ದೇವದುರ್ಗ: ಪ್ರತಿಯೊಂದು ಕಲೆಗೂ ತನ್ನದೇ ಆದ ಮಹತ್ವವಿದ್ದು, ಇಂಥ ಕಲೆಗೆ ಬೆಲೆ ಕಟ್ಟುವುದು ಸರಿಯಲ್ಲ. ವಿಶ್ವಕರ್ಮಿಗಳ ಕಾಯಕ ದೇವರಿಗೆ ಮೀಸಲಾಗಿದ್ದು, ಅವರ ಕೆಲಸ ಅತ್ಯಂತ್ರ ಪವಿತ್ರವಾದದ್ದು ಎಂದು ಪುರಸಭೆ ಅಧ್ಯಕ್ಷ ಶರಣಗೌಡ ಬಕ್ರಿ ಗೌರಂಪೇಟೆ ಹೇಳಿದರು.
ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ತಾಲೂಕು ಆಡಳಿತ ಭಾನುವಾರ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿಯಲ್ಲಿ ಮಾತನಾಡಿದರು. ಅಮರಶಿಲ್ಪಿ ಜಕಣಾಚಾರಿ ಐತಿಹಾಸಿಕ ಬೇಲೂರು, ಹಳೇಬೀಡಿನ ಚನ್ನಕೇಶವ ದೇವಾಲಯದ ಶಿಲ್ಪಗಳನ್ನು ಕೆತ್ತನೆ ಮಾಡಿ ಹೆಸರಾಗಿದ್ದರು. ಶಿಲ್ಪಕಲೆಗೆ ಅವರ ಕೊಡುಗೆ ಅನನ್ಯ ಎಂದು ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್, ವಿಶ್ವಕರ್ಮ ಸಮುದಾಯ ಕಾಯಕಕ್ಕೆ ಹೆಸರುವಾಸಿ. ಸಮುದಾಯದ ಜನರು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅಮರಶಿಲ್ಪಿ ಚಕಣಾಚಾರ್ಯರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.