ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಮತ್ತೆ ಭಕ್ತರಿಗೆ ಸೋಮವಾರದಿಂದ ದೊರೆಯಲಿದೆ. ಇದಕ್ಕಾಗಿ ದೇಗುಲದಲ್ಲಿ ಸಕಲ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ.
ಕರೊನಾ ವೈರಾಣು ಹರಡುವಿಕೆ ತಡೆಯಲು ಮಾರ್ಚ್ 22ರಿಂದಲೇ ದೇವಸ್ಥಾನಕ್ಕೆ ಸಾರ್ವಜನಿಕರ, ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ, ದೇವಿಯ ದರ್ಶನಕ್ಕೆ ಭಕ್ತರ ಕಾತುರ ಹೆಚ್ಚಾಗಿದೆ. ಬರೋಬ್ಬರಿ 79 ದಿನಗಳ ಬಳಿಕ ದೇಗುಲಕ್ಕೆ ಸಾರ್ವಜನಿಕರಿಗೆ ಪ್ರವೇಶ ಭಾಗ್ಯ ದೊರೆಯಲಿದೆ.
5ನೇ ಲಾಕ್‌ಡೌನ್ ಸಡಿಲಗೊಂಡಿದ್ದು, ಕೆಲ ಷರತ್ತು ಅನ್ವಯ ದೇಗುಲ ತೆರೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಅಂತೆಯೇ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.
ದರ್ಶನಕ್ಕೆ ಸೋಮವಾರ ಬೆಳಗ್ಗೆ ದೇಗುಲದ ಬಾಗಿಲು ತೆರೆಯಲಾಗುವುದು. ಸರ್ಕಾರದ ಮಾರ್ಗಸೂಚಿಯಂತೆ ತಯಾರಿ ಮಾಡಿಕೊಂಡಿದ್ದು, ಕರೊನಾ ಹರಡದಂತೆ ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗುತ್ತಿದೆ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿಯೂ ಆಗಿರುವ ಮುಜರಾಯಿ ಇಲಾಖೆ ತಹಸೀಲ್ದಾರ್ ಯತಿರಾಜ್ ತಿಳಿಸಿದರು.
ಸದ್ಯಕ್ಕೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಉಳಿದ ಸೇವೆಗಳು ಇರುವುದಿಲ್ಲ. ಜತೆಗೆ ಹೂ, ಹಣ್ಣು, ಕಾಯಿ ಮುಂತಾದ ಪೂಜಾ ಸಾಮಗ್ರಿಗಳನ್ನು ತರುವಂತಿಲ್ಲ. ತೀರ್ಥ, ಪ್ರಸಾದ ಇರುವುದಿಲ್ಲ.
ಭಾನುವಾರ ಮತ್ತೊಮ್ಮೆ ದೇಗುಲದ ಆವರಣ ತೊಳೆದು ಸ್ವಚ್ಛಗೊಳಿಸಲಾಗಿದೆ. ಅಂತರ ಕಾಯ್ದುಕೊಳ್ಳಲು ಆರು ಅಡಿಗೊಂದು ಮಾರ್ಕಿಂಗ್ ಮಾಡಲಾಗಿದೆ. ಆ ಬಾಕ್ಸ್‌ನ ಸ್ಥಳದಲ್ಲೇ ಜನರು ನಿಲ್ಲಬೇಕು. ಥರ್ಮಲ್ ಸ್ಕ್ರೀನಿಂಗ್ ನಡೆಸಲು ಹಾಗೂ ಸ್ಯಾನಿಟೈಸರ್ ನೀಡಲು ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಾಲಿನಲ್ಲಿ ಸಾಗಲು ಅನುಕೂಲವಾಗಲು ಬ್ಯಾರಿಕೇಡ್ ಕೂಡ ಅಳವಡಿಸಲಾಗಿದೆ.
ಜ್ವರ, ಕೆಮ್ಮು, ನೆಗಡಿ ಹಾಗೂ ಇತರ ರೋಗ ಲಕ್ಷಣಗಳು ಇದ್ದರೆ ದೇವಾಲಯಕ್ಕೆ ಪ್ರವೇಶ ಇರುವುದಿಲ್ಲ. ಗರ್ಭಿಣಿಯರು, 65 ವರ್ಷ ಮೇಲಿನವರು, 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಪೂರ್ಣ ಲಾಕ್‌ಡೌನ್ ಇದ್ದಾಗಲೂ ಚಾಮುಂಡೇಶ್ವರಿ ದೇಗುಲದಲ್ಲಿ ನಿತ್ಯ ಬೆಳಗ್ಗೆ, ಸಂಜೆ ಸಂಕಲ್ಪ ಹಾಗೂ ಜಪ ಮಾಡಿ ಪೂಜೆ ಕಾರ್ಯಗಳು ಏನು ನಿಂತಿರಲಿಲ್ಲ. ಆದರೆ, ಇಲ್ಲಿಗೆ ಸಾರ್ವಜನಿಕರಿಗೆ ಪ್ರವೇಶ ಮಾತ್ರ ಇರಲಿಲ್ಲ.
ಒಮ್ಮೆ 15 ಜನರಿಗೆ ಮಾತ್ರ ಅವಕಾಶ: ಬೆಳಗ್ಗೆ 7.30ರಿಂದ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಮೊದಲಿಗೆ 15 ಜನರು ಒಳಗೆ ಹೋಗಿ ದೇವರ ದರ್ಶನ ಪಡೆದುಕೊಳ್ಳಬೇಕು. ಅವರು ಹೊರಗೆ ಬಂದ ಬಳಿಕ ಮತ್ತೆ 15 ಜನರನ್ನು ಒಳಗೆ ಬಿಡಲಾಗುತ್ತದೆ ಎಂದು ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದರು.
ಮುಜರಾಯಿ ಇಲಾಖೆ ಅಧೀನದ ಶ್ರೀಚಾಮುಂಡೇಶ್ವರಿ ಬೆಟ್ಟ ಸಮೂಹ ದೇವಾಲಯಗಳ ಅಡಿಯಲ್ಲಿ ಮಹಾಬಲೇಶ್ವರ, ಉತ್ತನಹಳ್ಳಿ ತ್ರಿಪುರ ಸುಂದರಿ ಜ್ವಾಲಾಮುಖಿ, ಮೈಸೂರು ಅರಮನೆ ಆವರಣದಲ್ಲಿ ಎಲ್ಲ ದೇವಾಲಯಗಳು ಸೇರಿದಂತೆ 18 ದೇವಾಲಯಗಳು ತೆರೆದುಕೊಳ್ಳಲಿವೆ. ಇಲ್ಲಿಯೂ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ.