ತಿಳಿಗಂಜಿಯ ಮಂಡನೆ!

| ಡಾ. ಗಿರಿಧರ ಕಜೆ ಎಂ.ಡಿ.(ಆಯು)

ಆಯುರ್ವೆದದಲ್ಲಿ ಬೃಹತ್​ತ್ರಯೀ ಎಂದು ಪ್ರಖ್ಯಾತವಾದ ಮೂರು ಹಿರಿದಾದ ಗ್ರಂಥಗಳ ಬಳಿಕ ಬೆಳಕು ಕಂಡ ಭಾವಪ್ರಕಾಶ, ಶಾರಂಗಧರ ಸಂಹಿತೆ, ಮಾಧವ ನಿದಾನಗಳೆಂಬ ಆಕಾರದಲ್ಲಿ ಅಲ್ಪ ಕಿರಿದಾದರೂ ಮಹತ್ವಪೂರ್ಣವಾದ ಗ್ರಂಥಗಳಿಗೆ ಲಘುತ್ರಯೀ ಎಂದು ಹೆಸರು. ಭಾವಪ್ರಕಾಶದಲ್ಲಿರುವ ಕೃತಾನ್ನವರ್ಗಕ್ಕೆ ಹೊಂದಿಕೊಂಡಂತೆ ಶಾರಂಗಧರ ಸಂಹಿತೆಯ ಕ್ವಾಥಕಲ್ಪನಾವೆಂಬ ವಿಭಾಗದಲ್ಲಿ ಕೃತಾನ್ನಗಳ ವರ್ಣನೆಯಿದೆ. ಗಂಜಿತಯಾರಿ, ವಿಭಿನ್ನ ತಿಳಿಗಂಜಿಗಳ ಬಣ್ಣನೆಯು ಹಸನಾದ ಬದುಕು ಅಪೇಕ್ಷಿತರಿಗೆ ಹಾಗೂ ಬೇಗನೆ ರೋಗಮುಕ್ತಿ ಬಯಸುವ ವ್ಯಾಧಿಪೀಡಿತರಿಗೆ ಹೇಳಿಮಾಡಿಸಿದಂತಿದೆ. ಗ್ರುಯೆಲ್ ಎಂದರೆ ಗಂಜಿ, ಅಂಬಲಿ, ಶಕ್ತಿಗುಂದಿಸು ಎಂಬೆಲ್ಲ ಅರ್ಥಗಳಿದ್ದರೂ ಈ ಗಂಜಿಗಳೆಲ್ಲಾ ಶಕ್ತಿಗುಂದಿಸುವುದಿಲ್ಲ, ಬದಲಾಗಿ ಶಕ್ತಿವರ್ಧಕಗಳಾಗಿವೆ!

ಅನ್ನ ಮಾಡುವ ಭಿನ್ನ ವಿಧಾನವನ್ನೂ ಇಲ್ಲಿ ಹೇಳಲಾಗಿದೆ. ಅಕ್ಕಿಗೆ 14 ಪಟ್ಟು ನೀರು ಹಾಕಿ ಮೃದು ಅನ್ನವಾಗುವ ತನಕ ಬೇಯಿಸಬೇಕು. ತಿಳಿ ಗಂಜಿ ತೆಗೆದು ಅನ್ನ ಉಣ್ಣಬೇಕು. ಇದಕ್ಕೆ ಮಧುರ ರಸವಿದ್ದು ಬೇಗನೆ ಜೀರ್ಣವಾಗುವ ಗುಣ ಹೊಂದಿದೆ. ಹೀಗೆ ಅನ್ನ ತಯಾರಿಸಿದಾಗ ಅನ್ನ ಬಿಟ್ಟು ಉಳಿಯುವ ತಿಳಿಗಂಜಿಗೆ ಶುದ್ಧಮಂಡ ಎಂಬ ಹೆಸರು. ಈ ತಿಳಿಗಂಜಿಗೆ ಒಣಶುಂಠಿ, ಸೈಂಧವ ಉಪ್ಪು ಸೇರಿಸಿ ಸೇವಿಸಿದರೆ ಹಸಿವು ಹೆಚ್ಚಾಗುವುದರ ಜೊತೆಗೆ ಜೀರ್ಣಶಕ್ತಿಯೂ ಉತ್ತಮವಾಗುತ್ತದೆ. ಇದೇ ವಿಧಾನದಲ್ಲಿ ಅನ್ನ ಮಾಡುವಾಗ ಅಕ್ಕಿಗೆ ಕೊತ್ತಂಬರಿ, ಒಣಶುಂಠಿ, ಹಿಪ್ಪಲಿ, ಕಾಳುಮೆಣಸು, ಸೈಂಧವ ಉಪ್ಪು, ಹೆಸರುಕಾಳು, ನೀರು ಸೇರಿಸಿ ತಿಳಿಗಂಜಿ ತಯಾರಿಸಬಹುದು. ಕೊನೆಯಲ್ಲಿ ಎಣ್ಣೆಯಲ್ಲಿ ಹುರಿದ ಹಿಂಗಿನ ಒಗ್ಗರಣೆ ಹಾಕಿದರೆ ಎಂಟು ದ್ರವ್ಯಗಳ ಸಾರದಿಂದ ಕೂಡಿದ ತಿಳಿಗಂಜಿಗೆ ಅಷ್ಟಗುಣ ಮಂಡ ಎಂದು ಹೆಸರು. ಹಸಿವನ್ನೂ ಹೆಚ್ಚಿಸಿ ಪ್ರಾಣಕ್ಕೆ ತ್ರಾಣ ನೀಡಿ ರಕ್ತವರ್ಧಕವಾಗಿ ಕಾರ್ಯನಿರ್ವಹಿಸುವುದು. ಜ್ವರವಿದ್ದಾಗ ಹಿತಕರವಾಗಿದ್ದು ವಾತ, ಪಿತ್ತ, ಕಫ ದೋಷಗಳನ್ನು ಹತೋಟಿಯಲ್ಲಿಡುವುದು. ಮೂತ್ರಾಶಯದ ಕಾರ್ಯಕ್ಷಮತೆಯನ್ನೂ ವರ್ಧಿಸುವುದು.

ಬಾರ್ಲಿಗೆ ಸಂಸ್ಕೃತದಲ್ಲಿ ಯವ ಎನ್ನಲಾಗುತ್ತದೆ. ಕುಟ್ಟಿ ಪುಡಿಮಾಡಿದ ಅಥವಾ ಹುರಿದ ಬಾರ್ಲಿಗೆ 14 ಪಟ್ಟು ನೀರು ಹಾಕಿ ಕುದಿಸಿ ಮಾಡಿದ ಬಾರ್ಲಿಯ ಅಂಬಲಿಗೆ ವಾಟ್ಯಮಂಡವೆಂಬ ಹೆಸರಿದೆ. ಇದು ಕಫ, ಪಿತ್ತವನ್ನು ಕಡಿಮೆ ಮಾಡುವುದಲ್ಲದೆ ರಕ್ತಸ್ರಾವ ನಿಯಂತ್ರಣಕ್ಕೆ ಹಿತಕರ. ಗಂಟಲಿನ ತೊಂದರೆ ನಿವಾರಿಸುತ್ತದೆ. ಭತ್ತವನ್ನು ನೀರಿನಲ್ಲಿ ನೆನೆಸಿಟ್ಟು ಹೊರತೆಗೆದು ಹುರಿದಾಗ ಹೊಟ್ಟಿನ ಒಳಗಿರುವ ಅಕ್ಕಿಯು ಉಬ್ಬಿ ಹೂವಿನಂತೆ ಅರಳುತ್ತದೆ. ಇದರಿಂದ ಹೊಟ್ಟನ್ನು ಪ್ರತ್ಯೇಕಿಸಿದರೆ ಸಿಗುವ ಆಹಾರದ್ರವ್ಯಕ್ಕೆ ಅರಳು ಎನ್ನುತ್ತೇವೆ. ಆಯುರ್ವೆದ ಇದನ್ನು ಲಾಜ ಎಂದು ಗುರುತಿಸುತ್ತದೆ. ಇದನ್ನು ಬೇಯಿಸಿದಾಗ ದೊರೆಯುವ ತಿಳಿಗಂಜಿಯೇ ಲಾಜಮಂಡ. ಕಫ ಹಾಗೂ ಪಿತ್ತವನ್ನು ಕಡಿಮೆಗೊಳಿಸುತ್ತದೆ. ಜ್ವರವನ್ನೂ ಶಮನಗೊಳಿಸುತ್ತದೆ. ಬಾಯಾರಿಕೆಯನ್ನು ಶಾಂತಗೊಳಿಸಲು ಪ್ರಶಸ್ತ. ಕರುಳುಗಳು ಆಹಾರದ್ರವ್ಯಗಳ ಸಾರಾಂಶಗಳನ್ನು ಸಮರ್ಪಕವಾಗಿ ಒಳಹೀರಿಕೊಳ್ಳಲೂ ನೆರವಾಗುತ್ತದೆ. ಭತ್ತದ ಅರಳು ದೇಹತೂಕ ಇಳಿಸಲು ಹಾಗೂ ಮಧುಮೇಹದಿಂದ ಬಳಲುತ್ತಿರುವವರಿಗೆ ಅತ್ಯುಪಕಾರಿ. ಅಂಬಲಿಯ ಹಂಬಲಿಗಳಾಗಿ ತಿಳಿಗಂಜಿಯ ತಿಳಿಯಿರಿ.

ಪಂಚಸೂತ್ರಗಳು

  • ಶತಾವರಿ ಬೇರು: ನರರೋಗ ಚಿಕಿತ್ಸೆಗೆ ಸಹಕಾರಿ.
  • ದಾರೆಹುಳಿ/ಕರಂಬೋಲ: ಮೈನವೆ ನಿವಾರಕ.
  • ಒಂದೆಲಗ ಸೊಪ್ಪು: ಹೃದಯಕ್ಕೆ ಹಿತಕರ.
  • ಹಲಸಿನಬೀಜ: ಮಲಬದ್ಧತೆ ಉಂಟುಮಾಡುತ್ತದೆ.
  • ಸಾಸಿವೆ: ವಿಷಸೇವನೆ ಆದಾಗ ವಾಂತಿ ಮಾಡಿಸಲು ಉಪಯುಕ್ತ.

ಕೊನೇ ಹನಿ

ವಾಟೆಹುಳಿ/ಉಂಡೆಹುಳಿ ಮರದ ತೊಗಟೆಯ ಕಷಾಯದಿಂದ ತೊಳೆದರೆ ಮೊಡವೆ ಬೇಗನೆ ಶಮನ.