ಮದ್ದೂರು: ತಾಲೂಕಿನ ಸ್ವಗ್ರಾಮ ಕದಲೂರು ಗ್ರಾಮವನ್ನು ರಾಜ್ಯಕ್ಕೆ ಮಾದರಿ ಗ್ರಾಮವನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಕದಲೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಕದಲೂರು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಈಗಾಗಲೇ ರಾಜ್ಯ ಸರ್ಕಾರದಿಂದ 35 ಕೋಟಿ ರೂ. ವಿಶೇಷ ಅನುದಾದಲ್ಲಿ ಗ್ರಾಮದ ರಸ್ತೆಗಳು, ಚರಂಡಿ, ಕೆರೆಗಳು ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸುವ ಕಾಮಗಾರಿಗಳು ಪ್ರಗತಿ ಹಂತದಲ್ಲಿದೆ. ನಿಡಘಟ್ಟದಿಂದ ಕದಲೂರು ಮೂಲಕ ಕುಣಿಗಲ್‌ಗೆ ಹಾದು ಹೋಗುವ ರಸ್ತೆ, ಕದಲೂರು ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ, ಕೆರೆಗೆ ವಾಕಿಂಗ್ ಪಾತ್, ಜೀಮ್ ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ರಾಜ್ಯಕ್ಕೆ ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಕದಲೂರು ಹಾಗೂ ತಾಲೂಕಿನ ಎಲ್ಲ ಗ್ರಾಮಗಳ ಅಭಿವೃದ್ಧಿಗೂ ಅಗತ್ಯ ಕ್ರಮ ಕೈಗೊಂಡಿದ್ದು, ಈಗಾಗಲೇ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಪಟ್ಟಣದಲ್ಲಿ ತಾಲೂಕು ಮಟ್ಟದ ವಿವಿಧ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿದ್ದು, ಅವುಗಳನ್ನು ಒಂದೇ ಸಂಕೀರ್ಣದಲ್ಲಿ ಕ್ರೋಡೀಕರಿಸುವ ಬಗ್ಗೆ ಯೋಜನೆ ಸಿದ್ಧವಾಗಿದೆ ಎಂದರು.
ಪಟ್ಟಣದಲ್ಲಿ ನೂತನವಾಗಿ ನ್ಯಾಯಾಲಯ ಸಂಕೀರ್ಣವನ್ನು 29 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಅಂತಿಮ ಹಂತದಲ್ಲಿದ್ದು, ಆದಷ್ಟು ಬೇಗ ಮುಖ್ಯಮಂತ್ರಿ ಅನುಮೋದನೆ ಪಡೆದು ನ್ಯಾಯಾಲಯ ಸಂಕೀರ್ಣಕ್ಕೆ ಚಾಲನೆ ನೀಡಲಾಗುವುದು. ಹಾಲಿ ಇರುವ ನ್ಯಾಯಾಲಯದ ಕಟ್ಟಡದಲ್ಲಿ ನ್ಯಾಯಾಲಯದ ಸಭಾಂಗಣಗಳ ಸ್ಥಳಾವಕಾಶ ಕೊರತೆಯಿದೆ. ಹೀಗಾಗಿ ನೂತನ ಕಟ್ಟಡದ ನಿರ್ಮಾಣದ ಬಳಿಕ ಹಾಲಿ ಕಟ್ಟಡವನ್ನು ತಾಲೂಕು ಆಡಳಿತದ ಸುಪರ್ದಿಗೆ ತೆಗೆದುಕೊಂಡು, ಈಗ ಬಾಡಿಗೆ ಕಟ್ಟಡಗಳಲ್ಲಿರುವ ತಾಲೂಕು ಮಟ್ಟದ ವಿವಿಧ ಇಲಾಖೆಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ತಾಲೂಕು ಪಂಚಾಯಿತಿ ನೂತನ ಕಟ್ಟಡಕ್ಕೆ 4 ಕೋಟಿ ರೂ. ವೆಚ್ಚದಲ್ಲಿ ಚಾಲನೆ ನೀಡಲಾಗುತ್ತಿದ್ದು, ಎಲ್ಲ ಕಟ್ಟಡಗಳು ಒಂದೇ ಕಡೆ ಇರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಕಚೇರಿಯಿಂದ ಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ ಮಾತನಾಡಿ, ಕದಲೂರು ಗ್ರಾಪಂ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಶಾಸಕ ಕೆ.ಎಂ.ಉದಯ್ ಅವರು ಅಗತ್ಯ ಕ್ರಮ ಕೈಗೊಂಡಿದ್ದು, ಕೋಟ್ಯಂತರ ರೂ. ವಿಶೇಷ ಅನುದಾದ ತಂದಿರುವುದು ಪ್ರಶಂಸನೀಯ ಸಂಗತಿ. ಕದಲೂರು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿ ರಾಜ್ಯಕ್ಕೆ ಮಾದರಿ ಗ್ರಾಮವನ್ನಾಗಿ ಮಾಡಲು ಯೋಜನೆ ರೂಪಿಸಿರುವುದು ಶ್ಲಾಘನೀಯ ಎಂದರು.
ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಗ್ರಾಪಂ ಉಪಾಧ್ಯಕ್ಷ ಶಾಂತಮ್ಮ, ಸದಸ್ಯರಾದ ಶಿವಣ್ಣ, ಪಾಪಣ್ಣ, ಕೆ.ಸಿ.ಲೋಕೇಶ್, ಬೋರಮ್ಮ, ರತ್ನಮ್ಮ, ಜಯಲಕ್ಷ್ಮಮ್ಮ, ಎನ್.ಸುನಿಲ್‌ಕುಮಾರ್, ಟಿ.ತಮ್ಮೇಗೌಡ, ಸರೋಜಮ್ಮ, ಪಿಡಿಒ ಜಗದೀಶ್, ಕಾರ್ಯದರ್ಶಿ ಎಸ್.ಕೆ.ನಾಗೇಶ್ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.