ಹಳಿಯಾಳ: ಬ್ಯಾಂಕ್ಗಳ ಮೂಲಕ ಸಾಲ- ಸೌಲಭ್ಯ ಪಡೆಯುವ ರೈತರು ಸಕಾಲದಲ್ಲಿ ಮರುಪಾವತಿ ಮಾಡಿದರೆ ಬ್ಯಾಂಕ್ಗಳು ಅಭಿವೃದ್ಧಿ ಪಥದಲ್ಲಿ ಸಾಗಿ ರೈತರಿಗೆ ಇನ್ನೂ ಹೆಚ್ಚಿನ ಸಹಕಾರ ನೀಡಲು ಅನುಕೂಲವಾಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಲ್. ಘೊಟ್ನೆಕರ ಹೇಳಿದರು.
ತಾಲೂಕಿನ ಗುಂಡೊಳ್ಳಿ ಗ್ರಾಮದಲ್ಲಿ ಗುರುವಾರ ಕೆಡಿಸಿಸಿ ಬ್ಯಾಂಕ್ನ 55ನೇ ಶಾಖೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸದಾ ರೈತರ ನೆರವಿಗೆ ಧಾವಿಸುವ ಕೆಡಿಸಿಸಿ ಬ್ಯಾಂಕ್ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ ಶ್ರೇಯೋಭಿವೃದ್ಧಿಗೆ ಬ್ಯಾಂಕ್ ಬದ್ಧವಾಗಿದೆ. ಸಾಲ- ಸೌಲಭ್ಯ ನೀಡುವ ಮೂಲಕ ರೈತರಿಗೆ ನೆರವಾಗಿದ್ದು, ಇದರ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ಉತ್ತಮ ಸೇವೆಯ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಗ್ರಾಮೀಣ ಭಾಗದ ರೈತರಿಗೆ ಸಕಾಲದಲ್ಲಿ ಸೇವೆ ದೊರಕಿಸಿಕೊಡಬೇಕು ಎಂಬ ಕಾರಣಕ್ಕೆ ಶಾಖೆ ಆರಂಭಿಸಲಾಗಿದೆ ಎಂದರು.
ಶಿರಸಿ ಕೆಡಿಸಿಸಿ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀಕಾಂತ ಭಟ್, ಜೊಯಿಡಾ ತಾಲೂಕು ನಿರ್ದೇಶಕ ಕೃಷ್ಣ ದೇಸಾಯಿ, ಬ್ಯಾಂಕ್ ಎಂಡಿ ಶ್ರೀಕಾಂತ ಜಿ. ಭಟ್, ಎಸ್.ಎಂ. ಹೆಗಡೆ, ಗುಂಡೊಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಗೋಕುಲ ಪಾಕ್ರಿ, ಬ್ಯಾಂಕ್ ಮ್ಯಾನೇಜರ್ ಶಶಿಕಾಂತ ಬೆಳಗಾಂಕರ ಇತರರು ಇದ್ದರು.