ಬೆಂಗಳೂರು: ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿಗಮ ಹಗರಣದಲ್ಲಿ ಎರಡನೇ ಆರೋಪಿಯಾಗಿರುವ ಬಿಜೆಪಿ ವಿಧಾನಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪ ಪಟ್ಟಿಗೆ ಹಾಗೂ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ.
ತನ್ನ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ವೀರಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಡಿಡಿಯುಟಿಟಿಎಲ್ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಶಂಕರಪ್ಪ ಮತ್ತು ಮಾಜಿ ಅಧ್ಯಕ್ಷ ವೀರಯ್ಯ ಪಿತೂರಿ ನಡೆಸಿ ಕಂಪನಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಆರೋಪ. ಈ ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ನಡೆಸಿಲ್ಲ ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯ ಸೆಕ್ಷನ್ 17ಎ ಅಡಿ ಅನುಮತಿ ಪಡೆದಿಲ್ಲ.
ಪ್ರಾಥಮಿಕ ತನಿಖೆ ನಡೆಸದೆಯೂ ಆರೋಪ ಪಟ್ಟಿಯಲ್ಲಿ ವೀರಯ್ಯ ಅವರನ್ನು ಆರೋಪಿಯನ್ನಾಗಿಸಲಾಗಿದೆ. 2023ರ ಸೆಪ್ಟೆಂಬರ್‌ನಲ್ಲಿ ಅನಾಮಿಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಇದಾದ ಬಳಿಕ 9 ತಿಂಗಳು ತನಿಖೆ ನಡೆಸಲಾಗಿದೆ. ಆನಂತರ ಪಿಸಿ ಕಾಯ್ದೆಯ ಸೆಕ್ಷನ್ 17ಎ ಅಡಿ ಪೂರ್ವಾನುಮತಿ ಕೋರಿದ್ದು, ಮೊದಲ ಆರೋಪಿ ಶಂಕರಪ್ಪ ವಿರುದ್ಧ ಪೂರ್ವಾನುಮತಿ ದೊರೆತಿದೆ. ಆದರೆ, ವೀರಯ್ಯ ವಿಚಾರದಲ್ಲಿ ಯಾವುದೇ ಪ್ರಕ್ರಿಯೆ ಪಾಲಿಸಿಲ್ಲ ಎಂದು ಪೀಠದ ಮುಂದೆ ವಿವರಿಸಿದರು.
ವಾದ ಆಲಿಸಿದ ಪೀಠವು ಅರ್ಜಿದಾರ ವೀರಯ್ಯ ಅವರ ವಿರುದ್ಧದ ಹೆಚ್ಚುವರಿ ತನಿಖೆ ಮತ್ತು ಈಗಾಗಲೇ ಸಲ್ಲಿಕೆ ಮಾಡಲಾಗಿರುವ ಆರೋಪ ಪಟ್ಟಿಗೆ ತಡೆಯಾಜ್ಞೆ ನೀಡಲಾಗಿದೆ ಎಂದು ಆದೇಶಿಸಿ ವಿಚಾರಣೆಯನ್ನು ಡಿ.19ಕ್ಕೆ ಮುಂದೂಡಿತು.