ದೇವೇಗೌಡರ ಕುಟುಂಬದಿಂದ ವಾಮಮಾರ್ಗ ಬಳಕೆ

ಚಿಕ್ಕಮಗಳೂರು: ದೇವೇಗೌಡರ ಕುಟುಂಬ ಹಣಬಲ, ಅಧಿಕಾರ ಬಲ ಹಾಗೂ ಜಾತಿ ವಿಷಬೀಜ ಭಿತ್ತಿ ಲೋಕಸಭಾ ಚುನಾವಣೆ ಗೆಲ್ಲುವ ಭ್ರಮೆಯಲ್ಲಿ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ. ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ಮಾಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅವರಣದಲ್ಲಿ ಬುಧವಾರ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.

ಅಧಿಕಾರ ಸಿಕ್ಕ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದ ಕುಮಾರಸ್ವಾಮಿ, ಈಗ ಕೇವಲ 4,500 ರೈತರ ಸಾಲ ಮಾತ್ರ ಮನ್ನಾ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್​ನಲ್ಲಿರುವ ಯಾವ ರೈತರ ಸಾಲವೂ ಮನ್ನಾ ಆಗಿಲ್ಲ ಎಂದು ಟೀಕಿಸಿದರು.

ಹಾಸನ ಜಿಲ್ಲೆಯ 5 ನೀರಾವರಿ ಯೋಜನೆಗಳಿಗೆ 1,500 ಕೋಟಿ ರೂ. ಹಣವನ್ನು ಮುಂಗಡವಾಗಿ ಕಾಮಗಾರಿ ನಡೆಯದೆ ಮಂಜೂರು ಮಾಡಿಕೊಂಡು ಲೂಟಿ ಮಾಡಿದ್ದಾರೆ. ವರ್ಗಾವಣೆ ದಂಧೆ, ಹಗಲು ದರೋಡೆ ಈ ಸರ್ಕಾರದ ಪ್ರಮುಖ ಸಾಧನೆಯಾಗಿದೆ. ಈ ಚುನಾವಣೆ ಮೂಲಕ ಮತದಾರರಿಗೆ ಬದಲಾವಣೆ ಮಾಡುವ ಸಮಯ ಸಿಕ್ಕಿದೆ ಎಂದರು.

ಪುಲ್ವಾಮಾ ದಾಳಿ ಬಗ್ಗೆ ಎರಡು ವರ್ಷಗಳ ಹಿಂದೆ ಮಾಹಿತಿ ಇತ್ತು ಎನ್ನುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರಾಷ್ಟ್ರೀಯ ಭದ್ರತೆ ಅವಶ್ಯಕತೆ ಕಾಣಲಿಲ್ಲವೆ? ಗೊತ್ತಿದ್ದರೆ ಕೇಂದ್ರ ಸರ್ಕಾರ ಮತ್ತು ಸೈನ್ಯಕ್ಕೆ ಏಕೆ ತಿಳಿಸಲಿಲ್ಲ ಎಂದು ಪ್ರಶ್ನಿಸಿದರು.

ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಗುಜರಾತಿನಲ್ಲಿ ಗಾಂಧಿ ಹೆಸರಿತ್ತು. ಸ್ವಾತಂತ್ರ್ಯ ನಂತರ 21ನೇ ಶತಮಾನದಲ್ಲಿ ಅದೇ ಗುಜರಾತಿನಲ್ಲಿ ಮೋದಿ ಹೆಸರಿದೆ. ಪ್ರತಿ ಮನೆ ಮತ್ತು ಹೃದಯದಲ್ಲಿ ಮೋದಿ ನೆಲೆ ನಿಂತಿದ್ದಾರೆ. ಪ್ರಸ್ತುತ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವೆ ನಡೆಯುತ್ತಿರುವ ಹೋರಾಟ. ಮೋದಿ ಮತ್ತು ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ 22 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದರು.

ಅಭ್ಯರ್ಥಿ ಎ.ಮಂಜು ಮಾತನಾಡಿ, 5 ವರ್ಷದ ಮೋದಿ ಆಡಳಿತದಲ್ಲಿ ಯಾವುದೇ ಗಲಭೆ, ಭ್ರಷ್ಟಾಚಾರ ನಡೆದ ಪ್ರಕರಣಗಳಿಲ್ಲ. ದೇವೇಗೌಡರು 10 ವರ್ಷದಲ್ಲಿ ಕಡೂರು ಕ್ಷೇತ್ರಕ್ಕೆ ನಯಾಪೈಸೆ ಕೊಟ್ಟಿಲ್ಲ. ಈಗ ನೀರಾವರಿ ಯೋಜನೆ ತರುತ್ತೇನೆ ಎಂದು ಸುಳ್ಳುಹೇಳಿ ಮೊಮ್ಮಗನ ಗೆಲುವಿನ ಕನಸು ಕಾಣುತ್ತಿದ್ದಾರೆ ಎಂದರು.

ಶಾಸಕರಾದ ಡಿ.ಎಸ್.ಸುರೇಶ್, ಎಂ.ಕೆ.ಪ್ರಾಣೇಶ್, ಮುಖಂಡರಾದ ರೇಣುಕುಮಾರ್, ಎಂ.ಮರುಳಸಿದ್ದಪ್ಪ, ಶೆಟ್ಟಿಹಳ್ಳಿ ರಾಮಪ್ಪ, ಕೆ.ಬಿ.ಸೋಮೇಶ್, ಅರೇಕಲ್ ಪ್ರಕಾಶ್, ಶಿವಕುಮಾರ್, ಮಾಲಿನಿಬಾಯಿ, ರಾಜನಾಯ್ಕ, ಲಕ್ಷ್ಮಣನಾಯ್ಕ, ಬೀರೂರು ದೇವರಾಜ್, ಜಿಗಣೆಹಳ್ಳಿ ಮಂಜು, ಸುನೀತಾ ಜಗದೀಶ್ ಇದ್ದರು.