
ಹೆತ್ತವರ ಪಕದಲ್ಲಿ ಸಮಾಧಿ | ಖರ್ಗೆ ಶಾಸಕರು ಡಿಸಿ ಸೇರಿ ಗಣ್ಯರಿಂದ ಅಂತಿಮ ನಮನ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬೆಂಗಳೂರಿನಲ್ಲಿ ಮಂಗಳವಾರ ನಿಧನರಾಗಿದ್ದ ವಿಧಾನ ಪರಿಷತ್ ಮಾಜಿ ಸಭಾಪತಿಯಾಗಿದ್ದ ಕಾಂಗ್ರೆಸ್ ನಾಯಕ ಡೇವಿಡ್ ಸಿಮೆಯೋನ್ (೭೫) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಗುರುವಾರ ನಗರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಕ್ರೆÊಸ್ತ್ ಧರ್ಮದ ವಿಧಿ ವಿಧಾನಗಳಂತೆ ನೆರವೇರಿಸಲಾಯಿತು.
ಇಲ್ಲಿನ ವೆಂಕಟೇಶ ನಗರದಲ್ಲಿರುವ ಕ್ರಿಶ್ಚಿಯನ್ ಗ್ರೇ ಯಾರ್ಡ್ದಲ್ಲಿ ಹೆತ್ತರ ಸಮಾಧಿ ಪಕ್ಕದಲ್ಲಿಯೇ ಡೇವಿಡ್ ಸಿಮೆಯೋನ್ ಅವರ ಅಂತ್ಯಕ್ರಿಯೆ ಮಾಡಲಾಯಿತು. ಇದರೊಂದಿಗೆ ನಗುಮೊಗದ ಜನಪರ ಕಾಳಜಿಯ ನಾಯಕ ಪಂಚಭೂತಗಳಲ್ಲಿ ಲೀನಗೊಂಡರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಜೂ.೧೧ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.
ಬುಧವಾರ ಬೆಂಗಳೂರಿನ ರಿಚ್‌ಮಂಡ್ ಟೌನ್ ಮೆಥೋಡಿಸ್ಟ್ ಚರ್ಚ್ (ಆರ್‌ಟಿಎಂಸಿ)ನಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಿದ ನಂತರ ಕಲಬುರಗಿಗೆ ಪಯಣ ಆರಂಭಿಸಲಾಯಿತು. ಬರುವ ಮಾರ್ಗದಲ್ಲಿ ಅವರ ಹುಟ್ಟೂರು ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮಕ್ಕೆ ಶವವನ್ನು ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಬಂಧುಗಳು-ಗ್ರಾಮಸ್ಥರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.
ಅಲ್ಲಿಂದ ಕಲಬುರಗಿಯ ಶಾಂತಿ ನಗರದಲ್ಲಿರುವ ಅವರ ನಿವಾಸಕ್ಕೆ ಡೇವಿಡ್ ಸಿಮೆಯೋನ್ ಅವರ ಪಾರ್ಥಿವ ಶರೀರ ತರಲಾಯಿತು. ಕೆಲಹೊತ್ತು ಅಲ್ಲಿ ಇರಿಸಿದ ನಂತರ ಐವಾನ್-ಇ-ಶಾಹಿ ರಸ್ತೆಯಲ್ಲಿರುವ ಸೆಂಟ್ರಲ್ ಮೆಥೋಡಿಸ್ಟ್ ಚರ್ಚ್ಗೆ ತರಲಾಯಿತು. ಸಭಾಂಗಣದಲ್ಲಿ ಇರಿಸಿ ಪ್ರಾರ್ಥನೆ ಸಲ್ಲಿಸಿ ಧಾರ್ಮಿಕ ವಿಧಾನಗಳನ್ನು ನೆರವೇರಿಸಲಾಯಿತು. ಫಾದರ್ ಫಾಲ್ ಮಧುಕರ್,ರೆವರೆಂಡ್ ಸುರೇಶ ಮಾರ್ಕ್ ಅವರು ಧರ್ಮದ ವಿಧಿ-ವಿಧಾನ ನೆರವೇರಿಸಿ ಪ್ರಾರ್ಥಿಸಿದರು. ಕಲಬುರಗಿ ಧರ್ಮಕ್ಷೇತ್ರದ ಧರ್ಮಗುರು ಫಾದರ್ ವಿಕ್ಟರ್ ಮಚಾದೋ ಇತರರಿದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಮೊದಲಾದವರು ಅಂತಿಮ ನಮನ ಸಲ್ಲಿಸಿದರು. ಪೊಲೀಸರು ಮೂರು ಸುತ್ತು ಕುಶಾಲ ತೋಪು ಹಾರಿಸುವ ಮೂಲಕ ಗೌರವ ಸಲ್ಲಿಸಿದರು. ನಂತರ ಶವದ ಮೇಲೆ ಹೊದಿಸಲಾಗಿದ್ದ ರಾಷ್ಟç ಧ್ವಜವನ್ನು ಡೇವಿಡ್ ಅವರ ಪತ್ನಿ ಸುಝನ್ ಡೇವಿಡ್ ಸಿಮೆಯೋನ್ ಅವರಿಗೆ ಸಹಾಯಕ ಆಯುಕ್ತೆ ಸಾಹಿತ್ಯ ಹಸ್ತಾಂತರಿಸಿದರು.