ಹೊಳೆಹೊನ್ನೂರು: ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ದೈಹಿಕ ಬೆಳವಣಿಗೆಗೆ ಸಹಕಾರಿ ಎಂದು ಹೊಳೆಹೊನ್ನೂರು ಠಾಣೆ ಸಿಪಿಐ ಲಕ್ಷ್ಮೀಪತಿ ಹೇಳಿದರು.
ಸಮೀಪದ ಸನ್ಯಾಸಿ ಕೊಡಮಗ್ಗಿಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಹಂತದಿಂದಲೆ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿ ಕ್ರೀಡೆ ಆಸಕ್ತಿ ಬೆಳೆಸುವುದು ದೈಹಿಕ ಶಿಕ್ಷಕರ ಕರ್ತವ್ಯ ಎಂದು ತಿಳಿಸಿದರು.
ವಿದ್ಯಾರ್ಥಿ ಸಂಘಗಳು ಶಾಲೆಯ ಬೆಳವಣಿಗೆಗೆ ಸಹಕಾರ ನೀಡಿದರೆ ಸರ್ಕಾರಿ ಶಾಲೆಗಳು ಏಳಿಗೆಯಾಗುತ್ತವೆ. ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಕ್ರೀಡಾಸಕ್ತಿ ಗುರುತಿಸಿ ಪ್ರೋತ್ಸಾಹ ನೀಡಬೇಕು. ಕ್ರೀಡಾ ಕ್ಷೇತ್ರದ ಸಾಧಕರಿಗೆ ಉತ್ತಮ ಅವಕಾಶಗಳಿವೆ. ಶಿಕ್ಷಕರು ಮಕ್ಕಳ ಸುರಕ್ಷತೆ ಹಾಗೂ ಪ್ರಗತಿ ಬಗ್ಗೆ ಗಮನ ನೀಡಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಚಂದ್ರಮ್ಮ, ಸ್ವಾಗತ ಸಮಿತಿ ಅಧ್ಯಕ್ಷ ನಾಗೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್, ಮುಖ್ಯಶಿಕ್ಷಕ ಕೊಟ್ರೇಶಪ್ಪ, ಮುಖಂಡ ಗಂಗನಗೌಡ, ಕಲ್ಲೇಶಪ್ಪ, ಸಿ.ಹನುಮಂತು, ಪ್ರಕಾಶ್, ಮಂಜುನಾಥ್, ಸಾವಂತ್, ವಿಜಯ ಕುಮಾರ್, ನೀಲಮ್ಮ, ರವಿ ಕದಂ, ಪ್ರಶಾಂತ್, ಹನುಮಂತಪ್ಪ ಗೌಡ, ಶೃತಿ ಇತರರಿದ್ದರು.