ರಾಜ್ಯಸಭೆ ಪ್ರವೇಶಿಸಲು ದೇವೇಗೌಡ ತಯಾರಿ?

blank

ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರಾಜ್ಯಸಭೆ ಪ್ರವೇಶಿಸಲು ಒಳಗೊಳಗೆ ತಯಾರಿ ನಡೆಸಿದ್ದಾರೆ. ಜೂನ್ ವೇಳೆಗೆ ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭೆ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಡಾ.ರಾಜೀವ್​ಗೌಡ, ಪ್ರಭಾಕರ್ ಕೋರೆ ಮತ್ತು ಕುಪೇಂದ್ರ ರೆಡ್ಡಿ ಅವಧಿ ಪೂರ್ಣಗೊಳ್ಳಲಿದೆ. ಈ ಪೈಕಿ ಜೆಡಿಎಸ್​ನಿಂದ ಚುನಾಯಿತರಾಗಿರುವ ಕುಪೇಂದ್ರ ರೆಡ್ಡಿ ಸ್ಥಾನಕ್ಕೆ ಗೌಡರು ಸ್ಪರ್ಧಿಸಲು ಸಜ್ಜಾಗಿದ್ದಾರೆ.

ನಾನು ರಾಜ್ಯಸಭೆ ಪ್ರವೇಶಿಸುವುದಿಲ್ಲ. ಬಡವರ ಪರ ಹೋರಾಟ ಮಾಡಲು ರಾಜ್ಯಸಭೆ ಸದಸ್ಯನಾಗಬೇಕಿಲ್ಲ ಎಂದು ದೇವೇಗೌಡ ಹೇಳುತ್ತಲೇ ಇದ್ದರೂ ಒಳಗೊಳಗೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆಂದು ಮೂಲಗಳು ಹೇಳುತ್ತಿವೆ. ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್.ಪ್ರಸಾದ್ ಸೇರಿ ಗಣ್ಯರನೇಕರು ಇಂದಿನ ರಾಜಕೀಯ ಸನ್ನಿವೇಶದಲ್ಲಿ ಸಂಸತ್​ನಲ್ಲಿ ದೇವೇಗೌಡರಂತಹ ಮುತ್ಸದ್ದಿ ನಾಯಕರ ಅವಶ್ಯಕತೆಯಿದೆ. ಹಾಗಾಗಿ ರಾಜ್ಯಸಭೆ ಪ್ರವೇಶಿಸಬೇಕೆಂದು ಆಶಯ ವ್ಯಕ್ತಪಡಿಸಿದ್ದಾರೆ. ಎಡಪಕ್ಷಗಳ ಕೆಲ ನಾಯಕರು, ಸಮಾಜವಾದಿ ಚಿಂತಕರು ಕೂಡ ದೇವೇಗೌಡರು ಸಕ್ರಿಯ ರಾಜಕೀಯದಲ್ಲಿರಬೇಕು ಎಂದು ಬಯಸಿದ್ದಾರೆ.

ಸಂಖ್ಯಾಬಲಕ್ಕೆ ತಂತ್ರಗಾರಿಕೆ: ಬಿಜೆಪಿ 116, ಕಾಂಗ್ರೆಸ್ 68, ಜೆಡಿಎಸ್ 34, ಬಿಎಸ್​ಪಿ 1, ಪಕ್ಷೇತರ 2, ಸ್ಪೀಕರ್ 1, ಒಂದು ನಾಮನಿರ್ದೇಶನ ಸದಸ್ಯರು ಸೇರಿ ಪ್ರಸ್ತುತ ರಾಜ್ಯ ವಿಧಾನಸಭೆ 223 ಸದಸ್ಯ ಬಲ ಹೊಂದಿದೆ. 2 ಸ್ಥಾನಗಳು ಖಾಲಿ ಇವೆ. ರಾಜ್ಯಸಭೆ ಪ್ರವೇಶಿಸಬೇಕಾದರೆ 45 ಮತಗಳು ಬೇಕು. ಜೆಡಿಎಸ್ 34 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್​ನಲ್ಲಿ 68 ಸದಸ್ಯರಿದ್ದಾರೆ. ಒಂದು ಸ್ಥಾನ ಗೆದ್ದು ಇನ್ನೂ 23 ಮತಗಳು ಕಾಂಗ್ರೆಸ್​ಗೆ

ಹೆಚ್ಚುವರಿಯಾಗಿ ಉಳಿಯುತ್ತವೆ. ಈ ಮತಗಳನ್ನು ಪಡೆಯುವ ಮೂಲಕ ರಾಜ್ಯಸಭೆ ಪ್ರವೇಶಿಸಲು ಸಾಧ್ಯವಿದೆ ಎಂಬುದು ಗೌಡರ ಲೆಕ್ಕಾಚಾರ. 6 ತಿಂಗಳ ಹಿಂದಷ್ಟೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡು ಉಭಯ ಪಕ್ಷಗಳ ಸ್ಥಳೀಯ ನಾಯಕರ ನಡುವೆ ಕಂದಕ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಗೌಡರಿಗೆ ವೋಟು ಹಾಕುವುದು ಅನುಮಾನ ಎನ್ನಲಾಗುತ್ತಿದೆ. ಕೈ ಹೈಕಮಾಂಡ್ ಜತೆ ಗೌಡರು ಇಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದು, ಆ ಮೂಲಕ ರಾಜ್ಯ ನಾಯಕರಿಗೆ ಸೂಚನೆ ಕೊಡಿಸಿ ಹಿಂಬಾಗಿಲ ಮೂಲಕ ಸಂಸತ್ ಪ್ರವೇಶಿಸಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿವೆ.

ಪಕ್ಷ ಒಡೆಯುವ ಭೀತಿ: ದೇವೇಗೌಡರನ್ನು ಹೊರತುಪಡಿಸಿ ಜೆಡಿಎಸ್ ರಾಜ್ಯಸಭೆಗೆ ಯಾರನ್ನೇ ಅಭ್ಯರ್ಥಿ ಮಾಡಿದರೂ ಅಡ್ಡ ಮತದಾನವಾಗುವ ಸಾಧ್ಯತೆಗಳಿವೆ. ಈಗಾಗಲೇ ಕೆಲವು ಶಾಸಕರು ಬಿಜೆಪಿ ಜತೆ ಸಖ್ಯ ಬೆಳೆಸಿದ್ದಾರೆ. ಈ ಒಳಸುಳಿ ಗೌಡರಿಗೂ ಗೊತ್ತಿಲ್ಲದೇನಿಲ್ಲ.

ಈ ಹಿಂದೆ ರಾಜ್ಯಸಭೆ ಚುನಾವಣೆಯಲ್ಲಿ ಚಲುವರಾಯಸ್ವಾಮಿ, ಜಮೀರ್ ಅಹಮ್ಮದ್ ಖಾನ್, ಅಖಂಡ ಶ್ರೀನಿವಾಸಮೂರ್ತಿ, ಭೀಮಾ ನಾಯ್್ಕ ಸೇರಿ ಏಳು ಮಂದಿ ಅಡ್ಡಮತದಾನ ಮಾಡಿ ಪಕ್ಷದಿಂದ ಅಮಾನತುಗೊಂಡು ಜೆಡಿಎಸ್​ಗೆ ಗುಡ್​ಬೈ ಹೇಳಿದ ಕಹಿ ಅನುಭವವೂ ವರಿಷ್ಠರಿಗಿದೆ. ಹಾಗೆಯೇ, ರಾಜ್ಯಸಭೆ ಚುನಾವಣೆ ಯಲ್ಲಿ ದೇವೇಗೌಡ ಕುಟುಂಬ ‘ವ್ಯವಹಾರ’ ಮಾಡುತ್ತದೆಂಬ ಆರೋಪ ಹಿಂದಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಬೇರೆ ಯಾರನ್ನೇ ಕಣಕ್ಕಿಳಿಸಿದರೂ ಪಕ್ಷ ಒಡೆದು ಹೋಗುವ ಭೀತಿಯೂ ಗೌಡರನ್ನು ಕಾಡುತ್ತಿದೆ. ತಾವೇ ಸ್ಪರ್ಧಿಸುವ ಮೂಲಕ ಒಂದೆಡೆ ಸಂಸತ್ ಪ್ರವೇಶಿಸುವ, ಮತ್ತೊಂದೆಡೆ ಪಕ್ಷ ಉಳಿಸಿಕೊಳ್ಳುವ ತಂತ್ರಗಾರಿಕೆ ಹೆಣೆದಿದ್ದಾರೆ ಎನ್ನಲಾಗಿದೆ.

ಕುಪೇಂದ್ರ ರೆಡ್ಡಿಗೆ ಎಂಎಲ್​ಸಿ ಸ್ಥಾನ?

ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಪರಿಷತ್ ಸದಸ್ಯರನ್ನಾಗಿಸಲು ಗೌಡರು ಪ್ಲಾ್ಯನ್ ಮಾಡಿದ್ದಾರೆ. ಅಲ್ಲದೆ ಗೌಡರು ರಾಜ್ಯಸಭೆ ಪ್ರವೇಶಿಸುವುದಾದರೆ ಎಂತಹ ತ್ಯಾಗಕ್ಕೂ ಸಿದ್ಧ ಎಂದು ಕುಪೇಂದ್ರರೆಡ್ಡಿ ಸ್ಪಷ್ಟಪಡಿಸಿದ್ದು, ಹಾದಿ ಸುಗಮ ಮಾಡಿಕೊಟ್ಟಿದೆ.

ಬಿಜೆಪಿ ಪ್ರಯತ್ನವೂ ಉಂಟು!

116 ಸದಸ್ಯ ಬಲವುಳ್ಳ ಬಿಜೆಪಿ ರಾಜ್ಯಸಭೆಗೆ ಇಬ್ಬರು ಅಭ್ಯರ್ಥಿಗಳನ್ನು ಅನಾಯಸವಾಗಿ ಗೆಲ್ಲಿಸಿಕೊಳ್ಳಲಿದೆ. ಹೆಚ್ಚುವರಿಯಾಗಿ ಉಳಿಯುವ 26 ಮತಗಳ ಜತೆಗೆ ಇಬ್ಬರು ಪಕ್ಷೇತರರು, 1 ಸ್ಪೀಕರ್ ಸೇರಿ 29 ಮತ ಲಭ್ಯತೆಯಿದೆ. ಜೆಡಿಎಸ್​ನಲ್ಲಿ ಆಂತಃಕಲಹ ಭುಗಿಲೆದ್ದಿರುವುದರಿಂದ ಅದರ ಲಾಭ ಪಡೆಯಲೂ ತುದಿಗಾಲ ಮೇಲೆ ನಿಂತಿದೆ. ಹಾಗಾಗಿ ಜೆಡಿಎಸ್​ಗೆ ರಾಜ್ಯಸಭೆ ಚುನಾವಣೆ ಇತ್ತ ಧರಿ, ಅತ್ತ ಪುಲಿ ಎಂಬಂತಾಗಿದೆ.

| ವಿಲಾಸ ಮೇಲಗಿರಿ ಬೆಂಗಳೂರು 

Share This Article

ಪಿತ್ತಕೋಶದ ಕಲ್ಲು; ಸಮಸ್ಯೆ ತಪ್ಪಿಸಲು ಈ ಪದಾರ್ಥಗಳಿಂದ ದೂರವಿರಿ | Health Tips

ಮೂತ್ರಪಿಂಡದಲ್ಲಿ ಮಾತ್ರ ಕಲ್ಲುಗಳಾಗುತ್ತದೆ ಎಂದು ನೀವು ಭಾವಿಸುತ್ತೀರಾ? ನೀವು ಹಾಗೆ ಭಾವಿಸಿದರೆ ಅದು ತಪ್ಪು. ಏಕೆಂದರೆ…

30-40ನೇ ವಯಸ್ಸಿನಲ್ಲಿ ಜೀವನವನ್ನು ಹೇಗೆ ನಡೆಸಬೇಕು; ವೃದ್ಧಾಪ್ಯದ ಮೇಲೆ ಬೀರುವ ಪರಿಣಾಮದ ಡೀಟೇಲ್ಸ್​ ಇಲ್ಲಿದೆ | Health Tips

ಪ್ರೌಢವಸ್ಥೆ ಮತ್ತು ಯೌವನದಲ್ಲಿ ದೇಹವು ಉತ್ತಮ ಸ್ಥಿತಿಯಲ್ಲಿರುತ್ತದೆ. ಪ್ರತಿಯೊಂದು ಸ್ನಾಯು ಮತ್ತು ಅಂಗವು ಶಕ್ತಿಯಿಂದಿರುತ್ತದೆ. ಈ…

Night Shift Work : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೀರಾ?ಹಾಗಿದ್ರೆ ಈ ಸುದ್ದಿ ನಿಮಗಾಗಿ..

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕಚೇರಿಗಳಲ್ಲಿ ರಾತ್ರಿ ಪಾಳಿಯಲ್ಲಿ (Night Shift Work) ಕೆಲಸ ಮಾಡುತ್ತಿದ್ದಾರೆ.…