ಭಕ್ತಿಯಿಂದ ಮುಕ್ತಿ, ಅನುಗ್ರಹ

ಬೆಳ್ತಂಗಡಿ: ದೃಢ ಸಂಕಲ್ಪ, ಏಕಾಗ್ರತೆ, ದೇವರ ಮೇಲೆ ಭಕ್ತಿ ಇದ್ದರೆ ಕಷ್ಟಗಳಿಂದ ಮುಕ್ತವಾಗಿ ಭಗವಂತನ ಅನುಗ್ರಹಕ್ಕೆ ಪಾಪ್ತಿಸುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಶಿವರಾತ್ರಿ ಸಂದರ್ಭ ಸೋಮವಾರ ಧರ್ಮಸ್ಥಳದಲ್ಲಿ ಅಹೋರಾತ್ರಿ ನಡೆಯುವ ಶಿವಪಂಚಾಕ್ಷರಿ ಪಠಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರವಣ, ಕೀರ್ತನ, ಅರ್ಚನೆ, ವಂದನೆ, ಧ್ಯಾನ, ಆತ್ಮ ನಿವೇದನೆ ಮೊದಲಾದ ಭಕ್ತಿಯಿಂದ ನಾವು ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು. ಶಿವರಾತ್ರಿ ಸಂದರ್ಭದಲ್ಲಿ ಪುಣ್ಯ ಸಂಚಯನಕ್ಕಾಗಿ ಧರ್ಮಸ್ಥಳಕ್ಕೆ ಬರುವ ಭಕ್ತರು ಎಲ್ಲ ಕಷ್ಟಗಳನ್ನು, ಸಮಸ್ಯೆಗಳನ್ನು ದೇವರ ಪಾದಕ್ಕೆ ಅರ್ಪಿಸಿ ನಿರಾಳವಾಗಿ ಹಿಂದಿರುಗಬೇಕು. ಪಾದಯಾತ್ರೆಯಿಂದ ಎಲ್ಲ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದರು.
ಯಾವುದೇ ಸಾಧನೆಗೆ ದೃಢ ಸಂಕಲ್ಪದ ಭಕ್ತಿ ಮುಖ್ಯ. ಹಿಂದೆ ವರ್ಣಾಶ್ರಮ ಧರ್ಮ ಇದ್ದಾಗ ಜಾತಿ-ಮತ ಭೇದ, ಅಸಮಾನತೆ ಇತ್ತು. ಆದರೆ, ಈಗ ಕಲಿಯುಗದಲ್ಲಿ ಎಲ್ಲರಿಗೂ ಸಮಾನತೆ ಹಾಗೂ ಸಮಾನ ಅವಕಾಶವಿದೆ. ಪವಿತ್ರ ಕ್ಷೇತ್ರಕ್ಕೆ ಬಂದಾಗ ಎಲ್ಲರೂ ತಮ್ಮನ್ನು ತಾವು ಪವಿತ್ರೀಕರಣಗೊಳಿಸಬೇಕು. ಎಲ್ಲ ಪಾಪ ಕರ್ಮಗಳ ಕೊಳೆ ಕಳೆಯಬೇಕು, ಮನಸ್ಸನ್ನು ಪವಿತ್ರಗೊಳಿಸಬೇಕು. ಧರ್ಮಸ್ಥಳಕ್ಕೆ ಸಂಬಂಧಪಟ್ಟಂತೆ ಮಾತು ಬಿಡ ಮಂಜುನಾಥ ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ ಮಾಣಿಕ್ಯ. ಆದುದರಿಂದ ದೈನಂದಿನ ವ್ಯವಹಾರದಲ್ಲಿ ಸತ್ಯ, ಧರ್ಮ ಮತ್ತು ನ್ಯಾಯದ ಪರಿಪಾಲನೆಯೊಂದಿಗೆ ಸಾತ್ವಿಕ ಹಾಗೂ ಸಾರ್ಥಕ ಜೀವನ ನಡೆಸಬೇಕು ಸುಖ ಭೋಗಕ್ಕಾಗಿ ನಾವು ಪಂಚೇಂದ್ರಿಯಗಳ ದಾಸರಾಗಬಾರದು ಎಂದರು.
ಹೇಮಾವತಿ ವಿ, ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪಾದಯಾತ್ರಿಗಳ ಸಂಘದ ನೇತಾರ ಬೆಂಗಳೂರಿನ ಹನುಂತಪ್ಪ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು. ಧರ್ವಸ್ಥಳ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ರಾವ್ ಸ್ವಾಗತಿಸಿ, ವಂದಿಸಿದರು.

ಲಕ್ಷಕ್ಕೂ ಅಧಿಕ ಮಂದಿ ದರ್ಶನ: ದೇವಸ್ಥಾನ ಹಾಗೂ ವಿವಿಧ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಒಂದು ಲಕ್ಷಕ್ಕೂ ಅಧಿಕ ಮಂದಿ ಭಕ್ತರು ದೇವರ ದರ್ಶನ ಪಡೆದರು. ಭಕ್ತರು ಸಂಪ್ರದಾಯಂತೆ ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು. ಸೋಮವಾರ ರಾತ್ರಿ ಇಡೀ ನಾಲ್ಕು ಜಾವಗಳಲ್ಲಿ ಭಕ್ತರು ದೇವರ ದರ್ಶನ ಮಾಡಿ ಸೇವೆ ಸಲ್ಲಿಸಿದರು. ಅಹೋರಾತ್ರಿ ಶಿವ ಪಂಚಾಕ್ಷರಿ ಪಠಣ ನಡೆಯಿತು. ಶಂಖ, ಕೊಂಬು, ಕಹಳೆ, ಚೆಂಡೆ ಮೊದಲಾದ ವೈವಿಧ್ಯಮಯ ಕಲಾವಿದರು ಕಲಾ ಸೇವೆ ಮಾಡಿದರು. ಧರ್ಮಸ್ಥಳದ ನಿವಾಸಿ ಹರೀಶ್ ಕೊಠಾರಿ ನೇತ್ರಾವತಿ ನದಿ ಸ್ನಾನಘಟ್ಟದಿಂದ ಧರ್ಮಸ್ಥಳದ ವರೆಗೆ ಉರುಳು ಸೇವೆ ಮಾಡಿದರು. ಮಂಗಳವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯುತ್ತದೆ.