ವಾರದಲ್ಲಿ ಎಲ್ಲ ಕೆರೆಗಳ ಭರ್ತಿಗೆ ಕ್ರಮ

ದೇವರಹಿಪ್ಪರಗಿ: ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ವಿಜಯಪುರ ಮುಖ್ಯ ಕಾಲುವೆಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಭರದಿಂದ ನಡೆದಿದ್ದು, ಒಂದು ವಾರದಲ್ಲಿ ಎಲ್ಲ ಕೆರೆಗಳನ್ನು ಭರ್ತಿ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಲಾಗುವುದೆಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ದೇವರಹಿಪ್ಪರಗಿ ಸಮೀಪದ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸಲಾಗುತ್ತಿರುವುದನ್ನು ಪರಿಶೀಲಿಸಿ ಮಂಗಳವಾರ ವಿಜಯವಾಣಿಯೊಂದಿಗೆ ಅವರು ಮಾತನಾಡಿದರು.
ನಮ್ಮ ಭಾಗದಲ್ಲಿ ಉದ್ಭವಿಸಿದ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕಾಲುವೆಗಳಿಂದ ನೀರು ಹರಿಸಿ ತುಂಬಿಸಲಾಗುತ್ತಿದೆ. ಕ್ಷೇತ್ರದ ಪ್ರತಿಯೊಂದು ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಿದ್ದು, ಹಂತ ಹಂತವಾಗಿ ದೇವರಹಿಪ್ಪರಗಿ ಸುತ್ತಮುತ್ತಲಿನ ಕೆರೆಗಳನ್ನು ವಾರದೊಳಗಾಗಿ ತುಂಬಿಸಲಾಗುವುದು. ಈಗಾಗಲೇ ಸೋಮವಾರದಿಂದಲೇ ದೇವರಹಿಪ್ಪರಗಿ, ದೇವೂರ, ಮಣೂರ, ಜಾಲವಾದ, ಬಮ್ಮನಜೋಗಿ ಗ್ರಾಮಗಳಿಗೆ ಸೇರಿದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಒಂದು ವಾರದವರೆಗೆ ನೀರು ಹರಿಸಲಾಗುತ್ತಿದೆ. ಸಾರ್ವಜನಿಕರು ಆತಂಕ ಪಡಬಾರದು ಎಂದು ತಿಳಿಸಿದರು.
ಅಲ್ಲದೆ, ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೆರೆಗಳು ತುಂಬುವವರೆಗೂ ವಿಶೇಷ ಕಾಳಜಿ ವಹಿಸಬೇಕೆಂದು ಸೂಚಿಸಲಾಗಿದೆ. ಅಧಿಕಾರಿಗಳು ವಾರಾಬಂದಿ ಮೂಲಕ ಎಲ್ಲ ಕೆರೆಗಳಿಗೂ ನೀರು ತುಂಬಿಸಲಿದ್ದಾರೆ. ರೈತರು, ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಸಾರ್ವಜನಿಕರು ಕಾಲುವೆಗಳಿಂದ ಹರಿದು ಬರುವ ನೀರು ನಿಲ್ಲಿಸುವುದು, ಮುಂದೆ ನೀರು ಸಾಗದಂತೆ ತಡೆಯುವುದನ್ನು ದಯವಿಟ್ಟು ಮಾಡಬಾರದು. ಎಲ್ಲ ಕೆರೆಗಳಿಗೆ ವಾರದೊಳಗಾಗಿ ಸಂಪೂರ್ಣ ನೀರು ತುಂಬಿಸಿ ಅನುಕೂಲ ಮಾಡಿಕೊಡಲಾಗುವುದೆಂದು ಹೇಳಿದರು.
ಕೆಬಿಜೆಎನ್‌ಎಲ್ ಸಹಾಯಕ ಅಭಿಯಂತರ ಬಸವರಾಜ ಕಟ್ಟಿ ಸೇರಿ ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *