ಇಂಡಿ: ಪ್ರತಿಯೊಬ್ಬರೂ ದೇವಿಯನ್ನು ಶ್ರದ್ಧೆ, ನಿಷ್ಠೆಯಿಂದ ಆರಾಧಿಸಿದರೆ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಇಂಡಿಯ ಗ್ರಾಮೀಣ ಸಿಪಿಐ ಮಲ್ಲಿಕಾರ್ಜುನ ಡಪ್ಪಿನ ಹೇಳಿದರು.
ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ಗುರುವಾರ ನಡೆದ ಬೆಳಗಿನ ಆರತಿ ಕಾರ್ಯಕ್ರಮ ಹಾಗೂ ಎರಡು ಕೆ.ಜಿ.ಬಂಗಾರದ ಕಿರೀಟ ತಯಾರಿಸಲು ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂಬತ್ತು ದಿನ ದೇವಿಯನ್ನು ವಿವಿಧ ರೀತಿಯಲ್ಲಿ ಪೂಜೆ ಮಾಡಲಾಗುತ್ತದೆ. ದೇವಿಯನ್ನು ಅತ್ಯಂತ ಭಕ್ತಿ ಭಾವದಿಂದ ಭಜಿಸಿದರೆ ಭಕ್ತರ ಇಷ್ಟಾರ್ಥಗಳನ್ನು ದೇವಿ ಈಡೇರಿಸುತ್ತಾಳೆ. ಸಂಸಾರಿಕ ಜೀವನದ ಜಂಜಾಟದಲ್ಲಿ ಸಿಲುಕಿ ಭವ ಬಾಧೆಯಿಂದ ಮನುಷ್ಯ ತೊಳಲಾಡುತ್ತಾನೆ. ಈ ತಾಕಲಾಟದಿಂದ ಮುಕ್ತಿ ಪಡೆಯಲು ಕ್ಷೇತ್ರಗಳ ದರ್ಶನ, ಮಹಾತ್ಮರ ಆಶೀರ್ವಾದ ಅವಶ್ಯ ಎಂದರು.
ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ಸಂಕಟ ಬಂದಾಗ ಸಹಜವಾಗಿ ಆತಂಕಕ್ಕೆ ಒಳಗಾಗುತ್ತಾನೆ. ಈ ಆತಂಕದಿಂದ ದೂರವಾಗಲು ಮತ್ತು ಜೀವನದಲ್ಲಿ ಒಳಿತಾಗಲು ಅಧ್ಯಾತ್ಮದ ಕಡೆಗೆ ಒಲವು ತೋರುವ ಅವಶ್ಯಕತೆ ಇದೆ ಎಂದರು.
ಇದೇ ವೇಳೆ ಶ್ರೀದೇವಿ ಮೂರ್ತಿಗೆ ಎರಡು ಕೆ.ಜಿ. ಬಂಗಾರದ ಕಿರೀಟಕ್ಕಾಗಿ ಬಂಗಾರದ ರೂಪದಲ್ಲಿ ಸಹಾಯ ನೀಡಿದ ಬಾಲಾಜಿ ಇಪಕ್ವಾಯಿಲ್, ಮಂಜುನಾಥ ಕಾಮಗೊಂಡ, ಚಂದು ದೇವರ, ಮಹಾದೇವ ಬಾರಿಕಾಯಿ, ಹೀರಾಚಂದ ಹಳ್ಳಿ, ಸಿದ್ರಾಮ ನಿಗಡಿ ಸೇರಿ ಅನೇಕರನ್ನು ಸನ್ಮಾನಿಸಲಾಯಿತು.
ದೇವಸ್ಥಾನ ಸಮಿತಿಯ ಅಧ್ಯಕ್ಷ ನಾಗನಾಥ ಹಂಚಾಟೆ, ಬಾಳು ಕಠಾರೆ, ಸುನೀಲ ಸುಲಾಖೆ, ಕಿರಣ ಬಳಮಕರ, ಗಣೇಶ ಮಹಿಂದ್ರಕರ, ಸುಭಾಷ ಬಳಮಕರ, ಅರ್ಚಕ ಶಿವಾನಂದ ಪೂಜಾರಿ, ಶಿವಾನಂದ ಕೊಪ್ಪದ, ಮೋತಿಲಾಲ ಕೋಳೆಕರ, ಅಮರ ಪತಂಗೆ, ಸಿದರೇಶ ಬಳಮಕರ, ಉದಯ ವಡತೇಲಿ, ಅಜೀತ ಶಹಾ, ಕಿರಣ ಕೋಳೆಕರ ಇತರರಿದ್ದರು.