ಪಾಂಡವಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಡಾಂಬರೀಕರಣ, ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು.
ತಾಲೂಕಿನ ಹೊಸಕನ್ನಂಬಾಡಿ ಗ್ರಾಮದಿಂದ ಕೆಆರ್‌ಎಸ್ ಹಿನ್ನೀರಿನ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ 4 ಕೋಟಿ ರೂ. ಅನುದಾನದಲ್ಲಿ ಹಾಗೂ ಕೆಆರ್‌ಐಡಿಎಲ್ ನಿಗಮದಿಂದ ಚಲುವರಸನಕೊಪ್ಪಲು ಗ್ರಾಮದಲ್ಲಿ 10 ಲಕ್ಷ ರೂ., ಚಿಕ್ಕಾಯರಹಳ್ಳಿ ಗ್ರಾಮದಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಅಶೋಕನಗರ, ಮೊಳ್ಳೇನಹಳ್ಳಿ ಹಾಗೂ ಇಳ್ಳೇನಹಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ, ಲೋಕೋಪಯೋಗಿ ಇಲಾಖೆ ಹಾಗೂ ಕೆಆರ್‌ಐಡಿಎಲ್ ನಿಗಮದಿಂದ ತಾಲೂಕಿನ ವಿವಿಧಡೆ ಅಂದಾಜು 5.45 ಕೋಟಿ ರೂ.ವೆಚ್ಚದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿಗೆ ಭೂಮಿ ಪೂಜೆ ಸಲ್ಲಿಸಲಾಗಿದೆ. ಸಾರ್ವಜನಿಕರು ಒಗ್ಗಟ್ಟಿನಿಂದ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಚಿಕ್ಕಾಯಾರಹಳ್ಳಿ ಗ್ರಾಮ ಕನ್ನಂಬಾಡಿ ಅಣೆಕಟ್ಟೆ ಪಕ್ಕದಲ್ಲಿಯೇ ಇದ್ದರೂ ಕುಡಿಯಲು ಕಾವೇರಿ ನೀರಿನ ಅನುಕೂಲ ಇಲ್ಲ. ತ್ವರಿತವಾಗಿ ಕಾವೇರಿ ನೀರು ಒದಗಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದು, ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನದಿ ನೀರು ಒದಗಿಸಿಕೊಡುವಂತೆ ಸೂಚನೆ ನೀಡಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಲಾಗುತ್ತಿದೆ. ಬೋರ್‌ವೆಲ್‌ಗಳ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗುತ್ತಿರುವ ಸಮಸ್ಯೆಗಳು ಹೆಚ್ಚಾಗಿರುವುದರಿಂದ ಅಗತ್ಯವಾಗಿ ಬೇಕಿರುವ ಟಿಸಿ ಒದಗಿಸುವಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಯಾವುದೇ ಸಮಸ್ಯೆಗಳ ಎದುರಾಗದಂತೆ ಅಗತ್ಯ ಕ್ರಮವಹಿಸಲಾಗುವುದು ಎಂದರು.
ಕಟ್ಟೇರಿ ಮಹದೇವು, ಅಮೃತಿ ರಾಜಶೇಖರ್, ಗ್ರಾಪಂ ಸದಸ್ಯರಾದ ಲೋಕೇಶ್, ಪುಟ್ಟಸಿದ್ದಮ್ಮ, ಚೇತನ್, ಗುತ್ತಿಗೆದಾರ ಆರ್.ಪಿ.ರೇವಣ್ಣ, ಎಇಇ ಜೈಕುಮಾರ್, ಎಇ ಅಖಿಲೇಶ್, ರಾಜೇಶ್, ಮನೋಹರ್, ಕುಮಾರ, ನರಸಿಂಹೇಗೌಡ, ಸಿದ್ದೇಗೌಡ, ಕೆಆರ್‌ಐಡಿಎಲ್ ಎಇ ಪ್ರಜ್ವಲ್, ಗುತ್ತಿಗೆದಾರ ನವೀನ್‌ನಾಯ್ಕ, ಚಿನಕುರಳಿ ಚಂದ್ರಶೇಖರ್, ಬನ್ನಂಗಾಡಿ ಬಿ.ಕೆ.ಶ್ರೀನಿವಾಸ್, ಕಟ್ಟೇರಿ ಪಿಡಿಒ ಕುಮಾರ್ ಇತರರು ಇದ್ದರು.
