ಇವು ಹಸಿದ ಹೊಟ್ಟೆಯನ್ನಷ್ಟೇ ತುಂಬುವುದಲ್ಲ, ತಮ್ಮದೇ ಆದ ಗುಣಧರ್ಮವನ್ನು ಹೊಂದಿವೆ.

ಇಂದಿನ ಜಗತ್ತು ಹೇಗಿದೆ ಎಂದರೆ ಆಹಾರಪದಾರ್ಥಗಳ ಮೂಲಗುಣ ಗೊತ್ತಿಲ್ಲ. ಅದರಿಂದಾಗುವ ಒಂದೆರಡು ತೊಂದರೆಗಳು ಮಾತ್ರ ಗೊತ್ತಿವೆ! ಉದಾಹರಣೆಗೆ ಗೋಧಿಯ ಗುಣಗಳೇನೂ ತಿಳಿದಿಲ್ಲ. ಅದರಲ್ಲಿರುವ ಗ್ಲುಟೇನ್​ನ ಅಲರ್ಜಿ ನಮಗಿದೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ಪ್ರಾರಂಭಿಸಿದ್ದೇವೆ. ನಾವು ತಪ್ಪಿಬಿದ್ದದ್ದು ಇಲ್ಲೇ. ಆಹಾರ ಧಾನ್ಯದ ಘಟಕ ಅಂಶಗಳನ್ನು ಮಾತ್ರವೇ ಅರಿತಿರುವುದರಿಂದ ಆಗಿರುವ ಎಡವಟ್ಟಿದೇ. ಆಯುರ್ವೆದದ ಪ್ರಕಾರ ಗೋಧಿ, ಗೋಧಿಯ ಹಿಟ್ಟು ಹಾಗೂ ಗೋಧಿಯ ಹಿಟ್ಟಿನಿಂದ ಮಾಡಲಾಗಿರುವ ಬಗೆಬಗೆಯ ವ್ಯಂಜನಗಳ ಗುಣದಲ್ಲಿ ವ್ಯತ್ಯಾಸವಿದೆ! ಹೀಗಾಗಿ ಇವುಗಳನ್ನು ಅರಿಯುವುದರಲ್ಲಿ ಸ್ವಾಸ್ಥ್ಯಕ್ಷಣೆಯ ಜವಾಬ್ದಾರಿಯಿದೆ.

ಗೋಧಿರೊಟ್ಟಿ, ಬಾರ್ಲಿರೊಟ್ಟಿ, ಉದ್ದಿನ ರೊಟ್ಟಿ, ಕಡಲೆರೊಟ್ಟಿ, ತಾಪಹರೀ ಹಾಗೂ ಪೂರಿಗಳನ್ನೆಲ್ಲ ಮಾಡುವ ಬಗೆ ಹೇಗೆಂಬುದನ್ನು ವಿವರಿಸಿದ ಆಯುರ್ವೆದ ಅವುಗಳ ಗುಣಧರ್ಮಗಳನ್ನು ವಿವರಿಸಿದ್ದು ಪ್ರಶಂಸಾರ್ಹವಾಗಿದೆ. ಬಾರ್ಲಿಯ ಹಿಟ್ಟಿನಿಂದ ಮಾಡಿದ ರೊಟ್ಟಿಯು ಬಾಯಿರುಚಿ, ಮಲ, ವೀರ್ಯದ ಪ್ರಮಾಣ, ವಾತ, ಬಲಗಳನ್ನು ಹೆಚ್ಚಿಸುತ್ತದೆ. ಸುಲಭದಲ್ಲಿ ಜೀರ್ಣಗೊಂಡು ಕಫದಿಂದ ಉಂಟಾದ ರೋಗಗಳನ್ನು ಗುಣಪಡಿಸಲು ಸಹಕಾರಿಯಾಗಿದೆ. ಉದ್ದಿನ ಹಿಟ್ಟಿನ ರೊಟ್ಟಿಗೆ ಬಲಭದ್ರಿಕಾ ಎಂಬ ಹೆಸರು. ಅತಿಯಾದ ಹಸಿವು ಇರುವವರಿಗೆ ಸೂಕ್ತವಾಗಿದ್ದು ಬಲಪ್ರದವಾಗಿದೆ. ವಾತ ಹೆಚ್ಚಿಸುವುದರಿಂದ ಶರೀರದಲ್ಲಿ ಒಣತ್ವ ಉಂಟಾಗುತ್ತದೆ. ಉದ್ದನ್ನು ನೀರಲ್ಲಿ ಸ್ವಲ್ಪಹೊತ್ತು ನೆನೆಸಿಟ್ಟು ಸಿಪ್ಪೆ ತೆಗೆದು ಬಿಸಿಲಲ್ಲಿ ಒಣಗಿಸಿ ಹಿಟ್ಟು ಮಾಡಿದರೆ ಅದು ಧೂಮಸೀ.

ಈ ಧೂಮಸೀಯಿಂದ ಮಾಡುವ ಝುಝುರೀ ಎಂಬ ರೊಟ್ಟಿ ಕಫ, ಪಿತ್ತ ಕಡಿಮೆಮಾಡಿ ವಾತವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುತ್ತದೆ. ಕಡಲೆಹಿಟ್ಟಿನ ರೊಟ್ಟಿ ದೇಹದಲ್ಲಿ ಒಣತ್ವ ಉಂಟುಮಾಡಿ ಕಫ, ಪಿತ್ತ, ರಕ್ತದ ಅಶುದ್ಧಿಗಳನ್ನು ನಿವಾರಿಸುತ್ತದೆ. ಸುಲಭವಾಗಿ ಜೀರ್ಣಗೊಳ್ಳದೆ ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ. ಕಣ್ಣುಗಳಿಗೆ ಹಿತಕರವಲ್ಲ.

ನೀರಿನೊಂದಿಗೆ ಕಲಸಿದ ಉದ್ದಿನ ಹಿಟ್ಟಿಗೆ ಉಪ್ಪು, ಶುಂಠಿ, ಹಿಂಗು ಹಾಕಿ ಗೋಧಿಹಿಟ್ಟಿನ ಮೇಲ್ಕವಚದ ಪದರದ ಒಳಗೆ ತುಂಬಬೇಕು. ಇದನ್ನು ಎಣ್ಣೆಯಲ್ಲಿ ಹುರಿಯಬೇಕು. ಇದುವೇ ಅಂದಿನ ಪೂರಿಕಾ, ಇಂದಿನ ಪೂರಿ! ಬಾಯಿರುಚಿ, ಶಕ್ತಿ, ಪಿತ್ತ, ರಕ್ತ ತೊಂದರೆಗಳನ್ನು ವರ್ಧಿಸುತ್ತದೆ. ಉಷ್ಣಗುಣವಿದ್ದು ನೇತ್ರಗಳಿಗೆ ಹಿತವಲ್ಲ. ಶರೀರದಲ್ಲಿ ತೈಲಾಂಶ ಹೆಚ್ಚಿಸುವುದರಿಂದ ವಾತವಿನಾಶಕ. ಒಂದುವೇಳೆ ಪೂರಿಯನ್ನು ಎಣ್ಣೆಯ ಬದಲು ತುಪ್ಪದಲ್ಲಿ ಹುರಿದರೆ ಕಣ್ಣುಗಳಿಗೆ ಅಪ್ಯಾಯಮಾನವಾಗಿದ್ದು ರಕ್ತ, ಪಿತ್ತದ ರೋಗಗಳನ್ನೂ ಕಡಿಮೆ ಮಾಡುತ್ತದೆ! ಉದ್ದಿನ ಹಿಟ್ಟು, ಅಕ್ಕಿಹಿಟ್ಟಿನ ಮಿಶ್ರಣ ಮಾಡಿ ಚಿಕ್ಕ ಉಂಡೆಗಳನ್ನು ತಯಾರಿಸಿ ತುಪ್ಪ ಹಾಗೂ ಸ್ವಲ್ಪ ಅರಿಶಿಣದಲ್ಲಿ ಅಲ್ಪಕಾಲ ಹುರಿಯಬೇಕು. ಆ ಬಳಿಕ ನೀರು, ಉಪ್ಪು, ಶುಂಠಿ, ಹಿಂಗುಗಳನ್ನು ಸೇರಿಸಿ ಬೇಯಿಸಬೇಕು. ಈ ತಿಂಡಿಗೆ ತಾಪಹರೀ ಎಂಬ ಹೆಸರು. ನಿಧಾನವಾಗಿ ಜೀರ್ಣಗೊಂಡು ಶಕ್ತಿ, ಪುರುಷತ್ವ, ಕಫ, ದೇಹತೂಕ, ಬಾಯಿರುಚಿ, ಶರೀರಪುಷ್ಟಿಗಳನ್ನು ಹೆಚ್ಚಿಸುವ ಗುಣ ಹೊಂದಿದ್ದು ಪಿತ್ತವನ್ನು ಕಡಿಮೆ ಮಾಡುತ್ತದೆ. ಹಳೆರುಚಿಗಳನ್ನು ಮಾಡಿ ನೋಡಿ.

ಪಂಚಸೂತ್ರಗಳು
# ಶತಾವರಿ ಬೇರು: ಮೂತ್ರಪಿಂಡಗಳಿಗೆ ಶಕ್ತಿದಾಯಕ.
# ಎಳನೀರು: ರಕ್ತಭೇದಿಯಿದ್ದಾಗ ಹಿತಕರ.
# ಮುಳ್ಳುಸೌತೆ: ಮೂತ್ರ ಹೆಚ್ಚಿಸುತ್ತದೆ.
# ಏಲಕ್ಕಿ: ದೇಹವನ್ನು ತಂಪಾಗಿಡುತ್ತದೆ.
# ಜೀರಿಗೆ: ಕಣ್ಣುನೋವು ಶಮನಕಾರಿ.

ಕೊನೇ ಹನಿ
ಕಸ್ತೂರಿ ಅರಿಶಿಣವನ್ನು ನೀರಿನಲ್ಲಿ ತಳೆದು ಲೇಪಿಸಿದರೆ ಗಾಯವು ಶೀಘ್ರ ಗುಣಮುಖ.