ಈ ಬಾರಿಯೂ ಟ್ರೋಫಿ ಗೆಲ್ಲದ ಆರ್​ಸಿಬಿ ಆಟಗಾರರಿಗೆ ಟ್ವೀಟ್​ ಮೂಲಕ ತಿವಿದ ವಿಜಯ ಮಲ್ಯ!

ಬೆಂಗಳೂರು: ಐಪಿಎಲ್​ ಶುರುವಾದಾಗಿನಿಂದ ಒಂದು ಬಾರಿಯೂ ಟ್ರೋಫಿ ಗೆಲ್ಲದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಈ ಬಾರಿಯು ತನ್ನ ಹಳೆಯ ವರಸೆಯನ್ನೇ ಮುಂದುವರಿಸುವ ಮೂಲಕ ಆರ್​ಸಿಬಿ ಅಭಿಮಾನಿಗಳಲ್ಲಿ ನಿರಾಶೆಯ ಕಾರ್ಮೋಡವನ್ನು ಬಿತ್ತಿದೆ. ಈ ಬಗ್ಗೆ ಕ್ಷಮೆ ಯಾಚಿಸಿರುವ ನಾಯಕ ವಿರಾಟ್​ ಕೊಹ್ಲಿಗೆ ಉದ್ಯಮಿ ಹಾಗೂ ಆರ್​ಸಿಬಿ ತಂಡದ ಮಾಜಿ ಸಹ ಮಾಲೀಕ ವಿಜಯ ಮಲ್ಯ ಪ್ರತಿಕ್ರಿಯಿಸಿದ್ದು, ತಂಡದ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್​ ಖಾತೆಯ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿರುವ ವಿಜಯ ಮಲ್ಯ, ಆರ್​ಸಿಬಿ ತಂಡ ಒಳ್ಳೆಯ ಆಟಗಾರರ ಶ್ರೇಣಿಯನ್ನೇ ಹೊಂದಿದೆ. ಆದರೆ, ಅವರು ಕಾಗದದ ಮೇಲಿನ ಹುಲಿಗಳು ಮಾತ್ರ. ಮರದ ಸ್ಪೂನ್​(ಬ್ಯಾಟ್​) ಮೂಲಕ ಎಲ್ಲರ ಆಸೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ತಂಡದಲ್ಲಿ ನಾಯಕ ವಿರಾಟ್​ ಕೊಹ್ಲಿ, ಅನುಭವಿ ಎಬಿ ಡಿವಿಲಿಯರ್ಸ್​​, ಮಾರ್ಕಸ್​ ಸ್ಟೊನೀಸ್​, ಶಿಮ್ರಾನ್​ ಹೆಟ್ಮಯರ್​ ಹಾಗೂ ಟೀಮ್​ ಸೌಥಿಯಂತಹ ಒಳ್ಳೆಯ ಆಟಗಾರರಿದ್ದರೂ ಟ್ರೋಫಿ ಕೈಚೆಲ್ಲಿದ್ದಕ್ಕೆ ಅವರನ್ನು ಕಾಗದ ಮೇಲಿನ ಹುಲಿಗಳು ಎಂದು ಮಲ್ಯ ವ್ಯಂಗ್ಯವಾಡಿದ್ದಾರೆ.

ಈ ಬಾರಿಯ ಐಪಿಎಲ್​ ಆವೃತ್ತಿಯಲ್ಲಿ ಒಟ್ಟು 14 ಪಂದ್ಯಗಳನ್ನಾಡಿದ್ದ ಆರ್​ಸಿಬಿ ಕೇವಲ 5 ರಲ್ಲಿ ಜಯ ಸಾಧಿಸಿ, 8ರಲ್ಲಿ ಹೀನಾಯವಾಗಿ ಸೋತು ಕೇವಲ 11 ಅಂಕ ಗಳಿಸಿ, ಐಪಿಎಲ್​ ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ಗಳಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.

ಕೊನೆಯ ಪಂದ್ಯದ ಬಳಿಕ ಮಾತನಾಡಿದ ನಾಯಕ ವಿರಾಟ್​ ಕೊಹ್ಲಿ ಕೊನೆಯ ಏಳು ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸಿದೆವು. ಅದರಲ್ಲಿ ಒಂದು ಪಂದ್ಯ ರದ್ದಾಯಿತು. ಆದರೂ ನಮ್ಮ ಆಟದ ಬಗ್ಗೆ ಹೆಮ್ಮೆ ಇದೆ ಎಂದು ಹೇಳುವ ಮೂಲಕ ಮುಂದಿನ ಆವೃತ್ತಿಗೆ ಮತ್ತಷ್ಟು ಬಲಿಷ್ಠವಾಗಿ ಕಣಕ್ಕಿಳಿಯುತ್ತೇವೆ ಎಂದಿದ್ದರು. ಅಲ್ಲದೆ, ನೀವು ಇಲ್ಲ ಅಂದರೆ ನಾವು ಇಲ್ಲ ಎಂದು ಕನ್ನಡದಲ್ಲೇ ಟ್ವೀಟ್​ ಮಾಡುವ ಮೂಲಕ ಆರ್​ಸಿಬಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದರು. (ಏಜೆನ್ಸೀಸ್​)