ಅವ್ಯವಹಾರ ತನಿಖೆಗೆ ಆದೇಶ

ದೇವರಹಿಪ್ಪರಗಿ: ತಾಲೂಕಿನ ಜಾಲವಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಒ ಸೇರಿ ಶೌಚಗೃಹ ನಿರ್ಮಿಸದೆ ಅನುದಾನ ದುರ್ಬಳಕೆ ಮಾಡಿದ ಕುರಿತು ತನಿಖೆ ನಡೆಸಿ ಪ್ರಕರಣ ದಾಖಲಿಸಲು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಮಾಡಿದ್ದಾರೆ.

ಸಮೀಪದ ಜಾಲವಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಲವಾದ, ಜಾಲವಾದ ಎಲ್‌ಟಿ-1, ಜಾಲವಾದ ಎಲ್‌ಟಿ-2 ರಲ್ಲಿ 57 ಶೌಚಗೃಹ ನಿರ್ಮಿಸಲಾಗಿದೆ ಎಂದು ಅಂದಾಜು 8,40,000 ರೂ. ಅನುದಾನ ದುರುಪಯೋಗ ಮಾಡಿದ್ದಾರೆ. ಇದರಲ್ಲಿ ಹಿಂದಿನ ಪಿಡಿಒ, ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕ ಹಾಗೂ ಗ್ರಾಪಂ ಅಧ್ಯಕ್ಷೆ ನೇರವಾಗಿ ಶಾಮೀಲಾಗಿದ್ದಾರೆ ಎಂದು ತನಿಖೆ ವೇಳೆ ಮೇಲ್ನೋಟಕ್ಕೆ ಕಂಡು ಬಂದಿದೆ.

ಘಟನೆ ವಿವರ
ಜಾಲವಾದ ಗ್ರಾಮದ ಗ್ರಾಪಂ ಕೆಲವು ಸದಸ್ಯರು ಹಾಗೂ ಸಾರ್ವಜನಿಕರು ಸೇರಿಕೊಂಡು ಗ್ರಾಮದಲ್ಲಿ ಶೌಚಗೃಹ ನಿರ್ಮಾಣದ ಅನುದಾನ ದುರುಪಯೋಗವಾಗಿದೆ ಎಂದು ಆರೋಪಿಸಿ 18 ಜನವರಿ 2019 ರಂದು ಜಿಪಂ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗೆ ಲಿಖಿತ ದೂರು ಸಲ್ಲಿಸಿದರು. ಕೂಡಲೇ ಸ್ಪಂದಿಸಿದ ಜಿಪಂ ಸಿಇಒ ಅವರು ಸ್ವಚ್ಛಭಾರತ ಮಿಷನ್ ಜಿಲ್ಲಾ ನೆರವು ಘಟಕ ಅಧಿಕಾರಿಗೆ ಮೌಖಿಕ ಆದೇಶ ನೀಡಿ ತನಿಖೆ ನಡೆಸುವಂತೆ ಸೂಚಿಸಿದ್ದರು. ಇದಕ್ಕನುಗುಣವಾಗಿ ಸದರಿ ಅಧಿಕಾರಿಗಳು ಜಾಲವಾದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದರು. ಈ ವೇಳೆ ಅಂದಾಜು 57 ಶೌಚಗೃಹ ನಿರ್ಮಿಸದೆ ಅನುದಾನ ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು ಕಳೆದ ಏ.8 ರಂದು ಜಿಪಂಗೆ ಸಮಗ್ರ ವರದಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಜಿಪಂ ಸಿಇಒ ಅವರು ಮೇ 5 ರಂದು ಸಿಂದಗಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗೆ ಆದೇಶಿಸಿ, ಅನುದಾನ ದುರುಪಯೋಗ ಮಾಡಿಕೊಂಡ ಪಿಡಿಒ, ದ್ವಿತೀಯ ದರ್ಜೆ ಸಹಾಯಕ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ.

ಅನುದಾನ ದುರುಪಯೋಗ ಪಡಿಸಿಕೊಂಡಿದ್ದನ್ನು ಸರ್ಕಾರ ಮರಳಿ ಪಡೆದು ಕ್ರಮ ಕೈಗೊಳ್ಳಬೇಕೆಂದು ಮುಖಂಡರಾದ ಪ್ರಕಾಶ ಚವಾಣ್, ನಜೀರ ವಡ್ಡೋಡಗಿ, ರವಿ ಗೋಲಗೇರಿ, ಮಲ್ಲೇಶಿ ಚವಾಣ್, ನೇಮು ರಾಠೋಡ, ಇಸ್ಮಾಯಿಲ್ ಬಾಗವಾನ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *