ಮಕ್ಕಳೊಂದಿಗೆ ಮಹಿಳೆ ಪ್ರತಿಭಟನೆ

ದೇವರಹಿಪ್ಪರಗಿ: ಸುಳ್ಳು ದಾಖಲೆಗಳೊಂದಿಗೆ ಸಾಲ ಸೃಷ್ಟಿಸಿ ಮಂಜೂರಾದ ಕೃಷಿ ಸಾಲದಲ್ಲಿ ಬಡ್ಡಿ ಸೇರಿ ತೆಗೆದುಕೊಳ್ಳದ ಸಾಲ ಕಡಿತಗೊಳಿಸಿ ಪಂಗನಾಮ ಹಾಕಿದ ಪಿಕೆಪಿಎಸ್ ವಿರುದ್ಧ ರೈತ ಮಹಿಳೆಯೊಬ್ಬಳು ಮಕ್ಕಳೊಂದಿಗೆ ಪಿಕೆಪಿಎಸ್ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಭಾವತಿ ಮಲ್ಲಿಕಾರ್ಜುನಮಠ ಎಂಬ ಮಹಿಳೆಯೇ ತೆಗೆದುಕೊಳ್ಳದ ಸಾಲವನ್ನು ಅನಗತ್ಯವಾಗಿ ಪಾವತಿಸಿ ಪಿಕೆಪಿಎಸ್ ಎಡವಟ್ಟಿಗೆ ಈಡಾದವರು. ಕಡಿತಗೊಳಿಸಿದ ಸಾಲದ ಮೊತ್ತವನ್ನು ಹಿಂದಿರುಗಿಸುವಂತೆ ಮಕ್ಕಳೊಂದಿಗೆ ಪಿಕೆಪಿಎಸ್ ಕಾರ್ಯಾಲಯಕ್ಕೆ ಬಂದು ಆಗ್ರಹಿಸಿದರು. ಈ ಕುರಿತು ಅವಳೇ ಹೇಳುವಂತೆ ಈವರೆಗೆ ನಾನು ಪಿಕೆಪಿಎಸ್ ಕಾರ್ಯಾಲಯವನ್ನೇ ನೋಡಿಲ್ಲ, ಅಂತದ್ದರಲ್ಲಿ ನನ್ನ ಹೆಸರಲ್ಲಿ 1998ರಲ್ಲಿ 22500/- ಸಾಲ ಸೃಷ್ಟಿಸಿ ಈಗ 2019ರಲ್ಲಿ ನೀಡಿದ 1.20 ಸಾವಿರ ರೂ. ಕೃಷಿ ಸಾಲದಲ್ಲಿ ಪಾವತಿಸಿಕೊಂಡು 96 ಸಾವಿರ ರೂ. ನೀಡಿದ್ದಾರೆ. ಜತೆಗೆ ಈ ಹಣ ನೀಡಲು 5 ಸಾವಿರ ರೂಗಳನ್ನು ಹೆಚ್ಚುವರಿಯಾಗಿ ಪಡೆದಿದ್ದಾರೆ. ಈ ಕುರಿತು ಕೇಳಲಾಗಿ ನಿಮ್ಮ ಪತಿ ಮಡಿವಾಳಯ್ಯ ನಿಮ್ಮ ಹೆಸರಲ್ಲಿ ಸಾಲ ಮಾಡಿದ್ದಾರೆ. ಅದರ ಬಡ್ಡಿ, ಗಂಟು ಸೇರಿ 22500/ ಆಗಿದೆ. ನಿಮಗೆ ಈಗ 1.20 ಸಾವಿರ ಕೃಷಿ ಸಾಲ ಮಂಜೂರು ಮಾಡಬೇಕಿದ್ದರೆ ಅದನ್ನು ತುಂಬಬೇಕೆಂದು ತಿಳಿಸಿದರು.
ಆದರೆ ನನ್ನ ಗಂಡ ತೀರಿಹೋಗಿ ಒಂದು ವರ್ಷ ಆಗಿದೆ. ಅವರು ಎಂದಿಗೂ ನನಗೆ ಈ ಬಗ್ಗೆ ಹೇಳಿಲ್ಲ, ಜತೆಗೆ 1998 ರಲ್ಲಿ ನನ್ನ ಹೆಸರಲ್ಲಿ ಸಾಲ ಮಾಡಿದ್ದರೆ, 21 ವರ್ಷಗಳವರೆಗೆ ಏಕೆ ಬಿಟ್ಟಿರಿ? ಏಕೆ ನೋಟಿಸ್ ನೀಡಿಲ್ಲ. 1998ರ ನನ್ನ ಸಾಲದ ಅರ್ಜಿ ಎಲ್ಲಿ? ಅದಕ್ಕೆ ಯಾರು ಜಾಮೀನುದಾರರಿದ್ದರು ಎಂದು ಪ್ರಶ್ನಿಸಿದಾಗ, ನೀನು ಏನೂ ಮಾಡಿಕೊಳ್ಳುತ್ತಿ ಮಾಡಿಕೋ ಎಂದು ಕಾರ್ಯದರ್ಶಿ ಕೆ.ಟಿ. ಪೂಜಾರಿ ಎನ್ನುತ್ತಿದ್ದಾರೆ ಎಂದು ತನ್ನ ಅಸಹಾಯಕತೆ ವ್ಯಕ್ತಪಡಿಸಿದರು.
ಮಹಿಳೆಯ ಮಕ್ಕಳಾದ ಸಿದ್ದು, ಸಂತೋಷ ಮಾತನಾಡಿ, ನಮ್ಮ ಕುಟುಂಬಕ್ಕೆ ಪಿಕೆಪಿಎಸ್‌ನಿಂದ ಆದ ಅನ್ಯಾಯ ಸರಿಪಡಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

1998ರಲ್ಲಿ ಮಹಿಳೆ ಪಡೆದ ಸಾಲಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸಾಲದ ಅರ್ಜಿಯಾಗಲಿ, ನಂತರ ಸಾಲ ಮರುಪಾವತಿಸುವಂತೆ ನೀಡಿದ ನೋಟಿಸ್‌ಗಳ್ಯಾವವು ಇಲ್ಲ. ಆದರೆ, ರಜಿಸ್ಟಾರ್‌ನಲ್ಲಿ ಇವರು ಸಾಲ ತೆಗೆದುಕೊಂಡಿದ್ದಾರೆ ಎಂದು ಹಿಂದಿನ ಸಿಬ್ಬಂದಿ ನಮೂದಿಸಿದ್ದಾರೆ.
ಕೆ.ಟಿ. ಪೂಜಾರಿ, ಕಾರ್ಯದರ್ಶಿ ಪಿಕೆಪಿಎಸ್ ದೇವರಹಿಪ್ಪರಗಿ

Leave a Reply

Your email address will not be published. Required fields are marked *