ಜಗಳೂರು: ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಪ್ರತಿ ಗ್ರಾಪಂಗಳಿಗೂ ಕಸ ಸಂಗ್ರಹಿಸುವ ವಾಹನಗಳ ಖರೀದಿಗೆ ಶಿಫಾರಸು ಮಾಡಲಾಗುವುದು ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ತಾಲೂಕಿನ ಹಾಲೇಕಲ್ಲು ಗ್ರಾಪಂನಲ್ಲಿ ಬುಧವಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು 17.5 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದ ಮೊದಲನೇ ಮಹಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಚ್ಛತೆ ಕಾಪಾಡಲು ಸರ್ಕಾರ ಸ್ವಚ್ಛ ಭಾರತ್ ಯೋಜನೆ ಜಾರಿಗೆ ತಂದಿದೆ. ಆದರೆ ಅದು ಸರಿಯಾಗಿ ಬಳಕೆಯಾಗಬೇಕು. ಸ್ವಚ್ಛ ಭಾರತ್ನಡಿ 7.5 ಲಕ್ಷ ರೂ. ವೆಚ್ಚದಲ್ಲಿ ಕಸ ವಿಲೇವಾರಿಗೆ ವಾಹನ ಖರೀದಿ ಮಾಡಲಾಗಿದೆ. ಹಾಗಾಗಿ ಕಡ್ಡಾಯವಾಗಿ ಇದನ್ನು ಕಾರ್ಯರೂಪಕ್ಕೆ ತರಬೇಕು. ಗ್ರಾಮಸ್ಥರು ಘನತ್ಯಾಜ್ಯ ವಿಲೇವಾರಿಗೆ ಸಹಕರಿಸಬೇಕು. ಗಾಂಧೀಜಿ ಅವರ ಕನಸಾದ ಗ್ರಾಮೋದ್ಧಾರ, ನೈರ್ಮಲ್ಯಕ್ಕೆ ಕೈಜೋಡಿಸಬೇಕು ಎಂದರು.
ಪ್ರಸ್ತುತ ಜಗತ್ತು ವೇಗವಾಗಿ ಬೆಳೆಯುತ್ತಿದ್ದು, ಅಷ್ಟೇ ವೇಗವಾಗಿ ಯುವಕರು ಹಾಳಾಗುತ್ತಿದ್ದಾರೆ. ಹಾಗಾಗಿ ಬಾಲ್ಯದಿಂದಲೇ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ಕಲಿಸಬೇಕು ಎಂದರು.
ಸಂವಿಧಾನಬದ್ಧ ಮೀಸಲಾತಿ ಹಕ್ಕುಗಳಿಂದ ಮಹಿಳೆಯರು ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಮುಖ್ಯವಾಹಿನಿಯತ್ತ ದಾಪುಗಾಲು ಇಟ್ಟಿರುವುದು ಹೆಮ್ಮೆಯ ಸಂಗತಿ ಎಂದರು.
ತಾಪಂ ಇಒ ಕೆಂಚಪ್ಪ, ಗ್ರಾಪಂ ಅಧ್ಯಕ್ಷೆ ರೂಪ ಮದನ್, ಉಪಾಧ್ಯಕ್ಷೆ ಸೌಮ್ಯ ತಿಮ್ಮಾರೆಡ್ಡಿ, ಸದಸ್ಯರಾದ ನಾಗರಾಜ್, ರಾಜೇಶ್, ರಘು ಆಚಾರ್, ದೀಪಾ, ಕಲ್ಲಮ್ಮ, ಬಸವರಾಜ್ ಎಕೆ, ವನಜಾಕ್ಷಮ್ಮ, ಸಿದ್ದಪ್ಪ, ಪರುಶರಾಮ್ ರೇಣುಕಮ್ಮ, ದ್ಯಾಮಪ್ಪ, ದಾಕ್ಷಾಯಣಮ್ಮ, ರಂಜಿತಾ, ಪಿಡಿಒಗಳಾದ ನಂದಿಲಿಂಗೇಶ್, ಅರವಿಂದ್ ಕುಮಾರ್, ಮುಖಂಡರಾದ ಸಿದ್ದಪ್ಪ, ರಾಮಚಂದ್ರಪ್ಪ, ದ್ಯಾಮಣ್ಣ, ಪಲ್ಲಾಗಟ್ಟೆ ಶೇಖರಪ್ಪ, ಚಂದ್ರನಾಯ್ಕ, ಎನ್ಆರ್ಎಲ್ಎಂ ಮುಖ್ಯಸ್ಥ ಧರ್ಮಣ್ಣ ಸೇರಿ ಮತ್ತಿತರರಿದ್ದರು.