ಸಚಿವ ಪುಟ್ಟರಂಗಶೆಟ್ಟಿ ವಜಾಕ್ಕೆ ಬಿಜೆಪಿ ಪ್ರತಿಭಟನೆ

ದಾವಣಗೆರೆ: ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಸಂಪುಟದಿಂದ ಕೈಬಿಡಬೇಕು. ತೈಲ ದರ ಇಳಿಸಬೇಕೆಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.

ಪಕ್ಷದ ಜಿಲ್ಲಾ ಕಾರ್ಯಾಲಯದಿಂದ ಮಹಾತ್ಮ ಗಾಂಧಿ ವೃತ್ತದ ಮೂಲಕ ಎಸಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿತು.

ವಿಧಾನಸೌಧದಲ್ಲಿ ದಂಧೆ ನಡೆಯುವುದನ್ನು ತಡೆಯುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ, ಮುಖ್ಯಮಂತ್ರಿಯಾದ ನಂತರವೇ ವಿಧಾನಸೌಧ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರು. ಮಾಧ್ಯಮದವರಿಗೂ ತಡೆ ಹಾಕಲಾಗಿತ್ತು. ಇದೀಗ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಆಪ್ತ ಸಿಬ್ಬಂದಿಯೇ 25.76 ಲಕ್ಷ ನಗದು ಸಹಿತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಸಮ್ಮಿಶ್ರ ಸರ್ಕಾರದಲ್ಲಿ ಶಕ್ತಿ ಸೌಧ ದುರ್ಬಳಕೆ ಆಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಕೂಡಲೇ ರಾಜ್ಯಪಾಲರು ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.

2 ತಿಂಗಳಿಂದ ಇಳಿಮುಖವಾಗಿದ್ದ ಪೆಟ್ರೋಲ್, ಡೀಸೆಲ್ ದರಗಳನ್ನು ಈಗ ರಾಜ್ಯ ಸರ್ಕಾರವೇ ಏಕಾಏಕಿ ಹೆಚ್ಚಿಸಿ ಜನಸಾಮಾನ್ಯರಿಗೆ ಬರೆ ಹಾಕಿದೆ. ಇತ್ತೀಚೆಗೆ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 28 ಪೈಸೆ ಹೆಚ್ಚಿಸಿದೆ ಎಂದು ಮುಖಂಡರು ಆಕ್ಷೇಪಿಸಿದರು.

ಇಂಧನ ದರ ಹೆಚ್ಚಳ ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್ ನಡೆಸಿದ್ದ ಸಮ್ಮಿಶ್ರ ಸರ್ಕಾರ, ಈಗ ಪೆಟ್ರೋಲ್ ತೆರಿಗೆಯನ್ನು ಶೇ.21ರಿಂದ ಶೇ.32ರಷ್ಟು, ಡೀಸೆಲ್ ತೆರಿಗೆಯನ್ನು ಶೇ.17 ರಿಂದ ಶೇ.28.75ಕ್ಕೆ ಹೆಚ್ಚಿಸಿದೆ. ರಾಜ್ಯಪಾಲರು ದರ ಇಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಎಂಎಲ್‌ಸಿ ಡಾ.ವೈ.ಎ.ನಾರಾಯಣಸ್ವಾಮಿ, ಶಾಸಕ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಎಚ್.ಎನ್. ಶಿವಕುಮಾರ್, ಮುಕುಂದಪ್ಪ, ಗೋಣೆಪ್ಪ, ರಾಜಶೇಖರ್, ಓಂಕಾರಪ್ಪ, ಧನಂಜಯ ಕಡ್ಲೇಬಾಳ್, ರಮೇಶನಾಯ್ಕ, ಹನುಮಂತಪ್ಪ, ವೀರೇಶ್ ಪೈಲ್ವಾನ್, ಸವಿತಾ ರವಿಕುಮಾರ್, ಶಿವರಾಜ್ ಪಾಟೀಲ್, ಮನು ಇತರರಿದ್ದರು.