More

    ಧನ್ವಂತರಿ: ಶರೀರ ರಚನೆಯ ಅಚ್ಚರಿ

    ರೋಗ್ಯ ಚೆನ್ನಾಗಿರಬೇಕಾದರೆ ನಮ್ಮ ದೇಹದ ಒಳಗಿನ ಅವಯವಗಳು, ಅಲ್ಲಿನ ಆಗುಹೋಗುಗಳು, ಶರೀರದ ಒಳಗೇನಿದೆ ಎಂದು ತಿಳಿದುಕೊಳ್ಳುವ ಕುತೂಹಲವಾದರೂ ನಮಗಿರಬೇಕು. ಒಬ್ಬರಿಂದ ಒಬ್ಬರ ಸ್ವರೂಪವು ನೋಡಲು ಬೇರೆಯಾಗಿದ್ದರೂ ಅಂಗಗಳು, ಅಂಗಾಂಗಗಳು, ಅವಯವಗಳೆಲ್ಲವೂ ಒಂದೇ ರೀತಿಯಲ್ಲಿ ಕ್ರಮಬದ್ಧವಾಗಿ ಇರುವುದು ಅರ್ಥಮಾಡಿಕೊಳ್ಳಲಾಗದ ಸೃಷ್ಟಿಯ ವೈಚಿತ್ರ್ಯ ಅವುಗಳ ಕಾರ್ಯವೈಖರಿಯನ್ನು ತಿಳಿಯುತ್ತ ಹೋದಂತೆ ರೋಮಾಂಚನವಾಗುತ್ತದೆ. ಒಬ್ಬ ವ್ಯಕ್ತಿಗೆ ಹೃದಯದ ಪ್ರಮುಖ ಮೂರು ರಕ್ತನಾಳಗಳಲ್ಲಿ ಒಂದರಲ್ಲಿ ತಡೆಯುಂಟಾಗಿದೆ ಎಂದಿಟ್ಟುಕೊಳ್ಳಿ. ಆಧುನಿಕ ರೋಗಪರೀಕ್ಷಣಾ ಉಪಕರಣಗಳಿಂದ ತಿಳಿಯುವಷ್ಟರಲ್ಲಿ ಪೂರ್ತಿಯಾಗಿ ತಡೆಯಾಗಿದ್ದಲ್ಲಿ ಹೃದಯದ ಮುಂದಿನ ಭಾಗಕ್ಕೆ ರಕ್ತಸಂಚಾರವೇ ನಿಂತು ಹೋಗಿದೆಯೆಂದು ಭಾವಿಸಿದರೆ ತಪ್ಪಾಗುತ್ತದೆ. ಅಲ್ಲೇ ಪಕ್ಕದಲ್ಲಿ ಕೆಲಸವಿಲ್ಲದೆ ಹಾಯಾಗಿದ್ದ ಸೂಕ್ಷ್ಮವಾದ ರಕ್ತನಾಳಗಳು ಕ್ರಿಯಾಶೀಲವಾಗಿ ರಕ್ತವನ್ನು ಅತ್ಯಲ್ಪ ಪ್ರಮಾಣದಲ್ಲಿ ಮುಂದೆ ಸಾಗಿಸಲು ಆರಂಭಿಸಿರುತ್ತವೆ. ಇದು ಪ್ರಕೃತಿದತ್ತವಾದ ಬದಲಿ ವ್ಯವಸ್ಥೆ! ದೇಹದೊಳಗೂ ಬೈಪಾಸ್ ವ್ಯವಸ್ಥೆಯ ಪ್ರಾಕೃತಿಕ ರಕ್ಷಣೆಯಿದೆ!

    ದೇಹದ ರಚನೆಯನ್ನು ರಚನಾಶಾರೀರವೆಂದೂ, ದೇಹದೊಳಗಿನ ಪ್ರಕ್ರಿಯೆಗಳನ್ನೆಲ್ಲ ಕ್ರಿಯಾಶಾರೀರವೆಂದೂ ಆಯುರ್ವೆದ ಹೇಳಿದೆ. ಶರೀರವೆಂದರೆ ಕೊಳೆಯುವಂಥದ್ದು ಎಂಬುದು ನೇರ ಅರ್ಥ! ದೇಹ, ಕಾಯ ಎಂಬ ಪದಗಳಲ್ಲಿ ಜೀವದ ಸ್ಥಾನ ಎಂಬರ್ಥವಿದೆ. ಶರೀರದ ರಚನಾಶಾಸ್ತ್ರ ಹಾಗೂ ಕ್ರಿಯಾಶಾಸ್ತ್ರಗಳ ಬಗ್ಗೆ ಮೂಲಗ್ರಂಥಗಳ ಪೈಕಿ ಅತಿ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಸುಶ್ರುತಸಂಹಿತಾ. ಅದರ ಶಾರೀರ ಸ್ಥಾನದ ಶ್ಲೋಕವೊಂದರ ಅನೇಕ ಅಂಕಿ ಸಂಖ್ಯೆಗಳು ಗಮನ ಸೆಳೆಯುತ್ತವೆ.

    ಚರ್ಮದ ಏಳು ಪದರಗಳು, ಏಳು ಕಲಾಗಳು, ಏಳು ಆಶಯಗಳು, ಏಳು ಧಾತುಗಳು, ಏಳುನೂರು ರಕ್ತನಾಳಗಳು, ಐನೂರು ಮಾಂಸಪೇಶಿಗಳು, ಒಂಬೈನೂರು ಸ್ನಾಯುಗಳು, ಮುನ್ನೂರು ಮೂಳೆಗಳು, ಇನ್ನೂರ ಹತ್ತು ಕೀಲುಗಳು, ನೂರ ಏಳು ಮರ್ಮಗಳು, ಇಪ್ಪತ್ತನಾಲ್ಕು ಧಮನಿಗಳು, ಮೂರು ದೋಷಗಳು, ಮೂರು ಮಲಗಳು, ಒಂಬತ್ತು ಬಾಹ್ಯ ದ್ವಾರಗಳು, ಹದಿರಾಗಳು ಕಂಡರಾಗಳು, ಹದಿನಾರು ನರತಂತು ಜಾಲಗಳು, ಆರು ಸ್ನಾಯು ಗೊಂಚಲುಗಳಾದ ಕೂರ್ಚಾಗಳು, ಆರು ಸ್ನಾಯು ರಜ್ಜುಗಳು, ಏಳು ಹೊಲಿಗೆ ಹಾಕಿದ ರಚನೆಯಂತಹ ಸೇವನಿಗಳು, ಹದಿನಾಲ್ಕು ಅಸ್ಥಿಸಂಘಾತಗಳು, ಹದಿನಾಲ್ಕು ಸೀಮಂತಗಳು, ಇಪ್ಪತ್ತೆರಡು ದೇಹದ ದ್ರವಾಂಶ ಹರಿದು ಬರುವ ಯೋಗವಹ ಸ್ರೋತಸ್ಸುಗಳು, ಎರಡು ಕರುಳುಗಳು ಸೇರಿ ಮಾನವಶರೀರವು ರಚನೆಯಾಗಿದೆ! ಇದೊಂದು ವಿವರಣೆ ಮಾನವದೇಹ ರಚನೆಯ ಸಾರರೂಪದಲ್ಲಿದೆ. ಕೈಕಾಲುಗಳು, ಉದರ ಹಾಗೂ ಶಿರಸ್ಸುಗಳು ದೇಹದ ಆರು ಭಾಗಗಳು. ಚರ್ಮವು ಇಡೀ ದೇಹದ ಹೊದಿಕೆ.

    ಧಾತುಗಳು ಹಾಗೂ ಆಶಯಗಳನ್ನು ಪ್ರತ್ಯೇಕಿಸುವ ರಚನಾ ವಿಶೇಷವೇ ಕಲಾ. ಆಹಾರ, ದೋಷ ಹಾಗೂ ಮಲಮೂತ್ರಗಳು ಸಂಚಿತಗೊಳ್ಳುವ ಸ್ಥಳವೇ ಆಶಯ. ಇವೆಲ್ಲವುಗಳ ಸಾಗಾಟಕ್ಕಾಗಿರುವ ಸೂಕ್ಷ್ಮನಾಳಗಳೇ ಸ್ರೋತಸ್ಸುಗಳು. ಮಾಂಸಖಂಡಗಳನ್ನು ಮೂಳೆಗಳಿಗೆ ಜೋಡಿಸುವ ನಾರಿನಂತಹ ಅಂಗಾಂಶವೇ ಕಂಡರಾ. ಇಲ್ಲಿ ಧಮನಿಗಳು ನರಗಳಾಗಿದ್ದು ಸಿರಾ ಎಂದರೆ ರಕ್ತನಾಳಗಳಾಗಿವೆ. ಆಧುನಿಕವಾಗಿ ಹೇಳುವ ಸಂಖ್ಯೆಗಳೆಲ್ಲವೂ ಇದಕ್ಕೆ ಸರಿಯಾಗಿ ಹೋಲಿಕೆಯಾಗುತ್ತಿರುವುದು ಪ್ರಾಚೀನಜ್ಞಾನದ ಉತ್ತುಂಗಕ್ಕೆ ಸಾಕ್ಷಿ.

    ಪಂಚಸೂತ್ರಗಳು

    ಪಚ್ಚೆಕರ್ಪರ: ಹೊಟ್ಟೆಯುಬ್ಬರ ನಿವಾರಕ.

    ದರ್ಭೆಹುಲ್ಲು: ಚರ್ಮದಲ್ಲಾಗುವ ಗುಳ್ಳೆ ಗುಣಕಾರಿ.

    ಒಂದೆಲಗ ಸೊಪ್ಪು: ಒಡಕುಧ್ವನಿಯನ್ನು ಸರಿಗೊಳಿಸುವುದು.

    ದಾರೆಹುಳಿ ಹಣ್ಣು: ಯಕೃತ್ ಭಾಗದ ನೋವು ಶಾಮಕ.

    ದೊಡ್ಡ ಏಲಕ್ಕಿ: ಗುದದ ರೋಗಗಳಲ್ಲಿ ಪ್ರಯೋಜನಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts