ಕುಡಿಯುವ ನೀರಿನ ಸಮಸ್ಯೆ ನೀಗಿಸಿ

ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪಂಚಾಯಿತಿಗೆ ಬೀಗ ಜಡಿದು ಮುಳ್ಳು ಕಂಟಿ ಹಚ್ಚಿ ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಪಂಚಾಯಿತಿಗೆ ಆಗಮಿಸಿದ ಗ್ರಾಮಸ್ಥರು, ಸ್ಥಳೀಯ ಆಡಳಿತದ ವಿರುದ್ಧ ಧಿಕ್ಕಾರ ಕೂಗಿದರಲ್ಲದೆ, ಗ್ರಾಪಂ ಕಚೇರಿಗೆ ಬೀಗ ಜಡಿದು ಬಾಗಿಲು ಮುಂದೆ ಮುಳ್ಳು ಕಂಟಿ ಹಚ್ಚಿ ಸುಮಾರು ಮೂರು ಗಂಟೆಗಳವರೆಗೂ ಪ್ರತಿಭಟಿಸಿದರು.
ಯುವ ಮುಖಂಡರಾದ ಜಾವೀದ್ ಕೋಲಾರ, ದಾದಾ ಸಿಂದಗಿ ಮಾತನಾಡಿ, ಚಿಕ್ಕರೂಗಿ ಗ್ರಾಮದಲ್ಲಿ ಕಳೆದ ಹಲವಾರು ದಿನಗಳಿಂದ ಕುಡಿಯುವ ನೀರಿನ ತೊಂದರೆಯಿದ್ದರೂ, ಯಾರೋಬ್ಬರೂ ಕ್ಯಾರೆ ಎನ್ನುತ್ತಿಲ್ಲ. ಗ್ರಾಮಕ್ಕೆ ಸರಬರಾಜಾಗುವ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ ಪೈಪ್ ಒಡೆದು ತೊಂದರೆಯಾಗಿದೆ. ದುರಸ್ಥಿಗೊಳಿಸಲು ಹಲವಾರು ಬಾರಿ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಟ್ಯಾಂಕರ್‌ನಿಂದ ಪೂರೈಸುವ ನೀರು ಯಾವುದಕ್ಕೂ ಸಾಲುತ್ತಿಲ್ಲ. ತಕ್ಷಣ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ದುರಸ್ಥಿಗೊಳಿಸಿ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಗ್ರಾಪಂ ಪಿಡಿಒ ಮನವಿ ಸ್ವೀಕರಿಸಿ, ನಾಳೆಯೊಳಗಾಗಿ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದೆಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಪ್ರತಿಬಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಸಂತೋಷ ಸಿಂದಗಿ, ಬಾಬು ತಾಳಿಕೋಟಿ, ಸುನೀಲ ನಾಟೀಕಾರ ಸೇರಿ ಯುವಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *