ಬಿಜೆಪಿ ವಿರುದ್ಧ ಒಟ್ಟಾಗಲು ಮಾಜಿ ಪ್ರಧಾನಿ ದೇವೇಗೌಡರು ನೀಡಿದ ಕಾರಣಗಳಿವು…

ಬಳ್ಳಾರಿ: “ಬಿಜೆಪಿಯನ್ನು ಸೋಲಿಸಲೇಬೇಕು ಎಂದು ನಾವೆಲ್ಲ ಒಂದುಗೂಡಿ ಸಂಕಲ್ಪ ಮಾಡಿದ್ದೆವು. ಅದರಂತೆ ಸೋಲಿಸಿದೆವು,” ಎಂದಿರುವ ದೇವೇಗೌಡರು ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ.

ಉಪ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಆಯೋಜಿಸಿರುವ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಆ ಕಾರಣಗಳನ್ನು ತಿಳಿಸಿದರು.

“ಉತ್ತರ ಪ್ರದೇಶದಲ್ಲಿ ಮುಸಲ್ಮಾನ ಬಂಧುಗಳಿಗೆ ಅನ್ಯಾಯವಾಗುತ್ತಿದೆ. ಗುಜರಾತ್​ನಲ್ಲಿ 2000ರಲ್ಲಿ ನಡೆದ ಗೋದ್ರಾ ಹತ್ಯಾಕಾಂಡದ ಘಟನೆ‌ ನೆನೆಸಿಕೊಂಡ್ರೆ ಬಿಜೆಪಿಯನ್ನು ಎಂದೂ ಗೆಲ್ಲಿಸಬಾರದು ಎನಿಸಿತ್ತು. ಮೋದಿ ಅವರ ಸ್ವಂತ ರಾಜ್ಯದಲ್ಲಿ ದಲಿತರನ್ನು ಬಟ್ಟೆ ಬಿಚ್ಚಿ ಹೊಡೆಯುತ್ತಿದ್ದಾರೆ. ಸಂವಿಧಾನದ ವ್ಯಾಪ್ತಿಗೆ ಬರುವ ಸಿಬಿಐ, ಇಡಿ ಸೇರಿದಂತೆ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದೇ ಕಾರಣಕ್ಕೆ ಮೋದಿ ಮತ್ತು ಬಿಜೆಪಿ ವಿರುದ್ಧ ನಾವು ಒಂದು ಗೂಡಿದ್ದೇವೆ,” ಎಂದರು.

“ಮೋದಿ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡದೇ ಎಲ್ಲರ ವಿರುದ್ದ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಜಾತ್ಯತೀತ ಶಕ್ತಿಗಳೆಲ್ಲವೂ ಒಗ್ಗೂಡಿದರೆ ಮೋದಿಯ ಕೆಟ್ಟ ಆಡಳಿತವನ್ನು ನಿಲ್ಲಿಸಬಹುದು,” ಎಂದು ಎಚ್​.ಡಿ ದೇವೇಗೌಡ ಹೇಳಿದರು.

ಇದೇ ವೇಳೆ ರಾಹುಲ್​ ಗಾಂಧಿ ನಾಯಕತ್ವಕ್ಕೆ ಸಮ್ಮತಿಯನ್ನೂ ಸೂಚಿಸಿರುವ ದೇವೇಗೌಡರು, ನಾವೆಲ್ಲ ಒಗ್ಗಟ್ಟಾಗಿ ಸೇರಿ ರಾಹುಲ್ ನಾಯಕತ್ವದಲ್ಲಿ ಯಶಸ್ವಿಯಾಗೋಣ ಎಂದಿದ್ದಾರೆ. ಅಲ್ಲದೆ, ರಾಹುಲ್ ಗಾಂದಿ ವಯಸ್ಸಿನಲ್ಲಿ ಚಿಕ್ಕವರು. ಇಂದಿರಾ ಗಾಂಧಿ ಅವರೂ ಸಹ ದೇಶ ಮುನ್ನೆಡೆಸುವಾಗ ಚಿಕ್ಕವರಿದ್ದರು ಎಂದರು.

ಸೋನಿಯಾ ಗಾಂಧಿ ನಂತರ ಈ ಕ್ಷೇತ್ರದಲ್ಲಿ ಸತತ ಬಿಜೆಪಿ ಗೆದ್ದಿತ್ತು. ಆದರೆ, ಈ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ನೈಪುಣ್ಯತೆಯಿಂದ ಕೆಲಸ ಮಾಡಿ, ಉಗ್ರಪ್ಪನವರ ಗೆಲುವಿಗೆ ಕಾರಣರಾಗಿದ್ದಾರೆ. ನಾಯಕ ಸಮುದಾಯವನ್ನು ಎಸ್​ಟಿಗೆ ಸೇರಿಸಿದ ಕೀರ್ತಿ ಉಗ್ರಪ್ಪ ಅವರದ್ದು ಎಂದೂ ಅವರು ಇದೇ ವೇಳೆ ಹೇಳಿದರು.

Leave a Reply

Your email address will not be published. Required fields are marked *