ಭಾರತರತ್ನಕ್ಕೆ ಭಕ್ತರ ಕೂಗು

ಶ್ರೀಗಳಿಗೆ ‘ಭಾರತರತ್ನ’ ನೀಡಬೇಕು ಎಂಬ ಕೂಗು ಡಾ.ಶಿವಕುಮಾರ ಸ್ವಾಮೀಜಿ ಅಂತಿಮಯಾತ್ರೆಯ ಸಂದರ್ಭದಲ್ಲಿ ಬಲವಾಗಿ ಕೇಳಿಬಂತು. ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಜನ ಸರತಿಯಲ್ಲಿ ನಿಂತಿದ್ದರೂ ಕೇಂದ್ರ ಸರ್ಕಾರ ‘ಭಾರತರತ್ನ’ ನೀಡಲಿ ಎಂದು ಆಗ್ರಹಿಸಿದರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿದಾಗಲೂ ಭಕ್ತರು ಕೈಮುಗಿದು ಶ್ರೀಗಳಿಗೆ ಭಾರತರತ್ನ ಕೊಡಿ ಎಂದು ಕೇಳಿಕೊಂಡರು. ಶ್ರೀಗಳ ಅಂತಿಮ ಕಾರ್ಯವಿಧಾನಗಳು ನಡೆಯುವಾಗ ಮಠದ ಸಾವಿರಾರು ಭಕ್ತರು ‘ಸಿಎಂ ಕುಮಾರಸ್ವಾಮಿ ಅವರೇ, ಯಡಿಯೂರಪ್ಪನವರೇ.. ಶ್ರೀಗಳಿಗೆ ಭಾರತರತ್ನ ಕೊಡಿಸಿ…’ ಎಂದು ಆಗ್ರಹಿಸುತ್ತಲೇ ಇದ್ದರು. ಸರ್ಕಾರದಿಂದ ಶ್ರೀಗಳಿಗೆ ಗೌರವ ಸೂಚಿಸುವಾಗ ಮಠದ ಮಕ್ಕಳು ‘ಬೇಕೇಬೇಕು, ಭಾರತರತ್ನ’ ಎಂದು ಘೊಷಣೆ ಕೂಗಿದರು. ಇದರಿಂದ ಮತ್ತಷ್ಟು ಭಾವುಕರಾದ ಕಿರಿಯ ಶ್ರೀಗಳು, ಸುಮ್ಮನಿರುವಂತೆ ಕೈ ಸಂಜ್ಞೆ ಮೂಲಕ ಕೋರಿದರು.

ಕೈಲಾಸಯಾತ್ರೆಗೆ ಸಾಕ್ಷಿಯಾದ ಲಕ್ಷಾಂತರ ಜನ

ಕಾಯಕ ಸೇವೆ ಮೂಲಕ ಜಗವನ್ನೇ ತನ್ನೆಡೆಗೆ ಸೂಜಿಗಲ್ಲಿನಂತೆ ಸೆಳೆದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ ಕೈಲಾಸಯಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಭಾರವಾದ ಹೃದಯದಿಂದಲೇ ಶ್ರೀಗಳಿಗೆ ಭಕ್ತಸಮೂಹ ಜಯಘೊಷಗಳ ಮೂಲಕ ವಿದಾಯ ಹೇಳಿತು. ಮಠದತ್ತ ಸಮಾಧಾನ ದಿಂದಲೇ ಹೆಜ್ಜೆ ಇಡುತ್ತಿದ್ದ ಜನರ ಚಿತ್ತ ಇದ್ದದ್ದು ಶತಾಯುಷಿ ಕಡೆಗೆ. ಕಿಲೋಮೀಟರ್ ಗಟ್ಟಲೆ ನಡೆದೇ ಸರದಿಯಲ್ಲಿ ಬರುತ್ತಿದ್ದ ಭಕ್ತರು, ಗೋಸಾಲ ಸಿದ್ದೇಶ್ವರ ವೇದಿಕೆಯತ್ತ ಬರುತ್ತಿದ್ದಂತೆ ಭಾವುಕರಾಗಿ ಸ್ವಾಮೀಜಿಯನ್ನೇ ದಿಟ್ಟಿಸಿ ನೋಡುತ್ತ ನಿಂತು ಬಿಡುತ್ತಿದ್ದರು. ಸಿದ್ಧ್ದಂಗೆಯಲ್ಲಿ ಶ್ರೀಗಳದ್ದೇ ಸ್ಮರಣೆ. ಅಷ್ಟೇ ಅಲ್ಲದೆ, ತುಮಕೂರು ನಗರದೆಲ್ಲೆಡೆ ಶ್ರೀಗಳ ಕಟೌಟ್​ಗಳು. ನಾಡಿನ ನಾನಾ ಭಾಗದಿಂದ ಬಂದ ಜನರಿಗೆ ದಾಸೋಹ ವ್ಯವಸ್ಥೆಯನ್ನು ಭಕ್ತಾದಿಗಳೇ ಮಾಡಿದ್ದು ವಿಶೇಷ. ಹೋಟೆಲ್​ಗಳು ಬಂದ್ ಆಗಿದ್ದರೂ, ಎಲ್ಲಿಯೂ ಊಟ, ತಿಂಡಿಗೆ ಸಮಸ್ಯೆಯಾಗಲಿಲ್ಲ. ಎರಡು ದಿನಗಳ ಅವಧಿಯಲ್ಲಿ ಒಂದೇಒಂದು ಅಹಿತಕರ ಘಟನೆ ನಡೆಯಲಿಲ್ಲ ಎಂದು ಜಿಲ್ಲಾಡಳಿತ ಮಾತ್ರವಲ್ಲದೆ, ಭಕ್ತ ಸಮೂಹವೂ ನಿಟ್ಟುಸಿರುಬಿಟ್ಟಿತು.

ಸುಗಮವಾಗಿ ಸಾಗಿದ ಸಂಚಾರ ವ್ಯವಸ್ಥೆ

ಶ್ರೀಗಳ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಲು ಲಕ್ಷಾಂತರ ಭಕ್ತರು ಮಠಕ್ಕೆ ಆಗಮಿಸಿದ್ದರಿಂದ ಸಂಚಾರ ನಿರ್ವಹಣೆ ಪೊಲೀಸರಿಗೆ ಸವಾಲಾಗಿತ್ತು. ಪರಿಸ್ಥಿತಿಯ ಅರಿವಿದ್ದ ಪೊಲೀಸರು ಸಾರ್ವಜನಿಕ ಸಂಚಾರಕ್ಕೆ ಮಾರ್ಗ ಬದಲಿಸಿದ್ದರಿಂದ ಬೆಂಗಳೂರಿಗೆ ತೆರಳುವ ಹಾಗೂ ಆಗಮಿಸುವ ಪ್ರಯಾಣಿಕರಿಗೆ ತೊಂದರೆ ಆಗಲಿಲ್ಲ. ಮಠಕ್ಕೆ ಆಗಮಿಸುವ ವಾಹನಗಳ ನಿಲುಗಡೆಗೆ ಎಪಿಎಂಸಿ, ಇಸ್ರೋ ಆವರಣ ಹಾಗೂ ಕ್ಯಾತಸಂದ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿತ್ತು. ವಿವಿಐಪಿಗಳ ವಾಹನ ಮಾತ್ರ ಮಠದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಹೊರ ಪ್ರದೇಶದ ಭಕ್ತರು ದರ್ಶನ ಪಡೆಯಲು ಅನುಕೂಲವಾಗಲಿ ಎಂದು ತುಮಕೂರು ನಗರವಾಸಿಗಳು ಸೋಮವಾರವೇ ಶ್ರೀಗಳ ದರ್ಶನ ಪಡೆದಿದ್ದರು. ಸೋಮವಾರ ಮಧ್ಯಾಹ್ನ 2.30ರಿಂದ ಮಂಗಳವಾರ ಸಂಜೆ 5ರವರೆಗೆ ಶ್ರೀಗಳ ದರ್ಶನಕ್ಕೆ ಸಾಗರೋಪಾದಿಯಲ್ಲಿ ಜನರು ಹರಿದು ಬಂದರು. ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಸ್ವಾಮೀಜಿ ಅವರನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಕಣ್ತುಂಬಿಕೊಂಡರು. ಭದ್ರತೆ ಕಾರಣದಿಂದ ಸ್ವಾಮೀಜಿ ಗದ್ದುಗೆ ಸ್ಥಳಕ್ಕೆ ಎಲ್ಲರಿಗೂ ಪ್ರವೇಶ ಸಿಗಲಿಲ್ಲ. ಹಾಗಾಗಿ, ಬೃಹತ್ ಪರದೆಯಲ್ಲಿ ಭಕ್ತರಿಗೆ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.

ಸಿದ್ಧಗಂಗಾ ಸಾರಿಗೆಯಲ್ಲಿ ಉಚಿತ ಪ್ರಯಾಣ

ತುಮಕೂರು ನಗರವಾಸಿಗಳಿಗೆ ಮಠಕ್ಕೆ ತೆರಳಲು ಕೆಎಸ್​ಆರ್​ಟಿಸಿ, ಸರ್ಕಾರಿ ಜೂನಿಯರ್ ಕಾಲೇಜು ಮೈದಾನ, ತುಮಕೂರು ವಿವಿ ಸೇರಿ ಇತರ ಕಡೆಗಳಿಂದ ಸಿದ್ಧಗಂಗಾ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ತುಮಕೂರಿನಿಂದ ಸಿದ್ಧಗಂಗಾ ಮಠಕ್ಕೆ ಆಗಮಿಸುವ ಭಕ್ತರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಸೋಮವಾರದಿಂದಲೇ ಕೆಎಸ್​ಆರ್​ಟಿಸಿ ಒದಗಿಸಿತ್ತು. ಕ್ಯಾತಸಂದ್ರವರೆಗೂ ಬಸ್​ನಲ್ಲಿ ತೆರಳಿ ಅಲ್ಲಿಂದ ಮಠಕ್ಕೆ ನಡೆದುಕೊಂಡು ಹೋಗಲು ಅವಕಾಶವಿತ್ತು.

ಬಸ್ ​ಟಾಪ್​ನಲ್ಲೂ ಜನ

ತುಮಕೂರು ಸುತ್ತಮುತ್ತಲ ಹಳ್ಳಿಗಳಿಂದ ಆಗಮಿಸಿದ್ದ ಖಾಸಗಿ ಬಸ್​ಗಳು ತುಂಬಿದ್ದವು. ಸ್ವಾಮೀಜಿಗೆ ಭಕ್ತಿ ಸಮರ್ಪಣೆ ಮಾಡುವ ಬ್ಯಾನರ್ ಹಾಕಿಕೊಂಡು ಬಸ್ ಟಾಪ್​ನಲ್ಲೂ ಕುಳಿತುಕೊಂಡು ಜನರು ಬಂದಿದ್ದರು.

ತ್ರಿವಿಧ ದಾಸೋಹಿ, ದೇಶಕಂಡ ಮಹಾನ್ ಸಂತ ಶ್ರೀ ಶಿವಕುಮಾರ ಸ್ವಾಮೀಜಿ ಅಗಲಿಕೆ ಯಿಂದ ನಾಡಿಗೆ ಅಪಾರ ನಷ್ಟವಾಗಿದೆ.

| ರಕ್ಷಾ ರಾಮಯ್ಯ, ಕಾಂಗ್ರೆಸ್ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಉಸ್ತುವಾರಿ

ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ ವಿಷಯ ಅಪಾರ ದುಃಖ ತರಿಸಿದೆ. ಶ್ರೀಗಳಿಂದ ಲಕ್ಷಾಂತರ ಜನರ ಜೀವನ ಬೆಳಗಿದೆ. ಅವರ ಚೈತನ್ಯ ಎಂದಿಗೂ ಭಾರತದ ಜನತೆಗೆ ದಾರಿ ದೀಪವಾಗಿರುತ್ತದೆ. ಅವರ ಸಮಕಾಲೀನರಾಗಿದ್ದವರೆಲ್ಲರೂ ಭಾಗ್ಯವಂತರು.

| ಶ್ರೀ ರವಿಶಂಕರ ಗುರೂಜಿ, ಸಂಸ್ಥಾಪಕ, ದಿ ಆರ್ಟ್ ಆಫ್ ಲಿವಿಂಗ್

ಡಾ.ಶಿವಕುಮಾರ ಸ್ವಾಮೀಜಿ ಅಂತಿಮ ದರ್ಶನದಲ್ಲಿ ಭಾಗವಹಿಸಿದ್ದು ನನ್ನ ಜೀವನದ ಸಾರ್ಥಕ ಕ್ಷಣ. ಇಷ್ಟೊಂದು ಜನರ ಪ್ರೀತಿ ಗಳಿಸುವುದು ಸಾರ್ಥಕ ಸೇವೆ ಸಲ್ಲಿಸಿರುವ ಪೂಜ್ಯರಿಗೆ ಮಾತ್ರ ಸಾಧ್ಯ. ನಾನು ಈ ಕ್ಷಣವನ್ನು ತಪ್ಪಿಸಿಕೊಂಡಿದ್ದರೆ ಅಭೂತಪೂರ್ವ ಕ್ಷಣ ಕಳೆದುಕೊಳ್ಳುತ್ತಿದ್ದೆ.

| ಬಾಬಾ ರಾಮದೇವ್, ಯೋಗ ಗುರು

ಪೊಲೀಸರ ಕರ್ತವ್ಯಕ್ಕೆ ಶ್ಲಾಘನೆ

ರಾಜ್ಯದ ಇತಿಹಾಸದ ಪುಟದಲ್ಲಿ ದಾಖಲಾದ ಡಾ.ಶಿವಕುಮಾರ ಸ್ವಾಮೀಜಿ ಅಂತಿಮ ಯಾತ್ರೆ ನಿರ್ವಹಣೆಗೆ ಶ್ರಮಿಸಿದ ಪೊಲೀಸರ ಕರ್ತವ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಯಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಪೊಲೀಸರು ಎರಡೂ ದಿನ ನಿರಂತರ ವಾಗಿ ಸಂಚಾರ ಹಾಗೂ ಜನರನ್ನು ನಿಯಂತ್ರಿಸಿದರು. ಲಕ್ಷಾಂತರ ಜನರು ಏಕಕಾಲದಲ್ಲಿ ಮಠಕ್ಕೆ ಆಗಮಿಸಿದ್ದರೂ ಎಲ್ಲಿಯೂ ಸಣ್ಣ ವ್ಯತ್ಯಾಸವಾಗದಂತೆ ಕರ್ತವ್ಯ ನಿರ್ವಹಿಸಿದರು.

15 ಲಕ್ಷ ಜನ ಮಠದ ಆವರಣದಲ್ಲಿದ್ದರೂ ಭದ್ರತೆ ಒದಗಿಸಲಾಗಿತ್ತು. ಸರತಿಯಲ್ಲಿ ಬರುತ್ತಿದ್ದ ಭಕ್ತರಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ವಿವಿಐಪಿಗಳಿಗೂ ಸೂಕ್ತ ಭದ್ರತೆ ನೀಡಲಾಗಿತ್ತು.

| ಕಮಲ್ ಪಂತ್, ಎಡಿಜಿಪಿ

ದಾಸೋಹಕ್ಕೆ ಭಕ್ತರ ಪ್ರವಾಹ

‘ಶಿವಗಂಗೆ ನೋಟ ಚೆಂದ, ಸಿದ್ಧಗಂಗೆ ಊಟ ಚೆಂದ’ ಎಂಬ ಮಾತಿದೆ. ಅದಕ್ಕೆ ತಕ್ಕ ಹಾಗೆ ಎರಡು ದಿನಗಳಿಂದ ನಿರಂತರ ದಾಸೋಹ ನಡೆಯಿತು. ಸಿದ್ಧಗಂಗಾ ಶ್ರೀಗಳ ದರ್ಶನಕ್ಕೆ ಸೋಮವಾರ ಮಧ್ಯಾಹ್ನದಿಂದಲೇ ಪ್ರವಾಹೋಪಾದಿಯಲ್ಲಿ ಬಂದಿದ್ದ ಭಕ್ತರಿಗೆ ಅಚ್ಚುಕಟ್ಟಾದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 15 ಲಕ್ಷಕ್ಕೂ ಹೆಚ್ಚು ಭಕ್ತರು 24 ಗಂಟೆಗಳಲ್ಲಿ ಶ್ರೀಗಳ ದರ್ಶನ ಮಾಡಿರುವುದು ದಾಖಲೆ ಎನಿಸಿದೆ.

ಶ್ರೀಗಳು ಶಿವೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ಮಠದ ಭೋಜನ ಶಾಲೆಯಲ್ಲಿ ದಾಸೋಹ ಆರಂಭಿಸಲಾಯಿತು. ಭಕ್ತರಿಗೆ ಪ್ರಸಾದ ನೀಡಲು 10 ಭೋಜನಾಲಯ ತೆರೆಯಲಾಗಿತ್ತು. ಒಂದು ಪಂಕ್ತಿಯಲ್ಲಿ 15 ಸಾವಿರ ಜನರು ಊಟ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಅದರಂತೆ 2 ದಿನ ಅಂದಾಜು 15 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಸಾದ ಬಡಿಸಲಾಯಿತು. ಪ್ರಸಾದ ನೀಡಲು ಮಠದ ಸಿಬ್ಬಂದಿ, ಶಿಕ್ಷಕ ವರ್ಗ, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಸ್ವಯಂಸೇವಕರು ಸೇರಿ 2 ಸಾವಿರಕ್ಕೂ ಹೆಚ್ಚಿನ ಜನ 24 ಗಂಟೆ ನಿರಂತರ ದಾಸೋಹದ ಕೊಪ್ಪಲುಗಳಲ್ಲಿ ಕಾರ್ಯ ನಿರ್ವಹಿಸಿದರು. ದಾಸೋಹದ ಆಹಾರವನ್ನು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಾಧಿಕಾರಿಗಳು ಪರೀಕ್ಷಿಸಿದರು.

ಸಾವಿರ ಕ್ವಿಂಟಾಲ್​ಗೂ ಹೆಚ್ಚು ಅಕ್ಕಿ ಬಳಕೆ: ದಾಸೋಹಕ್ಕೆ 1 ಸಾವಿರ ಕ್ವಿಂಟಾಲ್​ಗೂ ಹೆಚ್ಚು ಅಕ್ಕಿ, 400 ಕ್ವಿಂಟಾಲ್ ಬೇಳೆ, 300 ಕ್ವಿಂಟಾಲ್ ಸಕ್ಕರೆ ಸೇರಿ ಇನ್ನಿತರ ಆಹಾರ ಪದಾರ್ಥ ಬಳಸಲಾಗಿದೆ. ಅಲ್ಲದೆ ಭಕ್ತರು ಸ್ವಯಂಪ್ರೇರಿತರಾಗಿ ದವಸ-ಧಾನ್ಯದ ಜತೆಗೆ ತರಕಾರಿಗಳನ್ನು ಸೋಮವಾರದಿಂದಲೇ ಮಠಕ್ಕೆ ತಂದಿದ್ದರು. ಯಾರೂ ತಾವು ಎಲ್ಲಿಂದ ಬಂದಿದ್ದೇವೆ ಎನ್ನುವುದನ್ನು ಹೇಳದೆ ನಿಸ್ವಾರ್ಥವಾಗಿ ಮಠದ ದಾಸೋಹಕ್ಕೆ ಕೈಲಾದ್ದನ್ನು ಅರ್ಪಿಸಿದರು.

60 ಕಡೆ ವ್ಯವಸ್ಥೆ: ತುಮಕೂರು ನಗರ ವೀರಶೈವ ಸಮಾಜ ಸೇರಿ ಬೇರೆ ಬೇರೆ ಸಂಘಟನೆಗಳು ಶ್ರೀಗಳ ದರ್ಶನಕ್ಕೆ ನಾಡಿನೆಲ್ಲೆಡೆಯಿಂದ ಬರುತ್ತಿದ್ದ ಭಕ್ತರಿಗೆ ಪ್ರಸಾದಕ್ಕೆ ತೊಂದರೆಯಾಗದಂತೆ ನಗರದ 60 ಕಡೆ ದಾಸೋಹದ ಕೌಂಟರ್ ತೆರೆದಿದ್ದವು. ಜೆ.ಸಿ.ರಸ್ತೆಯ ವೀರಶೈವ ಕಲ್ಯಾಣ ಮಂಟಪ, ಬಿ.ಎಚ್.ರಸ್ತೆಯ ಶ್ರೀ ಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿ ಪ್ರಸಾದ ತಯಾರಿಸಿ ಅಲ್ಲಿಂದ ದಾಸೋಹದ ಕೌಂಟರ್​ಗಳಿಗೆ ಸಾಗಿಸಿ ಭಕ್ತರಿಗೆ ನೀಡಲಾಯಿತು. ಅದೇ ರೀತಿ ನಗರದಾದ್ಯಂತ ವಿವಿಧ ಸಂಘಟನೆಗಳು ಪ್ರಸಾದ ವಿತರಿಸಿದರು.

ನಿರಂತರ ಭಜನೆ

ಸೋಮವಾರ ಸಂಜೆಯಿಂದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ನಿರಂತರ ಭಜನೆ ನಡೆಯಿತು. ವಜ್ರಮಹೋತ್ಸವ ವಿದ್ಯಾರ್ಥಿ ನಿಲಯದ ಬಳಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದ್ದ ಮಕ್ಕಳು ಶ್ರೀಗಳ ದರ್ಶನ ಮಂಟಪದ ಬಳಿ ಪ್ರಾರ್ಥನೆ ಸಲ್ಲಿಸಿದರು.