ಕನಸಿನಲ್ಲಿ ಬಂದ ಆಂಜನೇಯ: ಜಮೀನು, ಮನೆ ಮಾರಿ ಗುಡಿಯ ಕಟ್ಟಿದ ಭಕ್ತ

ಚಿಕ್ಕಬಳ್ಳಾಪುರ: ಕನಸಲ್ಲಿ ಬಂದ ಆಂಜನೇಯನ ಆಣತಿಯಂತೆ ಬೆಟ್ಟದ ಮೇಲೆ ದೇಗುಲ ಕಟ್ಟಿದ ಭಕ್ತನೊಬ್ಬನ ಕತೆಯಿದು.

ಚಿಂತಾಮಣಿ ತಾಲ್ಲೂಕು ಕಾವಡಿಗಾನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬುವವರು ಚಿಕ್ಕಬಳ್ಳಾಪುರ ಜಿಲ್ಲೆಯ ಅಂಬಾಜಿದುರ್ಗದ ಬೆಟ್ಟದ ಮೇಲೆ ಹನುಮನಿಗಾಗಿ ಗುಡಿಯೊಂದನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ನಂದಿಬೆಟ್ಟಕ್ಕೂ ಎತ್ತರವಿರುವ ಈ ಗಿರಿಧಾಮಕ್ಕೆ ತಮ್ಮದೇ ಸ್ವಂತ ಖರ್ಚಿನಲ್ಲಿ ರಸ್ತೆಯನ್ನೂ ನಿರ್ಮಾಣ ಮಾಡಿದ್ದಾರೆ. ಇದಕ್ಕಾಗಿ ಅವರು ತಮ್ಮ ಸ್ವಂತ ಜಮೀನು ಮತ್ತು ಮನೆಯನ್ನು ಮಾರಿಕೊಂಡಿದ್ದಾರೆ.

ನಾರಾಯಣ ಸ್ವಾಮಿ ಅವರಿಗೆ ಆಂಜನೇಯ ಕನಸಿನಲ್ಲಿ ಬರುತ್ತಿದ್ದನಂತೆ. ತನಗೊಸ್ಕರ ಗುಡಿ‌ಕಟ್ಟಿಸಿ‌ ನಿತ್ಯ ಪೂಜೆ ಕಲ್ಪಿಸುವಂತೆ ಹೇಳಿದ್ದನಂತೆ. ಅದರಂತೆ ದೇವರು ಕನಸಿನಲ್ಲಿ ಹೇಳಿದ್ದನ್ನು ನಾರಾಯಣಸ್ವಾಮಿ ಊರಿನವರಿಗೆ ಹೇಳಿದ್ದರು. ಆದರೆ, ಊರಿನವರು ನಾರಾಯಣಸ್ವಾಮಿಯನ್ನು ಗೇಲಿ ಮಾಡಿದ್ದರು. ಅತ್ತ ನಾರಾಯಣ ಸ್ವಾಮಿ ಅವರೂ ಸುಮ್ಮನಾಗಿದ್ದರು. ಆದರೆ, ಆಂಜನೇಯ ಮರಳಿ ಕನಸಿನಲ್ಲಿ ಬಂದಿದ್ದನಂತೆ. ಆಗ ನಾರಾಯಣಸ್ವಾಮಿ ತನ್ನ ಜಮೀನು, ಮನೆಯನ್ನು 8 ಲಕ್ಷಕ್ಕೆ ಮಾರಿ‌ ಅಂಬಾಜಿದುರ್ಗ‌‌ ಬೆಟ್ಟಕ್ಕೆ ರಸ್ತೆ ನಿರ್ಮಿಸಿ, ಅದಾಗಲೇ ಬೆಟ್ಟದ ಮೇಲಿದ್ದ ಸಣ್ಣ ದೇಗುಲವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಈಗ ಅಲ್ಲಿ ನಿತ್ಯವೂ ಪೂಜಾ ಕೈಂಕರ್ಯ ಕೈಗೊಂಡಿದ್ದಾರೆ.

ಅಷ್ಟೇ ಅಲ್ಲ, ದೇಗುಲಕ್ಕೆ ಬರುವ ಭಕ್ತರನ್ನು ಬೆಟ್ಟಕ್ಕೆ ಕರೆದೊಯ್ಯಲೆಂದು ಅವರೇ ಸ್ವತಃ ಸಾರಿಗೆ ವ್ಯವಸ್ಥೇ ಮಾಡಿದ್ದಾರೆ. ತಮ್ಮದೊಂದು ಜೀಪ್​ ಮೂಲಕ ಭಕ್ತರನ್ನು ಬೆಟ್ಟಕ್ಕೆ ಅವರು ಉಚಿತವಾಗಿ ಕರೆದೊಯ್ಯುತ್ತಾರೆ.

ಅಂಬಾಜಿ ಬೆಟ್ಟದ ಪುರಾಣ ಕತೆ

ಅಂಬಾಜಿದುರ್ಗದ ಬೆಟ್ಟಕ್ಕೂ ರಾಮಾಯಣಕ್ಕೂ ಸಂಬಂಧವಿದೆ ಎನ್ನಲಾಗಿದೆ. ಸೀತಾ ಮಾತೆ ವನವಾಸದ ಸಮಯದಲ್ಲಿ ಅಂಬಾಜಿದುರ್ಗದ ಬೆಟ್ಟದ ಗಿರಿ ಮಲ್ಲೇಶ್ವರನನ್ನು ನಿತ್ಯವೂ ಪೂಜಿಸುತ್ತಿದ್ದಳು. ನಂತರ ಅಲ್ಲಿ ನಂದಾದೀಪ ಬೆಳಗಿಸುತ್ತಿದ್ದಳು. ಸೀತೆಗೆ ಅಡ್ಡಿ ಪಡಿಸುತ್ತಿದ್ದ ದುಷ್ಟ ರಾಕ್ಷಸರನ್ನು ಆಂಜನೇಯ ಸಂಹಾರ ಮಾಡುತ್ತಿದ್ದ ಎಂಬುದು ಇಲ್ಲಿನ ಜನಪದರು ಹೇಳುವ ಕತೆಗಳು.ಈ ಕತೆಗಳಿಗೆ ಪೂರಕವೆಂಬಂತೆ ಬೆಟ್ಟದಲ್ಲಿ ಎಣ್ಣೆ ಕಣಜ, ಪುರಾತನ ಶಿಲೆಗಳು, ವಿಗ್ರಹಗಳು ಅಲ್ಲಿ ಕಾಣಸಿಗುತ್ತವೆ.

ಬೆಟ್ಟದ ಸೊಬಗು

ಅಂಬಾಜಿದುರ್ಗದ ಬೆಟ್ಟ ಕೇವಲ ಪೌರಾಣಿಕತೆಯಿಂದ ಮಾತ್ರ ಪ್ರಸಿದ್ದ ಪಡೆದಿಲ್ಲ. ಅಂಬಾಜಿದುರ್ಗ ಬೆಟ್ಟ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕಿಂತ ಎತ್ತರದಲ್ಲಿರುವುದರಿಂದ ಮುಂಜಾನೆಯ ಸಮಯದಲ್ಲಿ ಸೂರ್ಯೋದಯದ ದೃಶ್ಯ ಮನಮೋಹಕವಾಗಿರುತ್ತದೆ. ಮುದ ನೀಡುವ ವಾತಾವರಣ, ಮಂಜಿನ ಹನಿಗಳು‌ ಜನರನ್ನೂ ಮತ್ತಷ್ಟು ಆಕರ್ಷಿಸುತ್ತಿವೆ.