ನಾಟಕವಾಡುವ ಅಗತ್ಯ ನನಗಿಲ್ಲ, ಟೀಕೆ ಮಾಡಿದರೆ ನಾಯಕತ್ವ ಬೆಳೆಯಲ್ಲ

ಚಿಕ್ಕಮಗಳೂರು: ಟೀಕೆ ಮಾಡುವುದರಿಂದ ಸುದ್ದಿಯಾಗಬಹುದು ಅಷ್ಟೆ ಹೊರತು ನಾಯಕತ್ವ ಬೆಳೆಯುವುದಿಲ್ಲ ಎಂದು ಶಾಸಕ ಸಿ.ಟಿ.ರವಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್​ಗೆ ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದರು.

ಟೀಕೆ ಮಾಡದಿದ್ದರೆ ಅಜೀರ್ಣ ಆಗುತ್ತೆ ಎನ್ನುವುದಾದರೆ ಅದು ಅವರಿಗಿರುವ ಕಾಯಿಲೆ. ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸುವ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ್ದನ್ನು ಟೀಕಿಸಿದ ಕ್ರಮವನ್ನು ಆಕ್ಷೇಪಿಸಿದ ಅವರು, ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಹಾಗೂ ಮೆಡಿಕಲ್ ಕಾಲೇಜು ಆರಂಭಿಸಲು 400 ಕೋಟಿ ರೂ. ಅನುದಾನ ಕೇಳಿದ್ದು ನಿಜ. ಆದರೆ ಸರ್ಕಾರ 50 ಕೋಟಿ ರೂ. ಮಾತ್ರ ಮಂಜೂರು ಮಾಡಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅಗತ್ಯವಿದೆ. ನಾಟಕ ಆಡುವ ಅವಶ್ಯಕತೆ ನನಗಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ಬಜೆಟ್​ನಲ್ಲಿ ಘೊಷಣೆಯಾಗಿದ್ದೆಲ್ಲ ಅನುಷ್ಠಾನ ಆಗಿಲ್ಲ. ಇದಕ್ಕೆ ಎ.ಆರ್.ಕೃಷ್ಣಶಾಸ್ತ್ರಿ ಭವನ ಮತ್ತು ಮೆಡಿಕಲ್ ಕಾಲೇಜುಗಳೇ ಸಾಕ್ಷಿ. ಆಸ್ಪತ್ರೆ ವಿಚಾರದಲ್ಲೂ ಹೀಗಾಗಬಾರದು ಎಂಬ ಕಾರಣಕ್ಕೆ ಅಧಿಕಾರಿಗಳನ್ನು ಕರೆಸಿ ಚರ್ಚೆ ನಡೆಸಿದ್ದೇವೆ. ಇದರಲ್ಲಿ ರಾಜಕೀಯ ಲಾಭ, ನಷ್ಟದ ಪ್ರಶ್ನೆಗಿಂತ ಬಡವರಿಗೆ ಅನುಕೂಲ ಆಗಬೇಕಿದೆ ಎಂದು ಹೇಳಿದರು.

ರಾಜ್ಯದ ಎರಡು ಕ್ಷೇತ್ರ ಹೊರತುಪಡಿಸಿ ಮಿಕ್ಕೆಲ್ಲ 26 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಇದ್ದು 21ರಲ್ಲಂತೂ ನಿಖರವಾಗಿ ಗೆಲ್ಲುತ್ತೇವೆ. ಉಳಿದಂತೆ ಐದು ಕ್ಷೇತ್ರಗಳಲ್ಲಿ ಶೇ.50 ರಷ್ಟು ಗೆಲ್ಲುವ ಖಾತ್ರಿ ಇದೆ ಎಂದರು.