More

    ಇರಾನ್​-ಅಮೆರಿಕ ನಡುವಿನ ಬೆಳವಣಿಗೆಗಳು ಗಂಭೀರ ತಿರುವು ಪಡೆದುಕೊಂಡಿವೆ: ವಿದೇಶಾಂಗ ಸಚಿವ ಜೈಶಂಕರ್​ ಕಳವಳ

    ನವದೆಹಲಿ: ಇರಾನ್​ ಸೇನಾ ನಾಯಕ ಕಾಸಿಂ ಸೊಲೆಮಾನಿ ಹತ್ಯೆ ಬಳಿಕ ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕದನ ಕಾರ್ಮೋಡ ಆವರಿಸಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ಏನು ಬೇಕಾದರು ನಡೆಯುವ ಸಾಧ್ಯತೆ ಇದೆ. ಇದಕ್ಕೆ ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಅವರು ಮಾಡಿರುವ ಟ್ವೀಟ್​ ಪುಷ್ಠಿ ನೀಡುವಂತಿದೆ.

    ಕೆಲವೇ ಗಂಟೆಗಳ ಹಿಂದಷ್ಟೇ ಟ್ವೀಟ್​ ಮಾಡಿರುವ ಜೈಶಂಕರ್​, ಇದೀಗ ತಾನೇ ಇರಾನ್​ನ ವಿದೇಶಾಂಗ ಸಚಿವ ಮೊಹಮ್ಮದ್​ ಜಾವದ್​ ಜರೀಫ್​ರೊಂದಿಗೆ ಮಾತುಕತೆ ನಡೆಸಿದೆ. ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಗಂಭೀರ ತಿರುವು ಪಡೆದುಕೊಂಡಿರುವುದನ್ನು ಗಮನಿಸಿದ್ದೇನೆ. ಮುಂದಾಗುವ ಆತಂಕದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸುತ್ತಿದೆ. ಪರಸ್ಪರ ಸಂಪರ್ಕದಲ್ಲಿರಲು ಇಬ್ಬರು ಒಪ್ಪಿರುವುದಾಗಿ ಜೈಶಂಕರ್​ ತಿಳಿಸಿದ್ದಾರೆ.

    ಭಾರತ ಸಾಂಪ್ರದಾಯಿಕವಾಗಿ ಇರಾನ್​ನೊಂದಿಗೆ ಮೈತ್ರಿಯನ್ನು ಹೊಂದಿದ್ದು, ಪ್ರಸ್ತುತ ಬೆಳವಣಿಗೆಯಿಂದ ಮುಂದೆ ಎದುರಾಗುವ ಸಮಸ್ಯೆಗಳ ಬಗ್ಗೆ ಚಿಂತೆಗೀಡುಮಾಡಿದೆ.

    ಶುಕ್ರವಾರ ರಾತ್ರಿ ಬಾಗ್ದಾದ್​ ಏರ್​ಪೋರ್ಟ್​ನಲ್ಲಿ ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಇರಾನ್​ ಸೇನಾ ನಾಯಕ ಕಾಸಿಂ ಸೊಲೆಮಾನಿ ಮೃತರಾಗಿದ್ದು, ಇದರ ಬೆನ್ನಲ್ಲೇ ಇರಾನ್​ ಸುಪ್ರೀಂ ಲೀಡರ್​ ಅಯತೊಲ್ಲಾ ಖಮೇನಿ ಅಮೆರಿಕಗೆ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ.

    ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೂಡ ಜಗತ್ತಿನ ಯಾವುದೇ ದೇಶಗಳಿಗೆ ಹೋಲಿಸಿದರೆ ಅಮೆರಿಕವು ಅತ್ಯುತ್ತಮ ಸೇನೆಯನ್ನು ಹೊಂದಿದೆ. ನಾವು ಉತ್ತಮವಾದ ಗುಪ್ತಚರ ಇಲಾಖೆಯನ್ನು ಹೊಂದಿದ್ದೇವೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಅಮೆರಿಕನ್ನರಿಗೆ ಯಾರೇ ಬೆದರಿಕೆ ಒಡ್ಡಿದರೂ ಅಗತ್ಯವಾದ ಕ್ರಮವನ್ನು ತೆಗೆದುಕೊಳ್ಳಲು ನಾವು ತಯಾರಿದ್ದೇವೆ ಎಂದು ಎಚ್ಚರಿಕೆ ನೀಡಿದ್ದರು.

    ಇದೀಗ ಎರಡು ದೇಶಗಳ ನಡುವಿನ ಉದ್ವೇಗದ ಪರಿಸ್ಥಿತಿ ವಿಶ್ವಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಉಭಯ ರಾಷ್ಟ್ರಗಳಲ್ಲಿನ ಶಾಂತಿ, ಸ್ಥಿರತೆ ಮತ್ತು ಸುರಕ್ಷತೆ ಭಾರತ ದೃಷ್ಟಿಯಿಂದ ತುಂಬ ಪ್ರಮುಖವಾಗಿದೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಿರುವುದು ಪ್ರಮುಖವಾಗಿದೆ. ಸಂಯಮ ಕಾಯ್ದುಕೊಳ್ಳುವಂತೆ ಎರಡು ರಾಷ್ಟ್ರಗಳಿಗೆ ತಿಳಿಹೇಳುವ ಪ್ರಯತ್ನವನ್ನು ಭಾರತ ನಿರಂತರವಾಗಿ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts