More

    ಧನ್ವಂತರಿ | ಬದುಕಿನ ಕಗ್ಗಂಟುಗಳಿಗೆ ಉತ್ತರವಾಗಿರುವ ಕಗ್ಗ

    ಧನ್ವಂತರಿ | ಬದುಕಿನ ಕಗ್ಗಂಟುಗಳಿಗೆ ಉತ್ತರವಾಗಿರುವ ಕಗ್ಗಡಿವಿಜಿಯವರ ಕೃತಿ ಮಂಕುತಿಮ್ಮನ ಕಗ್ಗವು ಬದುಕಿನ ದರ್ಶನ ಮಾಡಿಸಿದ ಪರಿ ಅನನ್ಯವಾದುದು. ಜೀವನಯಾನದ ವಿವಿಧ ಮಜಲುಗಳನ್ನು ತೆರೆದಿಡುವಾಗ ಮಾನವನ ಆರೋಗ್ಯಕ್ಕೆ ಸಂಬಂಧಿಸಿದ ಸೂತ್ರಗಳನ್ನೂ ಎಳೆಎಳೆಯಾಗಿ ಬಿಡಿಸಿಟ್ಟಿರುವುದನ್ನು ಗಮನಿಸಿ ಅನುಸರಿಸಿದರೆ ಬದುಕು ಸುಂದರವಾಗುತ್ತದೆ. ‘ಹೊಟ್ಟೆರಾಯನ ನಿತ್ಯದಟ್ಟಹಾಸವೊ ಬಾಳು’ ಎಂಬ ಕಗ್ಗದಲ್ಲಿ ಬಾಳು ಎಂಬುದು ಹೊಟ್ಟೆರಾಯನ ಪ್ರತಿನಿತ್ಯದ ಅಟ್ಟಹಾಸ. ಈ ದರ್ಪದ ಧಣಿಯಾದ ಹೊಟ್ಟೆಯನ್ನು ತುಂಬಿಸುವುದಕ್ಕಾಗಿ ದಿನಂಪ್ರತಿ ಕಷ್ಟಪಟ್ಟು ಎಲ್ಲರೂ ದುಡಿಯುತ್ತಾರೆ.

    ಹೊಟ್ಟೆಯೇ ನಾಯಕ, ನಾವದರ ಸೇವಕ, ಪ್ರತಿನಿತ್ಯವೂ ಕಾಯಕ! ತುತ್ತು ಹಿಟ್ಟಿಗಾಗಿ ಬಾಯಗಲಿಸಿ ಬಟ್ಟೆಗಾಗಿ ಕೈಯೊಡ್ಡಿ ಹೊಟ್ಟೆ ಬಟ್ಟೆಗಾಗಿ ಅವಿರತ ಪರಿಶ್ರಮಿಸುವುದೇ ನಮ್ಮೆಲ್ಲರ ಬದುಕಿನ ಕಥೆ. ಪ್ರತಿಯೊಬ್ಬರ ಬದುಕಿನಲ್ಲಿ ಆಹಾರಕ್ಕಿರುವ ಮಹತ್ವವನ್ನಷ್ಟೇ ಇಲ್ಲಿ ಹೇಳಿರುವುದಲ್ಲ. ಆಹಾರ ಕುರಿತು ಎಷ್ಟೊಂದು ಗಮನ ಹಾಗೂ ಪ್ರಾಶಸ್ತ್ಯಗಳನ್ನು ನೀಡಬೇಕು ಎಂಬುದನ್ನು ತೋರಿಸಿಕೊಟ್ಟಿದೆ. ‘ಅತಿಶಯದ ದೃಷ್ಟ ಹುಟ್ಟಿಂಮೃತೇಂದ್ರಿಯ ನದಲ’ ಎಂಬ ಪದ್ಯದಲ್ಲಿ ಜಿತೇಂದ್ರಿಯ ಯಾರು ಎಂಬುದನ್ನು ವಿವರಿಸಲಾಗಿದೆ. ಹುಟ್ಟಿನಿಂದಲೇ ಇಂದ್ರಿಯಗಳಿಂದ ಅನುಭವಿಸುವ ಬಯಕೆಗಳ ಸೆಳೆತವಿಲ್ಲದೆ ಇರುವವರು ಅತ್ಯಂತ ಅದೃಷ್ಟವಂತರು. ಆಸೆಗಳ ಪೈಕಿ ಮಿತವಾದ ಹಸಿವು ಉಳ್ಳವನು, ಕಡಿಮೆ ಆಹಾರ ಸೇವಿಸಬಲ್ಲವನೇ ಜಿತೇಂದ್ರಿಯ. ಹೀಗಿರುವವರು ರೋಗಗಳನ್ನು ಗೆಲ್ಲಬಲ್ಲರು, ಜೀವನವನ್ನೇ ಜಯಿಸಬಲರು.

    ‘ಹೊಟ್ಟೆಯಲಿ ಹಸಿವು ಮನದಲಿ ಮಮತೆ’ ಎಂಬ ಕಗ್ಗದಲ್ಲಿ ಸೃಷ್ಟಿಯೆಂಬ ಯಂತ್ರದಲ್ಲಿ ರಹಸ್ಯವಾದ 2 ಕೀಲುಗಳಿವೆ. ಈ ಎರಡು ಏನನ್ನೂ ಮಾಡಬಲ್ಲವು. ಸರಿಯಿದ್ದರ ಸರಿದಾರಿ, ನಿಯಂತ್ರಣದಲ್ಲಿ ಇಲ್ಲವಾದಲ್ಲಿ ತಪ್ಪುದಾರಿ ನಿಶ್ಚಿತ. ಆಯುರ್ವೆದ ಹೇಳಿದ ಹಿತಭುಕ್, ಮಿತಭುಕ್, ಋತಭುಕ್ ಮತ್ತೊಂದು ಆಯಾಮವಿಲ್ಲಿ ವಿಮಶಿಸಲ್ಪಟ್ಟಿದೆ. ‘ಹೃದಯದಬ್ಬರವೇನು ಹೊಟ್ಟೆಉಬ್ಬರದಂತೆ’ ಪದ್ಯದಲ್ಲಿ ಮನಸ್ಸು, ಬುದ್ಧಿ, ಅಹಂಕಾರಗಳ ತೀವ್ರತೆಯನ್ನು ಹೊಟ್ಟೆಯ ಉಬ್ಬರಕ್ಕೆ ಹೋಲಿಸಿರುವುದು ವಿಶೇಷ.

    ಮನಸ್ಸಿನ ಆರೋಗ್ಯಕ್ಕೆ ಹೃದಯದ ಅಬ್ಬರವನ್ನು ಶಾಂತಗೊಳಿಸಬೇಕು. ಶರೀರದ ಆರೋಗ್ಯಕ್ಕೆ ಹೊಟ್ಟೆಯ ಉಬ್ಬರದ ಮೇಲೆ ಅಂಕುಶ ಹಾಕಿ ಆಹಾರ ನಿಯಂತ್ರಿಸಬೇಕು! ‘ಹಣ್ಣೇನು ಕಾಯೇನು ಹೊಟ್ಟೆ ತುಂಬಿರುವಂಗೆ?’ ಎಂಬಲ್ಲಿ ಹೊಟ್ಟೆ ತುಂಬಿದ್ದಾಗ ಒಳ್ಳೆಯ ಹಣ್ಣು ನೀಡಿದರೂ ರುಚಿ ಎನಿಸುವುದಿಲ್ಲ. ಹಣ್ಣಾದರೂ ಕಾಯಿಯಾದರೂ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ. ಉನ್ನತ ಸ್ಥಿತಿಯನ್ನು ತಲುಪಿದವರ ಮನೋಗತಿಯ ವಿವರಣೆ ರಮಣೀಯ. ಇನ್ನೊಬ್ಬರೊಡನೆ ಹೇಳಿಕೊಳ್ಳಲು ಸಾಧ್ಯವಾಗದಂತಹ ಹಸಿವು, ತಾಳಲು ಆಗದಿರುವ ತೊಂದರೆಗಳು, ಅಂತರಾಳದಲ್ಲಿ ತಲೆತಗ್ಗಿಸುವಂತಹ ಚಿಂತೆಯ ಪ್ರವಾಹ ಇವೆಲ್ಲ ಗಾಳಿಯಲ್ಲಿ ಎಲ್ಲೆಲ್ಲಿಂದಲೋ ತೇಲಿಬರುವ ಅಂಟುರೋಗಗಳಂತಿವೆ. ಇವುಗಳೇ ಬದುಕಿನ ಸಾಮಗ್ರಿಗಳಾಗಿ ಇರುವುದರಿಂದ ಉಪೇಕ್ಷೆ ಮಾಡದೆ ಇವುಗಳ ಕುರಿತು ಲಕ್ಷ್ಯವಹಿಸಬೇಕು ಎಂಬ ‘ಹೇಳಲಾಗದ ಹಸಿವು ತಾಳಲಾಗದ ತಪನೆ’ ಕಗ್ಗದಲ್ಲಿ ಆಹಾರದ ಸಮಗ್ರ ವಿವೇಚನೆಯ ಅಗತ್ಯ ಯಾವತ್ತೂ ಇರಬೇಕೆಂಬ ನಿರ್ದೇಶನವಿದೆ.

    ‘ಕ್ಷೀರಾನ್ನದಿಂದೆ ನರಪುಷ್ಟಿ ಹಸುವಿಂ ಪಾಲು’ ಕಗ್ಗದಲ್ಲಿ ಹಾಲು ಅನ್ನದಿಂದ ಮನುಷ್ಯ ದೇಹಪೋಷಣೆ ಆಗುತ್ತದೆ. ಹಸುವು ನಮಗೆ ಹಾಲು ನೀಡುತ್ತದೆ. ಪೈರು ಹಸುವಿಗೆ ಮೇವಾಗುತ್ತದೆ. ಹಸುವಿನ ಗೊಬ್ಬರದಿಂದ ನೆಲವು ಸಾರವತ್ತಾಗಿ ಪೈರಿಗೆ ಪುಷ್ಟಿ- ಹೀಗೆ ಎಲ್ಲವೂ ಪರಸ್ಪರ ಪೂರಕವಾಗಿವೆ. ಪ್ರಕೃತಿಯಲ್ಲಿ ಪೂರಕವಾಗಿರುವುದು, ನಿರರ್ಥಕವಾಗಿರುವುದು ಯಾವುದೆಂಬ ಸ್ಪಷ್ಟವಿಭಜನೆ ಸಾಧ್ಯವಿಲ್ಲ. ಎಲ್ಲವುಗಳ ಪರಸ್ಪರ ಸಹಕಾರ ಇಲ್ಲಿ ಕಾಣುತ್ತದೆ. ಜೀವಶಾಸ್ತ್ರದ ಆಹಾರ ಸರಪಳಿಯ ಪಾಠ ಸಂದೇಶವೇ ಮಾರ್ವಿುಕವಾಗಿದೆ. ‘ಕಾಯ ನಿರ್ಣೆಯವದರೊಳು ಮನವ ನಿರ್ಣೆಯ’ ಎಂಬ ಕಗ್ಗದಲ್ಲಿ ದೇಹದಲ್ಲಿ ರೂಪ, ಗಾತ್ರಗಳನ್ನು ನಿರ್ಣಯಿಸಿ ಹೇಳಬಹುದು. ಹಾಗೆಂದು ಮನಸ್ಸಿನ ರೂಪ, ಆಕಾರಗಳನ್ನು ಹೀಗೆಯೇ ಎಂದು ತೀರ್ವನಿಸಿ ಹೇಳಲು ಸಾಧ್ಯವಿಲ್ಲ. ಶರೀರದಲ್ಲಿರುವ ಸ್ನಾಯುಗಳ ಸಂಖ್ಯೆಯನ್ನು ಎಣಿಸಿ ಹೇಳಬಹುದು. ಆದರೆ ಜೀವಕೋಶಗಳು ಅಸಂಖ್ಯವಾಗಿವೆ.

    ಹೀಗೆ ಎಣಿಸಬಹುದಾದ, ಗಣಿಸಬಹುದಾದ, ನಿರ್ಣಯಿಸಲಾಗದ ಹಾಗೂ ತೀರ್ವನಿಸಲಾಗದ ವಿಚಾರಗಳ ಮಿಶ್ರಣವೇ ಮನುಷ್ಯನಾಗಿದ್ದು ವಿಶ್ವದಲ್ಲಿ ಎಲ್ಲವೂ ಹೀಗೆಯೇ ಇರುತ್ತದೆ ಎಂಬ ವಿಮರ್ಶೆಯಲ್ಲಿ ರೋಗಾರೋಗಗಳ ಪರಾಮರ್ಶೆಯ ಹಾದಿಯೂ ಅಡಕವಾಗಿದೆ. ರೋಗೋತ್ಪತ್ತಿ ಹಾಗೂ ಚಿಕಿತ್ಸೆ ಇವೆರಡರಲ್ಲೂ ಇದೇ ಮಿಶ್ರಣದ ಸೂಕ್ಷ್ಮ ಪ್ರತಿಬಿಂಬವಿದೆ. ‘ಸಮವಿಲ್ಲ ಸೃಷ್ಟಿಯಲಿ ನರನಂತೆ ನರನಿಲ್ಲ’ ಎಂಬ ಕಗ್ಗವಂತೂ ಯಾಕಾಗಿ ಚಿಕಿತ್ಸೆಯು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ, ಭಿನ್ನವಾಗಿರಬೇಕು ಎಂಬ ಆಯುರ್ವೆದ ಸಿದ್ಧಾಂತಕ್ಕೆ ಹೊಳಪನ್ನು ನೀಡುತ್ತದೆ. ಒಬ್ಬ ವ್ಯಕ್ತಿಯಂತೆ ಇನ್ನೊಬ್ಬನಿಲ್ಲ. ಸೃಷ್ಟಿಯು ಕ್ಷಮಿಸುವುದೂ ಇಲ್ಲ. ಏಕೆಂದರೆ ಕರ್ಮದಂತೆ ಫಲವನ್ನು ಅನುಭವಿಸಬೇಕಾಗುತ್ತದೆ. ರೋಗಗಳೂ ಕರ್ಮಫಲಗಳೇ. ಸರಿಯಾದ ಜೀವನಶೈಲಿ, ಆಹಾರಶೈಲಿ ಹಾಗೂ ಮುಂಜಾಗರೂಕತೆಗಳು ಉತ್ತಮ ಬದುಕಿಗೆ ದಾರಿದೀಪಗಳಾಗುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts