ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ

ಬಳ್ಳಾರಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶ್ರೀ ಗುರು ನುಲಿಚಂದಯ್ಯ ಅಖಿಲ ಕರ್ನಾಟಕ ಕೊರಚ ಮಹಾಸಂಘ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಕೊರಚ ಸಮುದಾಯ ರಾಜ್ಯದಲ್ಲಿ 2.50 ಲಕ್ಷ ಜನಸಂಖ್ಯೆ ಹೊಂದಿದ್ದರೂ 2011ರ ವರದಿ ಪ್ರಕಾರ 50 ಸಾವಿರ ಇರುವುದಾಗಿ ಸರ್ಕಾರಕ್ಕೆ ವರದಿ ನೀಡಿರುವುದು ಸರಿಯಲ್ಲ. ಸರಿಯಾದ ಕ್ರಮದಲ್ಲಿ ಜನಗಣತಿ ಮಾಡಿ ರಾಜ್ಯ ಸರ್ಕಾರ ವರದಿ ಪಡೆದುಕೊಳ್ಳಬೇಕು. ಅಲೆಮಾರಿ, ಅರೆಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು.

ಪರಿಶಿಷ್ಟ ಜಾತಿ, ಪಂಗಡದ ಅಲೆಮಾರಿ ಮತ್ತು ಅರೆಅಲೆಮಾರಿ, ಸೂಕ್ಷ್ಮ, ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ 500 ಕೋಟಿ ರೂ. ಅನುದಾನ ಮೀಸಲಿಡಬೇಕು. ಸಮುದಾಯದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಆಯೋಗ ರಚಿಸಬೇಕು. ಪೂರಕ ಅಧ್ಯಯನಗಳನ್ನು ಕೈಗೊಳ್ಳಬೇಕು. ಸಮುದಾಯದ ಅಭಿವೃದ್ಧಿಗೆ ತಾಲೂಕು ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಿಸಬೇಕು. ತಳ ಸಮುದಾಯಗಳಿಗೆ ಶಿಕ್ಷಣ, ಆರೋಗ್ಯ ಸೇರಿ ಮೂಲ ಸೌಕರ್ಯಗಳು ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಅಧ್ಯಕ್ಷ ಕೆ.ಕೊಟ್ರೆಶ್, ಮುಖಂಡರಾದ ಕೆ.ಷಣ್ಮುಖ, ಕೆ.ರಮೇಶ್, ಮಂಜು, ಹನುಮಂತಪ್ಪ, ರಂಜಿತ್ ಕುಮಾರ್, ಕರಿಯಪ್ಪ ಇದ್ದರು.