ಧಾನ್ ಪೌಂಡೇಷನ್ ಸಂಸ್ಥೆ ಕಚೇರಿಗೆ ಬೀಗ

  • ಮಳವಳ್ಳಿ: ತಮಿಳುನಾಡು ಮೂಲದ ಎನ್‌ಜಿಒ ಸಂಸ್ಥೆ ಮಹಿಳಾ ಒಕ್ಕೂಟದ ಸಂಘಗಳ ಲಾಭಾಂಶದಲ್ಲಿ ಪಾಲು ಕೇಳುವ ಜತೆಗೆ ಈಗಾಗಲೆ 14.93 ಲಕ್ಷ ರೂ.ಗಳ ಒಕ್ಕೂಟದ ಹಣ ಪಡೆದುಕೊಂಡು ಸಮರ್ಪಕ ಲೆಕ್ಕ ನೀಡದಿರುವುದರಿಂದ ಒಕ್ಕೂಟದ ಸಂಘಗಳು ಪ್ರತ್ಯೇಕ ಕಾರ್ಯ ನಿರ್ವಹಿಸಲು ನಿರ್ಧರಿಸಿ ಪಟ್ಟಣದಲ್ಲಿರುವ ಧಾನ್ ಪೌಂಡೇಷನ್ ಸಂಸ್ಥೆ ಕಚೇರಿಗೆ ವಿಶ್ವೇಶ್ವರಯ್ಯ ಮಹಿಳಾ ಕಳಂಜಿಯಂ ಒಕ್ಕೂಟದ ಸದಸ್ಯರು ಬೀಗ ಹಾಕಿದರು.
  • ವಿಶ್ವೇಶ್ವರಯ್ಯ ಕಳಂಜಿಯಂ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುನಂದಮ್ಮ ಮಾತನಾಡಿ, 2000ನೇ ಇಸವಿಯಲ್ಲಿ ತಮಿಳುನಾಡಿನ ಮಧುರೈ ಕೇಂದ್ರ ಕಚೇರಿಯ ಧಾನ್ ಪೌಂಢೇಷನ್ ಎಂಬ ಎನ್‌ಜಿಒ ಸಂಸ್ಥೆ ತಾಲೂಕಿನ ಬಡತನ ರೇಖೆಯಿಂದ ಕೆಳಗಿರುವ ಮಹಿಳೆಯರನ್ನು ಸಂಘಟಿಸಿ ಮೊದಲು ಯಾವುದೇ ಫಲಾಪೇಕ್ಷೆ ಇಲ್ಲದೆ ಹಣಕಾಸಿನ ಸಾಲಸೌಲಭ್ಯ ಕೊಡಿಸುವ ಮತ್ತು ಮಾರ್ಗದರ್ಶನ ನೀಡುವುದಾಗಿ ಹೇಳಿತ್ತು. ಆದರೆ ಮಹಿಳೆಯರೆ ಕಟ್ಟಿ ಬೆಳೆಸಿದ ವಿಶ್ವೇಶ್ವರಯ್ಯ ಮಹಿಳಾ ಕಳಂಜಿಯ ಸ್ವಸಹಾಯ ಸಂಘಗಳು ಪ್ರಸ್ತುತ ಎರಡು ಕೋಟಿ ರೂ. ಲಾಭಾಂಶ ಗಳಿಸಿದೆ. ಇದರಲ್ಲಿ ಅರ್ಧದಷ್ಟು ಅಂದರೆ 1 ಕೋಟಿ ರೂ.ಲಾಭವನ್ನು ಧಾನ್ ಪೌಂಡೇಷನ್‌ಗೆ ನೀಡಬೇಕೆಂದು ಒತ್ತಾಯಿಸುತ್ತಿದೆ ಎಂದು ಆರೋಪಿಸಿದರು.
    ಅಲ್ಲದೆ, ಫೌಂಡೇಷನ್ ಅಧೀನದಲ್ಲಿ ಮಹಿಳಾ ಒಕ್ಕೂಟ ಕಾರ್ಯನಿರ್ವಹಿಸಬೇಕೆಂದು ಕಟ್ಟಾಜ್ಞೆ ಹೊರಡಿಸುತ್ತಿದೆ. ಇದು ನಮ್ಮ ರಾಜ್ಯದ ಮಹಿಳೆಯರ ಸ್ವಾಭಿಮಾನದ ಪ್ರಶ್ನೆಯಾಗಿದೆ ಎಂದರು.
  • ಮಹಿಳಾ ಒಕ್ಕೂಟ ಅಧಿಕೃತ ನೋಂದಣಿಗೂ ಮೊದಲೇ ಲಾಭದ ಹಣದಲ್ಲಿ ಪಟ್ಟಣ ಹೊರ ವಲಯದಲ್ಲಿ 2002ರಲ್ಲಿ 11 ಗುಂಟೆ ನಿವೇಶನ ಖರೀದಿಸಿದ್ದು, ಈ ನಿವೇಶನವನ್ನು ಧಾನ್ ಸಂಸ್ಥೆಯ ಅಂದಿನ ಅಧಿಕಾರಿಯೊಬ್ಬರು ತಮ್ಮ ಸಂಬಂಧಿಕರ ಹೆಸರಿಗೆ ಖಾತೆ ಮಾಡಿಸಿದ್ದರು. ಆದರೆ ವಿಶ್ವೇರಯ್ಯ ಕಳಂಜಿಯಂ ಮಹಿಳಾ ಒಕ್ಕೂಟ ನೋಂದಣಿಯಾಗಿ 13 ವರ್ಷ ಕಳೆದರೂ ಒಕ್ಕೂಟದ ಹೆಸರಿಗೆ ಖಾತೆ ಮಾಡಿಸದೆ, ನನಗೂ ಅದಕ್ಕೂ ಸಂಬಂಧವಿಲ್ಲವೆಂದು ಧಾನ್ ಸಂಸ್ಥೆ ಹೇಳುತ್ತಿದೆ ಎಂದು ಆರೋಪಿಸಿದರು.
  • ತಾಲೂಕಿನಲ್ಲಿ 190 ಮಹಿಳಾ ಸಂಘಗಳನ್ನು ಒಳಗೊಂಡಿರುವ ಒಕ್ಕೂಟದ ಸದಸ್ಯರ ಒತ್ತಾಯದ ಮೇರೆಗೆ ಧಾನ್ ಪೌಂಡೇಷನ್ ಸಂಸ್ಥೆಯಿಂದ ವಿಶ್ವೇಶ್ವರಯ್ಯ ಮಹಿಳಾ ಕಳಂಜಿಯಂ ಒಕ್ಕೂಟವನ್ನು ಪ್ರತ್ಯೇಕವಾಗಿ ಮುನ್ನಡೆಸಲು ಉದ್ದೇಶಿಸಿದ್ದು, ಇದಕ್ಕೆ ಧಾನ್ ಸಂಸ್ಥೆ ಒಕ್ಕೂಟದ ಎಲ್ಲ ದಾಖಲೆಗಳನ್ನು ನೀಡಬೇಕೆಂದು ಒತ್ತಾಯಿಸಿದರು.
  • ಇದೇ ವೇಳೆ ಉಪಾಧ್ಯಕ್ಷೆ ಶಾರದಾ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಮ್ಮ ಸೇರಿದಂತೆ ಒಕ್ಕೂಟದ ನೂರಕ್ಕೂ ಹೆಚ್ಚು ಸದಸ್ಯರು ಇದ್ದರು.