ಬೀರೂರಲ್ಲಿ ಫುಟ್​ಪಾತ್, ವಾಟರ್ ಟ್ಯಾಂಕ್ ನಿರ್ಮಾಣ

ಬೀರೂರು: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ ಫುಟ್​ಪಾತ್ ನಿರ್ವಣ, ನಗರೋತ್ಥಾನ ಯೋಜನೆಯಡಿ 10 ಲಕ್ಷ ಲೀಟರ್ ಸಾಮರ್ಥ್ಯದ ಎರಡು ವಾಟರ್​ಟ್ಯಾಂಕ್ ನಿರ್ವಣ, ವಿದ್ಯುತ್ ಚಿತಾಗಾರ ಹಾಗೂ ಈಜುಕೊಳ ನಿರ್ಮಾಣ ಇವು ಪುರಸಭೆಯ ಈ ಸಾಲಿನ ಬಜೆಟ್​ನ ಪ್ರಮುಖ ಅಂಶಗಳು.

ಪುರಸಭೆ ಸಭಾಂಗಣದಲ್ಲಿ ಸೋಮವಾರ 28.67 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದ ಅಧ್ಯಕ್ಷೆ ಸವಿತಾ ರಮೇಶ್, ಪಟ್ಟಣ ಅಭಿವೃದ್ಧಿಗೆ ಹಾಗೂ ಹೆಚ್ಚು ಆದಾಯ ಕ್ರೂಡೀಕರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ಘೊಷಿಸಿದರು.

ಪಾರ್ಕ್ ಅಭಿವೃದ್ಧಿ, ಶೌಚಗೃಹಗಳ ನಿರ್ವಣ, ನವೀಕರಣ, ಬಡಾವಣೆಗಳಿಗೆ ನಾಮಫಲಕ, ಕಚೇರಿಯಲ್ಲಿ ಅನ್​ಲೈನ್ ಹಾಗೂ ಗಣಕೀಕೃತ ಸೇವಾ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಕುಡಿಯುವ ನೀರು ಪೂರೈಕೆಯಲ್ಲಿ ವಿದ್ಯುತ್​ವ್ಯತ್ಯಯದಿಂದ ಪದೇಪದೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಕ್ಸ್​ಪ್ರೆಸ್ ಲೈನ್​ಗೆ ನೀರಿನ ಲೈನ್ ಟ್ಯಾಗ್ ಮಾಡುವಂತೆ ಶಾಸಕ ಬೆಳ್ಳಿಪ್ರಕಾಶ್ ಮೆಸ್ಕಾಂ ಅಧಿಕಾರಿಗೆ ತಿಳಿಸಿದರು.

833.67 ಲಕ್ಷರೂ ಆದಾಯ ನಿರೀಕ್ಷೆ: ಪ್ರಸಕ್ತ ಸಾಲಿನಲ್ಲಿ ಆಸ್ತಿ, ಕಟ್ಟಡ ಪರವಾನಗಿ, ವಾಣಿಜ್ಯ ಮಳಿಗೆ ಬಾಡಿಗೆ, ಅಭಿವೃದ್ದಿ ಶುಲ್ಕ, ವ್ಯಾಪಾರ ಪರವಾನಗಿ, ಖಾತಾ ಬದಲಾವಣೆ, ಅನುಪಯುಕ್ತ ಸಾಮಗ್ರಿ ಮಾರಾಟ, ನೀರು ಸರಬರಾಜು, ವಿದ್ಯುತ್ ಅನುದಾನ ಒಳಗೊಂಡಂತೆ ವಿವಿಧ ಮೂಲಗಳಿಂದ 833.67 ಲಕ್ಷ ರೂ. ಆದಾಯ ನಿರೀಕ್ಷೆ ಮಾಡಲಾಗಿದೆ. ಪ್ರಾರಂಭಿಕ ಶಿಲ್ಕು 5.06 ಲಕ್ಷ ರೂ. ಇದ್ದು 14,24,97,507 ರೂ. ಆದಾಯ ಹಾಗೂ 19,02,69,026 ರೂ. ವೆಚ್ಚ ತೋರಿಸಲಾಗಿದೆ.