ಹಶಿಮೋಟೊ ಥೈರಾಯ್ಡಿಟಿಸ್​ನಿಂದ ಮುಕ್ತಿ ಹೇಗೆ?

| ಡಾ. ವೆಂಕಟ್ರಮಣ ಹೆಗಡೆ

ಹಶಿಮೋಟೊ ಥೈರಾಯ್ಡಿಟಿಸ್ ಒಂದು ಆಟೋಇಮ್ಯೂನ್ ಕಾಯಿಲೆ. ಇಲ್ಲಿ ನಮ್ಮ ಇಮ್ಯೂನ್ ವ್ಯವಸ್ಥೆಯು (ಪ್ರತಿರಕ್ಷಣಾ ವ್ಯವಸ್ಥೆಯು) ಥೈರಾಯ್ಡ್ ಮೇಲೆ ದಾಳಿ ಮಾಡಿರುತ್ತದೆ. ಥೈರಾಯ್ಡ್​ ಗ್ಲಾಂಡ್ ಕುತ್ತಿಗೆಯ ಮಧ್ಯಭಾಗ ಗಂಟಲಿನ ಕೆಳಭಾಗದಲ್ಲಿರುವ ಗ್ರಂಥಿ. ಇದು ಅಂತಃಸ್ರಾವಕ (ಎಂಡೋಕ್ರೈನ್) ವ್ಯವಸ್ಥೆಯ ಮುಖ್ಯ ಭಾಗ. ದೇಹದ ಅನೇಕ ಕಾರ್ಯಗಳಿಗೆ ಬೇಕಾದ ಹಾಮೋನ್ ಸ್ರವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಹಷಿಮೊಟೋ ಥೈರಾಯ್ಡಿಟಿಸ್ ಹೆಚ್ಚಾಗಿ 40 ವರ್ಷ ದಾಟಿದ ಮಹಿಳೆಯರಲ್ಲಿ ಕಂಡುಬರುತ್ತದೆ. ಇತ್ತೀಚೆಗೆ ಪುರುಷರಲ್ಲಿ ಮತ್ತು ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಹಶಿಮೋಟೊ ಥೈರಾಯ್ಡಿಟಿಸ್ ನಿಧಾನವಾಗಿ ತನ್ನ ಗುರುತುಗಳನ್ನು ತೋರಿಸುತ್ತದೆ. ಮೊದಮೊದಲು ಗಂಟಲಿನ ಭಾಗಗಳಲ್ಲಿ ಬಾವು ಕಂಡುಬರುವುದು. ವರ್ಷಗಳು ಕಳೆದಂತೆ ಕ್ರೋನಿಕ್ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ. ರಕ್ತದಲ್ಲಿ ಹಾಮೋನ್​ಗಳ ಸ್ರವಿಕೆ ಕಡಿಮೆಯಾಗುತ್ತದೆ. ಸುಸ್ತು, ಸೋಮಾರಿತನ, ಪದೇಪದೆ ಶೀತ, ವಾತಾವರಣದಲ್ಲಿ ಸ್ವಲ್ಪ ಚಳಿಯಿದ್ದರೂ ದೇಹಕ್ಕೆ ಹೆಚ್ಚು ಚಳಿಯಾದಂತೆ ಭಾಸವಾಗುವುದು, ಮಲಬದ್ಧತೆ, ತೆಳು-ಒಣ ಚರ್ಮ, ಚರ್ಮದ ಬಣ್ಣದಲ್ಲಿ ಕುಂದುವಿಕೆ, ಊದಿಕೊಂಡ ಮುಖ, ಉಗುರು ತನ್ನಷ್ಟಕ್ಕೇ ಪದೇಪದೆ ಮುರಿದುಹೋಗುವುದು, ಕೂದಲುದುರುವಿಕೆ, ನಾಲಿಗೆ ಊದಿಕೊಳ್ಳುವುದು, ಒಂದೇ ಸಮನೆ ತೂಕ ಹೆಚ್ಚಳ, ಮಾಂಸಖಂಡಗಳಲ್ಲಿ ನೋವು, ಮಹಿಳೆಯರಲ್ಲಾದರೆ ಮುಟ್ಟಿನ ಸಮಯದಲ್ಲಿ ಅತ್ಯಧಿಕ ರಕ್ತಸ್ರಾವ, ಖಿನ್ನತೆ ಇತ್ಯಾದಿ ಲಕ್ಷಣಗಳು ಕಂಡುಬರಬಹುದು. ಆದ್ದರಿಂದ ಇಂತಹ ಕೆಲವು ಲಕ್ಷಣಗಳು ಒಮ್ಮೆಲೇ ಕಾಣಿಸಿಕೊಳ್ಳುತ್ತಿರುವಾಗ ವೈದ್ಯರನ್ನು ಭೇಟಿಯಾಗುವುದು ಮುಖ್ಯ.

ಗಟ್ ಬ್ಯಾಕ್ಟೀರಿಯಾಗಳನ್ನು ಸರಿಪಡಿಸುವುದು ಈ ಕಾಯಿಲೆಗಿರುವ ಮುಖ್ಯ ಪರಿಹಾರ. ಸಮಸ್ಯೆಗೆ ತಕ್ಕುದಾದ ಆಹಾರಪದ್ಧತಿಯನ್ನು ರೂಢಿಸಿಕೊಳ್ಳುವುದು ಅಗತ್ಯ. ಕರಿದ ಆಹಾರ, ಫಾಸ್ಟ್ ಫುಡ್, ಬೇಕರಿಯ ಆಹಾರಗಳನ್ನು ತ್ಯಜಿಸಬೇಕು. ಇಲ್ಲದಿದ್ದಲ್ಲಿ ಇವು ಕರುಳಿನಲ್ಲಿ ಇನ್ನೂ ಹೆಚ್ಚಿನ ಕೆಟ್ಟ ಬ್ಯಾಕ್ಟೀರಿಯಾಗಳ ಉತ್ಪಾದನೆಗೆ ಕಾರಣವಾಗಿ ಸಮಸ್ಯೆಯು ಉಲ್ಬಣವಾಗಬಹುದು. ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಬೇಕು. ಪ್ರೀ ಪ್ರೋ ಬಯಾಟಿಕ್ ಆಹಾರಗಳನ್ನು ಸೇವಿಸಬೇಕು. ಸೋರ್​ಕ್ರೋಟ್ ಸೇವನೆಯು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ವಿಧಾನ. ಎಪಲ್ ಸಿಡರ್ ವಿನೆಗರ್​ನ್ನು ದಿನನಿತ್ಯ ಎರಡು ಬಾರಿ ಎರಡು ಚಮಚದಂತೆ ನೀರಿನೊಂದಿಗೆ ಸೇರಿಸಿ ತೆಗೆದುಕೊಳ್ಳಬೇಕು. ರಾತ್ರಿ ಮಲಗುವ ಮೊದಲು ಕಾಲು ಕಪ್ ಮೃದುವಾದ ಅನ್ನ, ಅರ್ಧ ಚಮಚ ಮಜ್ಜಿಗೆ ಹಾಗೂ ಸ್ವಲ್ಪ ನೀರು ಸೇರಿಸಿ ಇಡಬೇಕು. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು. ಇದು ಒಳ್ಳೆಯ ಗಟ್ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುತ್ತದೆ. ಮಜ್ಜಿಗೆ ಹಾಗೂ ಹಸಿ ಶುಂಠಿ ಸೇರಿಸಿ ದಿನಕ್ಕೆ 3-4 ಬಾರಿ ಸೇವಿಸಬೇಕು. ಆಂಟಿ ಥೈರೋಗ್ಲೋಬುಲಿನ್ ಆಂಟಿ ಬಾಡಿ ರಕ್ತಪರೀಕ್ಷೆ ಮಾಡಿಸಿದಾಗ ಸಮಸ್ಯೆ ಇರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರಕೃತಿಚಿಕಿತ್ಸೆಯಲ್ಲಿ ನೀಡುವ ಥೈರಾಯ್್ಡ ಪ್ಯಾಕ್, ಮಜ್ಜಿಗೆ ಎನಿಮಾ, ಪ್ರೀ ಪ್ರೋ ಬಯಾಟಿಕ್ ಆಹಾರ ಮಾತ್ರ ತೆಗೆದುಕೊಂಡು ಮಾಡುವ ಉಪವಾಸ, ಪ್ರಾಣಾಯಾಮ, ಮಣ್ಣಿನ ಚಿಕಿತ್ಸೆ ಇವು ಈ ಸಮಸ್ಯೆಯನ್ನು ನಿರ್ವಹಿಸುವ ಉಪಾಯಗಳು.

ಕೊನೇ ಹನಿ

ಮಲಗುವ ಮುನ್ನ ಒಂದು ಲೋಟ ಬಿಸಿನೀರಿಗೆ ಒಂದು ಚಮಚ ತುಪ್ಪ ಸೇರಿಸಿ ಕುಡಿದರೆ ಮಲಬದ್ಧತೆ ನಿವಾರಣೆ.