ಕೊಬ್ಬಿನಿಂದ ಆರೋಗ್ಯ

| ಡಾ. ವೆಂಕಟ್ರಮಣ ಹೆಗಡೆ

ಕೊಬ್ಬಿನಲ್ಲಿ ಎರಡು ವಿಧ. ಒಳ್ಳೆಯ ಕೊಬ್ಬು ಹಾಗೂ ಕೆಟ್ಟ ಕೊಬ್ಬು. ಒಳ್ಳೆಯ ಕೊಬ್ಬು ಒಳ್ಳೆಯ ಕೊಬ್ಬಿರುವ ಆಹಾರಪದಾರ್ಥಗಳ ಸೇವನೆಯಿಂದ ಉತ್ಪಾದಿಸಲ್ಪಡುತ್ತದೆ. ಇದು ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಕರಗಿಸಲು ಬಳಕೆಯಾಗುತ್ತದೆ. ದೇಹಕ್ಕೆ ಅಪಾಯ ಮಾಡುವ ಕೊಬ್ಬಿನಂಶವನ್ನು ಕೆಟ್ಟ ಕೊಬ್ಬು ಎನ್ನಲಾಗುತ್ತದೆ.

ಭಾರತೀಯರಿಗೆ ಕಡಿಮೆ ಕೊಲೆಸ್ಟರಾಲ್ ಇದೆ. ಆದರೂ ನಮ್ಮ ಜನರಿಗೆ ಹೃದಯಸಂಬಂಧಿತ ಸಮಸ್ಯೆಗಳು, ಹೃದಯಾಘಾತ ಹೆಚ್ಚು. ಕಾರಣ, ಟ್ರೈಗ್ಲಿಸರೈಡ್ ಎಂಬ ಕೆಟ್ಟ ಕೊಬ್ಬೇ ಹೊರತು ಕೊಲೆಸ್ಟರಾಲ್ ಅಲ್ಲ. ದೇಹದಲ್ಲಿ ಕೊಲೆಸ್ಟರಾಲ್ ಅಂಶ ಸರಿಯಾಗಿದೆ. ಅರ್ಥಾತ್ ನಮ್ಮಲ್ಲಿ ಒಳ್ಳೆಯ ಕೊಲೆಸ್ಟರಾಲ್ ಕಡಿಮೆ ಇದೆ (ಕೆಟ್ಟ ಕೊಲೆಸ್ಟರಾಲ್ ಸಮಪ್ರಮಾಣದಲ್ಲಿದ್ದರೂ ಒಳ್ಳೆಯ ಕೊಲೆಸ್ಟರಾಲ್ ಕಡಿಮೆ ಇರುವುದು ಹೃದಯದ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದೆ). ಒಳ್ಳೆಯ ಕೊಬ್ಬಿನಿಂದ ಕೂಡಿದ ಆಹಾರಪದ್ಧತಿಯು ಒಳ್ಳೆಯ ಕೊಲೆಸ್ಟರಾಲನ್ನು ಹೆಚ್ಚಿಸುತ್ತದೆ. ಆದರೆ ಹೆಚ್ಚು ಕಾಬೋಹೈಡ್ರೇಟ್​ನಿಂದ ಕೂಡಿದ ಆಹಾರಪದ್ಧತಿಯು ಒಳ್ಳೆಯ ಕೊಲೆಸ್ಟರಾಲನ್ನು ಕಡಿಮೆ ಮಾಡುತ್ತದೆ.

ವಿಕಾಸವಾಗುತ್ತ ಹೋದಂತೆ ಕಾಡಿನಲ್ಲಿನ ಮನುಷ್ಯ ನಾಡಿಗೆ ಬಂದ. ಕಾಡಿನಲ್ಲಿರುವಾಗ ಶೇ. 28ರಿಂದ 58ರಷ್ಟು ಕೊಬ್ಬಿನಿಂದ ಕೂಡಿದ ಆಹಾರ, ಶೇ. 19ರಿಂದ 35 ಪ್ರೋಟೀನಿನಿಂದ ಕೂಡಿದ ಆಹಾರ, ಶೇ. 22ರಿಂದ 40ರಷ್ಟು ಕಾಬೋಹೈಡ್ರೇಟ್​ನಿಂದ ಕೂಡಿದ ಆಹಾರವನ್ನು ಅನುಸರಿಸುತ್ತಿದ್ದರು. (ಸುಮಾರು

ಶೇ. 40ರಷ್ಟು ಕೊಬ್ಬು, ಶೇ. 30ರಷ್ಟು ಪ್ರೊಟೀನ್, ಶೇ. 30ರಷ್ಟು ಕಾಬೋಹೈಡ್ರೇಟ್) ಅವರ ಒಟ್ಟಾರೆ ಜೀವಿತಾವಧಿ 80ರಿಂದ 100 ವರ್ಷ ಆಗಿತ್ತು. ಆದರೆ ಮುಂದುವರಿದಂತೆ ನಾವು ಅನುಸರಿಸಿದಂತಹ ಕೃಷಿಪದ್ಧತಿಯ ಪರಿಣಾಮವಾಗಿ ಧಾನ್ಯಗಳನ್ನು ಮುಖ್ಯ ಆಹಾರವಾಗಿ ಬಳಸುತ್ತ ಸಾಗಿದೆವು. ಇದು ಕಾಬೋಹೈಡ್ರೇಟ್​ಯುುಕ್ತ ಆಹಾರಪದ್ಧತಿಯಾಗಿ ಬದಲಾಗಲು ಕಾರಣವಾಯಿತು. ಇದರ ಪರಿಣಾಮ ಇಂದಿನ ಜೀವಿತಾವಧಿ ಕಡಿಮೆಯಾಗಿದೆ. ಸಮಸ್ಯೆಗಳು ಹೆಚ್ಚಾಗಿವೆ.

ಈ ಮೇಲಿನ ಅಂಕಿಅಂಶಗಳು ಕಾಡಿನಲ್ಲಿನ ಮನುಷ್ಯನ ಆಹಾರಪದ್ಧತಿಯಲ್ಲಿನ ಬೃಹತ್ ಪೋಷಕಾಂಶಗಳ ಪ್ರಮಾಣವನ್ನು ತಿಳಿಸುತ್ತದೆ. ಅದೇ ಚಿಂಪಾಂಜಿಯ ಆಹಾರಪದ್ಧತಿಯನ್ನು ಅವಲೋಕಿಸಿದಾಗ ಅದರ ಆಹಾರಪದ್ಧತಿಯು ಶೇ. 6ರಷ್ಟು ಕೊಬ್ಬು, ಶೇ. 21ರಷ್ಟು ಪ್ರೋಟೀನ್, ಶೇ 73ರಷ್ಟು ಕಾಬೋಹೈಡ್ರೇಟ್ ಹೊಂದಿರುವುದು ತಿಳಿದುಬರುತ್ತದೆ. ಅವುಗಳ ಜೀವಿತಾವಧಿ ಕೇವಲ 40 ವರ್ಷ. ಅದೇ ರೀತಿ ಗೊರಿಲ್ಲಾಗಳ ಆಹಾರಪದ್ಧತಿಯಲ್ಲಿ ಶೇ. 3ರಷ್ಟು ಕೊಬ್ಬು,

ಶೇ. 24ರಷ್ಟು ಪ್ರೋಟೀನ್, ಶೇ. 73ರಷ್ಟು ಕಾಬೋಹೈಡ್ರೇಟ್ ಇರುವುದು ಗೋಚರವಾಗುತ್ತದೆ. ಇವು 40-45 ವರ್ಷ ಮಾತ್ರ ಬದುಕುತ್ತವೆ. ಈ ಅಂಕಿ ಅಂಶಗಳು ಸ್ಪಷ್ಟಪಡಿಸುವುದೇನೆಂದರೆ, ಕೊಬ್ಬು ಹೆಚ್ಚಿರುವ ಆಹಾರಪದ್ಧತಿಯು ಆರೋಗ್ಯಕರ, ಹೆಚ್ಚಿನ ಜೀವಿತಾವಧಿಗೆ ನೆರವಾಗುತ್ತದೆ. ಆಹಾರಪದ್ಧತಿಯಲ್ಲಿ ಕಾಬೋಹೈಡ್ರೇಟ್ ಪ್ರಮಾಣ ಹೆಚ್ಚಾದಂತೆ ತೊಂದರೆಗಳಿಗೆ ಕಾರಣವಾಗುವುದಲ್ಲದೆ, ಜೀವಿತಾವಧಿಯನ್ನೂ ಕುಂಠಿತಗೊಳಿಸುತ್ತದೆ. ಆದ್ದರಿಂದ ಮಾನವನ ಜೀರ್ಣಂಗವ್ಯೂಹವು ಕೊಬ್ಬನ್ನು ಚೆನ್ನಾಗಿ ಜೀರ್ಣಸಿಕೊಳ್ಳಲು ಸಮರ್ಥವಾಗಿದೆ. ಅದರ ರಚನೆಯು ಕೊಬ್ಬು ಜೀರ್ಣವಾಗುವುದಕ್ಕೆ ಸರಿಯಾಗಿದೆ. ಕಡಿಮೆ ಕೊಬ್ಬಿನಂಶದಿಂದ ಕೂಡಿದ ಆಹಾರಪದ್ಧತಿಯು ಬೇಗ ಮುಪ್ಪಿಗೆ ಕಾರಣವಾಗಬಲ್ಲದು.

ಒಳ್ಳೆಯ ಕೊಬ್ಬಿನ ಆಹಾರಪದಾರ್ಥಗಳೆಂದರೆ ಎಲ್ಲ ಬಗೆಯ ನಟ್ಸ್, ಎಣ್ಣೆಬೀಜಗಳು, ಮೊಸರು, ತುಪ್ಪ, ತೆಂಗಿನ ತುರಿ ಮುಂತಾದವು. ಕೊಬ್ಬು ಹೊಂದಿರುವ ಹಾಗೂ ಉತ್ಪಾದಿಸುವ ಕೆಲವು ಪದಾರ್ಥಗಳೆಂದರೆ ಎಲ್ಲ ಕರಿದ ಆಹಾರಪದಾರ್ಥಗಳು, ಹೆಚ್ಚಿನ ಬೇಕರಿ ಆಹಾರ, ಸಿಹಿತಿಂಡಿಗಳು, ಹೆಚ್ಚು ಕಾಬೋಹೈಡ್ರೇಟ್​ಗಳು ಮುಂತಾದವು.

ಕೊನೇ ಹನಿ

ಸಮಪ್ರಮಾಣದಲ್ಲಿ ಕಹಿಬೇವಿನ ರಸ, ಈರುಳ್ಳಿ ರಸ ಸೇರಿಸಿ ಅದಕ್ಕೆ ಸ್ವಲ್ಪ ಅರಿಶಿಣ ಹಾಕಿ ಹಚ್ಚಿದರೆ ಚರ್ಮದ ತುರಿಕೆ ಕಡಿಮೆಯಾಗುತ್ತದೆ.