ದೇವಣಗಾಂವದಲ್ಲಿ ಗಾಳಿ ಮಿಶ್ರಿತ ಮಳೆ

ದೇವಣಗಾಂವ: ಪಟ್ಟಣ ಸೇರಿ ಸುತ್ತಲಿನ ಪ್ರದೇಶದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ಅಲ್ಲಲ್ಲಿ ಗಿಡದ ಕೊಂಬೆಗಳು ಮುರಿದು ಬಿದ್ದಿವೆ.

ಗ್ರಾಮದ ಪುಂಡಲಿಕ ಸಿದ್ರಾಮ ಪೂಜಾರಿ, ಜಟ್ಟೆಪ್ಪ ಸಿದ್ರಾಮ ಪೂಜಾರಿ ಅವರು ವಾಸವಿದ್ದ ಪತ್ರಾಸ್ ಶೆಡ್ ಮೇಲೆ ಜಾಲಿ ಮರ ಉರುಳಿ ಶೆಡ್ ಜಖಂಗೊಂಡಿದೆ.

ರಾತ್ರಿ ಮಕ್ಕಳೊಂದಿಗೆ ಮಲಗಿದ್ದ ವೇಳೆ ಮನೆ ಮೇಲೆ ಮರ ಉರುಳಿದ್ದು, ಅದೃಷ್ಟವಶಾತ್ ಎಲ್ಲರೂ ಪಾರಾಗಿದ್ದಾರೆ. ಹೊಸ ಬಡಾವಣೆಯಲ್ಲಿ ವಿದ್ಯುತ್ ತಂತಿ ಮೇಲೆ ಮರದ ಕೊಂಬೆ ಬಿದ್ದು ವಿದ್ಯುತ್ ಕಡಿತಗೊಂಡಿತ್ತು. ಮಳೆಯೊಂದಿಗೆ ಗಾಳಿ ಬೀಸಿದ್ದರಿಂದ ಕಟಾವಿಗೆ ಬಂದಿದ್ದ ಕಬ್ಬು ನೆಲಕಚ್ಚಿ ಅಪಾರ ನಷ್ಟವಾಗಿದೆ. ತೊಗರಿ, ಹತ್ತಿ ಬೆಳೆಗಳಿಗೆ ಮಳೆ ಸಹಕಾರಿ ಎನಿಸಿದ್ದು, ಈ ಬೆಳೆ ಬೆಳೆದ ರೈತರು ಖುಷಿಯಲ್ಲಿದ್ದಾರೆ. ಆದರೆ, ಗ್ರಾಮದ ದಕ್ಷಿಣ ದಿಕ್ಕಿಗೆ ಮಳೆ ಹೆಚ್ಚು ಆಗಿದ್ದು, ಇತರ ಭಾಗಕ್ಕೆ ಅಲ್ಪ ಪ್ರಮಾಣದಲ್ಲಾಗಿದೆ ಎಂದು ರೈತರು ಹೇಳಿದ್ದಾರೆ.