ಮುಚ್ಚಿದ ಹಾಸನಾಂಬೆ ಗರ್ಭಗುಡಿ

ವಿಜಯವಾಣಿ ಸುದ್ದಿಜಾಲ ಹಾಸನ
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ನಗರದ ಅಧಿದೇವತೆ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಶುಕ್ರವಾರ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮುಚ್ಚಲಾಯಿತು.
ನ. 1 ರಿಂದ 9ರ ವರೆಗೆ ದೇವಿ ಬಾಗಿಲು ತೆರೆದಿದ್ದ ಸಮಯದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನರು ದರ್ಶನ ಪಡೆದರು. ಬಲಿಪಾಡ್ಯಮಿ ಮಾರನೇ ದಿನವಾದ ಶುಕ್ರವಾರ ಮಧ್ಯಾಹ್ನ 1.20ಕ್ಕೆ ದೇವಿ ಗರ್ಭಗುಡಿಯನ್ನು ಮುಚ್ಚಲಾಯಿತು. ಸಂಪ್ರದಾಯದ ಪ್ರಕಾರ ದೇವಿಯ ಸನ್ನಿಧಿಯಲ್ಲಿ ಹೂ, ನೈವೇದ್ಯ ಇಟ್ಟು, ದೀಪ ಹಚ್ಚಲಾಯಿತು.
ಶಾಸಕ ಪ್ರೀತಂ ಜೆ.ಗೌಡ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್ ವರಿಷ್ಠಾಧಿಕಾರಿ ಡಾ. ಎ.ಎನ್.ಪ್ರಕಾಶ್‌ಗೌಡ, ದೇವಾಲಯ ಆಡಳಿತಾಧಿಕಾರಿ ಡಾ. ಎಚ್.ಎಲ್.ನಾಗರಾಜ್, ತಹಸೀಲ್ದಾರ್ ಶಿವಶಂಕರಪ್ಪ ಬಾಗಿಲು ಹಾಕುವಾಗ ಹಾಜರಿದ್ದರು. ಮುಜರಾಯಿ ಇಲಾಖೆಯ ಅಧಿಕಾರಿಗಳಿಂದ ಬೀಗ ಹಾಕಿ ಸೀಲ್ ಒತ್ತಲಾಯಿತು.
——-
ಡಿಸಿ ನೇತೃತ್ವ:
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಧ್ಯಾಹ್ನ 12.30ಕ್ಕೆ ದೇವಾಲಯಕ್ಕೆ ಬಂದ ನಂತರ ಬಾಗಿಲು ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಧಾನ ಅರ್ಚಕ ನಾಗರಾಜ್ ಹಾಗೂ ಇತರರು ಪೂಜೆ ನೆರವೇರಿಸಿದರು. ದೇವಿಗೆ ಅರಿಶಿಣ, ಕುಂಕುಮ, ಬಳೆ ಸೇರಿದಂತೆ ಮಂಗಳ ದ್ರವ್ಯಗಳನ್ನು ಅರ್ಪಿಸಲಾಯಿತು. ಆ ನಂತರ ಪೂಜೆ, ಪ್ರದಕ್ಷಿಣೆ, ಮಂಗಳಾರತಿ ಬಳಿಕ ಸಾರ್ವಜನಿಕರ ಎದುರೇ ಬಾಗಿಲು ಹಾಕಲಾಯಿತು. ಬಾಗಿಲು ಮುಚ್ಚಿದ ತಕ್ಷಣ ದೇವಿಗೆ ಅಲಂಕರಿಸಿದ್ದ ಆಭರಣಗಳ ಉತ್ಸವ ನಡೆಯಿತು. ದಾರಿಯುದ್ದಕ್ಕೂ ಬಿದ್ದ ಕರಿಮೆಣಸು ಕಾಳನ್ನು ಸಂಗ್ರಹಿಸಲು ಜನರು ಮುಗಿಬಿದ್ದರು.
——–
ಭಕ್ತರ ಕಾತರ:
ದೇವಿ ಗರ್ಭಗುಡಿ ಬಾಗಿಲು ಹಾಕುವ ದಿನವಾದ ಶುಕ್ರವಾರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂಬುದನ್ನು ಜಿಲ್ಲಾಡಳಿತ ಮೊದಲೇ ತಿಳಿಸಿತ್ತಾದರೂ, ದೇವಾಲಯದ ಒಳಗೆ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಕೊನೆಯ ಬಾರಿಗೆ ದೇವಿ ದರ್ಶನ ಮಾಡಬೇಕೆಂಬ ಆಸೆಯಿಂದ ಬಂದಿದ್ದ ಜನರು ಪೊಲೀಸರ ಮನವಿ, ಎಚ್ಚರಿಕೆಗೆ ಬಗ್ಗದೆ ದೇವಾಲಯ ಆವರಣದೊಳಗೆ ನುಗ್ಗಿದರು.
ಮುಂದಿನ ವರ್ಷ ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಿಂದ (ಅ. 17 ರಿಂದ 29ರ ವರೆಗೆ) ಶಕ್ತಿ ದೇವತೆ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದಾಳೆ.
——
ದರ್ಶನ ಅವಧಿ ವಿಸ್ತರಣೆಗೆ ಪ್ರಸ್ತಾವನೆ
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಹಾಸನಾಂಬ ದೇವಿ ಬಾಗಿಲನ್ನು ಒಂದು ತಿಂಗಳಿಂದ ಮೂರು ತಿಂಗಳವರೆಗೆ ವಿಸ್ತರಿಸಬೇಕೆಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ದೇವಿ ದರ್ಶನದ ಅವಧಿ ಕಡಿಮೆಯಾಗುತ್ತಿರುವುದರಿಂದ ನೂಕುನುಗ್ಗಲು, ಅವ್ಯವಸ್ಥೆ ಉಂಟಾಗುತ್ತದೆ. ಆದ್ದರಿಂದ ದರ್ಶನ ಅವಧಿ ವಿಸ್ತರಿಸಲು ಕೋರಲಾಗಿದೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ಬದ್ಧರಾಗಬೇಕಾಗುತ್ತದೆ. ಧಾರ್ಮಿಕ ಕಟ್ಟುಪಾಡುಗಳನ್ನೂ ಇಲ್ಲಿ ಪರಿಗಣಿಸಬೇಕಾಗುತ್ತದೆ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಡಾ. ಎ.ಎನ್.ಪ್ರಕಾಶ್‌ಗೌಡ ಮಾತನಾಡಿ, 9 ದಿನಗಳಲ್ಲಿ 3 ಲಕ್ಷ ಸಾರ್ವಜನಿಕರು ದೇವಿ ದರ್ಶನ ಪಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಊರ ದೇವಿ ಜಾತ್ರೆ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದರು.
——-