ಮತ್ತಷ್ಟು ಹೆಚ್ಚಲಿದೆ ಕೆಪಿಎಲ್ ಮೆರಗು

ಸಂತೋಷ ವೈದ್ಯ ಹುಬ್ಬಳ್ಳಿ: ಈ ಬಾರಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ)ಯ ಪ್ರತಿಷ್ಠಿತ ಕೆಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಹುಬ್ಬಳ್ಳಿಗೆ ಮಿಸ್ ಆಗಿರಬಹುದು. ಆದರೆ, ಹಿಂದಿಗಿಂತ ಹೆಚ್ಚಿನ ಮೆರಗು ಪಡೆಯುವುದು ನಿಶ್ಚಿತ.

ಕಾರಣ, ಪಂದ್ಯ ನಡೆಯುವ ವೇಳೆಗೆ ಇಲ್ಲಿಯ ರಾಜನಗರ ಕೆಎಸ್​ಸಿಎ ಮೈದಾನ ಹಲವು ಶಾಶ್ವತ ಸೌಲಭ್ಯಗಳನ್ನು ಹೊಂದಲಿದೆ. ಅದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಕೆಲಸಗಾರರು ನಿತ್ಯ ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 22.75 ಕೋಟಿ ರೂ. ವೆಚ್ಚದಲ್ಲಿ ಹೊಸ ಪೆವಿಲಿಯನ್ ಕಟ್ಟಡ ನಿರ್ಮಾಣ ಕಾಮಗಾರಿ ಕಳೆದ 2 ವರ್ಷದಿಂದ ನಡೆಯುತ್ತಿದೆ. ಪೂರ್ಣಗೊಳ್ಳಲು ಇನ್ನು 6 ತಿಂಗಳು ಬೇಕು ಎಂದು ಇತ್ತೀಚೆಗೆ ಕೆಎಸ್​ಸಿಎ ಸಹ ಕಾರ್ಯದರ್ಶಿ ಸಂತೋಷ ಮೆನನ್ ಹುಬ್ಬಳ್ಳಿಯಲ್ಲಿಯೇ ಹೇಳಿದ್ದಾರೆ.

ಕೆಪಿಎಲ್ ಪಂದ್ಯದ ವೇಳೆ ಎರಡು ತಂಡಗಳಿಗೆ ವಿಶಾಲವಾದ ಆಟಗಾರರ ಕೊಠಡಿ (ಡ್ರೆಸ್ಸಿಂಗ್ ರೂಮ್ ಹಾಗೂ ಆಟಗಾರರ ಗ್ಯಾಲರಿ, ಜತೆಗೆ ಕಾಮೆಂಟರಿ ಬಾಕ್ಸ್, ಮಾಧ್ಯಮ ಕೇಂದ್ರ, ಅಧಿಕಾರಿಗಳ ಕೊಠಡಿ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಳ್ಳಲಿದೆ. ಪಂದ್ಯದ ನೇರ ಪ್ರಸಾರ ಮಾಡಲಿರುವ ಸ್ಟಾರ್ ಸ್ಪೋರ್ಟ್ಸ್ ಬ್ರಾಡ್​ಕಾಸ್ಟಿಂಗ್ ತಂಡಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತ್ಯೇಕ-ಪ್ರತ್ಯೇಕ ಶೌಚಗೃಹ ರೆಡಿಯಾಗುತ್ತಿದೆ. ಕಳೆದ ವರ್ಷ ಇಷ್ಟೆಲ್ಲ ವ್ಯವಸ್ಥೆ ಇರಲಿಲ್ಲ. ಕಟ್ಟಡ ಆಗಷ್ಟೇ ನಿರ್ಮಾಣ ಹಂತದಲ್ಲಿತ್ತು.

7ನೇ ಆವೃತ್ತಿಯ ಕೆಪಿಎಲ್ ಟೂರ್ನಿಯ ಹುಬ್ಬಳ್ಳಿ ಚರಣ ಆ. 19ರಿಂದ 26ರವರೆಗೆ ನಡೆಯಲಿದೆ. ಒಟ್ಟು 11 ಪಂದ್ಯಗಳನ್ನು ಹಂಚಿಕೆ ಮಾಡಲಾಗಿದೆ. ಕೆಪಿಎಲ್ ಟೂರ್ನಿಯ ಕಳೆದ 4 ಆವೃತ್ತಿಗಳಲ್ಲಿ 3 ಬಾರಿ ಹುಬ್ಬಳ್ಳಿ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿತ್ತು. ಈ ಬಾರಿ ಫೈನಲ್ ಪಂದ್ಯ ಸೇರಿದಂತೆ ಅಂತಿಮ ಚರಣ ಮೈಸೂರಿಗೆ ನೀಡಲಾಗಿದೆ.

10 ಸಾವಿರ ಆಸನ ವ್ಯವಸ್ಥೆ: ಕೆಪಿಎಲ್ ಪಂದ್ಯವನ್ನು 10 ಸಾವಿರ ಜನ ವೀಕ್ಷಿಸುವಂತೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಆಟಗಾರರು, ಅಧಿಕಾರಿಗಳು, ಆಹ್ವಾನಿತರು ಹಾಗೂ ತಂಡಗಳ ಮಾಲೀಕರು, ಪ್ರತಿನಿಧಿಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಉಳಿದಂತೆ ಪ್ರೇಕ್ಷಕರಿಗಾಗಿ ಎಂದಿನಂತೆ ತಾತ್ಕಾಲಿಕ ಗ್ಯಾಲರಿ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಈ ಹಿಂದೆ ಇದ್ದ 2 ಬಂಡ್ ತೆರವುಗೊಳಿಸಿ ಮೈದಾನದ ಸುತ್ತ ಗ್ಯಾಲರಿ ಅಳವಡಿಸಲಾಗುತ್ತಿದೆ. 9 ಸ್ಟೆಪ್ಸ್​ಗಳ ಗ್ಯಾಲರಿ ಅಳವಡಿಸಲಾಗುತ್ತಿದೆ. ಪ್ರೇಕ್ಷಕರ ಹಿತದೃಷ್ಟಿಯಿಂದ ಈ ಬಾರಿ ಪ್ರತಿ ಸ್ಟೆಪ್ಸ್ 1 ಅಡಿ ಬದಲು 2 ಅಡಿ ಅಗಲವಿರಲಿದೆ.

‘ಈಗಾಗಲೇ ಕೆಪಿಎಲ್ ಪಂದ್ಯಗಳಿಗೆ ವ್ಯಾಪಕ ಸಿದ್ಧತೆ ನಡೆದಿದೆ. ಪೆವಿಲಿಯನ್ ಕಟ್ಟಡದಲ್ಲಿ ಈ ಬಾರಿ ಹಲವು ಶಾಶ್ವತ ಸೌಲಭ್ಯಗಳು ಪೂರ್ಣಗೊಳ್ಳುತ್ತಿರುವುದು ವಿಶೇಷ. ವಾಹನಗಳ ರ್ಪಾಂಗ್​ಗೆ ಹೆಚ್ಚಿನ ಸ್ಥಳಾವಕಾಶವಿದೆ. ಗೇಟ್ ನಂ. 1 ವಿಶೇಷ ಆಹ್ವಾನಿತರಿಗೆ, ಗೇಟ್ ನಂ. 2 ಆಟಗಾರರಿಗೆ ಮೀಸಲಾಗಿರುತ್ತದೆ. ಗೇಟ್ ನಂ. 3 ಮತ್ತು 4ರ ಮೂಲಕ ಸಾರ್ವಜನಿಕರಿಗೆ ಪ್ರವೇಶ ನೀಡಲಾಗುವುದು. ’ ಎಂದು ಕೆಎಸ್​ಸಿಎ ಧಾರವಾಡ ವಲಯ ಸಂಚಾಲಕ ಬಾಬಾ ಭೂಸದ ವಿಜಯವಾಣಿಗೆ ತಿಳಿಸಿದ್ದಾರೆ.