devara honnali

ಹಳೇ ದೇವರಹೊನ್ನಾಳಿಯಲ್ಲಿ ಶ್ರೀ ರಾಮಾನುಜಾಚಾರ್ಯರ ದೇವಾಲಯ ಲೋಕಾರ್ಪಣೆ

ಹೊನ್ನಾಳಿ: ಬಸವಣ್ಣ, ಗುರುನಾನಕ್ ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದರೂ 12ನೇ ಶತಮಾನದಲ್ಲಿ ಸಮಾಜದ ಏಳ್ಗೆಗೆ ದುಡಿದರು. ಇವರಿಗೆ ರಾಮಾನುಜರೇ ಪ್ರೇರಣೆ ಎಂದು ದಾವಣಗೆರೆ ಜಿಲ್ಲಾ ಶ್ರೀ ವೈಷ್ಣವ ಸಮಾಜದ ಅಧ್ಯಕ್ಷ ಕೆ.ಆರ್. ವರದರಾಜು ಹೇಳಿದರು.

ತಾಲೂಕಿನ ಹಳೇ ದೇವರಹೊನ್ನಾಳಿಯಲ್ಲಿ ಶ್ರೀ ರಾಮಾನುಜಾಚಾರ್ಯರ ನೂತನ ದೇವಾಲಯ ಲೋಕಾರ್ಪಣೆ, ವಿಗ್ರಹ ಪ್ರತಿಷ್ಠಾಪನೆ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.
ಮೌಢ್ಯ, ಜಾತಿ ಪದ್ಧತಿ ಒಪ್ಪದೆ ಸಮ ಸಮಾಜ ನಿರ್ಮಾಣಕ್ಕೆ ರಾಮಾನುಜಾಚಾರ್ಯರು ಶ್ರಮಿಸಿದರು.

ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಅವಕಾಶಗಳನ್ನು ನೀಡಿದರು. ಬ್ರಾಹ್ಮಣ, ವೀರಶೈವ, ಒಕ್ಕಲಿಗ, ವೈಷ್ಣವ ಸೇರಿ ಎಲ್ಲ ಸಮುದಾಯಗಳಲ್ಲೂ ಬಡವರು ಇದ್ದಾರೆ ಎಂದರು.

ಸರ್ಕಾರದ ಮೀಸಲು ಮಾನದಂಡ ಸಮರ್ಪಕವಾಗಿಲ್ಲ. ಎಲ್ಲ ಸಮುದಾಯಗಳ ಬಡವರಿಗೂ ಮೀಸಲು ನೀಡಬೇಕು. ತುಂಗಭದ್ರಾ ನದಿ ತೀರದ ಹಳೇ ದೇವರ ಹೊನ್ನಾಳಿಯಲ್ಲಿ ತಮ್ಮ ಸ್ವಂತ ಹಣದಿಂದ ರಾಮಾನುಜಾಚಾರ್ಯರ ನೂತನ ಆಲಯವನ್ನು ಎಸ್.ಕೆ. ಗೋಪಾಲಯ್ಯ ನಿರ್ಮಿಸಿದ್ದಾರೆ. ಅವರ ಭಕ್ತಿ ನಿಜಕ್ಕೂ ಮಾದರಿ ಎಂದು ಶ್ಲಾಘಿಸಿದರು.

ಇಡೀ ರಾಜ್ಯದಲ್ಲಿ ನದಿ ತೀರದಲ್ಲಿರುವ ಏಕೈಕ ಪುಣ್ಯಕ್ಷೇತ್ರ ಇದಾಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

ಮಠದ ವ್ಯವಸ್ಥಾಪಕ ಎಸ್.ಕೆ. ಗೋಪಾಲಯ್ಯ ಮಾತನಾಡಿ, ರಾಮಾನುಜಾಚಾರ್ಯರು ಕೆಳವರ್ಗದ ಜನರಿಗೆ ದೇವಸ್ಥಾನಕ್ಕೆ ಪ್ರವೇಶಾವಕಾಶ ಕಲ್ಪಿಸಿದ್ದರು. ಅವರನ್ನು ಶ್ರೇಷ್ಠ ಕುಲದವರು ಎಂದು ಕರೆಯುವ ಮೂಲಕ ಗೌರವ ನೀಡಿದರು. ಮೇಲುಕೋಟೆಯಲ್ಲಿ ಇದಕ್ಕಾಗಿಯೇ ಮೀಸಲಾದ ಒಂದು ಉತ್ಸವ ಇಂದಿಗೂ ನಡೆಯುತ್ತಿದೆ. ಎಲ್ಲ ಜಾತಿಯ ಜನರೂ ಪ್ರಗತಿಯತ್ತ ಸಾಗಲು ಶ್ರೀ ರಾಮಾನುಜಾಚಾರ್ಯರು ಪ್ರೇರಣೆ ಎಂದರು.

12 ನೇ ಶತಮಾನದ ಕ್ರಾಂತಿಯೋಗಿ ಬಸವಣ್ಣನವರಿಗೆ ಆಚಾರ್ಯ ರಾಮಾನುಜರೇ ಪ್ರೇರಣೆ. ಅಂಥ ಮಹಾನ್ ಚೇತನ ರಾಮಾನುಜರನ್ನು ನಾಡಿಗೆ ಪರಿಚಯಿಸಲು ನಾವು ಶ್ರಮಿಸುತ್ತಿದ್ದೇವೆ ಎಂದರು. ವೈಷ್ಣವ ಸಮಾಜದ ಜಿಲ್ಲಾ ಉಪಾಧ್ಯಕ್ಷ ಕೆ.ಎನ್.ಕೋದಂಡ ಪಾಣಿ ಮಾತನಾಡಿ, ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನು ಸರ್ಕಾರ ಆಚರಿಸಬೇಕು ಎಂದರು.

ಇತಿಹಾಸ ಉಪನ್ಯಾಸಕ ಮಳಲಕೆರೆ ಎಸ್.ಆರ್. ನಯನಜ ಮೂರ್ತಿ ಶ್ರೀ ರಾಮಾನುಜರ ಕುರಿತು ಉಪನ್ಯಾಸ ನೀಡಿದರು. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಘಟಕದ ಮಾಜಿ ಉಪಾಧ್ಯಕ್ಷ ನಾರಾಯಣಯ್ಯ, ಚನ್ನಗಿರಿ ತಾಲೂಕು ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ಗಂಜಿಗಟ್ಟೆ ಅಚ್ಯುತನ್ ಇತರರಿದ್ದರು.

Leave a Reply

Your email address will not be published. Required fields are marked *