ಹೂವಿನಹಡಗಲಿ: ಎಲ್ಲ ರಂಗಗಳಲ್ಲೂ ಮಹಿಳೆಯರಿಗೆ ಸಮಾನತೆ ದೊರೆತರೆ ಪ್ರಗತಿಯ ವೇಗ ಹೆಚ್ಚುತ್ತದೆ ಎಂದು ಶಿಕ್ಷಕಿ ವಿದ್ಯಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಬಸವಪ್ರಭು ನಗರದಲ್ಲಿ ಶನಿವಾರ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಮಹಿಳಾ ಘಟಕದ ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಮಹಿಳೆಯರು ಸಬಲರಾದಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇತಿಹಾಸ ಗಮನಿಸಿದರೆ ಸ್ತ್ರೀ ಶೋಷಣೆಗೆ ಒಳಗಾಗಿದ್ದೆ ಹೆಚ್ಚು. ಸ್ತ್ರೀಯರಿಗೆ ಸೂಕ್ತ ಸ್ಥಾನಮಾನ ಸಿಕ್ಕರೆ ಸಮಾಜ ಇನ್ನಷ್ಟು ಶಕ್ತಿಯುತವಾಗುತ್ತದೆ. ಮಹಿಳೆಯರು ಪ್ರಸ್ತುತ ಕುಟುಂಬ ನಿರ್ವಹಣೆಯೊಂದಿಗೆ ಸಾಮಾಜಿಕ ಜವಾಬ್ದಾರಿ ತಿಳಿದಿರಬೇಕು ಎಂದರು.
ಸಾವಿತ್ರಿಬಾಯಿ ಫುಲೆ ಕುರಿತು ನೃತ್ಯ ರೂಪಕ ಪ್ರದರ್ಶಿಸಲಾಯಿತು. ಶಿಕ್ಷಕಿಯರಾದ ಜಯಶ್ರೀ, ವೈ.ಜಯಮ್ಮ, ಸಂಘದ ಸದಸ್ಯೆಯರಾದ ಎಸ್.ಎಸ್.ಪೂರ್ಣಿಮಾ, ವಿಜಯ ಕಡ್ಲಿ, ಮಂಗಳ ಕರ್ಜಿಗಿ, ಸುಮಂಗಲಾ ಕೆ, ಶೈಲಶ್ರೀ, ಸವಿತಾ ಕೆ. ಇತರರಿದ್ದರು.