ಬಾಡುತ್ತಿವೆ ಕರುಳಬಳ್ಳಿ!

|ಶಿವಕುಮಾರ ಮೆಣಸಿನಕಾಯಿ

ಬೆಂಗಳೂರು: ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹತ್ತಾರು ಗರಿ ಮೂಡಿಸಿಕೊಂಡಿರುವ ಕರ್ನಾಟಕದ ಮೇಲೀಗ ನವಜಾತ ಶಿಶುಗಳ ಸರಣಿ ಸಾವಿನ ಗ್ರಹಣ ಕವಿದಿದೆ. ಕಳೆದ 15 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 15 ಸಾವಿರ ಶಿಶುಗಳು ಸಾವನ್ನಪ್ಪಿರುವುದು ಬೆಚ್ಚಿ ಬೀಳಿಸುವಂತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಾಖಲೆಗಳು ಈ ಕರಾಳತೆಯನ್ನು ತೆರೆದಿಟ್ಟಿವೆ. ನವಜಾತ ಶಿಶುಗಳ ಸಾವಿನಲ್ಲಿ ಹೆಚ್ಚೂ ಕಡಿಮೆ ದೇಶಕ್ಕೇ ಮೊದಲ ಸ್ಥಾನಗಳಿಸಿರುವ ಕರ್ನಾಟಕವನ್ನು ಈ ಕಳಂಕದಿಂದ ಹೊರತರುವುದು ಹೇಗೆಂಬ ಚಿಂತೆ ಸರ್ಕಾರವನ್ನು ಕಾಡುತ್ತಿದೆ.

ರಾಜ್ಯಕ್ಕೆ ಆಘಾತ: 2017ರ ಏ.1ರಿಂದ 2018ರ ಮಾ.31ರ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟಾರೆ 11,899 ನವಜಾತ ಶಿಶುಗಳು ಸಾವನ್ನಪ್ಪಿವೆ. ಈ ವರ್ಷದ ಏ.1ರಿಂದ ಜೂ.30ರವರೆಗೆ 2,555 ನವಜಾತ ಶಿಶುಗಳು ಮರಣ ಹೊಂದಿವೆ. ದೇಶದ ಸರಾಸರಿಗೆ ಹೋಲಿಸಿದರೆ ರಾಜ್ಯದಲ್ಲಿ ಶಿಶುಗಳ ಮರಣ ಪ್ರಮಾಣ ಅಧಿಕವಾಗಿದೆ.

ಹಾಸನ ಜಿಲ್ಲೆ ಫಸ್ಟ್: ಹಾಸನ ಜಿಲ್ಲೆಯಲ್ಲಿ ಅತಿಹೆಚ್ಚು ಪ್ರಮಾಣದ ಶಿಶುಗಳು ಸಾವನ್ನಪುತ್ತಿದ್ದರೆ, ದಾವಣಗೆರೆ, ಧಾರವಾಡ, ಮೈಸೂರು, ಬಿಬಿಎಂಪಿ ವ್ಯಾಪ್ತಿಗೊಳಪಟ್ಟ ಬೆಂಗಳೂರು ನಗರ ನಂತರದ ಸ್ಥಾನದಲ್ಲಿವೆ. ಈ ಜಿಲ್ಲೆಗಳಲ್ಲಿ ಪ್ರತಿ ಒಂದು ಸಾವಿರ ನವಜಾತ ಶಿಶುಗಳ ಪೈಕಿ 25 ಶಿಶುಗಳು ಸಾವನ್ನಪು್ಪತ್ತಿವೆ. ಹಿಂದುಳಿದ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಕೊಪ್ಪಳ, ಬೀದರ್ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪ್ರತಿ ಸಾವಿರಕ್ಕೆ 13-19 ಮಕ್ಕಳು ಜೀವ ಬಿಡುತ್ತಿವೆ. ಕುತೂಹಲದ ಸಂಗತಿಯೆಂದರೆ, ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ಬೆಂಗಳೂರು ನಗರಜಿಲ್ಲೆ ಶಿಶುಗಳ ಮರಣಪ್ರಮಾಣದಲ್ಲಿ ರಾಜ್ಯದಲ್ಲೇ ಕೊನೆ ಸ್ಥಾನದಲ್ಲಿದೆ.

ಸರ್ಕಾರಿ ಆಸ್ಪತ್ರೆಗೆ ಕಳಂಕ

ಸರ್ಕಾರಕ್ಕೆ ಲಭ್ಯವಾಗಿರುವ ಅಂಕಿ ಸಂಖ್ಯೆಗಳ ಪ್ರಕಾರ ಸರ್ಕಾರಿ ಆಸ್ಪತ್ರೆಗಳಲ್ಲೇ ಹೆಚ್ಚು ಶಿಶುಗಳ ಸಾವು ಸಂಭವಿಸುತ್ತಿವೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಹೀಗೆ ಸಾವನ್ನಪು್ಪವ ಶಿಶುಗಳ ಅಂಕಿ-ಸಂಖ್ಯೆಗಳು ಸರ್ಕಾರಕ್ಕೆ ತಲುಪುತ್ತಿಲ್ಲ ಎಂದು ಆರೋಗ್ಯ ಇಲಾಖೆ ವರದಿ ಹೇಳಿದೆ.

ಕಾರಣಗಳೇನು?

ಪೌಷ್ಟಿಕಾಂಶದ ಕೊರತೆ, ಕನಿಷ್ಠಕ್ಕಿಂತ ಕಡಿಮೆ ತೂಕದ ಮಕ್ಕಳ ಜನನ, ಆರೈಕೆ ಕೊರತೆ, ಹುಟ್ಟಿನಿಂದಲೇ ತಗಲುವ ಅನಾರೋಗ್ಯ ಇವೇ ಮುಂತಾದ ಕಾರಣಗಳು ಮಕ್ಕಳ ಸಾವಿಗೆ ಕಾರಣವಾಗುತ್ತಿದೆ.

ಕಾಂಗರೂ ಚಿಕಿತ್ಸೆ

ಎರಡೂವರೆ ಕೆಜಿಗಿಂತ ಕಡಿಮೆ ತೂಕ ಹೊಂದಿದ ಶಿಶುಗಳನ್ನು ಆರೈಕೆಗಾಗಿ ವಿಶೇಷ ನಿಗಾ ಘಟಕದಲ್ಲಿ ತಾಯಿಯೊಂದಿಗೆ (ಸ್ಕಿನ್-ಟು-ಸ್ಕಿನ್) ಇರಿಸಲಾಗುತ್ತದೆ. ಈ ವೇಳೆ ಹೈಪೋಥರ್ವಿುಯಾದಿಂದ ಬಳಲುವ ಶಿಶುವಿಗೆ ಬಿಸಿ ಹಾಗೂ ಬೆಳಕಿನ (ಕಾಂಗರೂ) ಚಿಕಿತ್ಸೆ ಕೊಡಿಸಲಾಗುತ್ತದೆ. ಇಂತಹ ನಿಗಾ ಘಟಕಗಳಲ್ಲಿ ಮಾತ್ರ ಈ ಚಿಕಿತ್ಸೆ ನೀಡಿದರೆ ಶಿಶು ಬದುಕುಳಿಯಲು ಸಾಧ್ಯ. ಆದರೆ ಕಾಂಗರೂ ಚಿಕಿತ್ಸೆ ನೀಡಲು ರಾಜ್ಯದ ಅನೇಕ ಸರ್ಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳೇ ಇಲ್ಲ. ಹೀಗಾಗಿ ಮೂಲಸೌಕರ್ಯ ಹೆಚ್ಚಿಸಲು ಆರೋಗ್ಯ ಇಲಾಖೆ ಸರ್ಕಾರವನ್ನು ಕೋರುತ್ತಿದೆ. ರಾಜ್ಯದಲ್ಲಿ ಕಾಂಗರೂ ಮಾದರಿ ಚಿಕಿತ್ಸೆ ನೀಡಲು ಕೇವಲ 39 ವಿಶೇಷ ನವಜಾತ ಶಿಶುಗಳ ಆರೈಕೆ ಘಟಕಗಳಿವೆ. ಅಂದರೆ ಸರಾಸರಿ ಜಿಲ್ಲೆಗೊಂದರಂತೆ ಘಟಕಗಳಿವೆ. ಇಲ್ಲೂ ಕೂಡ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ.

ರಾಜ್ಯದಲ್ಲಿ ತಾಯಂದಿರೂ ಸೇಫಲ್ಲ

ರಾಜ್ಯದಲ್ಲಿ ಹೆರಿಗೆಯಾದ ತಕ್ಷಣವೇ ವೈದ್ಯಕೀಯ ಕಾರಣಗಳಿಗಾಗಿ ಸಾವನ್ನಪು್ಪವ ತಾಯಂದಿರ ಸಂಖ್ಯೆ ಕೂಡ ಕಡಿಮೆ ಏನಿಲ್ಲ. 2004ರಿಂದ 2006 ಅವಧಿಯಲ್ಲಿ ಪ್ರತಿ ಒಂದು ಲಕ್ಷ ಹೆರಿಗೆ ಬಳಿಕ 213, 2007ರಿಂದ 2009ರ ಅವಧಿಯಲ್ಲಿ 178, 2011ರಿಂದ 2013ರ ಅವಧಿಯಲ್ಲಿ 133 ಹಾಗೂ 2014ರಿಂದ 2016ರ ಅವಧಿಯಲ್ಲಿ 108 ತಾಯಂದಿರು ಸಾವಿಗೀಡಾಗಿದ್ದಾರೆ. ಇಂದಿಗೂ ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಹೆರಿಗೆ ಪ್ರಕರಣಗಳಲ್ಲಿ 100 ತಾಯಂದಿರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಾವಿನ ಪ್ರಮಾಣ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಎನ್ನುತ್ತದೆ ಆರೋಗ್ಯ ಇಲಾಖೆ.

ನವಜಾತ ಶಿಶುಗಳ ರಕ್ಷಣೆಗೆ ಸರ್ಕಾರ 3 ಬಗೆಯ ಕ್ರಮಕೈಗೊಳ್ಳುತ್ತಿದೆ. ಗರ್ಭಿಣಿಯರ ಹೆರಿಗೆ ಪೂರ್ವ ಕಾಳಜಿ ತೆಗೆದುಕೊಳ್ಳುವುದು, ಕನಿಷ್ಠ 4 ಬಾರಿ ಹೆರಿಗೆ ಪೂರ್ವ ತಪಾಸಣೆಗೊಳಪಡಿಸುವುದು, ರೋಗ ಪ್ರತಿರೋಧಕ ಲಸಿಕೆಗಳನ್ನು ಕಾಲಮಿತಿಯೊಳಗೆ ಹಾಕಿಸುವುದನ್ನು ಕಡ್ಡಾಯಗೊಳಿಸಲು ಸೂಚಿಸಲಾಗಿದೆ. ಕಾಂಗರೂ ಮಾದರಿ ಆರೈಕೆ ಕೇಂದ್ರಗಳನ್ನು ಬಲಪಡಿಸುವುದು ಮತ್ತು ಶುಶ್ರೂಷಕಿಯರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ.

| ಡಾ.ರತನ್ ಕೇಳ್ಕರ್ ಆರೋಗ್ಯ ಇಲಾಖೆ ಆಯುಕ್ತ