ದೇವೇಗೌಡರ ಸ್ಪರ್ಧೆ ಇನ್ನೂ ತೀರ್ಮಾನವಾಗಿಲ್ಲ, ಉಡುಪಿ-ಚಿಕ್ಕಮಗಳೂರಿಗೆ ಪ್ರಮೋದ್​ ಮಧ್ವರಾಜ್ ಎಂದ್ರು ಎಚ್​ಡಿಕೆ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಸ್ಪರ್ಧಿಸುತ್ತಾರೋ, ಇಲ್ಲವೋ ಎನ್ನುವುದು ಅವರಿಗೆ ಬಿಟ್ಟ ವಿಚಾರ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರು ಸ್ಪರ್ಧಿಸುವ ಬಗ್ಗೆ ತೀರ್ಮಾನವನ್ನು ಅವರಿಗೇ ಬಿಟ್ಟಿದ್ದೇನೆ. ಸ್ಪರ್ಧಿಸುವುದಾದರೆ ಬೆಂಗಳೂರು ಉತ್ತರ ಅಥವಾ ತುಮಕೂರು ಕ್ಷೇತ್ರದಲ್ಲಿ ನಿಲ್ಲುತ್ತಾರೆ. ಅವರು ಈ ಬಾರಿ ಚುನಾವಣೆಗೆ ನಿಲ್ಲಬಾರದು ಎಂದುಕೊಂಡಿದ್ದರು. ಆದರೆ, ಹಲವರ ಒತ್ತಾಯದ ಮೇರೆಗೆ ಮನಸು ಮಾಡಿದ್ದಾರೆ. ಇನ್ನೂ ತೀರ್ಮಾನ ಮಾಡಿಲ್ಲ ಎಂದರು. ಹಾಗೇ ಉಡುಪಿ-ಚಿಕ್ಕಮಗಳೂರಿನಿಂದ ಪ್ರಮೋದ್​ ಮಧ್ವರಾಜ್​ ಅವರಿಗೆ ಟಿಕೆಟ್​ ನೀಡುವುದಾಗಿ ತಿಳಿಸಿದರು.

ಮಂಡ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಬೇಸರ ವ್ಯಕ್ತಪಡಿಸಿ ಪರೋಕ್ಷವಾಗಿ ಸುಮಲತಾಗೆ ಟಾಂಗ್​ ನೀಡಿದ ಕುಮಾರಸ್ವಾಮಿಯವರು, ಮಂಡ್ಯದಲ್ಲಿ ಕೆಲವು ನಾಯಕರು ಹಿಂಬಾಗಿಲಿನಿಂದ ತುಂಬ ಮುಂದೆ ಹೋಗಿಬಿಟ್ಟಿದ್ದಾರೆ. ಹಿಂದಿನಿಂದ ಚೂರಿ ಹಾಕುವವರನ್ನು ನಾವು ನಂಬುವುದಿಲ್ಲ. ಅಲ್ಲಿನ ನಿಜವಾದ ಕಾಂಗ್ರೆಸ್​ ಕಾರ್ಯಕರ್ತರು ನಮಗೆ ಬೆಂಬಲ ನೀಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಮಂಡ್ಯವನ್ನು ಜೆಡಿಎಸ್​ಗೆ ಬಿಟ್ಟುಕೊಡಲಾಗಿದೆ. ಆದರೆ, ಅಲ್ಲಿ ಕೆಲವರು ನಾವು ಏನೋ ಮಾಡಿಬಿಡುತ್ತೇವೆ, ಹಿಂದಿನದಕ್ಕೆ ಸೇಡು ತೀರಿಸಿಕೊಳ್ಳುತ್ತೇವೆ ಎಂಬ ಹಠಕ್ಕೆ ಬಿದ್ದಿದ್ದಾರೆ. ಅದಕ್ಕೆ ನಾನೇನೂ ಮಾಡಲು ಆಗುವುದಿಲ್ಲ. ನನ್ನ ಕಾರ್ಯಕರ್ತರು ಸಮರ್ಥರಿದ್ದಾರೆ ಎಂದರು.